Thursday, 24th October 2024

BBK 11: ಬಿಗ್ ಬಾಸ್ ಮನೆ ಎರಡು ಬಣ: ರಾಜಕೀಯದ ಆಟದಲ್ಲಿ ಸ್ಪರ್ಧಿಗಳ ನಡುವೆ ಗಲಾಟೆ

BBK 11 Political Task

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg Boss Kannada 11) ಈ ವಾರ ಟ್ವಿಸ್ಟ್ ಟ್ವಿಸ್ಟ್ ನೀಡಲಾಗುತ್ತಿದೆ. ಮೊದಲಿಗೆ ಹನುಮಂತ ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಮನೆಯೊಳಗೆ ಕಾಲಿಟ್ಟರು. ಬಳಿಕ ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಾರದ ಕ್ಯಾಪ್ಟನ್ ಆಗಿ ಎರಡು ಮಂದಿ ಆಯ್ಕೆಯಾದರು. ಇದೀಗ ದೊಡ್ಮನೆಯಲ್ಲಿ ರಾಜಕೀಯದ ಆಟ ಶುರುವಾಗಿದೆ. ಒಟ್ಟು ಎರಡು ಬಣಗಳನ್ನಾಗಿ ಮಾಡಲಾಗಿದ್ದು, ಸ್ಪರ್ಧಿಗಳ ನಡುವೆ ದೊಡ್ಡ ಜಗಳವೇ ನಡೆದಿದೆ.

ಈ ವಾರ ಬಿಗ್ ಬಾಸ್ ಮನೆ ಬಿಗ್ ಬಾಸ್ ಸೌಧವಾಗಿ ಮಾರ್ಪಾಡಾಗಿದೆ. ಎಲ್ಲರೂ ರಾಜಕಾರಣಿಗಳ ಅವತಾರ ತಾಳಿದ್ದಾರೆ. ಎರಡು ರಾಜಕೀಯ ಪಕ್ಷಗಳಾಗಿ ವಿಂಗಡಿಸಿರುವ ಬಿಗ್ ಬಾಸ್ ಒಂದಕ್ಕೆ ‘ಸಮರ್ಥರ ನ್ಯಾಯವಾದಿ ಪಕ್ಷ’ ಹಾಗೂ ಎರಡನೆಯದು ‘ಧರ್ಮ ಸೇನಾ ಪಕ್ಷ’ ಎಂದು ಹೆಸರು ನೀಡಿದೆ.

ಎರಡು ಬಣಗಳು ನಿರ್ಮಾಣವಾಗಿದ್ದು ತ್ರಿವಿಕ್ರಮ್ ಬಣದಲ್ಲಿ ಚೈತ್ರಾ, ಭವ್ಯಾ, ಅನುಷಾ ರೈ, ಮಾನಸ, ಸುರೇಶ್, ಧನಂಜಯ ಇದ್ದಾರೆ. ಐಶ್ವರ್ಯಾ ಟೀಂನಲ್ಲಿ ಶಿಶಿರ್, ಮೋಕ್ಷಿತಾ, ಹಂಸ, ಧರ್ಮ, ಗೌತಮಿ, ಮಂಜು ಇದ್ದಾರೆ. ಸ್ಪರ್ಧಿಗಳನ್ನು ಎರಡು ಪಕ್ಷಗಳನ್ನಾಗಿ ವಿಂಗಡಿಸಿ ರಾಜಕೀಯ ಮಾಡುವ ಟಾಸ್ಕ್ ನೀಡಲಾಗಿದೆ.

ಎರಡೂ ಪಕ್ಷಗಳವರು ಥೇಟ್ ರಾಜಕಾರಣಿಗಳಂತೆ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಮನೆಯಲ್ಲಿ ಗಲಾಟೆ ಕೂಡ ನಡೆದಿದೆ. ಪಕ್ಷದ ಪೋಸ್ಟರ್ ಅನ್ನು ನಮ್ಮ ಮನೆಯ ಬಳಿ ಅಂಟಿಸಿದ್ದೀರಿ ಎಂದು ಇನ್ನೊಂದು ಪಕ್ಷದವರು ಗಲಾಟೆ ಮಾಡಿದ್ದಾರೆ. ಪಕ್ಷದ ಪೋಸ್ಟರ್​ಗಳನ್ನು ಹರಿದು ಹಾಕಿ ಥೇಟ್ ರಾಜಕೀಯ ರೌಡಿಗಳಂತೆ ವರ್ತಿಸಿದ್ದಾರೆ. ಚೈತ್ರಾ ಅವರು ನಾವೂ ಸರ್ಕಾರ ರಚನೆ ಮಾಡಿಯೇ ಮಾಡ್ತೀವಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ.

ಹನುಮಂತನಿಗೆ ಅಗ್ನಿಪರೀಕ್ಷೆ:

ಹನುಮಂತನಿಗೆ ಅಗ್ನಿಪರೀಕ್ಷೆ ಎದುರಾಗಿದೆ. ಬಿಗ್ ಬಾಸ್ ಇವರನ್ನು ಕನ್ಫೆಷನ್ ರೂಮ್​ಗೆ ಕರೆದಿದ್ದು, ಇಬ್ಬರು ಸದಸ್ಯರನ್ನು ನಾಮಿನೇಟ್ ಮಾಡುವಂತೆ ಆದೇಶ ನೀಡಿದ್ದಾರೆ. ಆದರೆ, ಹನುಮಂತ ಮಾತ್ರ ನಾಮಿನೇಟ್ ಮಾಡುವುದಕ್ಕೆ ಕಷ್ಟಪಟ್ಟಿದ್ದಾರೆ. “ಎಲ್ಲರೂ ನನ್ನ ಜೊತೆಗೆ ಚೆನ್ನಾಗಿ ಇದ್ದಾರೆ. ಎಲ್ಲರೂ ಉತ್ತಮವಾಗಿ ಆಟ ಆಡುತ್ತಿದ್ದಾರೆ. ನಾನು ಯಾರನ್ನೂ ನಾಮಿನೇಟ್ ಮಾಡಲಿ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಕೊನೆಗೆ ಹನುಮಂತ ಅವರು ಹಂಸ ಹೆಸರು ಹೇಳಿದ್ದಾರೆ. ಆದರೆ, ಇನ್ನೊಂದು ಆಯ್ಕೆಯಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂದು ತಿಳಿಯದೆ ತಮ್ಮ ಹೆಸರನ್ನೇ ಹೇಳಿಕೊಂಡಿದ್ದಾರೆ.

BBK 11: ಬಿಗ್ ಬಾಸ್​ನಲ್ಲಿ ಹನುಮಂತನಿಗೆ ಅಗ್ನಿಪರೀಕ್ಷೆ: ನಾಮಿನೇಟ್ ಮಾಡಿದ ಇಬ್ಬರು ಸದಸ್ಯರು ಯಾರು?