Monday, 25th November 2024

Waqf Bill Meeting: ಸಂಸದೀಯ ಸಮಿತಿ ಸಭೆಯಲ್ಲಿ ಭಾರೀ ಹೈಡ್ರಾಮಾ; ಬಾಟಲಿ ಒಡೆದು ಅಬ್ಬರಿಸಿದ ಸಂಸದ; ವಿಡಿಯೋ ಇದೆ

waqf

ದೆಹಲಿ: ವಕ್ಫ್‌ ಮಸೂದೆ(Waqf Bill Meeting) ಮೇಲಿನ ಜಂಟೀ ಸಂಸದೀಯ ಸಮಿತಿ(Joint Parliamentary Committee) ಸಭೆಯಲ್ಲಿ ಹೈಡ್ರಾಮಾ ನಡೆದಿದ್ದು, ತೃಣಮೂಲ ಕಾಂಗ್ರೆಸ್‌(Trinamool Congress) ಮತ್ತು ಬಿಜೆಪಿ ನಾಯಕರ ನಡುವೆ ಮಾತಿಗೆ ಮಾತು ಬೆಳೆದು ಟಿಎಂಸಿ ಮುಖಂಡ ಗಾಜಿನ ಬಾಟಲಿಯನ್ನು ಒಡೆದಿರುವ ಘಟನೆ ವರದಿಯಾಗಿದೆ. ದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ಟಿಎಂಸಿ ನಾಯಕ ಕಲ್ಯಾಣ್‌ ಬ್ಯಾನರ್ಜಿ ಸಿಟ್ಟಿನ ಭರದಲ್ಲಿ ಗಾಜಿನ ಬಾಟಲಿ ಒಡೆದಿದ್ದು, ಪರಿಣಾಮವಾಗಿ ಅವರ ಕೈಗೆ ಗಾಯವಾಗಿದೆ. ಇನ್ನು ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಏನಿದು ಘಟನೆ?

ಕೇಂದ್ರ ಸರ್ಕಾರ ಕೆಲವು ತಿಂಗಳ ಹಿಂದೆ ಅನುಷ್ಠಾನಗೊಳಿಸಿರುವ ವಕ್ಫ್‌ ಕಾಯಿದೆ ಮೇಲೆ ಚರ್ಚೆ ಇಂದು ಬಿಜೆಪಿ ಸಂಸದೆ ಜಗದಂಬಿಕಾ ಪಾಲ್‌ ನೇತೃತ್ವ ಜಂಟೀ ಸಂಸದೀಯ ಸಮಿತಿ ಸಭೆ ಕರೆಯಲಾಗಿತ್ತು. ಈ ವೇಳೆ ಸಂಸದರು ಮಸೂದೆ ಮೇಲಿನ ತಮ್ಮ ತಮ್ಮ ಅಭಿಪ್ರಾಯವನ್ನು ಮುಂದಿಡುತ್ತಿದ್ದರು. ಸಭೆಯಲ್ಲಿ ನಿವೃತ ನ್ಯಾಯಾಧೀಶರು ಮತ್ತು ವಕೀಲರೂ ಭಾಗಿಯಾಗಿದ್ದರು. ಕೆಲವು ವಿರೋಧ ಪಕ್ಷದ ಸದಸ್ಯರು ಸರ್ಕಾರವು ರಾಜಕೀಯ ಕಾರಣಗಳಿಗಾಗಿ ಮಸೂದೆಯನ್ನು ತಂದಿದೆ. ಇದು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸುವ ಗುರಿಯನ್ನು ಹೊಂದಿದೆ ಎಂದು ಆರೋಪಿಸಿದರು. ಅಲ್ಲದೇ ತುರ್ತಾಗಿ ಈ ಮಸೂದೆಯನ್ನು ಜಾರಿಗೊಳಿಸುವ ಅವಶ್ಯಕತೆ ಏನಿದು ಎಂದು ಪ್ರಶ್ನಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರು ಕೂಡ ವಕ್ಫ್‌ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗಂಗೋಪಾಧ್ಯಾಯ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡರು. ಈ ವೇಳೆ ಕಲ್ಯಾಣ್‌ ಬ್ಯಾನರ್ಜಿ ಮತ್ತು ಬಿಜೆಪಿ ಸಂಸದ ಅಭಿಜಿತ್‌ ಗಂಗೋಪಾಧ್ಯಾಯರ ನಡುವೆ ಮಾತಿನ ಚಕಮಕಿ ನಡೆದಿದೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿದ್ದು, ಕಲ್ಯಾಣ್‌ ಬ್ಯಾನರ್ಜಿಯವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಕೋಪದಲ್ಲಿ ಮೇಜಿನ ಮೇಲಿದ್ದ ಗಾಜಿನ ಬಾಟಲಿಯನ್ನು ಒಡೆದಿದ್ದಾರೆ. ಈ ವೇಳೆ ಅವರ ಕೈಗೆ ಗಾಯಗಳಾಗಿವೆ.

ಏನಿದು ವಕ್ಫ್‌ ಕಾಯ್ದೆ?

ಮುಸ್ಲಿಂ ವ್ಯಕ್ತಿಯೊಬ್ಬ ಧಾರ್ಮಿಕ ಕಾರಣಕ್ಕಾಗಿ ದಾನವಾಗಿ ನೀಡಿದ ಭೂಮಿಯನ್ನು ನಿಯಂತ್ರಿಸುವ ದಿಸೆಯಲ್ಲಿ 1995ರಲ್ಲಿ ವಕ್ಫ್‌ ಕಾಯ್ದೆಯನ್ನು ಜಾರಿಗೆ ತರಲಾಯಿತು. ಇದಕ್ಕೆ ಮುಸ್ಲಿಂ ಕಾನೂನನ್ನು ಕೂಡ ಅನ್ವಯ ಮಾಡಲಾಗಿದೆ. ಧಾರ್ಮಿಕ ಕಾರಣಕ್ಕಾಗಿ ನೀಡಿದ ಆಸ್ತಿಯು ವಕ್ಫ್‌ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅಷ್ಟೇ ಅಲ್ಲ, ಯಾವುದೇ ಆಸ್ತಿಯನ್ನು ವಕ್ಫ್‌ ಮಂಡಳಿಯು ತನ್ನ ಆಸ್ತಿಯನ್ನು ಘೋಷಿಸುವ ಜತೆಗೆ ಅದನ್ನು ವಶಕ್ಕೆ ಪಡೆಯುವ ಪರಮಾಧಿಕಾರ ಹೊಂದಿದೆ. ಇದು ಜನರ ಅಸಮಾಧಾನಕ್ಕೂ ಕಾರಣವಾಗಿದೆ. ಈ ತಿದ್ದುಪಡಿ ಮಸೂದೆಯನ್ನು ಕಳೆದ ತಿಂಗಳು ಕೇಂದ್ರ ಸರ್ಕಾರ ಜಾರಿಗೊಳಿಸಿತ್ತು.

ಈ ಸುದ್ದಿಯನ್ನೂ ಓದಿ: Waqf Board: ರೈತರ ಜಮೀನಿಗೆ ವಕ್ಫ್‌ ಆಸ್ತಿ ಎಂದು ನೋಟಿಸ್‌; ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