ಬೆಳಗಿನ ಹೊತ್ತು ಏಳುವುದಕ್ಕೆ ಸುಂದರವಾದ ಸುಪ್ರಭಾತವನ್ನು ಕೇಳುವ ದಿನಗಳು ಯಾವಾಗ ಕಳೆದು ಹೋಯಿತೆಂಬುದೇ ತಿಳಿಯದು. ಈಗಿನ ಕಾಲದ ಸುಪ್ರಭಾತವೆಂದರೆ ಬೆಳಗಿನ ಹೊತ್ತು ಕೂಗುವ ಕೋಳಿಗಳಲ್ಲ, ಬದಲಿಗೆ ಕಿರುಚುವ ಅಲಾರಾಂಗಳು. ಎಷ್ಟೇ ಸುಶ್ರಾವ್ಯವಾದ ಅಲಾರಾಂ ಇರಿಸಿಕೊಂಡರೂ ಅದು ತನ್ನ ಕಂಠತ್ರಾಣವನ್ನು ತೋರುವುದು ನಿಮ್ಮ ನಿದ್ರೆ ಪೂರ್ಣವಾಗುವ ಮುನ್ನವೇ. ಹೀಗೆ ದಿನವೂ ಅರ್ಧ ನಿದ್ದೆಯಲ್ಲಿ ಅಲಾರಾಂ ಕೂಗಿ ಎಬ್ಬಿಸುವ ಕ್ರಿಯೆಯಿಂದ ರಕ್ತದೊತ್ತಡ ಅಸಹಜವಾಗಿ ಏರುತ್ತದೆ ಎನ್ನುತ್ತವೆ ಅಧ್ಯಯನಗಳು. ಆರೋಗ್ಯ (Health Tips) ಸುಸೂತ್ರವಾಗಿ ಇದ್ದರೂ, ಬೆಳಗಿನ ಹೊತ್ತು ಮಾತ್ರವೇ ರಕ್ತದೊತ್ತಡ ಏರುವುದು ʻಅಲಾರಾಂ ಸುಪ್ರಭಾತʼ ಕೇಳುವವರಲ್ಲಿ ಹೆಚ್ಚಿದೆಯಂತೆ.
ನಿದ್ದೆ ಪೂರ್ಣಗೊಂಡು ತಮ್ಮಷ್ಟಕ್ಕೇ ಸಹಜವಾಗಿ ಎಚ್ಚರವಾಗಿ ಎಳುವವರಿಗೆ ಹೋಲಿಸಿದಲ್ಲಿ, ಅಲಾರಾಂ ಕೂಗಿಗೆ ಏಳುವ ಶೇ. 74ರಷ್ಟು ಜನರಲ್ಲಿ ಬೆಳಗಿನ ಹೊತ್ತು ರಕ್ತದೊತ್ತಡ ಹೆಚ್ಚಿರುತ್ತದೆ ಎನ್ನುತ್ತದೆ ಇತ್ತೀಚೆಗೆ ವರ್ಜೀನಿಯ ಹೆಲ್ತ್ ಸಿಸ್ಟಂ ನಡೆಸಿದ ಅಧ್ಯಯನದ ವರದಿ. ಇದರಿಂದಾಗಿ ʼಫ್ಲೈಟ್-ಫೈಟ್ʼ ಎನ್ನುವಂಥ ಒತ್ತಡದ ಸ್ಥಿತಿಗೆ ದೇಹ ಜಾರಿ, ರಕ್ತನಾಳಗಳ ಮತ್ತು ಹೃದಯದ ಮೇಲೆ ಒತ್ತಡ ಹೆಚ್ಚುತ್ತದೆ. ಇದರಿಂದ ಹೃದಯ ಹೆಚ್ಚಿನ ರಕ್ತವನ್ನು ಪಂಪ್ ಮಾಡುವುದು ಅಗತ್ಯವಾಗಿ, ಸುಸ್ತು, ಆಯಾಸ, ಕುತ್ತಿಗೆ ನೋವು, ಉಸಿರಾಟ ಕಷ್ಟವಾಗುವಂಥ ದೈಹಿಕ ಲಕ್ಷಣಗಳು ಕಾಣಬಹುದು.
