ಪುಣೆ: ಆತಿಥೇಯ ಭಾರತ ವಿರುದ್ಧದ ಟೆಸ್ಟ್(IND vs NZ 2nd Test) ಸರಣಿಯ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಪ್ರವಾಸಿ ನ್ಯೂಜಿಲೆಂಡ್ ಎರಡನೇ ಪಂದ್ಯದಲ್ಲಿಯೂ 113 ರನ್‌ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಇದು ಕಿವೀಸ್ ತಂಡ ಭಾರತ ನೆಲದಲ್ಲಿ ಗೆದ್ದ ಚೊಚ್ಚಲ ಐತಿಹಾಸಿಕ ಟೆಸ್ಟ್ ಸರಣಿಯಾಗಿದೆ. 1955-56 ರಿಂದ ನ್ಯೂಜಿಲೆಂಡ್ ಭಾರತದಲ್ಲಿ ಸರಣಿ ಆಡುತ್ತಿದ್ದು ಒಂದೇ ಒಂದು ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಗೆದ್ದು 12 ವರ್ಷಗಳ ಬಳಿಕ ತವರಿನಲ್ಲಿ ಭಾರತಕ್ಕೆ ಸೋಲಿನ ರುಚಿ ತೋರಿಸಿದೆ. ಈ ಸೋಲಿನೊಂದಿಗೆ ಭಾರತದ ತವರಿನ ಸತತ 18 ಟೆಸ್ಟ್ ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಭಾರತ 2012ರಲ್ಲಿ ಕೊನೆಯದಾಗಿ ಇಂಗ್ಲೆಂಡ್ ಎದರು ತವರಿನ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿತ್ತು.
ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ನ್ಯೂಜಿಲೆಂಡ್ ವಾಷಿಂಗ್ಟನ್ ಸುಂದರ್ ಸ್ಪಿನ್ ದಾಳಿಗೆ ಸಿಲುಕಿ 259 ರನ್‌ಗೆ ಆಲೌಟ್ ಆಯಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ ನಾಟಕೀಯ ಕುಸಿತ ಕಂಡು ಕೇವಲ 156 ರನ್‌ಗೆ ಸರ್ವಪತನ ಕಂಡಿತ್ತು. ದ್ವಿತೀಯ ಇನಿಂಗ್ಸ್‌ನಲ್ಲಿ ಕಿವೀಸ್, ನಾಯಕ ಟಾಮ್ ಲ್ಯಾಥಮ್(86), ಟಾಮ್ ಬ್ಲಂಡಲ್(41) ಮತ್ತು ಗ್ಲೆನ್ ಫಿಲಿಫ್ಸ್(48*) ಬ್ಯಾಟಿಂಗ್ ನೆರವಿನಿಂದ 255 ರನ್ ಬಾರಿಸಿ 358 ರನ್ ಮುನ್ನಡೆ ಸಾಧಿಸಿತು. 198 ರನ್‌ಗೆ ಐದು ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲ್ಯಾಂಡ್ ಮೂರನೇ ದಿನವಾದ ಶನಿವಾರ ಕೇವಲ 57 ರನ್ ಮಾತ್ರ ಗಳಿಸಿ ಆಲೌಟ್ ಆಯಿತು.
ಇದನ್ನೂ ಓದಿ IND vs NZ 2nd Test: ಸಿಕ್ಸರ್ ