ಬೆಂಗಳೂರು: ನಿರ್ದಿಷ್ಟಪಡಿಸಿದ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯಾವುದೇ ಶಿಕ್ಷಕರು, ಸಂಘ-ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅಥವಾ ಚುನಾವಣಾ ಪ್ರಚಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲು ಹಾಗೂ ಪದಾಧಿಕಾರಿಯಾಗಲು ಅವಕಾಶವಿರುವುದಿಲ್ಲ. ಒಂದು ವೇಳೆ ಈ ನಿಯಮ ಉಲ್ಲಂಘಿಸಿದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ (Education Department) ಎಚ್ಚರಿಕೆ ನೀಡಿದೆ.
ಈ ಕುರಿತಂತೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ-2020ರ ಸೆಕ್ಷನ್-8(1) ಹಾಗೂ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು [ಶಿಕ್ಷಕರ ವರ್ಗಾವಣೆ ನಿಯಂತ್ರಣ] ನಿಯಮಗಳು-2020ರ ನಿಯಮ-15ರಲ್ಲಿ ಕಲ್ಪಿಸಿರುವ ಅವಕಾಶಗಳಂತೆ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ (Specified post) ಲಿಖಿತ ಪರೀಕ್ಷೆ ನಡೆಸುವ ಮೂಲಕ ಅಯ್ಕೆಯಾದ ಶಿಕ್ಷಕರನ್ನು ಕೌನ್ಸೆಲಿಂಗ್ ಸ್ಥಳ ನಿಯುಕ್ತಿಗೊಳಿಸಲಾಗಿರುತ್ತದೆ.
ಈ ಸಂಬಂಧ ಹೊರಡಿಸಲಾಗಿರುವ ಅಧಿಸೂಚನೆಯಂತೆ ಸರ್ಕಾರಿ ಹುದ್ದೆಗಳಿಗೆ ಆಯ್ಕೆ ಬಯಸುವ ಅಭ್ಯರ್ಥಿಗಳು ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಸಂಘ ಸಂಸ್ಥೆ ಮತ್ತು ಇತರೆ ಯಾವುದೇ ಸಹಕಾರ ಸಂಘ-ಸಂಸ್ಥೆಗಳ ಚುನಾಯಿತ ಸದಸ್ಯರು, ನಾಮನಿರ್ದೇಶಿತ ಸದಸ್ಯರು, ಅಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಪದಾಧಿಕಾರಿಗಳು ಸೇರಿ ಯಾವುದೇ ಹುದ್ದೆಯನ್ನು ಹೊಂದಿರಬಾರದು. ಒಂದು ವೇಳೆ ಹೊಂದಿದ್ದಲ್ಲಿ ಆ ಹುದ್ದೆಯನ್ನು ತ್ಯಜಿಸಿ ಆ ಬಗ್ಗೆ ಲಿಖಿತ ಮುಚ್ಚಳಿಕೆಯನ್ನು ನೀಡಿದ ನಂತರ ಅರ್ಜಿಯನ್ನು ಸಲ್ಲಿಸಬೇಕು. ಒಂದು ಬಾರಿ ನಿರ್ದಿಷ್ಟಪಡಿಸಿದ ಹುದ್ದೆಯ ಕರ್ತವ್ಯಕ್ಕೆ ಹಾಜರಾದ ನಂತರ ಮೇಲಿನ ಯಾವುದೇ ಹುದ್ದೆಯನ್ನು ಹೊಂದಲು ಅವಕಾಶವಿರುವುದಿಲ್ಲ ಎಂದು ತಿಳಿಸಲಾಗಿದೆ.
ಆದಾಗ್ಯೂ ರಾಜ್ಯದ ಕೆಲವು ಜಿಲ್ಲೆಗಳಲ್ಲಿನ ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಒಗಳು ಪ್ರಸ್ತುತ ಅಧಿಸೂಚಿಸಲಾಗಿರುವ ಸರ್ಕಾರಿ ನೌಕರರ ಚುನಾವಣೆಯಲ್ಲಿ ಮತ್ತು ಪಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಕೋರಿ ಲಿಪಿಕ ನೌಕರರ ಸಂಘದ ಅಧ್ಯಕ್ಷರು ಮನವಿ ಸಲ್ಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Building Demolition: ಬೆಂಗಳೂರಲ್ಲಿ ಬೀದಿಗಿಳಿದ ಬಿಬಿಎಂಪಿ ಬುಲ್ಡೋಜರ್, ಅಕ್ರಮ ಮನೆಗಳಿಗೆ ನಡುಕ
ಈ ಹಿನ್ನೆಲೆಯಲ್ಲಿ ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿ ಕರ್ತವ್ಯ ನಿರ್ವಹಿಸುವ ಸಿ.ಆರ್.ಪಿ, ಬಿ.ಆರ್.ಪಿ. ಶಿಕ್ಷಣ ಸಂಯೋಜರು, ಐ.ಇ.ಆರ್.ಟಿ, ಬಿ.ಐ.ಇ.ಆರ್.ಟಿ ಮತ್ತು ಇನ್ನಿತರೆ ನಿರ್ದಿಷ್ಟಪಡಿಸಿದ ನೌಕರರು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಇನ್ನಿತರೆ ಯಾವುದೇ ಸಂಘ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು, ಚುನಾವಣೆಯ ಪ್ರಚಾರದಲ್ಲಿ ಭಾಗವಹಿಸುವುದು ಮತ್ತು ಯಾವುದೇ ಸಂಘ ಸಂಸ್ಥೆಯ ಪದಾಧಿಕಾರಿ/ನಾಮ ನಿರ್ದೇಶಿತ ಸದಸ್ಯ, ಪದಾಧಿಕಾರಿಯಾಗಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ. ಅರ್ಹತೆ ಇದ್ದಲ್ಲಿ ಕೇವಲ ಚುನಾವಣೆಯಲ್ಲಿ ಮತದಾನ ಮಾಡಲು ಮಾತ್ರ ಅವಕಾಶವಿದೆ. ಒಂದು ವೇಳೆ ನಿಯಮ ಉಲ್ಲಂಘಸಿದರೆ ಅಂತಹ ಶಿಕ್ಷಕರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.