ಬೆಂಗಳೂರು: ರಾಜಧಾನಿಯ ಓಲಾ ಸ್ಕೂಟರ್ (Ola Scooter) ಶೋರೂಂ ಒಂದರ ಮುಂದೆ ನಿಲ್ಲಿಸಿದ ಕಂಪನಿಯ ಇ-ಸ್ಕೂಟರ್ ಸ್ಥಳದಲ್ಲೇ ಹೊತ್ತಿ ಧಗಧಗನೆ (E-Scooter on Fire) ಉರಿದಿದೆ. ಇದರ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ (Viral video) ಆಗಿದ್ದು, ʼಇದು ಗ್ರಾಹಕರಿಗೆ ಕಂಪನಿಯ ದೀಪಾವಳಿ ಗಿಫ್ಟ್ʼ ಎಂದು ಜನ ವ್ಯಂಗ್ಯವಾಡಿದ್ದಾರೆ.
ವೈರಲ್ ವಿಡಿಯೋದಲ್ಲಿ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಂಗಳೂರಿನ ಶೋರೂಂ ಹೊರಗೆ ಬೆಂಕಿ ಹೊತ್ತಿಕೊಂಡು ಹೊಗೆ ಸೂಸುತ್ತಿರುವುದು ಕಂಡುಬಂದಿದೆ. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ಓಲಾ ಎಲೆಕ್ಟ್ರಿಕ್ ಶೋರೂಂನ ಹೊರಗೆ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಹೇಳಲಾಗಿದೆ. ಈ ಕಂಪನಿಯು ಅದರ ಕಳಪೆ ಗ್ರಾಹಕ ಸೇವೆಗಾಗಿ ಈಗಾಗಲೇ ಟೀಕೆಗೆ ಒಳಗಾಗಿದ್ದು, ಇದೀಗ ಇನ್ನಷ್ಟು ಗೇಲಿಗೆ ಒಳಗಾಗಿದೆ.
ಕಾಂಗ್ರೆಸ್ ವಕ್ತಾರೆ ಲಾವಣ್ಯ ಬಲ್ಲಾಳ್ ಜೈನ್ ಅವರು ಸ್ಕೂಟರ್ ಬೆಂಕಿಯಲ್ಲಿ ಸುಟ್ಟುಹೋದ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ಓಲಾ ಸ್ಕೂಟರ್ ಮಾಲೀಕರ ಜೀವನದಲ್ಲಿ ಮತ್ತೊಂದು ಉರಿಯುತ್ತಿರುವ ದಿನ” ಎಂದು ಬರೆದಿದ್ದಾರೆ. ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿಯಂತೆ ಹರಡಿದೆ. “ಇದು ಓಲಾ ಬಳಕೆದಾರರಿಗೆ ಕಂಪನಿ ಸಿಇಒ ಭವಿಶ್ ಅಗರ್ವಾಲ್ ಅವರ ದೀಪಾವಳಿ ಉಡುಗೊರೆ” ಎಂದು ಜನ ತಮಾಷೆ ಮಾಡಿದ್ದಾರೆ. “ಈ ವರ್ಷ ದೀಪಾವಳಿಯ ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇತ್ತೀಚಿನ ಪಟಾಕಿ” ಎಂದು ಕೆಲವರು ಕುಟುಕಿದ್ದಾರೆ.
Just another fiery day in the life of ola scooter ownerpic.twitter.com/sKADZBZwRB
— Lavanya Ballal Jain (@LavanyaBallal) October 24, 2024
ಓಲಾ ಎಲೆಕ್ಟ್ರಿಕ್ ಮತ್ತು ಅದರ ಸಿಇಒ ಭವಿಶ್ ಅಗರ್ವಾಲ್ ಅವರು ಕಳಪೆ ಗ್ರಾಹಕ ಸೇವೆಗಾಗಿ ಈಗಾಗಲೇ ಟೀಕೆಗೆ ಒಳಗಾಗಿದ್ದಾರೆ. ಮತ್ತೊಬ್ಬ ಬಳಕೆದಾರರು “ಭವಿಶ್, ಈ ಮೇರುಕೃತಿಯನ್ನು ರಚಿಸಲು ನೀವು ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡಿದ್ದೀರಿ?” ಎಂದು ಕೇಳಿದ್ದಾರೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮತ್ತು ಅದರ ಗ್ರಾಹಕ ಸೇವೆಯ ಕುರಿತು ಹಲವಾರು ದೂರುಗಳ ನಂತರ, ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರವು (CCPA) 7 ಅಕ್ಟೋಬರ್ 2024 ರಂದು ಓಲಾ ಎಲೆಕ್ಟ್ರಿಕ್‌ಗೆ ಶೋಕಾಸ್ ನೋಟಿಸ್ ನೀಡಿದೆ. ತಪ್ಪುದಾರಿಗೆಳೆಯುವ ಜಾಹೀರಾತುಗಳು, ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಗ್ರಾಹಕರ ಹಕ್ಕುಗಳ ಉಲ್ಲಂಘನೆಗಳಿಗೆ ಸಂಬಂಧಿಸಿದ ಕಳವಳಗಳನ್ನು ಅದು ಉಲ್ಲೇಖಿಸಿದೆ. ಪ್ರತಿಕ್ರಿಯೆ ನೀಡಲು ಕಂಪನಿಗೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು.
CCPA ಗೆ ಪ್ರತಿಕ್ರಿಯೆಯಾಗಿ ಕಂಪನಿಯು, 99% ಗ್ರಾಹಕರ ದೂರುಗಳನ್ನು ಪರಿಹರಿಸಲಾಗಿದೆ ಎಂದಿದೆ. “ನಾವು CCPA ಯಿಂದ ಸ್ವೀಕರಿಸಿದ 10,644 ದೂರುಗಳಲ್ಲಿ, 99.1% ದೂರುಗಳನ್ನು ಪರಿಹರಿಸಲಾಗಿದ್ದು, ಓಲಾ ಗ್ರಾಹಕರ ಸಂಪೂರ್ಣ ತೃಪ್ತಿ ಪಡೆದಿದೆ ಎಂದು ನಾವು ಒತ್ತಿಹೇಳಲು ಬಯಸುತ್ತೇವೆ” ಎಂದು ಕಂಪನಿಯು ತನ್ನ ಪ್ರತಿಕ್ರಿಯೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಓಲಾ, ಉಬರ್ ಆಟೋಗಳ ಪ್ರಯಾಣಕ್ಕೆ ಶೇ.5ರಷ್ಟು ಸೇವಾ ಶುಲ್ಕ ಫಿಕ್ಸ್