ಶಿಶಿರ ಕಾಲ
ಶಿಶಿರ್ ಹೆಗಡೆ
shishih@gmail.com
ಸುಂದರ ಬದುಕೆಂದರೆ ಏನೆಂದು ಹೇಳುವ ನಾಲ್ಕೆಂಟು ಪ್ರೇರಕ ಪೋಗಳು ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಕಣ್ಣೆದುರಿಗೆ ಹಾದುಹೋಗುತ್ತವೆ. ಅವುಗಳೇ ಫಾರ್ವರ್ಡ್ ಮೆಸೇಜುಗಳಾಗಿ ದಿನಬೆಳಗಾದರೆ ಮೊಬೈಲ್‌ಗೆ ಬಂದು ತುಂಬಿಕೊಳ್ಳುತ್ತವೆ. ನಮ್ಮ ಸುತ್ತಮುತ್ತಲಿನ ಎಲ್ಲರೂ ಚಂದದ ಬದುಕೆಂದರೆ ಹೇಗಿರಬೇಕು, ಅದನ್ನು ಪಡೆಯುವುದು ಹೇಗೆ ಎಂದು ಹೇಳುವವರೇ. ಅದನ್ನು ವಿವರಿಸಲು ಧರ್ಮಗ್ರಂಥಗಳಿವೆ, ಲಕ್ಷಾನುಗಟ್ಟಳೆ ಪುಸ್ತಕಗಳಿವೆ.
‘ವಿಶ್ವವಾಣಿ’ಯ ದಾರಿದೀಪೋಕ್ತಿ, ವಿಶ್ವೇಶ್ವರ ಭಟ್ಟರು ಬರೆಯುವ ‘ಆದಿ ಎಡಿಟರ್’ ಇವೆಲ್ಲವೂ ಸುಂದರ ಬದುಕೆಂದರೆ ಹೇಗಿರಬೇಕು, ಸಮಸ್ಯೆ ಎದುರಾದಾಗ ಹೇಗೆ ಎದುರಿಸಬೇಕು, ಜಯಿಸಬೇಕು ಎನ್ನುವುದನ್ನು ಹೇಳುತ್ತವೆ. ವಿಮಾನ ನಿಲ್ದಾಣದ ಪುಸ್ತಕದ ಅಂಗಡಿಗಳಲ್ಲಿ ಇಂಥವೇ ಪುಸ್ತಕಗಳು. ಸಮಯವನ್ನು ಸರಿಯಾಗಿ ಬಳಸುವುದು ಹೇಗೆ, ಶ್ರೀಮಂತರಾಗುವುದು ಹೇಗೆ, ಹಣವನ್ನು ತೊಡಗಿಸಿ ವೃದ್ಧಿಸಿಕೊಳ್ಳುವುದು ಹೇಗೆ, ಉತ್ತಮ ಹವ್ಯಾಸವನ್ನು ಬೆಳೆಸಿ ಕೊಳ್ಳುವುದು ಹೇಗೆ ಇಂಥ ಪುಸ್ತಕಗಳೇ ತುಂಬಿರುತ್ತವೆ. ಯುಟ್ಯೂಬಿನ ವಿಡಿಯೊಗಳು ಹತ್ತು ಪ್ರತಿಶತ, ಸುಮಾರು ನಾಲ್ಕು ಶತಕೋಟಿ ವಿಡಿಯೋಗಳು ‘ಬದುಕಲು ಕಲಿಯಿರಿ’ ವಿಷಯಾಧಾರಿತ.
ನಿಸ್ಸಂಶಯವಾಗಿ ಇವೆಲ್ಲ ಪುಸ್ತಕಗಳು, ವಿಡಿಯೋ, ಭಾಷಣಗಳು ಉಪಯುಕ್ತ ಹೌದು. ಇವು ಕೆಲವೊಂದು ಜೀವನ ಕೌಶಲವನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನವಾಗುತ್ತವೆ, ಸಹಾಯಮಾಡುತ್ತವೆ. ಯಶಸ್ವಿ ಬದುಕಿಗೆ ಬೇಕಾಗು ವುದನ್ನು ಸಾಧಿಸಲು ಒಂದಿಷ್ಟು ಯೋಜನೆಗಳನ್ನು, ತಾಳ್ಮೆ, ಪ್ರಯತ್ನ ಶೀಲತೆ, ಪರಿಶ್ರಮಿಸುವ ರೀತಿಯನ್ನು ಇವೆಲ್ಲ ಹೇಳಿಕೊಡಬಲ್ಲವು. ಅವೆಲ್ಲದರಲ್ಲೂ ‘ನಾವು ಅಳವಡಿಸಿಕೊಂಡು ಬಿಡಬಹುದು’ ಎಂದೆನಿಸುವ ವಿಚಾರಗಳಿದ್ದೇ ಇರುತ್ತವೆ.
