Monday, 25th November 2024

MK Stalin: 16 ಮಕ್ಕಳನ್ನು ಹೊಂದುವಂತೆ ಕರೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌; ಕಾರಣವೇನು?

MK Stalin

ಚೆನ್ನೈ: 16 ಮಕ್ಕಳನ್ನು ಹೊಂದುವ ಮೂಲಕ ಸಂಪದ್ಭರಿತವಾದ ಜೀವನ ತಮ್ಮದಾಗಿಸಿಕೊಳ್ಳಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ (MK Stalin) ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಆ ಮೂಲಕ ದಂಪತಿಗೆ 16 ಮಕ್ಕಳನ್ನು ಹೊಂದುವಂತೆ ಸಲಹೆ ನೀಡಿದ್ದಾರೆ. ಚೆನ್ನೈಯಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು ಜನಸಂಖ್ಯಾ ಹೆಚ್ಚಳಕ್ಕೆ ಈ ರೀತಿಯ ಕರೆ ನೀಡಿದ್ದಾರೆ.

ʼʼಇವತ್ತಿನ ಪರಿಸ್ಥಿತಿಯಲ್ಲಿ ದಕ್ಷಿಣ ಭಾರತದಲ್ಲಿ ಲೋಕಸಭಾ ಸ್ಥಾನಗಳು ಕುಸಿಯುತ್ತಿವೆ. ಹೀಗಾಗಿ ಇದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ನಾವು ಏಕೆ ಕಡಿಮೆ ಮಕ್ಕಳನ್ನು ಹೊಂದಬೇಕು ಎಂದು ನಿರ್ಬಂಧ ಹಾಕಿಕೊಳ್ಳಬೇಕು? ನಾವೇಕೆ 16 ಮಕ್ಕಳನ್ನು ಹೊಂದುವ ಗುರಿ ಹಾಕಿಕೊಳ್ಳಬಾರದು?ʼʼ ಎಂದು ಅವರು ಪ್ರಶ್ನಿಸಿದ್ದಾರೆ. ತಮಿಳುನಾಡು ರಾಜ್ಯ ಸರ್ಕಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಎಂ.ಕೆ. ಸ್ಟಾಲಿನ್ ಈ ಮಾತುಗಳನ್ನು ಆಡಿದ್ದಾರೆ.

ʼʼತಮಿಳುನಾಡಿನಲ್ಲಿ ಹಿಂದಿನ ಕಾಲದಿಂದಲೂ ನಾಣ್ಣುಡಿಯೊಂದು ಚಾಲ್ತಿಯಲ್ಲಿದೆ. ಅದರ ಪ್ರಕಾರ ಜನರು 16 ವಿವಿಧ ಬಗೆಯ ಸಂಪತ್ತುಗಳನ್ನು ಹೊಂದಿರಬೇಕು. ಅಂದರೆ ಪಶು, ಪತ್ನಿ, ಮನೆತುಂಬಾ ಮಕ್ಕಳು, ವಿದ್ಯೆ ಹೀಗೆ 16 ವಿವಿಧ ರೀತಿಯ ಸಂಪತ್ತನ್ನು ಹೊಂದಿರಬೇಕು. ಇಂದಿನ ಕಾಲದಲ್ಲಿ ಮಕ್ಕಳೇ ಸಂಪತ್ತು. ಹಾಗಾಗಿ ಮನುಷ್ಯನ ಜೀವಿತಾವಧಿಯಲ್ಲಿ ಸಂಪತ್ತು ಹೆಚ್ಚಾಗಬೇಕಾದರೆ ಮಕ್ಕಳು ಹೆಚ್ಚಾಗಿರಬೇಕುʼʼ ಎಂದು ಸಿಎಂ ಸ್ಟಾಲಿನ್‌ ಹೇಳಿದ್ದಾರೆ. ಆ ಮೂಲಕ ದಂಪತಿ 16 ಮಕ್ಕಳನ್ನು ಹೊಂದಬೇಕು ಎಂದು ಪರೋಕ್ಷವಾಗಿ ಕರೆ ನೀಡಿದ್ದಾರೆ.

