Saturday, 23rd November 2024

Murder Case: ಗೃಹಲಕ್ಷ್ಮಿ ಹಣ ಡ್ರಾ ಮಾಡಲು ಬ್ಯಾಂಕಿಗೆ ಹೋಗಿದ್ದ ಪತ್ನಿಯನ್ನೇ ಕೊಂದ ಪಾಪಿ ಪತಿ!

Murder Case

ದಾವಣಗೆರೆ: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗುತ್ತಿದೆ. ಸರ್ಕಾರ ನೀಡುವ 2000 ರೂ.ಗಳು ಹಲವು ಮಹಿಳೆಯರಿಗೆ ಮನೆ ನಿರ್ವಹಣೆಗೆ ನೆರವಾಗುತ್ತಿದೆ. ಈ ನಡುವೆ ಖಾತೆಗೆ ಬಂದಿದ್ದ ಹಣ ಹಿಂಪಡೆಯಲು ಬ್ಯಾಂಕಿಗೆ ಹೋಗಿದ್ದ ಪತ್ನಿಯನ್ನು ಪಾಪಿ ಪತಿ ಕೊಲೆಗೈದಿರುವ ಘಟನೆ (Murder Case) ಜಿಲ್ಲೆಯ ಜಗಳೂರು ತಾಲೂಕಿನ ಉಜ್ಜಪ್ಪರ ಒಡೆರಹಳ್ಳಿಯಲ್ಲಿ ನಡೆದಿದೆ.

ಸತ್ಯಮ್ಮ ಕೊಲೆಯಾದ ಮಹಿಳೆ. ಅಣ್ಣಪ್ಪ ಕೊಲೆಗೈದ ಪತಿಯಾಗಿದ್ದಾನೆ. ಗೃಹಲಕ್ಷ್ಮಿ ಯೋಜನೆ ಹಣ ಹಿಂಪಡೆಯಲು ಸತ್ಯಮ್ಮ ಜಗಳೂರು ತಾಲೂಕಿನ ಅಸಗೋಡ್​​ ಬ್ಯಾಂಕ್​​ಗೆ ತೆರಳಿದ್ದರು. ಇದೇ ವೇಳೆ ಬ್ಯಾಂಕ್​ಗೆ ಬಂದ ಪತಿ ಅಣ್ಣಪ್ಪ, ಪತ್ನಿ ಸತ್ಯಮ್ಮಳನ್ನು ಮನವೊಲಿಸಿ ಜಮೀನಿಗೆ ಕರೆದೊಯ್ದು ಹಲ್ಲೆ ಮಾಡಿದ್ದಾನೆ. ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.

ಈ ದಂಪತಿ 12 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇವರಿಗೆ ಒಬ್ಬ ಮಗ ಹಾಗೂ ಒಬ್ಬ ಮಗಳಿದ್ದಾಳೆ. ಪತಿ ಅಣ್ಣಪ್ಪ ನಿತ್ಯ ಕುಡಿದು ಬಂದು ಹಣ ನೀಡುವಂತೆ ಪತ್ನಿ ಸತ್ಯಮ್ಮಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಮಹಿಳೆ ತವರು ಮನೆ ಸೇರಿದ್ದಳು. ಆದರೆ, ಗೃಹ ಲಕ್ಷ್ಮಿ ಹಣ ಡ್ರಾ ಮಾಡಿಕೊಳ್ಳಲು ಒಡೆರಹಳ್ಳಿ ಗ್ರಾಮಕ್ಕೆ ಪತ್ನಿ ಬಂದಿದ್ದ ವೇಳೆ ಆಕೆಯನ್ನು ಅಣ್ಣಪ್ಪ ಕರೆದೊಯ್ದು ಕೊಲೆಗೈದು ಪರಾರಿಯಾಗಿದ್ದಾನೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗುಬ್ಬಿಯಲ್ಲಿ ನಿರಂತರ ಮಳೆಗೆ ಮನೆ ಗೋಡೆ ಕುಸಿದು ಮಹಿಳೆ ಸಾವು

Karnataka Rain

ತುಮಕೂರು: ರಾಜ್ಯದಲ್ಲಿ ವಿವಿಧೆಡೆ ಭಾರಿ ಮಳೆ (Karnataka Rain) ಸುರಿಯುತ್ತಿದ್ದು, ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಈ ನಡವೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜಿ.ಹೊಸಹಳ್ಳಿಯಲ್ಲಿ ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಮಹಿಳೆ ಸ್ನಾನಕ್ಕೆ ತೆರಳಿದ್ದ ವೇಳೆ ಗೋಡೆ ಕುಸಿದು ದುರಂತ ಸಂಭವಿಸಿದೆ.

ಈ ಸುದ್ದಿಯನ್ನೂ ಓದಿ | Robbery attempt: ಕಳ್ಳತನಕ್ಕೆ ಯತ್ನ: ಸಿಸಿ ಕ್ಯಾಮೆರಾದಲ್ಲಿ ಸೆರೆ, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ!

ಸಹನಾ (27) ಮೃತ ಮಹಿಳೆ. ಗೋಡೆ ಕುಸಿದು ಮಣ್ಣಿನ ಅಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಸಹನಾಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರು ಮೃತ ಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.