Saturday, 23rd November 2024

Credit Card : ಕ್ರೆಡಿಟ್ ಕಾರ್ಡ್ ಕ್ಯಾನ್ಸಲ್ ಮಾಡುವ ಮುನ್ನ ಯೋಚಿಸಿ; ಲಾಭವೂ ಇದೆ, ನಷ್ಟವೂ ಉಂಟು

Credit Card

ಆಪತ್ಕಾಲಕ್ಕೆ ಆಗುತ್ತದೆ ಅಥವಾ ನಮ್ಮ ಆರ್ಥಿಕ ಹೊರೆ ತಗ್ಗಿಸಲು ಸಹಾಯ ಮಾಡುತ್ತದೆ ಎಂದುಕೊಂಡು ಕೆಲವರು ಕ್ರೆಡಿಟ್ ಕಾರ್ಡ್ (Credit Card) ಇಟ್ಟುಕೊಂಡಿರುತ್ತಾರೆ. ಒಂದು ಕ್ರೆಡಿಟ್ ಕಾರ್ಡ್ ಇರುವುದೇನೋ ಸರಿ ಆದರೆ ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳುವುದು ನಮ್ಮ ಆರ್ಥಿಕ ಯೋಗಕ್ಷೇಮಕ್ಕೆ ಪೂರಕವಲ್ಲ. ದಿನೇದಿನೇ ಹೆಚ್ಚುತ್ತಿರುವ ಜೀವನ ವೆಚ್ಚ, ಹೆಚ್ಚಿನ ಕ್ರೆಡಿಟ್ ಕಾರ್ಡ್ ಬಡ್ಡಿ ದರಗಳು ನಮ್ಮ ಹಣಕಾಸಿನ ಯೋಜನೆಯನ್ನು ಕೆಲವೊಮ್ಮೆ ತಲೆಕೆಳಗೆ ಮಾಡಿ ಬಿಡಬಹುದು. ಹೀಗಾಗಿ ಕ್ರೆಡಿಟ್ ಕಾರ್ಡ್ ಪಡೆಯುವ ಮುಂಚೆ ಅದು ನಮಗೆ ಅಗತ್ಯವಿದೆಯೇ ಎಂಬುದನ್ನು ಸರಿಯಾಗಿ ಯೋಚಿಸಬೇಕು ಮತ್ತು ಕ್ರೆಡಿಟ್ ಕಾರ್ಡ್‌ನಲ್ಲಿ ಪಡೆಯಬಹುದಾದ ಸಾಲದ ಮಿತಿಯನ್ನು ಮೊದಲೇ ನಿಗದಿಪಡಿಸಬೇಕು.

ಒಂದಕ್ಕಿಂತ ಹೆಚ್ಚು ಕ್ರೆಡಿಟ್ ಕಾರ್ಡ್ ಹೊಂದುವುದು ಲಾಭದಾಯಕ ಎಂದೆನಿಸಬಹುದು. ಆದರೆ ಇದು ನಿಜವಾಗಿಯೂ ಅಗತ್ಯವಿದೆಯೇ? ಅಗತ್ಯವಿಲ್ಲವೆಂದಾದರೆ ಅದನ್ನು ಕ್ಯಾನ್ಸಲ್ ಮಾಡಿಸುವುದು ಆರ್ಥಿಕ ಯೋಗಕ್ಷೇಮ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕ್ರೆಡಿಟ್ ಕಾರ್ಡ್ ಸ್ಥಗಿತಗೊಳಿಸುವುದರಿಂದ ಏನು ಲಾಭವಿದೆ, ಅದು ನಮ್ಮ ಕ್ರೆಡಿಟ್ ಇತಿಹಾಸ, ಕ್ರೆಡಿಟ್ ಸ್ಕೋರ್ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ವಿವರ ಇಲ್ಲಿದೆ.

ಯಾಕೆ ಕ್ರೆಡಿಟ್ ಕಾರ್ಡ್ ಬೇಡ?