ಹಾಗಂತ Be Successful- ಬದುಕಲು ಕಲಿಯಿರಿ ಎಂಬ ಯಾವುದೇ ಒಂದೇ ಪುಸ್ತಕವನ್ನು ಯಥಾವತ್ತು ಅನುಕರಿಸಿ ಬಿಟ್ಟರೆ ಬಯಸಿದ ಯಶಸ್ಸು, ಸಂತೋಷ, ಸಂತೃಪ್ತಿ, ಯಶಸ್ಸು ಸಿಕ್ಕಿಬಿಡುತ್ತದೆಯೇ? ಒಟ್ಟಾರೆ ಸುಂದರ, ಯಶಸ್ವಿ ಬದುಕನ್ನು ಸಾಧಿಸುವುದು ಹೇಗೆ ಎಂಬ ಬಗ್ಗೆ ಈ ಪ್ರಮಾಣದಲ್ಲಿ ಜ್ಞಾನಭಂಡಾರವೇ ನಮ್ಮ ಸುತ್ತಲೂ, ಎಲ್ಲರಿಗೂ ಲಭ್ಯವಿದೆ. ಆದರೂ ಹಲವರು ತಮ್ಮ ಬದುಕು ನಿಂತುಹೋಗಿದೆ, ಏನೂ ಹೊಸತಿಲ್ಲ, ಏನೂ ಬದಲಾವಣೆಯಿಲ್ಲ, ಏನೂ ಇಲ್ಲ ಎಂದು ಬೇಸರಿಸುವುದು ಏಕೆ? ಅಷ್ಟೇ ಅಲ್ಲ, ಯಶಸ್ವೀ ಹುದ್ದೆ, ಸ್ಥಾನಮಾನ ಇವೆಲ್ಲವನ್ನು ಗಳಿಸಿದವ ರನ್ನೂ ಇದೇ ಪ್ರಶ್ನೆ ಕಾಡಿ ಅವರನ್ನು ಖಿನ್ನರಾಗಿಸುವುದೇಕೆ? ಬದುಕಲ್ಲಿ ಅಂದುಕೊಂಡ ದ್ದನ್ನು ಸಾಧಿಸಿದವರನ್ನೂ ಅದೇ ಖಾಲಿತನ ಕಾಡುವುದೇಕೆ? Mid life crisis -ಮಧ್ಯ ಜೀವನದ ಆತಂಕ, ಉದ್ವೇಗಗಳಿಗೆ ಕಾರಣವೇನು? ಮುಗಿಯದ ಪ್ರಶ್ನೆಗಳು- ಬೇಕಾದದ್ದು ಹೇಳದ ಉತ್ತರಗಳ ರಾಶಿಗಳು. ಆಮಿರ್ ಖಾನ್ ನಟನೆಯ ‘ಥ್ರೀ ಈಡಿಯಟ್ಸ’ ಸಿನಿಮಾವನ್ನು ನೀವು ನೋಡಿರಬಹುದು. ಮೂವರು ತುಂಟ ಎಂಜಿನಿಯರಿಂಗ್ ಹುಡುಗರ ಬದುಕಿನ ಸುತ್ತ ನಡೆಯುವ ಕಥೆ. ಆ ಮೂವರ ಹಿನ್ನೆಲೆ, ಬದುಕು, ಉದ್ದೇಶ, ಇಷ್ಟ, ಒಲವುಗಳು ಎಲ್ಲವೂ ವಿಭಿನ್ನ.
ಆದರೆ ಕಾರಣಾಂತರಗಳಿಂದ, ಸುತ್ತಲಿನವರ ಒತ್ತಾಯ-ಒತ್ತಡಗಳಿಂದಾಗಿ ಎಂಜಿನಿಯರಿಂಗ್ ಸೇರಿಕೊಳ್ಳುತ್ತಾರೆ. ಅದರಲ್ಲಿ ಒಬ್ಬನಿಗೆ ಫೋಟೋಗ್ರಾಫರ್ ಆಗಬೇಕೆಂದಿರುತ್ತದೆ. ಇನ್ನೊಬ್ಬನಿಗೆ ಶಿಕ್ಷಕನಾಗಬೇಕು, ಕಾರ್ಪೊರೇಟ್ ಜಗತ್ತು ಅವನಿಗೆ ಬೇಡ. ಹೀಗೆ ವಿಭಿನ್ನ ಕಾರಣ ಗಳಿಂದಾಗಿ ಎಂಜಿನಿಯರಿಂಗ್ ಸೇರುವ ಮೂವರು ಕುರಿ ಮಂದೆಯಲ್ಲಿ ಒಬ್ಬರಾಗದಂತೆ, ತಮ್ಮಿಷ್ಟದ ಬದುಕನ್ನು ಕಟ್ಟಿಕೊಳ್ಳುತ್ತಾರೆ. ಬದುಕನ್ನು ಕಟ್ಟುವಾಗಿನ ಗೊಂದಲಗಳು ಇವು.
ಈ ಚಿತ್ರ ಬಹಳಷ್ಟು ಮಂದಿಗೆ ಇಷ್ಟವಾಯಿತು.
ನಿತ್ಯ ಬದುಕಿನ ಪುನರಾವರ್ತನೆಯ ಗಾಲಿಚಕ್ರದಲ್ಲಿ ಸಿಲುಕಿಕೊಂಡವರಿಗೆ, ತಮ್ಮಿಷ್ಟವನ್ನು ಬಿಟ್ಟು ಬದುಕಿನ ಅನಿವಾರ್ಯತೆಗೆ, ಅವಶ್ಯಕತೆಗೆ ಯಾವುದೋ ಉದ್ಯೋಗದಲ್ಲಿ ಸಿಲುಕಿಕೊಂಡವರಿಗೆಲ್ಲ ಇದು ತಮ್ಮದೇ ಕಥೆ ಎಂದೆನಿಸತೊಡಗಿತು. ಅಷ್ಟೇ ಅಲ್ಲ, ಒಂದು ಹೊಸ ಫ್ಯಾಷನ್ ಶುರುವಾಗಲು ಇದು ಕಾರಣವಾಯಿತು. ಏನೋ ಒಂದು ಕಲಿಯುವುದು, ಅದಕ್ಕೆ ಸಂಬಂಧವೇ ಇಲ್ಲದ ಹವ್ಯಾಸವನ್ನು ಉದ್ಯೋಗವಾಗಿಸಿಕೊಳ್ಳುವುದು.
