ಚೆನ್ನೈ: ಚೆನ್ನೈ ಹಾಗೂ ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ 22 ಬೋಗಿಗಳ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಪ್ರತ್ಯೇಕಗೊಂಡ ಘಟನೆ (Train Engine Detached) ವೆಲ್ಲೂರು ಜಿಲ್ಲೆಯ ತಿರುವಲಂ ನಿಲ್ದಾಣದಲ್ಲಿ ಶುಕ್ರವಾರ ನಡೆದಿದೆ. ಪ್ರತ್ಯೇಕಗೊಂಡ ಎಂಜಿನ್ ಸುಮಾರು 500 ಮೀಟರ್ ಸಾಗಿದ್ದು, ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದುಬಂದಿದೆ.
ಶುಕ್ರವಾರ ಬೆಳಗ್ಗೆ 8.50ಕ್ಕೆ ವೆಲ್ಲೂರು ಜಿಲ್ಲೆಯ ತಿರುವಲಂ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ದಿಬ್ರುಗಡ – ಕನ್ಯಾಕುಮಾರಿ ವಿವೇಕ ಎಕ್ಸ್‌ಪ್ರೆಸ್ ರೈಲು ಕಾಟ್ಟಾಡಿ ರೈಲ್ವೆ ನಿಲ್ದಾಣದತ್ತ ಹೊರಟಿತ್ತು. ಈ ವೇಳೆ ಬೋಗಿಗಳಿಂದ ಎಂಜಿನ್ ಪ್ರತ್ಯೇಕಗೊಂಡಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
‘ಪ್ರತ್ಯೇಕಗೊಂಡ ಎಂಜಿನ್ ಸುಮಾರು 500 ಮೀಟರ್ ಸಾಗಿದ್ದು, ಬೋಗಿ ಪ್ರತ್ಯೇಕಗೊಂಡಿದ್ದನ್ನು ಗಮನಿಸಿ ನಂತರ ನಿಲ್ಲಿಸಲಾಗಿದೆ. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಎಂಜಿನ್ – ಬೋಗಿ ಜೋಡಣಾ ಕೊಂಡಿ ಮುರಿದಿದ್ದೇ ಘಟನೆಗೆ ಕಾರಣ ಎಂದು ತಿಳಿದುಬಂದಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Bomb Threat: ಮುಂದುವರಿದ ಬಾಂಬ್ ಬೆದರಿಕೆ; ಇಂದು 25 ವಿಮಾನ ಟಾರ್ಗೆಟ್
ಘಟನೆಯಿಂದಾಗಿ ಈ ಮಾರ್ಗದಲ್ಲಿ ಎರಡು ಗಂಟೆಗಳ ಕಾಲ ರೈಲು ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಯಿತು. ಕರ್ನಾಟಕ ಹಾಗೂ ತಮಿಳುನಾಡು ನಡುವೆ ಸಂಚರಿಸುವ ಬೃಂದಾವನ್ ಹಾಗೂ ಡಬ್ಬಲ್ ಡೆಕ್ಕರ್ ಎಕ್ಸ್‌ಪ್ರೆಸ್‌ಗಳೂ ವಿಳಂಬವಾಗಿ ಸಂಚರಿಸಿದವು.