Monday, 25th November 2024

DMK NRI Wing: ಜಮ್ಮು& ಕಾಶ್ಮೀರದ ಭಾಗಗಳು ಪಾಕಿಸ್ತಾನಕ್ಕೆ ಸೇರಿದ್ದು ಎಂದು ಬಿಂಬಿಸುವ ನಕ್ಷೆ ಪೋಸ್ಟ್‌ ಮಾಡಿದ ಡಿಎಂಕೆ ಎನ್‌ಆರ್‌ಐ ಘಟಕ

DMK NRI Wing

ಚೆನ್ನೈ: ಕಳೆದ ಕೆಲವು ದಿನಗಳಿಂದ ತಮಿಳುನಾಡು ರಾಜಕೀಯ ದೇಶಾದ್ಯಂತ ವ್ಯಾಪಕ ಚರ್ಚೆ ಹುಟ್ಟು ಹಾಕಿದೆ. ಇದೀಗ ಆಡಳಿತರೂಢ ದ್ರಾವಿಡ್‌ ಮುನ್ನೇತ್ರ ಕಳಗಂ (DMK)ನ ಎನ್‌ಆರ್‌ಐ ಘಟಕ (DMK NRI Wing) ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು ಪಾಕಿಸ್ತಾನ, ಚೀನಾಕ್ಕೆ ಸೇರಿದೆ ಎಂದು ತಪ್ಪಾಗಿ ಚಿತ್ರಿಸಲಾದ ಭಾರತದ ನಕ್ಷೆಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡು ವಿವಾದ ಮೈಮೇಲೆ ಎಳೆದುಕೊಂಡಿದೆ. ಕೆಲವು ತಿಂಗಳ ಹಿಂದೆ ಡಿಎಂಕೆಯು ಪತ್ರಿಕೆಗಳಿಗೆ ನೀಡಿದ ಜಾಹೀರಾತಿನಲ್ಲಿ ಚೀನಾ ಧ್ವಜವನ್ನು (China Flag) ಮುದ್ರಿಸುವ ಮೂಲಕ ವಿವಾದದ ಕಿಡಿ ಹೊತ್ತಿಸಿತ್ತು. ಇದೀಗ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದೆ.

ಈ ಮೂಲಕ ಡಿಎಂಕೆ ದೇಶದ್ರೋಹ ನಡವಳಿಕೆ ಪ್ರದರ್ಶಿಸಿದೆ ಎಂದು ಹಲವರು ಕಿಡಿಕಾಡಿದ್ದಾರೆ. ವ್ಯಾಪಕ ಟೀಕೆ, ವಿವಾದದ ಬಳಿಕ ಪೋಸ್ಟ್‌ ಅನ್ನು ಡಿಲೀಟ್‌ ಮಾಡಲಾಗಿದೆ. ಬಳಿಕ ಭಾರತದ ಸರಿಯಾದ ನಕ್ಷೆಯೊಂದಿಗೆ “ದ್ರಾವಿಡ ಮಾದರಿ ಆಡಳಿತದಲ್ಲಿ ತಮಿಳುನಾಡಿನ ಆರ್ಥಿಕತೆ ಶಿಕ್ಷಣದಂತೆ ಬೆಳೆಯುತ್ತಿದೆ!” ಎಂಬ ಕ್ಯಾಪ್ಶನ್‌ ಹಂಚಿಕೊಂಡಿದೆ.

ವ್ಯಾಪಕ ಟೀಕೆ

ತಮಿಳುನಾಡಿನ ಬಿಜೆಪಿ ರಾಜ್ಯ ಕಾರ್ಯದರ್ಶಿ ಎಸ್.ಜಿ.ಸೂರ್ಯ ಅವರು ಡಿಎಂಕೆಯ ಈ ನಡೆಯನ್ನು ಟೀಕಿಸಿದ್ದಾರೆ. ಡಿಎಂಕೆ ಭಾರತದ ನಕ್ಷೆಯನ್ನು ತಪ್ಪಾಗಿ ನಿರೂಪಿಸುತ್ತಿರುವುದು ಇದೇ ಮೊದಲಲ್ಲ ಎಂದು ಅವರು ಹೇಳಿದ್ದಾರೆ. ʼʼ2020ರಲ್ಲಿ ಸಿಎಂ ಎಂ.ಕೆ.ಸ್ಟಾಲಿನ್‌ ಅವರ ಪುತ್ರ, ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್‌ ಕೂಡ ವಿಡಿಯೊದಲ್ಲಿ ಇದೇ ರೀತಿಯ ಎಡವಟ್ಟು ಮಾಡಿಕೊಂಡಿದ್ದರು. ಈ ಬಗ್ಗೆ ನಾನು ದೂರು ನೀಡಿದ ಬಳಿಕ ವಿಡಿಯೊವನ್ನು ಡಿಲೀಟ್‌ ಮಾಡಲಾಗಿತ್ತು. ಡಿಎಂಕೆ ಮತ್ತು ಡಿಎಂಕೆ ನಾಯಕರು ಪಾಕಿಸ್ತಾನದ ಕಡೆಗೆ ಒಲವು ಹೊಂದಿರುವುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆʼʼ ಎಂದು ಎಸ್.ಜಿ.ಸೂರ್ಯ ದೂರಿದ್ದಾರೆ.