ಅತಿಯಾದ ಖರ್ಚು

ಕ್ರೆಡಿಟ್ ಕಾರ್ಡ್ ಜೊತೆ ಇದ್ದಾಗ ನಾವು ಹೆಚ್ಚಿನ ಖರ್ಚಿನ ಬಗ್ಗೆ ಯೋಚಿಸುವುದಿಲ್ಲ. ಹೀಗಾಗಿ ನಿಯಂತ್ರಣಕ್ಕೆ ಸಿಗದೇ ಇದ್ದಾಗ ಅದನ್ನು ಮುಚ್ಚುವುದು ಒಳ್ಳೆಯದು. ಕ್ರೆಡಿಟ್ ಕಾರ್ಡ್ ಮೇಲೆ ಹೆಚ್ಚಿನ ಸಾಲ ನಮ್ಮನ್ನು ತೊಂದರೆಗೆ ಒಳಪಡಿಸಬಹುದು. ಹೀಗಾಗಿ ಖರ್ಚು ಕಡಿಮೆ ಮಾಡಲು ಕ್ರೆಡಿಟ್ ಕಾರ್ಡ್ ಇಟ್ಟುಕೊಳ್ಳದೇ ಇರುವುದು ಒಳ್ಳೆಯದು.

ನಿಷ್ಕ್ರಿಯ ಕಾರ್ಡ್‌ಗಳು

ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಬಳಕೆಯಾಗುತ್ತಿಲ್ಲ ಎಂದಾದರೆ ಕ್ರೆಡಿಟ್ ಮುಚ್ಚುವುದು ಒಳ್ಳೆಯದು. ವಿಶೇಷವಾಗಿ ಕಾರ್ಡ್‌ಗಾಗಿ ವಾರ್ಷಿಕ ಶುಲ್ಕ ಪಾವತಿ ಮಾಡುತ್ತಿದ್ದರೆ ನಿಷ್ಕ್ರಿಯವಾಗಿರುವ ಕಾರ್ಡ್‌ಗಳ ಸೇವೆಯನ್ನು ನಿಲ್ಲಿಸುವುದು ಒಳಿತು.

ಮಾಹಿತಿ ಕಳ್ಳತನ

ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದೆ. ನಾವು ಹೆಚ್ಚು ಹೆಚ್ಚಾಗಿ ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಿದ್ದರೆ ನಮ್ಮ ಮಾಹಿತಿ ಸೋರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ನಾವು ನಮ್ಮ ಮಾಹಿತಿ, ಗುರುತನ್ನು ಸುರಕ್ಷಿತವಾಗಿ ಇರಿಸಬೇಕು ಎಂದು ಬಯಸಿದರೆ ಕ್ರೆಡಿಟ್ ಕಾರ್ಡ್ ಸೇವೆ ಮೊದಲು ನಿಲ್ಲಿಸಬೇಕು.

ಹೆಚ್ಚಿನ ಬಡ್ಡಿ ದರಗಳು

ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ನಮ್ಮ ಬಳಿ ಹಣವಿದ್ದಂತೆ ಭಾಸವಾದರೂ ಅದರ ಬಡ್ಡಿ ಕಟ್ಟುವಾಗ ನಮ್ಮ ಜೇಬು ಖಾಲಿಯಾಗಬಹುದು. ಹೆಚ್ಚಿನ ಬಡ್ಡಿ ದರ ನಮ್ಮ ಹಣಕಾಸಿನ ಯೋಜನೆಯ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಚ್ಚಿನ ಬಡ್ಡಿ ದರದಿಂದ ಪಾರಾಗಲು ಕ್ರೆಡಿಟ್ ಕಾರ್ಡ್ ಖಾತೆಯನ್ನು ಮುಚ್ಚುವುದು ಒಳ್ಳೆಯದು.

ಕ್ರೆಡಿಟ್ ಸ್ಕೋರ್ ಪರಿಣಾಮವೇನು?