ಈ ಸುದ್ದಿಯನ್ನೂ ಓದಿ | Autoimmune Disorder : ಕೊರೊನಾ ಬಳಿಕ ರೋಗ ನಿರೋಧಕ ಶಕ್ತಿಯಲ್ಲಿ ಗಣನೀಯ ಇಳಿಕೆ; ಸಂಶೋಧನೆ ವರದಿ
ರಕ್ತದೊತ್ತಡದ ಮೇಲೆ ವ್ಯತಿರಿಕ್ತ ಪರಿಣಾಮ
ಇದರಿಂದ ಕ್ರಮೇಣ ಹೃದಯದ ತೊಂದರೆ, ಪಾರ್ಶ್ವವಾಯುವಿನಂಥ ಅಪಾಯಗಳು ಎದುರಾಗಬಹುದು ಎನ್ನುವುದನ್ನು ಗಮನಿಸಬೇಕು. ಅದರಲ್ಲೂ ಈಗಾಗಲೇ ಹೃದಯದ ತೊಂದರೆ ಇರುವಂಥವರು ಹೀಗೆ ಬೆಳಗಿನ ಸವಿ ನಿದ್ದೆಯಲ್ಲಿ ಕಿರುಚಿ, ಧಡಕ್ಕನೆ ಎಬ್ಬಿಸುವ ಅಲಾರಾಂಗಳನ್ನು ದೂರ ಇರಿಸುವುದೇ ಒಳ್ಳೆಯದು. ಇದು ದೇಹದ ಸ್ಟ್ರೆಸ್ ಹಾರ್ಮೋನುಗಳನ್ನು ಬಡಿದೆಬ್ಬಿಸುತ್ತದೆ. ಹಾಗಾಗಿ ಏನೋ ಆಗಿಹೋಯಿತೆಂಬಂಥ ಸ್ಥಿತಿಗೆ ದೇಹ ಜಾರಿ, ಆರೋಗ್ಯದ ಮೇಲೆ, ಅದರಲ್ಲೂ ಮುಖ್ಯವಾಗಿ ರಕ್ತದೊತ್ತಡದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುವ ಸಾಧ್ಯತೆ ಹೆಚ್ಚು.
ಹೀಗೆ ಧಡಕ್ಕನೆ ಏಳುವುದರಿಂದ ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರನಲೈನ್ನಂಥ ಸ್ಟ್ರೆಸ್ ಹಾರ್ಮೋನುಗಳ ಸ್ರವಿಸುವಿಕೆ ಹೆಚ್ಚುತ್ತದೆ. ದೇಹದ ನೈಸರ್ಗಿಕ ನಿದಿರೆಯ ಆವರ್ತವು ಏರುಪೇರಾಗಿರುವ ಪರಿಣಾಮವಿದು. ಇದರಿಂದ ಮಾನಸಿಕವಾಗಿ ಸಮಸ್ಯೆಗಳು ಆಗಬಹುದು. ಮೂಡ್ ವ್ಯತ್ಯಾಸ, ಕಿರಿಕಿರಿ, ಮಾನಸಿಕ ಒತ್ತಡ ಹೆಚ್ಚುವುದು, ತೂಕಡಿಕೆ, ಏಕಾಗ್ರತೆಯ ಕೊರತೆಯಂಥವು ಕಾಡಬಹುದು. ಬೆಳಗಿನ ಹೊತ್ತು ದೇಹ ಮತ್ತು ಮನಸ್ಸು ತಮ್ಮ ಮಾಮೂಲಿ ಲಯಕ್ಕೆ ಬರುವುದಕ್ಕೆ ತಾಸುಗಟ್ಟಲೆ ಸಮಯವನ್ನು ತೆಗೆದುಕೊಳ್ಳಬಹುದು. ಬೆಳಗಿನ ಒಂದೆರಡು ತಾಸುಗಳಲ್ಲಿ ಎಲ್ಲಾ ಕೆಲಸಗಳೂ ನಿಧಾನವಾಗುವುದು, ಒಂದಕ್ಕೊಂದು ಎಡವಟ್ಟಾಗುವುದು- ಇವೆಲ್ಲ ಧಿಡೀರನೆ ಏಳುವ ಹಿನ್ನೆಲೆಯನ್ನು ಹೊಂದಿವೆಯೇ ಎಂಬುದನ್ನು ಪರಿಶೀಲಿಸಬಹುದು. ಹಾಗಾದರೆ ಈ ಸಮಸ್ಯೆಗೆ ಪರಿಹಾರವಿಲ್ಲವೇ?