ಅದೇನೂ ತಪ್ಪಲ್ಲ, ಆದರೆ ಈಗೀಗ ಏನೇನು ಸಾಹಸವೆನಿಸುವ ನಿರ್ಧಾರಗಳನ್ನು ಬೇಕಾಬಿಟ್ಟಿ ತೆಗೆದುಕೊಳ್ಳುವುದೇ ಒಂದು ದೊಡ್ಡ ಸಾಧನೆ ಎಂದು ಬಿಂಬಿತವಾಗುತ್ತಿರುವುದು. ಇನ್ನೊಂದು ಫ್ಯಾಷನ್ ಈಗೀಗ ಕೇಳುವುದಿದೆ. ಬಿಲ್ ಗೇಟ್ಸ್‌ನಿಂದ ಹಿಡಿದು ಮಾರ್ಕ್ ಜುಕರ್‌ಬರ್ಗ್‌ವರೆಗೆ ಎಲ್ಲರೂ ಶಾಲೆ ಬಿಟ್ಟು ಉದ್ಯಮ ಕಟ್ಟಿ ನಿಲ್ಲಿಸಿದವರು. ಪರೋಕ್ಷವಾಗಿ, ಕಲಿಯುವುದನ್ನು ಬಿಡುವುದು ಎಂಬುದೇ ಸಾಧನೆಯೆಂಬ ಹೊಸ ವೇಷ ಈಗೀಗ ಶುರುವಾಗಿದೆ.
ನಮ್ಮೆಲ್ಲರ ಉದ್ಯೋಗದಲ್ಲಿ ಸಮಸ್ಯೆಗೆ ಕಾರಣವಾಗುವ ಒಂದು ವಿಷಯ ಇದೆ. ನೀವು ಶಿಕ್ಷಕರಾಗಿರಿ, ಬ್ಯಾಂಕ್
ನೌಕರರಾಗಿರಿ, ಐಟಿ ಉದ್ಯೋಗಿ, ಡಾಕ್ಟರ್, ಕೃಷಿಕ, ವಿಜ್ಞಾನಿ, ಗ್ರಾಮ ಲೆಕ್ಕಿಗ ಹೀಗೆ ಯಾವುದೇ ಉದ್ಯೋಗದಲ್ಲಿರಿ.
ಅದೆಲ್ಲದರಲ್ಲಿ ಒಂದು ವಿಷಯ ಮಾತ್ರ ಸಾಮಾನ್ಯ- ಅದು ‘ಪುನರಾವರ್ತನೆ’. ಎಲ್ಲ ಉದ್ಯೋಗಗಳೂ ಒಂದಿಂದು
ಹಂತದಲ್ಲಿ ಪುನರಾವರ್ತನೆಯೇ ಆಗಿರುತ್ತವೆ. ಕೃಷಿಕನ ಕಾಯಕಕ್ಕೂ ಐಟಿ ಉದ್ಯೋಗಿಯ ಕಾಯಕಕ್ಕೂ ಅಜಗಜಾಂತರವಿರಬಹುದು, ಆದರೆ ಎಲ್ಲವೂ ಪುನರಾವರ್ತನೆಯೇ.
ಕೃಷಿಕನದು ಋತುಮಾನಕ್ಕೆ ಸರಿಯಾದ ಪುನರಾವರ್ತನೆಯಾದರೆ ಐಟಿ ಉದ್ಯೋಗಿಯದು ಪ್ರಾಜೆಕ್ಟ್ ನ ಪುನರಾವರ್ತನೆ. ಕಂಪನಿಯ ಸಿಇಒ ಬದುಕು ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ, ಡಾಕ್ಟರನದು ಒಬ್ಬ ರೋಗಿಯಿಂದ,
ರೋಗದಿಂದ ಇನ್ನೊಬ್ಬ, ಇನ್ನೊಂದು ರೋಗಕ್ಕೆ. ಕೆಲವರು ಇಷ್ಟಪಟ್ಟು ಉದ್ಯೋಗವೊಂದನ್ನು ಪಡೆದಿರುತ್ತಾರೆ, ಇನ್ನು ಕೆಲವರು ಇನ್ನೊಬ್ಬರ ಆಣತಿ, ಮಾರ್ಗದರ್ಶನದಿಂದ. ಹೇಗೇ ಸೇರಿಕೊಂಡಿದ್ದರೂ ಪುನರಾವರ್ತನೆ ಎಲ್ಲರನ್ನೂ ಕಾಡುತ್ತದೆ.
