Saturday, 26th October 2024

IND vs NZ 2nd Test: ಸಿಕ್ಸರ್‌ ಮೂಲಕ ದಾಖಲೆ ಬರೆದ ಯಶಸ್ವಿ ಜೈಸ್ವಾಲ್‌

ಪುಣೆ: ಟೀಮ್‌ ಇಂಡಿಯಾದ ಉದಯೋನ್ಮುಖ ಎಡಗೈ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌(Yashasvi Jaiswal) ನ್ಯೂಜಿಲೆಂಡ್‌(India Vs Bangladesh) ವಿರುದ್ಧದ ದ್ವಿತೀಯ ಟೆಸ್ಟ್‌(IND vs NZ 2nd Test) ಪಂದ್ಯದಲ್ಲಿ ವಿಶ್ವ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ಭಾರತದ ಮೊದಲ ಮತ್ತು ವಿಶ್ವದ ದ್ವಿತೀಯ ಆಟಗಾರ ಎನಿಸಿಕೊಂಡಿದ್ದಾರೆ.

ಪ್ರಸ್ತುತ ಟೆಸ್ಟ್ ಕ್ರಿಕೆಟ್‌ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ದಾಖಲೆ ನ್ಯೂಜಿಲ್ಯಾಂಡ್‌ ತಂಡದ ಮಾಜಿ ಸ್ಫೋಟಕ ಬ್ಯಾಟರ್‌, ಹಾಲಿ ಇಂಗ್ಲೆಂಡ್‌ ಟೆಸ್ಟ್‌ ತಂಡದ ಕೋಚ್‌ ಆಗಿರುವ ಬ್ರೆಂಡನ್ ಮೆಕಲಮ್ ಹೆಸರಿನಲ್ಲಿದೆ. ಮೆಕಲಮ್ 2014 ರಲ್ಲಿ 9 ಟೆಸ್ಟ್‌ ಪಂದ್ಯಗಳಿಂದ 33 ಸಿಕ್ಸರ್‌ ಬಾರಿಸಿದ್ದರು. ಸದ್ಯ ಜೈಸ್ವಾಲ್‌ ಕ್ಯಾಲೆಂಡರ್ ವರ್ಷದಲ್ಲಿ 30 ಸಿಕ್ಸರ್‌ ಬಾರಿಸಿದ್ದಾರೆ.

ದ್ವಿತೀಯ ಇನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ಜೈಸ್ವಾಲ್‌ ಮೂರು ಸಿಕ್ಸರ್‌ ಬಾರಿಸುವ ಮೂಲಕ ಈ ಮೈಲುಗಲ್ಲು ನೆಟ್ಟರು. ಆರಂಭದಿಂದಲೇ ಆಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಜೈಸ್ವಾಲ್‌ 65 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 77 ರನ್‌ ಬಾರಿಸಿ ವಿಕೆಟ್‌ ಕೈಚೆಲ್ಲಿದರು. 23 ವರ್ಷ ತುಂಬುವ ಮೊದಲೇ ಕ್ಯಾಲೆಂಡರ್‌ ವರ್ಷದಲ್ಲಿ 1 ಸಾವಿರ ರನ್‌ ಗಳಿಸಿದ ವಿಶ್ವದ 5ನೇ ಹಾಗೂ ಭಾರತದ ಮೊದಲ ಬ್ಯಾಟರ್‌ ಎನ್ನುವ ದಾಖಲೆಯನ್ನೂ ಬರೆದಿದ್ದಾರೆ. 359 ರನ್‌ ಗೆಲುವಿನ ಗುರಿ ಪಡೆದಿರುವ ಭಾರತ ಸದ್ಯ ನಾಲ್ಕು ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಯಲ್ಲಿದೆ. ನ್ಯೂಜಿಲೆಂಡ್‌ 1955-56ರಲ್ಲಿ ಭಾರತದಲ್ಲಿ ಆಡಲಾರಂಭಿಸಿದ ಬಳಿಕ ಟೆಸ್ಟ್‌ ಸರಣಿ ಜಯಿಸಿದ್ದಿಲ್ಲ. ಇದೇ ಮೊದಲ ಬಾರಿಗೆ ಸರಣಿ ಜಯಿಸುವ ತವಕದಲ್ಲಿದೆ. ಭಾರತ ಸೋತರೆ 12 ವರ್ಷಗಳ ಬಳಿಕ ತವರಿನಲ್ಲಿ ಸರಣಿ ಸೋತ ಅವಮಾನಕ್ಕೆ ಸಿಲುಕಲಿದೆ. ಜತೆಗೆ ತವರಿನಲ್ಲಿ ಸತತ 18 ಸರಣಿಗಳಲ್ಲಿ ಗೆದ್ದಿರುವ ಅಜೇಯ ದಾಖಲೆಗೆ ಬ್ರೇಕ್‌ ಬೀಳಲಿದೆ.

ಇದನ್ನೂ ಓದಿ Jemimah Rodrigues: ಮತಾಂತರ ಚಟುವಟಿಕೆ ಆರೋಪ ತಳ್ಳಿಹಾಕಿದ ಕ್ರಿಕೆಟರ್‌ ಜೆಮೀಮಾ ತಂದೆ

198 ರನ್‌ಗೆ ಐದು ವಿಕೆಟ್‌ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್‌ ಮೂರನೇ ದಿನವಾದ ಶನಿವಾರ ಕೇವಲ 57 ರನ್‌ ಮಾತ್ರ ಗಳಿಸಿ ಆಲೌಟ್‌ ಆಯಿತು. ಭಾರತ ಪರ ದ್ವಿತೀಯ ಇನಿಂಗ್ಸ್‌ನಲ್ಲಿ ವಾಷಿಂಗ್ಟನ್‌ ಸುಂದರ್‌ 4, ರವೀಂದ್ರ ಜಡೇಜಾ 3 ಹಾಗೂ ಆರ್‌.ಅಶ್ವಿನ್‌ 2 ವಿಕೆಟ್‌ ಕಡೆವಿದರು. ಗ್ಲೆನ್‌ ಫಿಲಿಫ್ಸ್‌ 48 ರನ್‌ ಬಾರಿಸಿ ಅಜೇಯರಾಗಿ ಉಳಿದರು. ವಿಲಿಯಂ ಓರ್ಕೆ ರನೌಟ್‌ ಆಗದೇ ಇದಿದ್ದರೆ ಫಿಲಿಫ್ಸ್‌ ಅರ್ಧಶತಕ ಬಾರಿಸಿ ಅಪಾಯಕಾರಿಯಾಗುವ ಸಾಧ್ಯತೆ ಇರುತ್ತಿತ್ತು.