Wednesday, 30th October 2024

Tumkur News: ಹೇಮಾವತಿ ಕೆನಾಲ್ ಯೋಜನೆ ವಿರೋಧಿಸಿ ಪ್ರತಿಭಟನೆ

ತುಮಕೂರು: ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ಕಾಮಗಾರಿ ಪುನರಾರಂಭವನ್ನು ವಿರೋಧಿಸಿ ಮಾಜಿ ಸಚಿವ ಸೊಗಡು ಶಿವಣ್ಣ ಹಾಗೂ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಸಚಿವ ಸೊಗಡು ಶಿವಣ್ಣ, ಕುಣಿಗಲ್ ತಾಲೂಕಿಗೆ ಹಂಚಿಕೆಯಾಗಿರುವ ನೀರು ತೆಗೆದುಕೊಂಡು ಹೋಗಲು ನಮ್ಮ ಅಭ್ಯಂತರವಿಲ್ಲ. ಆದರೆ ಮೂಲ ನಾಲೆಗೆ ಧಕ್ಕೆಯಾಗದಂತೆ ತೆಗೆದುಕೊಂಡು ಹೋಗಬೇಕೆಂ ಬುದು ನಮ್ಮ ಆಗ್ರಹವಾಗಿದೆ. ಈ ಹಿಂದೆ ಏಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ವಿರೋಧಿಸಿ ಪ್ರತಿ ಭಟನೆಗಳು ನಡೆದಾಗ ಸರಕಾರ ತಾಂತ್ರಿಕ ಸಮಿತಿ ನೇಮಿಸಿ ವರದಿ ಬಂದ ನಂತರ ಸಾಧಕ, ಭಾಧಕಗಳನ್ನು ಚರ್ಚಿಸ ಲಾಗುವುದು ಎಂದು ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಹೋರಾಟವನ್ನು ಹಿಂಪಡೆಯಲಾಗಿತ್ತು. ತಾಂತ್ರಿಕ ವರದಿ ಯನ್ನು ಕತ್ತಲಲ್ಲಿ ಇಟ್ಟು ಕಾಮಗಾರಿ ನಡೆಸಲು ಹೊರಟಿರುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ಸಂಬಂಧ ಪಟ್ಟವರಿಗೆ ಸೂಚನೆ ನೀಡಿ, ಕಾಮಗಾರಿ ತಡೆಯಬೇಕು.ಇಲ್ಲದಿದ್ದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ಮುಖಂಡ ದಿಲೀಪ್ ಕುಮಾರ್ ಮಾತನಾಡಿ, ತಾಂತ್ರಿಕ ಸಲಹಾ ಸಮಿತಿಯ ವರದಿ ಬಗ್ಗೆ ಚರ್ಚೆಯಾಗಿ ಇದರ ಬಗ್ಗೆ ನಿರ್ಧಾರಗಳು ಆಗುವವರೆವಿಗೂ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಯನ್ನು ಕೂಡಲೇ ನಿಲ್ಲಿಸುವಂತೆ ಜಿಲ್ಲಾಧಿಕಾರಿಗಳಾದ ತಾವು ಸಂಬಂಧಪಟ್ಟ ಇಲಾಖೆಯವರಿಗೆ ಆದೇಶಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಕನ್ನಡ ಸೇನೆಯ ಧನಿಯಕುಮಾರ್ ಮಾತನಾಡಿ, ಹೇಮಾವತಿ ಹೋರಾಟ ಸಮಿತಿಯವರು, ಕನ್ನಡ ಪರ ಸಂಘಟನೆಗಳು ಹಾಗೂ ಸ್ವಾಮೀಜಿಗಳ ನೇತೃತ್ವಜಲ್ಲಿ ಹೋರಾಟ ಮಾಡಿ ತುಮಕೂರು ಬಂದ್ ಆಚರಣೆ ಮಾಡಲಾಗಿತ್ತು. ಪೈಪ್‌ಲೈನ್ ಮುಖಾಂತರ ನೀರು ಬಿಡುವುದಕ್ಕೆ ನಾವು ವಿರೋಧ ವ್ಯಕ್ತಪಡಿಸಿದ್ದೆವು. ವರದಿ ಬರುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಸರ್ಕಾರ ಮತ್ತು ಜಿಲ್ಲಾಡಳಿತ ಸೂಚನೆ ನೀಡಿತ್ತು. ಆದರೆ ರಾತ್ರೋರಾತ್ರಿ ಜೆಸಿಬಿ ಯಂತ್ರಗಳ ಹಾಗೂ ಪೈಪ್‌ಲೈನ್ ತಂದು ಕಾಮಗಾರಿ ಪ್ರಾರಂಭಿಸಲು ಮುಂದಾಗಿದ್ದಾರೆ. ಯಾವುದೇ ಕಾರಣಕ್ಕೂ ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಸರಕಾರ, ಜಿಲ್ಲಾಡಳಿತ ಕೊಟ್ಟ ಮಾತಿನಂತೆ ನಡೆದು ಕೊಳ್ಳಬೇಕು. ತಾಂತ್ರಿಕ ಸಮಿತಿಯ ವರದಿಯನ್ನು ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು. ವರದಿಯನ್ನು ಬಹಿರಂಗ ಪಡಿಸದೆ ಕಾಮಗಾರಿ ನಡೆಸುವುದು ತರವಲ್ಲ. ಅಲ್ಲದೆ ಯಾವುದೇ ಭೂ ಸ್ವಾಧೀನವಿಲ್ಲದೆ ರಸ್ತೆಯ ಪಕ್ಕ,ಕೆರೆಗಳ ಏರಿಗಳ ಮೇಲೆ ಪೈಫ್‌ಲೈನ್ ಕಾಮಗಾರಿ ನಡೆಸುತ್ತಿರುವುದು ಖಂಡನೀಯ. ರೈತರನ್ನು ಕತ್ತಲಲ್ಲಿ ಇಟ್ಟು ಕಾಮಗಾರಿ ನಡೆಸಲು ಮುಂದಾದರೆ,ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂಬಂಧ ಮನವಿಯನ್ನು ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಸವರಾಜು, ಚಿಕ್ಕಬೋರೇಗೌಡ, ರವೀಶ್, ಎಚ್.ಟಿ.ಭೈರಪ್ಪ, ಸಾಗರನಹಳ್ಳಿ ವಿಜಯಕುಮಾರ್, ಕಳ್ಳಿಪಾಳ್ಯ ಲೋಕೇಶ್, ವೆಂಕಟಾಚಲ, ಟಿ.ಹೆಚ್. ಭೈರಪ್ಪ, ಹೊಸಕೋಟೆ ನಟರಾಜು, ಕೆ.ಪಿ.ಮಹೇಶ್, ನಂಜೇಗೌಡ, ದಸಂಸ ಮುಖಂಡ ಪಿ.ಎನ್.ರಾಮಯ್ಯ, ಜಿ.ಪಂ. ಮಾಜಿ ಸದಸ್ಯೆ ಯಶೋಧಮ್ಮ, ಜಗದೀಶ್, ಎ. ಸುನೀಲ್, ರಾಮಲಿಂಗಯ್ಯ, ಶಬ್ಬೀರ ಅಹಮದ್, ರಾಮಚಂದ್ರರಾವ್, ಇಮ್ರಾನ್ ಅಹಮದ್, ರಫೀಕ್ ಅಹಮದ್, ಅಬ್ಬು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.