ಕ್ರಮೇಣ ಪುನರಾವರ್ತನೆಗಳೇ ಉದ್ಯೋಗದೆಡೆಗೆ ಒಂದಿಷ್ಟು ಆಲಸ್ಯವನ್ನು ತಂದುಹಾಕುತ್ತವೆ. ಪ್ರತಿನಿತ್ಯ ಅಡುಗೆ ಮಾಡುವ ಗ್ರಹಿಣಿಗೆ ಕಾಡುವ ಏಕತಾನತೆ ಪೊಲೀಸ್ ಅಧಿಕಾರಿಗೂ ಕಾಡುತ್ತದೆ. ಪುನರಾವರ್ತನೆಗೆ ಹೊರತಾದ ಉದ್ಯೋಗಗಳಿವೆಯೇ ಎಂದು ಯೋಚಿಸಿದರೆ ಒಂದೂ ನೆನಪಿಗೆ ಬರುವುದಿಲ್ಲ. ಎಲ್ಲವೂ ಒಂದಿಂದು ಹಂತದ
ಪುನರಾವರ್ತನೆಯ ಬದುಕು. ಕೆಲಸ ಬದಲಾಗಬಹುದು- ಆದರೆ ಪುನರಾವರ್ತನೆ ತಪ್ಪಿದ್ದಲ್ಲ. ಆದರೆ ಸಮಸ್ಯೆ ಯೆಂದರೆ ತಮ್ಮದೊಂದೇ ಪುನರಾವರ್ತನೆಯ ಕೆಲಸ ಎಂದು ಬಹುತೇಕರು ಅಂದುಕೊಂಡಿರುವುದು.
ಜಾನ್ ಗ್ರಿಶಮ್ ಖ್ಯಾತ ಕಾದಂಬರಿಕಾರ. ಆತನ ಒಂದು ಕಾದಂಬರಿ ಹೀಗೊಂದು ಸನ್ನಿವೇಶದಿಂದ ಆರಂಭವಾಗು ತ್ತದೆ: ಕಾದಂಬರಿಯ ಹೀರೋಗೆ 28 ವಯಸ್ಸು. ಆತನಿಗೆ ಆ ದಿನ ಉದ್ಯೋಗದಲ್ಲಿ ಮುಂಬಡ್ತಿ ಸಿಕ್ಕಿರುತ್ತದೆ. ಅದನ್ನು ಮನೆಯಲ್ಲಿ ಎಲ್ಲರಿಗೂ ಹೇಳುತ್ತಾನೆ. ಎಲ್ಲರೂ ಅವನ ಸಾಧನೆಯನ್ನು ಕೇಳಿ ಖುಷಿಪಡುತ್ತಾರೆ. ಮೂಲೆಯಲ್ಲಿದ್ದ ಗಾಲಿಕುರ್ಚಿಯಲ್ಲಿ ಅವನ ಅಜ್ಜಿ ಕೂತಿರುತ್ತಾಳೆ. ಸ್ವಲ್ಪ ಹೊತ್ತಿನ ನಂತರ, ಎಲ್ಲ ಸಂಭ್ರಮಗಳು ತಿಳಿಯಾದ ನಂತರ ಅಜ್ಜಿ ಅವನನ್ನು ಹತ್ತಿರ ಕರೆಯುತ್ತಾಳೆ. “ಅಜ್ಜಿ, ನನಗೆ ಪ್ರಮೋಷನ್ ಆಗಿದ್ದು ನಿನಗೆ ಖುಷಿ ತಂದಿಲ್ಲವೇ?” ಎಂದು ಕೇಳುತ್ತಾನೆ.
“ನನಗೆ ಖುಷಿಯಾಗಿದೆ. ಆದರೆ ಅದು ಇಲ್ಲಿ ಅಪ್ರಸ್ತುತ. ನಿನಗೆ ಏನೇ ಒಳ್ಳೆಯದಾದರೂ ಅದು ನನಗೆ ಖುಷಿಯನ್ನೇ
ತರುತ್ತದೆ. ಅಷ್ಟಕ್ಕೂ ನೀನು ನನ್ನ ಮೊಮ್ಮಗನಲ್ಲವೇ? ಆದರೆ ನಿನಗೆ ಇದರಿಂದ ಖುಷಿಯಿದೆಯೇ? ಅದು ನನಗೆ
ಗೊತ್ತಾಗಬೇಕು” ಎಂದು ಕೇಳುತ್ತಾಳೆ. ಹೀರೋ ಒಂದುಕ್ಷಣ ಯೋಚನೆಗೆ ಬೀಳುತ್ತಾನೆ. ಪ್ರಮೋಷನ್ ತಂದ ಘನತೆ ಯನ್ನು ತಾನು ಸಂಭ್ರಮಿಸುತ್ತಿರುವುದೇ ಅಥವಾ ತನಗೆ ಇದು ಖುಷಿ ತಂದಿದೆಯೇ ಎಂಬ ಗೊಂದಲಕ್ಕೆ ಬೀಳುತ್ತಾನೆ. ಅವರಿಬ್ಬರ ನಡುವೆ ಒಂದಿಷ್ಟು ಹೊತ್ತು ಮೌನ ಆವರಿಸುತ್ತದೆ.
ಅಜ್ಜಿಗೆ ಅರ್ಥವಾಗುತ್ತದೆ, ಮೌನ ಮುರಿಯುತ್ತಾಳೆ. “ನಿನ್ನನ್ನು ನೋಡಿದರೆ ನಿನ್ನ ವಯಸ್ಸಿನ ನನ್ನನ್ನು ಕಂಡಂತೆ
ಭಾಸವಾಗುತ್ತದೆ. ಉಳಿದವರ ಪ್ರಕಾರ ಯಶಸ್ವಿ ಬದುಕು ಎಂದರೇನೋ, ಅದರಂತೆ ನಾನು ಕೂಡ ನನ್ನ ಬದುಕಿನ
ಅರ್ಧ ಆಯುಷ್ಯ ಕಳೆದೆ. ನಾನು ಇದನ್ನೇ ಬಯಸಿದ್ದೇ? ಎಂದು ಒಂದು ದಿನ ಕೇಳಿಕೊಂಡೆ. ನನ್ನ ಬದುಕು ಹೇಗಿದ್ದರೆ
ನನ್ನ ಮಟ್ಟಿಗೆ ಅದು ಯಶಸ್ವಿ ಬದುಕು? ಎಂದು ಪ್ರಶ್ನಿಸಿಕೊಂಡೆ. ಅಂದಿನಿಂದ ಎಲ್ಲವೂ ಬದಲಾಯಿತು. ನಾನು
ನನಗಾಗಿ ಬದುಕಲು ಕಲಿತೆ, ಶುರುಮಾಡಿದೆ”. ಅಜ್ಜಿ ಮುಂದುವರಿಸುತ್ತಾಳೆ “ನಾವೆಲ್ಲರೂ ‘ನಾನೇನಾಗಬೇಕು’ ಎಂಬ ಪ್ರಶ್ನೆಯನ್ನು ಆಗಾಗ ಬಾಯಿಬಿಟ್ಟು ಕೇಳಿಕೊಳ್ಳುತ್ತಲಿರಬೇಕು. ತೀರಾ ಗೊಂದಲ, ಬೇಸರ, ಅಸಹನೆ, ಸಿಟ್ಟು ಯಾವುದೇ ಆದರೂ ಸರಿ, ಈಗ ನನಗೇನು ಬೇಕು ಎಂದು ಕೇಳಿಕೊಳ್ಳಬೇಕು.
ತಂದೆ ತಾಯಿಯೋ, ಅಥವಾ ಕುಟುಂಬವೋ ನಮ್ಮ ಇಂದಿನ ಪರಿಸ್ಥಿತಿಗೆ ಕಾರಣವಿರಬಹುದು. ನಾನೇನಾಗಿದ್ದೇನೆ ಎಂಬುದರ ಬಗ್ಗೆ ಅಸಮಾಧಾನ ತಪ್ಪಲ್ಲ. ಆದರೆ ಆ ಅಸಮಾಧಾನವನ್ನು ಹಾಗೆಯೇ ಬಿಡುವುದು ತಪ್ಪು. ಯಾವುದೇ ಅಸಮಾಧಾನವನ್ನು ಸಂತೈಸಬೇಕು. ಅಸಮಾಧಾನಕ್ಕೆ ಕೊಡಬೇಕಾದ ನೈವೇದ್ಯ, ಗಮನ ಕೊಡಲೇಬೇಕು. ಗಟ್ಟಿ ಧ್ವನಿಯಲ್ಲಿ ಸ್ವಗತ ಕೇಳಿಕೊಳ್ಳಬೇಕು. ಒಳಗೊಬ್ಬ ಪರಮಾತ್ಮನಿದ್ದಾನೆ. ಅವನಿಗೆ ದಾರಿ ಗೊತ್ತಿದೆ. ಆದರೆ ನೀವ್ಯಾರೂ ಕೇಳುವುದೇ ಇಲ್ಲವಲ್ಲ. ಹಾಗಾಗಿ ಅವನು ಸುಮ್ಮನಿದ್ದಾನೆ.
ಹಾಂ, ಈಗ ನಿನ್ನ ಮುಂದೆ 2 ದಾರಿಗಳಿವೆ. ಮೊದಲನೆಯದು, ನನ್ನ ಇಂದಿನ ಬದುಕಿನ ಉದ್ಯೋಗಕ್ಕೆ (ಅಥವಾ ಸ್ಥಿತಿಗೆ) ಕಾರಣ ಯಾರು, ಏನು ಎಂದು ಹುಡುಕುತ್ತಿರುವುದು. ನಿನ್ನ ಅನಿಸಿಕೆಯ ಯಶಸ್ಸು ನಿನ್ನದಾಗಲಿಲ್ಲ ಎಂಬುದಕ್ಕೆ ಕಾರಣ ಹುಡುಕುತ್ತ ವ್ಯಥೆಯ ಸುಳಿಯಲ್ಲಿ ಬೀಳುವುದು. ಅಥವಾ ಇಲ್ಲಿಂದ ಮುಂದೆ ಏನು ಮಾಡ ಬಹುದು ಎಂಬುದನ್ನು ಯೋಚಿಸಿ ಕಾರ್ಯರೂಪಕ್ಕೆ ತರುವುದು. ಈಗ ಯೋಚಿಸಿ ಹೇಳು- ನೀನು ಏನಾಗಬೇಕೆಂದಿ ದ್ದೀಯಾ? ಸರಿಯಾಗಿ ಯೋಚಿಸಿ ನಿರ್ಧರಿಸು. ನಿರ್ಧರಿಸಿದ ಮೇಲೆ ಅದಕ್ಕೆ ಬೇಕಾದ ಯೋಜನೆ ಮಾಡಿಕೋ. ಯೋಜನೆ ಸೋಲಬಹುದು, ನಿನ್ನ ಬದುಕಿನ ಉದ್ದೇಶವೇ ಬದಲಾಗಿಬಿಡಬಹುದು, ಎಲ್ಲವೂ ಒಂದು ಅನುಭವವೇ. ನಿನಗೆ ಇರುವುದು ಆ ದಿನದ 24 ಗಂಟೆ ಮಾತ್ರ.