ಕ್ರೆಡಿಟ್ ಕಾರ್ಡ್ ಖಾತೆಯನ್ನು ರದ್ದು ಮಾಡುವುದು ಏಕೈಕ ಅಥವಾ ಸರಿಯಾದ ದಾರಿಯಲ್ಲ. ಏಕೆಂದರೆ ಕ್ರೆಡಿಟ್ ಕಾರ್ಡ್ ಖಾತೆ ಮುಚ್ಚುವುದರಿಂದ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಇದು ಕ್ರೆಡಿಟ್ ಕಾರ್ಡ್‌ನ ಇತಿಹಾಸ ಮತ್ತು ಕ್ರೆಡಿಟ್ ಲಿಮಿಟ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕ್ರೆಡಿಟ್ ಕಾರ್ಡ್‌ನ ಸರಿಯಾಗಿ ನಿರ್ವಹಿಸಲು ಸಾಧ್ಯವಿಲ್ಲ ಎಂದೆನಿಸಿದಾಗ ಅದನ್ನು ಮುಚ್ಚುವುದು ನಮಗೆ ಸರಿಯಾದ ದಾರಿ ಎಂದು ಕಾಣುತ್ತದೆ. ಆದರೆ ಖಾತೆಯನ್ನು ಒಮ್ಮೆ ಮುಚ್ಚಿದರೆ ಅದರ ಬಗ್ಗೆ ಇರುವ ನೆಗೆಟಿವ್‌ ರೇಟಿಂಗ್‌ ಸಂಪೂರ್ಣವಾಗಿ ಅಳಿದು ಹೋಗಲು ಏಳು ವರ್ಷಗಳು ಬೇಕು. ಅದರ ಬದಲು ಖಾತೆ ತೆರೆದಿದ್ದರೆ ಸಾಲ ಸಮಯಕ್ಕೆ ಸರಿಯಾಗಿ ಪಾವತಿಸುವ ಮೂಲಕ ಉತ್ತಮ ಖಾತೆಯಾಗಿ ಅದನ್ನು ಪರಿವರ್ತಿಸಲು ಅವಕಾಶವಿರುತ್ತದೆ. ಖಾತೆಯನ್ನು ಮುಚ್ಚುವ ಮೂಲಕ ಬ್ಯಾಲೆನ್ಸ್ ಅಥವಾ ಮಿತಿ ಅನುಪಾತ ಹೆಚ್ಚಳವಾಗುತ್ತದೆ. ಇದು ಕ್ರೆಡಿಟ್ ಸ್ಕೋರ್‌ ಮೇಲೆ ಪರಿಣಾಮ ಬೀರುತ್ತದೆ.

ಬ್ಯಾಲೆನ್ಸ್ ಅಥವಾ ಮಿತಿ ಅನುಪಾತವೆಂದರೆ ಕ್ರೆಡಿಟ್ ಬಳಕೆಯನ್ನು ಕ್ರೆಡಿಟ್ ಮಿತಿಯಿಂದ ಭಾಗಿಸಿದಾಗ ಸಿಗುವ ಅನುಪಾತ. ಇದನ್ನು ಸಾಲದಾತರು ಪರಿಶೀಲಿಸುತ್ತಾರೆ. ಇದು ನೀವು ನಿಮ್ಮ ಕ್ರೆಡಿಟ್ ಅನ್ನು ಹೆಚ್ಚು ಬುದ್ದಿವಂತಿಕೆಯಿಂದ ಬಳಸುತ್ತಿದ್ದೀರಿ ಎಂಬುದನ್ನು ನೋಡಲು ಅವರಿಗೆ ಅವಕಾಶ ಮಾಡಿಕೊಡುತ್ತದೆ. ಇಲ್ಲಿ ಅನುಪಾತ ಹೆಚ್ಚಾದಂತೆ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಹೀಗಾಗಿ ಅನುಪಾತ ಮಿತಿಯನ್ನು ಸಾಧ್ಯವಾದಷ್ಟು ಕಡಿಮೆ ಇರಿಸುವುದು ಒಳ್ಳೆಯದು.

Credit Card

ಕ್ರೆಡಿಟ್ ಕಾರ್ಡ್ ಮುಂದುವರಿಸುವುದು ಒಳ್ಳೆಯದೇ?

