ಬೆಂಗಳೂರು: ವಾಣಿಜ್ಯ, ವ್ಯವಹಾರ ಮಾಡುವ ಅಂಗಡಿ ಮಳಿಗೆಗಳ ನಾಮಫಲಕಗಳಲ್ಲಿ (Kannada name boards) ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು ಎಂದು ಬಿಬಿಎಂಪಿ ಸುತ್ತೋಲೆ ಪ್ರಶ್ನಿಸಿ ವಾಣಿಜ್ಯ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ನಿರಾಕರಿಸಿರುವ ಹೈಕೋರ್ಟ್, ನೀವು ಕರ್ನಾಟಕದಲ್ಲಿದ್ದ ಮೇಲೆ ಸೂಚನಾ ಫಲಕಗಳನ್ನು ಕನ್ನಡದಲ್ಲಿ ಪ್ರದರ್ಶಿಸಲೇಬೇಕು ಎಂದು ಅರ್ಜಿದಾರ ಸಂಸ್ಥೆಗಳ ಪರ ವಕೀಲರಿಗೆ ಮೌಖಿಕವಾಗಿ ಸೂಚನೆ ನೀಡಿದೆ.
ಕನ್ನಡ ನಾಮಫಲಕಕ್ಕೆ ಸಂಬಂಧಿಸಿ ಬಿಬಿಎಂಪಿ ಸುತ್ತೋಲೆ ಪ್ರಶ್ನಿಸಿ ರಿಟೇಲರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ, ಆದಿತ್ಯ ಬಿರ್ಲಾ ಫ್ಯಾಷನ್ ಆ್ಯಂಡ್ ರೀಟೇಲ್ ಲಿಮಿಟೆಡ್, ಟೈಟಾನ್ ಕಂಪನಿ ಲಿಮಿಟೆಡ್, ಅಡಿಡಾಸ್ ಇಂಡಿಯಾ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಸೇರಿ 24 ಪ್ರತಿಷ್ಠಿತ ಖಾಸಗಿ ಸಂಸ್ಥೆಗಳು ಸೇರಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ.
ಅರ್ಜಿದಾರ ಸಂಸ್ಥೆಗಳ ಪರ ವಕೀಲರು, ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ಪೀಠದ ಮುಂದೆ ಹಾಜರಾಗಿ, ಅರ್ಜಿಯನ್ನು ತುರ್ತು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಕೋರಿದರು. ಆದರೆ ಈ ಮನವಿ ತಿರಸ್ಕರಿಸಿದ ನ್ಯಾಯಮೂರ್ತಿಗಳು, ‘ನೀವು ಕರ್ನಾಟಕದಲ್ಲಿ ವಹಿವಾಟು ನಡೆಸುತ್ತಿದ್ದೀರಿ ಎಂದಾದ ಮೇಲೆ ನಿಮ್ಮ ಸೂಚನಾ ಫಲಕಗಳನ್ನು ಕನ್ನಡದಲ್ಲೇ ಪ್ರದರ್ಶಿಸಬೇಕು. ಅದಕ್ಕೆ ಯಾವುದೇ ವಿನಾಯಿತಿ ನೀಡಲಾಗದು’ ಎಂದು ಮೌಖಿಕವಾಗಿ ಹೇಳಿದ್ದಾರೆ.
ನಂತರ ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಸರ್ಕಾರ ಮತ್ತು ಬಿಬಿಎಂಪಿಗೆ ನಿರ್ದೇಶಿಸಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿ ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರು ವಿಚಾರಣೆಯನ್ನು ಮುಂದೂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Education Department: ಶಿಕ್ಷಕರು ಸಂಘ-ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ: ಶಿಕ್ಷಣ ಇಲಾಖೆ ಆದೇಶ
ನಾಮಫಲಕ ಅಳವಡಿಕೆ ಸಂಬಂಧ 2019ರ ಅ.19ರಂದು ಹೊರಡಿಸಿರುವ ಆದೇಶ ಮತ್ತು ಅ.31ರಂದು ನೀಡಿರುವ ನೋಟಿಸ್ ಅನುಸಾರ ಅರ್ಜಿದಾರರ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಮಾರ್ಚ್ 18ರಂದು ಬಿಬಿಎಂಪಿಗೆ ಹೈಕೋರ್ಟ್ ಆದೇಶ ನೀಡಿತ್ತು. ಸದ್ಯ ಈ ಮಧ್ಯಂತರ ಆದೇಶವನ್ನು ವಿಸ್ತರಿಸಿ, ವಿಚಾರಣೆ ಮುಂದೂಡಲಾಗಿದೆ.