Saturday, 23rd November 2024

Tumkur Breaking: ಡಿಸಿ, ಸಿಇಒ, ಶಾಸಕ ಗ್ರಾಮಕ್ಕೆ ಭೇಟಿ: ಕಲುಷಿತ ನೀರು ಸೇವನೆ : ಇಬ್ಬರು ಸಾವು 

ಚಿಕ್ಕನಾಯಕನಹಳ್ಳಿ: ಕಲುಷಿತ ನೀರು ಸೇವಿಸಿ ಇಬ್ಬರು ಮೃತಪಟ್ಟು 60 ಮಂದಿಗೂ ಹೆಚ್ಚು ಮಂದಿ ವಾಂತಿ ಭೇದಿಗೆ ತುತ್ತಾಗಿದ್ದ ಪ್ರಕರಣ ಸಂಬಂಧ ಶಾಸಕ ಸುರೇಶ್‌ಬಾಬು, ಜಿಲ್ಲಾಧಿಕಾರಿ ಶುಭಕಲ್ಯಾಣ್ ಹಾಗೂ ಜಿಪಂ ಸಿಇಒ ಜಿ.ಪ್ರಭು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಲುಷಿತ ನೀರು ಸೇವನೆಯಿಂದಾಗಿ ಭುವನೇಶ್ವರಿ (13) ತೀವ್ರವಾಗಿ ಅಸ್ವಸ್ಥರಾಗಿ ಕಳೆದ ಭಾನುವಾರ ಸಾವನ್ನಪ್ಪಿದರೆ ಭುವನೇಶ್ವರಿಯ ಅಜ್ಜಿ ಗುಂಡಮ್ಮ (60) ಮಂಗಳವಾರ ಸಾವನಪ್ಪಿದ್ದರು. ರತ್ನಮ್ಮ ಎಂಬುವವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ, ಮುರಾರ್ಜಿ ಶಾಲೆಯಲ್ಲಿ ಓದುತ್ತಿದ್ದ ಬಾಲಕನೊಬ್ಬನನ್ನು ಶಿರಾ ಆಸ್ಪತ್ರೆಗೆ, ಸುಧಾಕರ್ (13) ತಿಮ್ಮಯ್ಯ(60) ಚಿಕ್ಕನಾಯಕನಹಳ್ಳಿಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ ಕೆಂಚಮ್ಮ(60) ಎಂಬಾಕೆಯನ್ನು ತಿಪಟೂರಿಗೆ ಹೆಚ್ಚಿನ ಚಿಕಿತ್ಸೆಗೆ ಕಳಿಸಲಾಗಿದೆ.

ಜಿಲ್ಲಾಧಿಕಾರಿ ಶುಭಕಲ್ಯಾಣ ಮಾತನಾಡಿ, ಈಗಾಗಲೇ ಕಲುಷಿತ ನೀರು ಸೇವಿಸಿ ವಾಂತಿಭೇದಿಯಿ0ದ ಅಸ್ವಸ್ಥಗೊಂಡ ಇಬ್ಬರು ಮೃತಪಟ್ಟಿರುವ ವಿಷಯದ ಬಗ್ಗೆ ನಮಗೂ ನೋವಾಗಿದೆ. ಕೂಡಲೇ ಇಡೀ ಗ್ರಾಮವನ್ನು ಆರೋಗ್ಯ ಚಿಕಿತ್ಸೆಗೆ ಒಳಪಡಿಸಿ ಆರೋಗ್ಯ ಇಲಾಖೆಯವರು ಸ್ಥಳದಲ್ಲಿಯೇ ಇದ್ದು ಚಿಕಿತ್ಸೆ ನೀಡುವಂತೆ ಸೂಚಿಸಿದರು.