ಜನಸಂಖ್ಯಾ ಯಾಕೆ ವೃದ್ಧಿಸಬೇಕು?

ಜನಸಂಖ್ಯೆ ಹೆಚ್ಚಳ ಮಾಡಿಕೊಳ್ಳಿ ಎಂದು ಎಂ.ಕೆ. ಸ್ಟಾಲಿನ್ ಕರೆ ನೀಡಲೂ ಕಾರಣವಿದೆ. ʼʼಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಜನಸಂಖ್ಯೆ ಕಡಿಮೆ. ಲೋಕಸಭಾ ಸದಸ್ಯ ಸ್ಥಾನಗಳು ಜನಸಂಖ್ಯೆ ಆಧಾರದ ಮೇಲೆ ನಿರ್ಧಾರ ಆಗುವ ಕಾರಣ, ಜನಸಂಖ್ಯೆ ಕಡಿಮೆ ಇರುವ ದಕ್ಷಿಣ ಭಾರತಕ್ಕೆ ಕಡಿಮೆ ಸಂಸದರು ಸಿಗುತ್ತಾರೆ. ಇದು ಮುಂದಿನ ದಿನಗಳಲ್ಲಿ ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗುತ್ತದೆʼʼ ಎಂದು ಹೇಳಿದ್ದಾರೆ.

ʼʼನಾವು ಜನಸಂಖ್ಯೆ ನಿಯಂತ್ರಣ ಹೇರಿಕೊಂಡಿದ್ದರ ಪರಿಣಾಮ ತಮಿಳುನಾಡಿನಲ್ಲಿ ಕ್ಷೇತ್ರಗಳು ಕಡಿಮೆಯಾಗುತ್ತಿವೆ. ತಮಿಳು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವುದರಿಂದ ಕಡಿಮೆ ಮಕ್ಕಳನ್ನು ಹೊಂದಲು ನಮ್ಮನ್ನು ಏಕೆ ನಿರ್ಬಂಧಿಸಬೇಕು? ಜನಸಂಖ್ಯೆ ಆಧಾರದ ಮೇಲೆ ಸಂಸತ್​ ಸ್ಥಾನಗಳನ್ನು ನಿರ್ಧರಿಸುನಾವುದರಿಂದ 16 ಮಕ್ಕಳನ್ನು ಏಕೆ ಗುರಿಯಾಗಿಸಿಕೊಳ್ಳಬಾರದು?ʼʼ ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.

ಇದೇ ರೀತಿಯ ಹೇಳಿಕೆ ನೀಡಿದ್ದ ಆಂಧ್ರ ಸಿಎಂ

ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದಲ್ಲಿ ‘ವಯಸ್ಕರ ಜನಸಂಖ್ಯೆ’ ಹೆಚ್ಚುತ್ತಿದೆ. ಮಕ್ಕಳು ಹಾಗೂ ಯುವಕರ ಜನಸಂಖ್ಯೆ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇತ್ತೀಚೆಗೆ ದಕ್ಷಿಣ ಭಾರತೀಯ ರಾಜ್ಯಗಳ ಜನರು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳಬೇಕು ಎಂದು ಕರೆ ನೀಡಿದ್ದರು. ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಕುಟುಂಬಗಳಿಗೆ ಸಹಾಯ ಧನ ಹಾಗೂ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಕಾನೂನುಬದ್ಧವಾಗಿ ಜಾರಿಗೆ ತರುವ ಸಂಬಂಧ ಚಿಂತನೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದರು.

ಈ ಸುದ್ದಿಯನ್ನೂ ಓದಿ: Chandrababu Naidu : ಹೆಚ್ಚು ಮಕ್ಕಳನ್ನು ಹೆರಲು ಪ್ರೋತ್ಸಾಹಕ್ಕೆ ಕಾನೂನು ತರಲಿದ್ದಾರೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು!