Friday, 25th October 2024

Food testing: ಮಾಲ್ ಆಫ್ ಏಷ್ಯಾದಲ್ಲಿ ಫುಡ್ ಟೆಸ್ಟಿಂಗ್ ಕೇಂದ್ರಕ್ಕೆ ಸಚಿವ ದಿನೇಶ್‌ ಗುಂಡೂರಾವ್ ಚಾಲನೆ

Food testing

ಬೆಂಗಳೂರು: ನಗರದ ಮಾಲ್ ಆಫ್ ಏಷ್ಯಾದಲ್ಲಿ ಆಹಾರ ತಪಾಸಣಾ ರ‍್ಯಾಪಿಡ್ ಟೆಸ್ಟಿಂಗ್ ಕಿಟ್ಸ್‌ಗಳಿಗೆ (Food testing) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಚಾಲನೆ ನೀಡಿದರು. ಪರೀಕ್ಷಾ ವಿಧಾನವನ್ನು ಪರಿಶೀಲಿಸಿದ ಸಚಿವರು, ಆಹಾರ ಪದಾರ್ಥಗಳ ಟೆಸ್ಟಿಂಗ್‌ಗೆ ಮುಂದಾಗುವ ಸಾರ್ವಜನಿಕರಿಗೆ ಅಗತ್ಯ ಮಾಹಿತಿ ಒದಗಿಸುವ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಳಿಕ ಮಾಧ್ಯಮಗಳಿಗೆ ಮಾತನಾಡಿದ ಸಚಿವರು, ಸಾರ್ವಜನಿಕರು ತ್ವರಿತಗತಿಯಲ್ಲಿ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸಿಕೊಳ್ಳಬಹುದಾಗಿದೆ. ಆರಂಭಿಕ ಹಂತದಲ್ಲಿ ಬೆಂಗಳೂರಿನ 10 ಮಾಲ್‌ಗಳಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಆಹಾರ ಪದಾರ್ಥಗಳ ಕಲಬೆರಕೆ ಪತ್ತೆ ಹಚ್ಚುವ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಈ ಮಾಲ್‍ಗಳಲ್ಲಿ ಪ್ರತಿ ದಿನ ಬಳಸುವ ಆಹಾರ ಪದಾರ್ಥಗಳಾದ ಬೇಳೆ ಕಾಳುಗಳು, ಸಕ್ಕರೆ, ಅಡುಗೆ ಎಣ್ಣೆ ಟೀ-ಪುಡಿ, ಉಪ್ಪು, ಹಾಲು ಮತ್ತು ಹಾಲಿನ ಉತ್ಪನ್ನಗಳಾದ ತುಪ್ಪ, ಪನೀರ್, ಬೆಣ್ಣೆ, ತರಕಾರಿಗಳು, ಧನಿಯಾಪುಡಿ, ಕುಡಿಯುವ ನೀರು ಇತ್ಯಾದಿ ಆಹಾರ ಸಾಮಗ್ರಿಗಳ ಗುಣಮಟ್ಟವನ್ನು ತ್ವರಿತ ಪರೀಕ್ಷೆಗಳಿಂದ ಖಚಿತಪಡಿಸಿಕೊಳ್ಳಬಹುದು ಎಂದರು.

ಅಲ್ಲದೇ ಬೆಂಗಳೂರಿನ ತರಕಾರಿ ಮತ್ತು ಆಹಾರ ಧಾನ್ಯಗಳನ್ನು ಮಾರಾಟ ಮಾಡುವ ಮೋರ್, ರಿಲಯನ್ಸ್ ಫ್ರೆಶ್ ಸೇರಿ ಸೂಪರ್ ಮಾರ್ಕೆಟ್‌ಗಳಲ್ಲೂ ಫುಡ್ ಟೆಸ್ಟಿಂಗ್ ಕಿಟ್‌ಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಇದರಿಂದ ಹಣ್ಣು, ತರಕಾರಿಗಳು ಹಾಗೂ ಆಹಾರ ಧಾನ್ಯಗಳ ಗುಣಮಟ್ಟವನ್ನ ಪರಿಕ್ಷಿಸಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