ಕ್ರೆಡಿಟ್ ಕಾರ್ಡ್ ಮುಚ್ಚಲು ಹಲವಾರು ಕಾರಣಗಳಿರಬಹುದು. ಆದರೆ ಖಾತೆಯನ್ನು ಮುಚ್ಚುವ ಮೊದಲು ಕ್ರೆಡಿಟ್ ವರದಿಯನ್ನು ಗಮನಿಸಿ. ಯಾಕೆಂದರೆ ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚುವುದು ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ ಎಂಬುದು ತಿಳಿದಿರಲಿ.

ಕಾರ್ಡ್ ಪಾವತಿಯು ಉತ್ತಮ ಇತಿಹಾಸವನ್ನು ಹೊಂದಿದ್ದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಮಯಕ್ಕೆ ಸರಿಯಾಗಿ ಪಾವತಿಯ ಮೂಲಕ ಕ್ರೆಡಿಟ್ ಕಾರ್ಡ್‌ನ ಇತಿಹಾಸವನ್ನು ಉತ್ತಮಗೊಳಿಸಲು ಅವಕಾಶವಿದೆ.

ತುಂಬಾ ಹಳೆಯ ಕ್ರೆಡಿಟ್ ಕಾರ್ಡ್ ಗಳು ದೀರ್ಘವಾದ ಇತಿಹಾಸವನ್ನು ಹೊಂದಿರುತ್ತದೆ. ಇದು ಕ್ರೆಡಿಟ್ ಕಾರ್ಡ್‌ನ ಸ್ಕೋರ್ ಹೆಚ್ಚಿಸಲು ಸಹಾಯ ಮಾಡುತ್ತದೆ.

ಕಾರ್ಡ್ ಮುಚ್ಚುವ ಮೊದಲು ಇದನ್ನು ಪರಿಗಣಿಸಿ

ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚುವ ಮೊದಲು ಕೆಲವೊಂದು ಅಂಶಗಳನ್ನು ಪರಿಗಣಿಸುವುದು ಒಳ್ಳೆಯದು.
ಖಾತೆಯನ್ನು ಮುಚ್ಚುವ ಬದಲು ಖಾತೆಯಿಂದ ಮತ್ತಷ್ಟು ಹಣ ಖರ್ಚು ಮಾಡುವುದನ್ನು ತಪ್ಪಿಸಲು ಪ್ರಯತ್ನಿಸಿ. ಇದರಿಂದ ಕ್ರೆಡಿಟ್ ರೇಟಿಂಗ್‌ ಮೇಲೆ ಪರಿಣಾಮ ಬಿರುವುದನ್ನು ತಪ್ಪಿಸಬಹುದು.

ಕಾರ್ಡ್‌ಗೆ ಯಾವುದೇ ವಾರ್ಷಿಕ ಶುಲ್ಕವಿಲ್ಲದಿದ್ದರೆ ಅದನ್ನು ತೆರೆದಿಡ ಬಹುದು. ಇದು ಕ್ರೆಡಿಟ್ ಇತಿಹಾಸವನ್ನು ಉತ್ತಮವಾಗಿ ಇರಿಸಬಲ್ಲದು. ಇದರಿಂದ ಕ್ರೆಡಿಟ್ ಬಳಕೆಯ ಅನುಪಾತವನ್ನು ಸುಧಾರಿಸಲು ಅವಕಾಶವಿರುತ್ತದೆ ಮತ್ತು ಕ್ರೆಡಿಟ್ ಸ್ಕೋರ್ ಅನ್ನು ಉತ್ತಮವಾಗಿ ಇರಿಸಲು ಸಹಾಯ ಮಾಡುತ್ತದೆ.

ಎಂದಿಗೂ ಬಳಸದ ಕಾರ್ಡ್‌ಗೆ ವಾರ್ಷಿಕ ಶುಲ್ಕ ಪಾವತಿಸುತ್ತಿದ್ದರೆ ಅದನ್ನು ಮುಚ್ಚುವ ಮೊದಲು ಕ್ರೆಡಿಟ್ ಕಾರ್ಡ್ ಕಂಪನಿಗೆ ಕರೆ ಮಾಡಿ ಅದನ್ನು ಶುಲ್ಕವಿಲ್ಲದ ಕಾರ್ಡ್‌ಗೆ ಬದಲಾಯಿಸುವಂತೆ ಹೇಳಿ. ಇದರಿಂದ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬಿರುವುದನ್ನು ತಪ್ಪಿಸಬಹುದು.

