ಚಿಕ್ಕನಾಯಕನಹಳ್ಳಿ: ಸರಕಾರದ ಸವಲತ್ತುಗಳ ವಿತರಣೆಯಲ್ಲಿ ಪಶು ಇಲಾಖೆ ಅಧಿಕಾರಿಗಳು ತಾರತಮ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ನಿರುವಗಲ್ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗೊಪಿಕೃಷ್ಣ ಆರೋಪಿಸಿ ದ್ದಾರೆ.
ರೈತರಿಗೆ ಮೇವಿನಬೀಜ ವಿತರಣೆ, ವಿಶೇಷ ತಳಿ ಸಂರಕ್ಷಣೆ, ಔಷಧಿ ನೀಡಿಕೆ ಸೇರಿದಂತೆ ಹಲವು ಸವಲತ್ತುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಮುಖಂಡರ ತಾಳಕ್ಕೆ ತಕ್ಕಂತೆ ಕುಣಿಯತ್ತಿದ್ದಾರೆ. ಜೆಡಿಎಸ್ ಪಕ್ಷದ ಏಜೆಂಟರAತೆ ಕೆಲಸ ಮಾಡುತ್ತಿದ್ದಾರೆಂದು ಆರೋಪಿಸಿದರು. ಜೆಡಿಎಸ್ ಮುಖಂಡರು ಹೇಳಿದವರಿಗಷ್ಟೆ ಸವಲತ್ತುಗಳ ಮಾಹಿತಿ ಹಾಗು ಅನುದಾನ ನೀಡಲಾಗುತ್ತಿದೆ. ಶಿಫಾರಸ್ಸು ಇಲ್ಲದವರಿಂದ ಲಂಚ ಸ್ವೀಕರಿಸುತ್ತಿದ್ದಾರೆ. ಅರ್ಹತೆ ಇದ್ದರೂ ಎನ್ಎಲ್ಎಂ ಯೋಜನೆ ಅನುಷ್ಠಾನಕ್ಕೆ ಸತಾಯಿಸಲಾಗುತ್ತಿದೆ. ಜನರ ಕೆಲಸ ಕಾರ್ಯಗಳನ್ನು ಮಾಡಿಕೊಡಲು ವಿಳಂಬ ಮಾಡಲಾಗುತ್ತಿದೆ ಎಂದು ದೂಷಿಸಿದರು. ಗೂಬೆಹಳ್ಳಿ ಪಶು ಆಸ್ಪತ್ರೆಗೆ ವೈದ್ಯರು ಸರಿಯಾದ ಸಮಯಕ್ಕೆ ಬರುವುದಿಲ್ಲ. ಇದರಿಂದ ರೈತರಿಗೆ ತೊಂದರೆಯಾಗಿದೆ ಈ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮವಹಿಸಬೇಕೆಂದು ಗೋಪಿಕೃಷ್ಣ ಆಗ್ರಹಿಸಿದರು.
ಕುರಿಗಾಹಿಗೆ ಸಿಗದ ಪರಿಹಾರ
ಕುರಿ ಮೇಕೆಗಳು ಕಾಯಿಲೆ, ನೈಸರ್ಗಿಕ ವಿಪತ್ತು, ಅಪಘಾತದಿಂದ ಮೃತಪಟ್ಟರೆ ಅನುಗ್ರಹ ಯೋಜನೆಯಡಿ ೫ ಸಾವಿರ ರೂ ಪರಿಹಾರ ಧನ ಸಿಗಲಿದೆ. ಎರಡು ಮೂರು ವರ್ಷಗಳಿಂದ ಪರಿಹಾರಕ್ಕಾಗಿ ಕುರಿಗಾಹಿಗಳು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಗೆ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವೈದ್ಯರು ಸಾವುಗಳ ಕುರಿತು ರೈತರು ನೀಡುವ ಮಾಹಿತಿಯನ್ನು ಪಶು ವೈದ್ಯಕೀಯ ಇಲಾಖೆ ಸಮರ್ಪಕವಾಗಿ ದಾಖಲು ಮಾಡುತ್ತಿಲ್ಲ. ಹತ್ತಿರ ೫೦ ಸಾವಿರ ಮೌಲ್ಯದ ಮೇಕೆ ಸಹಿತ ೫ ಕುರಿಗಳು ಸತ್ತಿದ್ದರೂ ಬಿಡಿಗಾಸು ಪರಿಹಾರ ಸಿಕ್ಕಿಲ್ಲ ಎಂದು ನಿರುವಗಲ್ ಗ್ರಾಮದ ಕುರಿಗಾಹಿ ವರದಯ್ಯ ತಿಳಿಸಿದರು. ಟೆಂಟ್, ಔಷಧ, ಸೌರದೀಪ ಸಾಲ ಸೌಲಭ್ಯಗಳು ಅರ್ಹರಿಗೆ ಸಿಗುತ್ತಿಲ್ಲ ಎಂದು ಕುರಿಗಾಹಿಗಳಿಂದ ದೂರು ಕೇಳಿಬಂದಿದೆ.