ಆಹಾರ ಗುಣಮಟ್ಟದ ವಿಚಾರದಲ್ಲಿ ಇತ್ತೀಚೆಗೆ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಆಹಾರ ತಯಾರಕರಿಗೆ ತೊಂದರೆ ಕೊಡುವ ಉದ್ದೇಶದಿಂದಲ್ಲ. ಬದಲಿಗೆ ನಮ್ಮ ಜನರಲ್ಲಿ ಅರಿವು ಮೂಡಿಸುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ.‌ ಶುದ್ಧವಾದ ಆಹಾರ ಸೇವನೆಯಿಂದ ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಹೀಗಾಗಿ ಆಹಾರ ಕಲಬೆರಕೆಯ ನಿರ್ಮೂಲನೆಗಾಗಿ ಕೈ ಜೋಡಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ತಿರುಪತಿ ಲಡ್ಡುವಿನ ಪ್ರಕರಣದ ಹಿನ್ನೆಲೆಯಲ್ಲಿ ತುಪ್ಪದ ಬಗ್ಗೆ ಸಾರ್ವಜನಿಕರಲ್ಲಿ ಸಾಕಷ್ಟು ಅನುಮಾನಗಳು ತಲೆದೂರಿದ್ದವು. ದನದ ಕೊಬ್ಬು ಬಳಸುತ್ತಿದ್ದಾರೆ ಎಂಬುದು ಸಾರ್ವಜನಿಕರಲ್ಲಿ ಆತಂಕ ವ್ಯಕ್ತವಾಗಿತ್ತು. ರಾಜ್ಯದಲ್ಲಿ ಪತಂಜಲಿ ಸೇರಿದಂತೆ 230 ಬಗೆಯ ತುಪ್ಪಗಳನ್ನ ಪರೀಕ್ಷಿಸಲಾಗಿದ್ದು, ಯಾವುದೇ ತುಪ್ಪವು ಅನ್ ಸೇಫ್ ಎಂದು ಪತ್ತೆಯಾಗಿಲ್ಲ. ಅಲ್ಲದೇ ದನದ ಕೊಬ್ಬಿನಾಂಶ ತುಪ್ಪಗಳಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನೂ ಓದಿ | Shiggaon By Election: ಶಿಗ್ಗಾಂವಿಯಲ್ಲಿ ಬಿಜೆಪಿ ನಮಗೆ ಎದುರಾಳಿಯೇ ಅಲ್ಲ ಎಂದ ಸಿದ್ದರಾಮಯ್ಯ

ಬೆಂಗಳೂರಿನ ಯಾವ ಮಾಲ್‌ಗಳಲ್ಲಿದೆ ರ‍್ಯಾಪಿಡ್ ಫುಡ್ ಟೆಸ್ಟಿಂಗ್ ಕಿಟ್ಸ್

ವೈಷ್ಣವಿ ಸಫೈರ್ ಸೆಂಟರ್ ತುಮಕೂರು ರಸ್ತೆ, ಎಲಿಮೆಂಟ್ಸ್ ಮಾಲ್ ಥಣಿಸಂದ್ರ, ಫೀನಿಕ್ಸ್ ಮಾಲ್ ಆಫ್ ಏಷ್ಯಾ ಬಳ್ಳಾರಿ ರಸ್ತೆ, ಮೀನಾಕ್ಷಿ ಮಾಲ್ ಬನ್ನೇರುಘಟ್ಟ ರಸ್ತೆ, ಶೋಭಾ ಮಾಲ್ ಚರ್ಚ್ ಸ್ಟ್ರೀಟ್, ಸೆಂಟ್ರಲ್ ಮಾಲ್ ಬೆಳ್ಳಂದೂರು, ಗೋಪಾಲನ್ ಸಿಗ್ನೇಚರ್ ಮಾಲ್ ಬೆನ್ನಿಗಾನಹಳ್ಳಿ, ನೆಕ್ಸಸ್ ಫೋರಂ ಮಾಲ್ ಕೋರಮಂಗಲ, ಭಾರತೀಯ ಮಾಲ್ ಆಫ್ ಬೆಂಗಳೂರು ಥಣಿಸಂದ್ರ ಹಾಗೂ ಮಾಗಡಿ ರಸ್ತೆಯಲ್ಲಿರುವ ಜಿಟಿ ವರ್ಲ್ಡ್ ಮಾಲ್‌ಗಳಲ್ಲಿ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.