ಇದನ್ನು ನೆನಪಿಟ್ಟುಕೋ. ಅಷ್ಟೇ ನಾನು ಹೇಳಬೇಕಾಗಿರುವುದು. ನೀನು ಸಾಯುವುದಕ್ಕಿಂತ ಮೊದಲು ಒಂದು ಕೆಲಸ ಮಾಡಬೇಕು. ನಾನು ಇವತ್ತು ಹೇಳಿದ ಬಗ್ಗೆ ನಿನಗೇನನಿಸಿತು ಎನ್ನುವುದನ್ನು ನನಗೆ ಪತ್ರದಲ್ಲಿ ಬರೆ. ಪತ್ರ ಓದಲು ನಾನು ಬದುಕಿರುವುದಿಲ್ಲ… ಪರವಾಗಿಲ್ಲ”. ಅಲ್ಲಿಂದ ಕಥೆ ಮುಂದುವರಿಯುತ್ತದೆ. ಹೀರೋ ತನ್ನನ್ನು ತಾನೇ ಒಂದಿಷ್ಟು ದಿನ ಪ್ರಶ್ನಿಸಿಕೊಳ್ಳುತ್ತಾನೆ. ಯಶಸ್ವಿ ಬದುಕು ಎಂದರೇನು, ನಾನು ಯಾರಾಗಿ ಈ ಬದುಕನ್ನು ಪೂರೈಸ ಬೇಕು ಎಂಬಿತ್ಯಾದಿ ಯೋಜನೆ ರೂಪಿಸಿಕೊಳ್ಳುತ್ತಾನೆ.
ಎಡವುತ್ತಾನೆ, ಎದ್ದೇಳುತ್ತಾನೆ. ಕೊನೆಯಲ್ಲಿ ಜೀವನ ಅವನಂದುಕೊಂಡದ್ದಕ್ಕಿಂತ ವಿಭಿನ್ನವಾಗಿ ಪರಿಸಮಾಪ್ತಿಯ
ಸಮಯ ತಲುಪುತ್ತದೆ. ಆಗ ಅಜ್ಜಿಗೆ ದೀರ್ಘಪತ್ರ ಬರೆಯಬೇಕೆಂದು ಅವನು ಅಣಿಯಾಗುತ್ತಾನೆ. ಎಷ್ಟೇ ಯೋಚಿಸಿ ದರೂ ಏನು ಬರೆಯಬೇಕೆಂದೇ ಬಗೆಹರಿಯುವುದಿಲ್ಲ. ಕೊನೆಗೆ “ಪ್ರೀತಿಯ ಅಜ್ಜಿ- ಬದುಕುವುದೇ ಬದುಕಿನ ಯಶಸ್ಸು ಎಂಬುದು ನನಗೆ ಅರ್ಥವಾಗಿದೆ” ಎಂದಷ್ಟೇ ಬರೆದು ಪಕ್ಕದ ಮೇಜಿನ ಮೇಲೆ ಪೆನ್ ಇಡುತ್ತಾನೆ. ಬೆಡ್ಡಿಗೆ ಒರಗಿ, ತಿರುಗುವ ಫೋನ್ ನೋಡುತ್ತ ಕಣ್ಣುಮುಚ್ಚುತ್ತಾನೆ.
ನಾನು ಏನಾಗಬೇಕು? ನನ್ನ ಬದುಕು ಹೇಗೆ ಸಾಗಬೇಕು? ಯಶಸ್ವಿ ಬದುಕು ಎಂದರೇನು? ಇದೊಂದಿಷ್ಟು ಪ್ರಶ್ನೆಗಳು
ಬಹು ದೀರ್ಘಕಾಲದಿಂದ ಮನುಷ್ಯನನ್ನು ಕಾಡುತ್ತಿರುವುದಂತೂ ನಿಜ. ಸಾಮಾಜಿಕ ಸನ್ನಿವೇಶ ಬದಲಾದರೂ
ಅದೆಷ್ಟೋ ಸಹಸ್ರ ವರ್ಷದಿಂದ ಈ ಪ್ರಶ್ನೆಗಳು ಮಾತ್ರ ಹಾಗೆಯೆ ಉಳಿದುಕೊಂಡಿವೆ. ಇದನ್ನುದ್ದೇಶಿಸಿಯೇ ಯೋಗ ವಿಜ್ಞಾನದಂಥ ಬೃಹತ್ ತಿಳಿವಳಿಕೆಯ ರಚನೆಯಾಗಿದೆಯೆಂದರೆ ಈ ಪ್ರಶ್ನೆಯ ತೀವ್ರತೆ ಅಂದೂ ಇತ್ತೆಂದಾಯಿತು. ಇಂದು ಒಂದಂತೂ ಸ್ಪಷ್ಟ- ಯಾವುದೇ ದೇಶ, ಭಾಷೆ, ಪ್ರಾಂತ್ಯದಲ್ಲಿರಲಿ- ಎಲ್ಲರನ್ನೂ ಈ ಪ್ರಶ್ನೆಗಳು ನಿರಂತರ ಕಾಡುತ್ತವೆ.
ಹಾಗಾದರೆ ಇದಕ್ಕೆ ಇಂದಿನ ಪಾಶ್ಚಾತ್ಯ ಮನಃಶಾಸ್ತ್ರಜ್ಞರು ಏನೆನ್ನುತ್ತಾರೆ? ಅಮೆರಿಕದ ಮನಃಶಾಸ್ತ್ರಜ್ಞ ಕೆನ್ ಶೆಲ್ಡನ್
ಬರೆದಿರುವ Freely Determined: What the New Psychology of the Self Teaches Us About How to Live ಎಂಬ ಪುಸ್ತಕವನ್ನು ಇತ್ತೀಚೆಗೆ ಓದುತ್ತಿದ್ದೆ. ಕೆನ್ ಶೆಲ್ಡನ್ ಈ ವಿಷಯದ ಮೇಲೆ ನಡೆಸಿದ ಅಸಂಖ್ಯ ಪ್ರಯೋಗಗಳ ಬಗ್ಗೆ ಪುಸ್ತಕದಲ್ಲಿ ವಿವರಣೆಗಳಿವೆ.
ಬದುಕಿನ ಯಶಸ್ಸನ್ನು ಪ್ರಶ್ನಿಸುವ ಪ್ರಶ್ನೆಗಳು ಎದುರಾದಾಗ ಅದನ್ನು ನಿಭಾಯಿಸುವುದು ಹೇಗೆ ಎಂಬ ವಿವರಣೆ ಗಳಿವೆ. ಕೆನ್ ಶೆಲ್ಡನ್ ಹೀಗೆ ಹೇಳುತ್ತಾನೆ- “ಜೀವನದ ಯಶಸ್ಸು ಎಂದರೇನು ಎಂಬ ಪ್ರಶ್ನೆ ಸಹಜ, ಹುಟ್ಟಬೇಕು. ಸಮಸ್ಯೆ ಪ್ರಶ್ನೆಯದಲ್ಲ. ಆ ಪ್ರಶ್ನೆಯನ್ನು ಬಹುತೇಕರು ಹಾಗೆಯೇ ಬಿಟ್ಟುಬಿಡುತ್ತಾರೆ. ತಮಗೆ ತಾವೇ ಕೇಳಿಕೊಳ್ಳಲು ಹೆದರುತ್ತಾರೆ. ಈ ಹೆದರಿಕೆಯೇ ಮುಂದಿನ ಎಲ್ಲ ಬೇಸರಗಳಿಗೆ ಕಾರಣ. ಹೆದರಬಾರದು. ಒಂದು ಏಕಾಂತದಲ್ಲಿ ನಮಗೆ ನಾವು ಕೇಳಿಕೊಂಡು ಬಿಡಬೇಕು.
ಯಶಸ್ಸು ಎಂಬುದು ನಿರ್ಧಾರವಾಗುವುದು ಏನನ್ನು ಪಡೆದೆ ಎಂಬುದರ ಮೇಲಲ್ಲ. ಬದಲಿಗೆ ಪಡೆಯುವ ಹಾದಿಯ ಬಗ್ಗೆ. ಮೊದಲು ನಾನೆಲ್ಲಿದ್ದೇನೆ ಎಂಬುದನ್ನು ತಿಳಿದುಕೊಳ್ಳಬೇಕು. ಬದುಕು ಈ ಕ್ಷಣದಿಂದ ಮುಂದಿನದೇ ವಿನಾ, ಕಳೆದದ್ದು ಬದುಕಲ್ಲ. ಬದುಕಿರುವುದು ವ್ಯಥೆ ಪಡಲಿಕ್ಕಲ್ಲ. ಇಲ್ಲಿಂದ ಮುಂದೆ ಸಾಧ್ಯವಾಗುವ ಗುರಿ ಇಟ್ಟುಕೊಳ್ಳ ಬೇಕು. ಮೊದಲು ಬದುಕಿಗೊಂದು ಉದ್ದೇಶ ಕಂಡುಕೊಳ್ಳಬೇಕು”. ಕೆನ್ ೨೧ನೇ ಶತಮಾನದ ಅಮೆರಿಕದ
ಒಬ್ಬ ಮನಶಾಸ್ತ್ರಜ್ಞ, ವಿಜ್ಞಾನಿ. ಆತ ಮತ್ತು ಹಲವು ವಿಜ್ಷಾನಿಗಳು,
ಮನಃಶಾಸ್ತ್ರಜ್ಞರು “ಈ ಬದುಕಿನ ಉದ್ದೇಶವೇನೆಂಬುದಕ್ಕೆ ಉತ್ತರ ಪಡೆಯುವುದು ಹೇಗೆ” ಎಂಬ ಪ್ರಶ್ನೆಗೆ ಕೊನೆಯಲ್ಲಿ ಯೋಗ ವಿeನದತ್ತ ಬೆರಳುಮಾಡುತ್ತಾರೆ. ಇದೆಲ್ಲದಕ್ಕೆ ‘mindfulness practice’- ಧ್ಯಾನ ಮಾಡಬೇಕೆನ್ನುತ್ತಾರೆ. ಧ್ಯಾನದಲ್ಲಿ ಮಾತ್ರ ಪ್ರತಿಯೊಬ್ಬನ ವ್ಯಕ್ತಿಗತ ಆಂತರ್ಯದ ಉದ್ದೇಶ ತಿಳಿದುಕೊಳ್ಳಲು ಸಾಧ್ಯ ಎನ್ನುತ್ತಾರೆ. ಅವರೆಲ್ಲರೂ ಹೇಳುವ ಇನ್ನೊಂದು ಮಾತೆಂದರೆ- ‘ಕರ್ಮಣ್ಯೇ ವಾಧಿಕಾರಸ್ತೇ..’. ಕೆಲಸ ಮಾಡುವಾಗ ಅದರ ಫಲದ ಬಗ್ಗೆ ಯೋಚಿಸಬೇಡಿ ಎಂಬ ಒಂದೇ ವಾಕ್ಯದ ಮೇಲೆ ಅದೆಷ್ಟೋ ಪುಸ್ತಕಗಳು ಬರೆಯಲ್ಪಡುತ್ತವೆ. ಸದ್ಗುರು ತಮ್ಮ ಮಾತಿನಂದು ಕಡೆ ಹೇಳುತ್ತಾರೆ “ಈಗ ನಿಮ್ಮ ಮುಂದೇನಿದೆಯೋ ಅದುವೇ ಸತ್ಯ.