2022ರ ನವೆಂಬರ್‌ನಲ್ಲಿ ಡಿಎಂಕೆ ವಕ್ತಾರ ಸಲೇಂ ಧರಣೀಧರನ್, ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಮತ್ತು ಅಕ್ಸಾಯ್ ಚಿನ್ ಅನ್ನು ಹೊರಗಿಟ್ಟ ಭಾರತದ ವಿಕೃತ ನಕ್ಷೆಯನ್ನು ಪೋಸ್ಟ್ ಮಾಡಿದ್ದರು. ನಕ್ಷೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸುವ ಮೂಲಕ ಅವರು ಉತ್ತರ ಭಾರತ ವಿರೋಧಿ ಹೇಳಿಕೆಯನ್ನು ನೀಡಿದ್ದರು. ಶೇ. 50ರಷ್ಟು ಭೂಭಾಗವನ್ನು ಒಳಗೊಂಡ ದಕ್ಷಿಣ, ಮಧ್ಯ ಮತ್ತು ಪಶ್ಚಿಮ ಭಾರತವನ್ನು ನೀಲಿ ಬಣ್ಣದಲ್ಲಿ ಮತ್ತು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿ ಉಳಿದ ಶೇ. 50ರಷ್ಟು ಭಾಗವನ್ನು ಕೆಂಪು ಬಣ್ಣದಲ್ಲಿ ವಿಭಾಗಿಸಿದ್ದರು. ಜನಸಂಖ್ಯೆಯ ಹೆಚ್ಚಳ ಕಾರಣದಿಂದ ಉತ್ತರದ ರಾಜ್ಯಗಳು ದಕ್ಷಿಣದ ರಾಜ್ಯಗಳ ಪ್ರಯೋಜನಗಳನ್ನು ಕಸಿದುಕೊಳ್ಳುತ್ತಿವೆ, ಅಸಮಾಧಾನವನ್ನು ಬೆಳೆಸುತ್ತಿವೆ ಎಂದು ಹೇಳಿದ್ದರು. ಕಾನೂನು ಎಚ್ಚರಿಕೆ ಬಳಿಕ ಅವರು ಪೋಸ್ಟ್‌ ಡಿಲೀಟ್‌ ಮಾಡಿದ್ದರು.

2020ರಲ್ಲಿ ತಮಿಳುನಾಡಿನ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ಹಂಚಿಕೊಂಡ ನಕ್ಷೆಯಲ್ಲಿ ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ ಮತ್ತು ಚೀನಾ ಆಕ್ರಮಿತ ಲಡಾಖ್ ಭೂಭಾಗವೇ ಇರಲಿಲ್ಲ.

ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಡಿಎಂಕೆ ನಿಲುವು

ಹಿಂದಿನಿಂದಲೂ ಜಮ್ಮು ಮತ್ತು ಕಾಶ್ಮೀರದ ಮೇಲೆ ಭಾರತದ ಹಕ್ಕಿನ ಬಗ್ಗೆ ಡಿಎಂಕೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಲೇ ಬಂದಿದೆ. 2019ರಲ್ಲಿ ಖಾಸಗಿ ಟಿವಿ ಚರ್ಚೆಯ ಸಮಯದಲ್ಲಿ ಪಕ್ಷದ ವಕ್ತಾರ ಎ.ಸರವಣನ್ ಅವರು ಕಾಶ್ಮೀರವು “ಭಾರತದ ಅವಿಭಾಜ್ಯ ಅಂಗವಲ್ಲ” ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಬಳಿಕ ಡಿಎಂಕೆ ಈ ಹೇಳಿಕೆಯನ್ನು ಹಿಂಪಡೆದು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೆ ನೀಡಿತ್ತು.

ಈ ಸುದ್ದಿಯನ್ನೂ ಓದಿ: MK Stalin: 16 ಮಕ್ಕಳನ್ನು ಹೊಂದುವಂತೆ ಕರೆ ನೀಡಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌; ಕಾರಣವೇನು?