ಜಿಪಂ ಸಿಇಒ ಜಿ. ಪ್ರಭು ಮಾತನಾಡಿ, ಈಗಾಗಲೇ ಅಸ್ವಸ್ಥಗೊಂಡಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಹಾಗೂ ಗ್ರಾಮದಲ್ಲಿ ವಾಸವಿರುವ ಜನರ ಆರೋಗ್ಯ ಪರೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿ ಸದ್ಯಕ್ಕೆ ಗ್ರಾಮಕ್ಕೆ ಬೇಕಾಗಿರುವ ಚರಂಡಿ ಹಾಗೂ ಸಿಸಿ ರಸ್ತೆಗಳನ್ನು ಶೀಘ್ರದಲ್ಲೇ ಮಾಡಿ ಮುಗಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಡಿಎಚ್‌ಒ ಡಾ. ಚಂದ್ರಶೇಖರ್, ತಿಪಟೂರು ಉಪ ವಿಭಾಗಾಧಿಕಾರಿ ಸಪ್ತಶ್ರೀ ಮತ್ತಿತರರಿದ್ದರು.  

ಸಾವಿಗೆ ಕಾರಣವೇನು ?
ಸೋರಲುಮಾವು ಗ್ರಾಮದಲ್ಲಿ ಸುಮಾರು 400ಕ್ಕೂ ಹೆಚ್ಚು ಮನೆಗಳಿದ್ದು ಇಡೀ ಗ್ರಾಮ ಇದೇ ನೀರನ್ನು ಕುಡಿದಿರು ವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ತಾಲೂಕಿನಾದ್ಯಂತ ಸುಧೀರ್ಘವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ತಾಲೂಕಿನ ಹಂದನಕೆರೆ ಹೋಬಳಿ ಸೋರ್ಲುಮಾವು ಗ್ರಾಮದಲ್ಲಿ ಕಿರು ನೀರು ಸರಬರಾಜು ಘಟಕದ ಪೈಪ್ ಗಳು ಒಡೆದ ಪರಿಣಾಮ ಮಳೆಯ ನೀರು ಅಲ್ಲದೆ ಕಲುಷಿತ ನೀರು ಸೇರಿಕೊಂಡು ಇಡೀ ಗ್ರಾಮಕ್ಕೆ ಅದೇ ನೀರು ಉಣಿಸಿದ್ದ ರಿಂದ ಈ ಅವಘಡ ಸಂಭವಿಸಿದೆ.

ಸತ್ಯ ಮುಚ್ಚಿಡುವ ಪ್ರಯತ್ನ
ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮಾಧ್ಯಮಗಳನ್ನು ನಿರ್ಲಕ್ಷ್ಯ ಮಾಡಿ ದೂರವಿಟ್ಟು ಸದ್ದಿಲ್ಲದೆ ಘಟನಾ ಸ್ಥಳಕ್ಕೆ ಬರುತ್ತಾರೆ ಮೌನವಾಗಿ ಹಿಂದಿರುಗುತ್ತಾರೆ ಎಂಬ ಸ್ಥಿತಿ ಬಹುತೇಕವಾಗಿ ನಿರ್ಮಾಣವಾಗಿ ಸತ್ಯ ಮುಚ್ಚಿಡುವ ಪ್ರಯತ್ನವೂ ನಡೆಯುತ್ತಲೇ ಸಾಗುತ್ತಿದೆ.

ಈ ಹಿಂದೆ ತಾಲೂಕಿನ ಮುದ್ದೇನಹಳ್ಳಿ ಗ್ರಾಮವನ್ನು ಮಲೇರಿಯಾ ಪೀಡಿತ ಪ್ರದೇಶ ಎಂದು ರಾಷ್ಟ್ರೀಯ ಆರೋಗ್ಯ ಸಮಿತಿ ಗುರುತಿಸಿತ್ತು ಈಗಿರುವಾಗ ತಾಲೂಕನ್ನು ಕೊಳಚೆ ಪ್ರದೇಶ ಮಾಡಬೇಡಿ ಕೂಡಲೇ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.
ಸಿ.ಬಿ.ಸುರೇಶ್ ಬಾಬು, ಶಾಸಕ

ಇದನ್ನೂ ಓದಿ: Tumkur News: ಹೇಮಾವತಿ ಕೆನಾಲ್ ಯೋಜನೆ ವಿರೋಧಿಸಿ ಪ್ರತಿಭಟನೆ