ಇದ್ಯಾವುದೂ ಇದಕ್ಕಿಂತ ಭಿನ್ನವಾಗಿರಲು ಸಾಧ್ಯವಿರಲಿಲ್ಲ”. ಇದನ್ನೇ ಕೆನ್ ಶೆಲ್ಡನ್ ಮತ್ತು ಪಾಶ್ಚಾತ್ಯ ವಿಜ್ಞಾನಿಗಳು ಹೀಗೆ ಹೇಳುವುದು: “ಈಗ ನಮ್ಮ ಮುಂದಿರುವುದು ಇನ್ಯಾವುದೇ ರೀತಿಯಲ್ಲೂ ಇರಲು ಸಾಧ್ಯವೇ ಇರಲಿಲ್ಲ. ಆದರೆ ಇಲ್ಲಿಂದ ಮುಂದೆ ಏನೆಂಬುದನ್ನು ನಿರ್ಧರಿಸುವ ಸ್ವಾತಂತ್ರ್ಯ ಮಾತ್ರ ನಮ್ಮದು. ಬದುಕಿನಲ್ಲಿ ನಿರ್ಧಾರಗಳು ತಪ್ಪಾಗುತ್ತವೆ. ಆದರೆ ನಿರ್ಧರಿಸದೇ ಇದ್ದರೆ ತಪ್ಪೂ ಆಗುವುದಿಲ್ಲ, ಸರಿಯೂ ಆಗುವುದಿಲ್ಲ. ಯಶಸ್ಸು ಏನೆಂಬುದು ನಿಮ್ಮ ನಿರ್ಧಾರವೇ ವಿನಾ ರೆಯವರದ್ದಾಗಬಾರದು”. ಇವರ ಇನ್ನೊಂದು ಒಮ್ಮತವೆಂದರೆ ಇದೆಲ್ಲದಕ್ಕೆ ಕಾರಣ materialism.
ವಸ್ತುಗಳು ಬದುಕಿನ ಯಶಸ್ಸನ್ನು ನಿರ್ಧರಿಸುವಂತಾಗಿರುವುದು. ಬದುಕೆಂದರೆ ಹೇಗಿರಬೇಕೆಂಬ ಬಗ್ಗೆ ಎಲ್ಲರಿಗೂ
ಯೋಜನೆಗಳಿರುತ್ತವೆ. ಬಾಕ್ಸರ್ ಮೈಕ್ ಟೈಸನ್ ಈ ಬಗ್ಗೆ ಮಾರ್ಮಿಕವಾಗಿ ಹೀಗೆನ್ನುತ್ತಾನೆ “Everyone has
plan, till they get punched on their face. Once you get a hit, you stand up and fight. It is not about winning a medal. Getting up is fun, win. Be it a game or life. Everytime I fall, I think and plan my next move in that second”. ಪೆಟ್ಟು ಬೀಳುವಲ್ಲಿಯವರೆಗೆ ಎಲ್ಲರದ್ದೂ ಪ್ಲಾನ್ ಇದ್ದೇ ಇರುತ್ತದೆ.
ಪೆಟ್ಟು ಬಿದ್ದ ನಂತರ ಮೇಲಕ್ಕೇಳುವುದು ನಿಜವಾದ ಆಟ, ಮೋಜು. ಪೆಟ್ಟು ಬಿದ್ದಾಗ ಯೋಜನೆ ಬುಡಮೇಲಾಗು ತ್ತದೆ. ಬದುಕೆಂದರೆ ಆ ಕ್ಷಣ, ದಿನದ ಗೇಮ್‌ಪ್ಲಾನ್. ನಾನು ಪ್ರತಿಬಾರಿ ನೆಲಕ್ಕೆ ಬಿದ್ದಾಗಲೂ ಇಲ್ಲಿಂದ ಮುಂದೇನೆಂದು ಯೋಚಿಸುತ್ತಿದ್ದೆ, ಮತ್ತದನ್ನು ಮಾಡುತ್ತಿದ್ದೆ. ಓಶೋ ಒಂದು ಕಡೆ ಹೇಳಿದ್ದಾರೆ: “”Job or life, If you are not happy with current, you will never be happy with any other”. “ನಿಮ್ಮ ಈಗಿನ ಉದ್ಯೋಗ ಖುಷಿಕೊಡುತ್ತಿಲ್ಲವೆಂದರೆ ನಿಮಗೆ ಯಾವುದೇ ಬೇರೆ ಉದ್ಯೋಗವೂ ಖುಷಿಕೊಡಲಾರದು. ಬದುಕು ಕೂಡ ಹಾಗೆಯೇ”.
ಇದನ್ನೂ ಓದಿ: Shishir Hegde Column: ಭೂಗತರ ಸುರಂಗ- ಸುಲಭದಲ್ಲಾಗದು ಬಹಿರಂಗ