ಕ್ರೆಡಿಟ್ ಬ್ಯಾಲೆನ್ಸ್ ಹೊಂದಿರುವ ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚಿದರೆ ಆ ಕಾರ್ಡ್‌ನಲ್ಲಿ ಲಭ್ಯವಿರುವ ಕ್ರೆಡಿಟ್ ಮಿತಿಯನ್ನು ಶೂನ್ಯಕ್ಕೆ ಇಳಿಸಲಾಗುತ್ತದೆ. ಇದು ನೀವು ಕಾರ್ಡ್ ಅನ್ನು ಗರಿಷ್ಠವಾಗಿ ಬಳಸಿದ್ದೀರಿ ಎಂಬುದನ್ನು ಸೂಚಿಸುತ್ತದೆ. ಇದು ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಯಾಕೆಂದರೆ ಇದು ನಿಮ್ಮ ಕ್ರೆಡಿಟ್ ಬಳಕೆಯ ಅನುಪಾತವನ್ನು ಹೆಚ್ಚಿಸುತ್ತದೆ.

ಹೆಚ್ಚಿನ ಬಡ್ಡಿ ದರವಿರುವ ಕ್ರೆಡಿಟ್ ಕಾರ್ಡ್‌ ಸಾಲ ಹೊಂದಿದ್ದರೆ ಕಾರ್ಡ್ ಮುಚ್ಚಿದರೂ ಸಾಲ ಬಾಕಿಯ ಮೇಲಿನ ಬಡ್ಡಿಯ ದರ ಸಂಗ್ರಹವನ್ನು ಮಾಡಲಾಗುತ್ತದೆ.

Credit Card: ಕ್ರೆಡಿಟ್ ಕಾರ್ಡ್ ಕಳೆದು ಹೋದಾಗ ಮಾಡಲೇಬೇಕಾದ 6 ಕೆಲಸಗಳಿವು

ಕ್ರೆಡಿಟ್ ಕಾರ್ಡ್ ಮುಚ್ಚುವ ಬಗ್ಗೆ ಏನು ಹೇಳುತ್ತಾರೆ ತಜ್ಞರು?

ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಕ್ರೆಡಿಟ್ಯುಟಿಲೈಸೇಶನ್ ರೇಷಿಯೋ (CUR) ಎಂಬುದು ನಿರ್ಣಾಯಕವಾಗಿರುತ್ತದೆ. ಇದು ಶೇ. 30ಕ್ಕಿಂತ ಕಡಿಮೆ ಇದ್ದರೆ ಕ್ರೆಡಿಟ್ ಕಾರ್ಡ್ ಅನ್ನು ಮುಚ್ಚದೇ ಇರುವುದು ಉತ್ತಮ. ಯಾಕೆಂದರೆ ಇದು ಸಲ ಪಡೆಯುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಉದಾಹರಣೆಗೆ ಒಂದು ಲಕ್ಷ ರೂ. ಮಿತಿ ಇರುವ ಮೂರು ಕ್ರೆಡಿಟ್ ಕಾರ್ಡ್ ಇದ್ದರೆ ಅದರಲ್ಲಿ ನೀವು 90 ಸಾವಿರ ರೂಪಾಯಿ ಖರ್ಚು ಮಾಡಿದರೆ ನಿಮ್ಮ ಕ್ರೆಡಿಟ್ಯುಟಿಲೈಸೇಶನ್ ರೇಷಿಯೋ ಶೇ. 30 ಆಗುತ್ತದೆ. ಈಗ ಒಂದು ಕಾರ್ಡ್ ರದ್ದುಗೊಳಿಸಿದರೆ ನಿಮ್ಮ ಕ್ರೆಡಿಟ್ಯುಟಿಲೈಸೇಶನ್ ರೇಷಿಯೋ ಶೇ. 45ಕ್ಕೆ ಏರುತ್ತದೆ ಎನ್ನುತ್ತಾರೆ ಹಣಕಾಸು ತಜ್ಞರು.