ಪರಿಹಾರವಿಲ್ಲವೇ?
ಇದೆ! ಮಾತ್ರವಲ್ಲ, ಪರಿಹಾರವು ಸರಳವಾಗಿಯೇ ಇದೆ. ದೇಹಕ್ಕೆ ಅಗತ್ಯವಾದ 7-8 ತಾಸಿನ ನಿದ್ದೆಯನ್ನು ನೀಡುವುದು ಮುಖ್ಯ. ಅಂದರೆ ರಾತ್ರಿ ಬೇಗ ಮಲಗಿ, ಎಂಟು ತಾಸುಗಳ ಗಾಢ ನಿದ್ದೆಯನ್ನು ದೇಹಕ್ಕೆ ನೀಡಿದ್ದೇ ಆದಲ್ಲಿ, ಬೆಳಗಿನ ಹೊತ್ತು ನಿದ್ದೆ ಸಹಜವಾಗಿಯೇ ಹರಿಯುತ್ತದೆ. ಆಗ ಅಲಾರಾಂಗಳ ಗೊಡವೆಯೇ ಬೇಕಾಗುವುದಿಲ್ಲ. ಅಂದರೆ ರಾತ್ರಿ 11ಕ್ಕೆ ಮಲಗಿದರೆ ಬೆಳಗಿನ 6 ಗಂಟೆಗೆ ದೇಹ ತಾನಾಗಿಯೇ ಎಚ್ಚರಗೊಳ್ಳುತ್ತದೆ. ಇನ್ನೂ ಬೇಗ ಏಳಬೇಕೇ? ಇನ್ನೂ ಬೇಗ ಮಲಗಿ! ಜತೆಗೆ, ದಿನವೂ ಮಲಗುವ-ಏಳುವ ಅವಧಿಯನ್ನು ನಿಗದಿ ಮಾಡಿಕೊಳ್ಳಿ, ಅದನ್ನು ಪಾಲಿಸಿ.
ಈ ಸುದ್ದಿಯನ್ನೂ ಓದಿ | Ovarian Cancer: ಅಂಡಾಶಯದ ಕ್ಯಾನ್ಸರ್; 65 ವರ್ಷದ ಮಹಿಳೆಗೆ ಯಶಸ್ವಿ ಶಸ್ತ್ರಚಿಕಿತ್ಸೆ
ನೈಸರ್ಗಿಕವಾದ ಬೆಳಕು ಬೆಳಗಿನ ಹೊತ್ತು ದೇಹದ ಮೇಲೆ ಬೀಳುವುದರಿಂದ ಬಹಳಷ್ಟು ಪ್ರಯೋಜನವಿದೆ. ನಿಮ್ಮ ಕಿಟಕಿಯಿಂದ ಸೂರ್ಯನ ಕಿರಣಗಳು ಒಳಗೆ ಬರುವುದಕ್ಕೆ ಸಾಧ್ಯವೇ ಎಂಬುದನ್ನು ಪರಿಶೀಲಿಸಿ. ಹೀಗಾದರೆ ನಿದಿರೆಯನ್ನು ತರಿಸುವಂಥ ಮೆಲಟೋನಿನ್ ಚೋದಕದ ಉತ್ಪಾದನೆಯನ್ನು ಮೆದುಳು ಕಡಿಮೆ ಮಾಡುತ್ತದೆ ಹಾಗೂ ದೇಹಕ್ಕೆ ಸಹಜವಾಗಿ ಎಚ್ಚರವಾಗುತ್ತದೆ. ಬೆಳಗಿನ ಹೊತ್ತು ಹಕ್ಕಿಗಳ ಗದ್ದಲ, ಆಚೀಚಿನ ಶಬ್ದಗಳು ಬೆಳಗಾಯಿತೆಂಬ ಸಹಜ ಭಾವನೆಯನ್ನು ಬರಿಸಿ, ಎಚ್ಚರಗೊಳಿಸುವುದು ಒಳ್ಳೆಯದು.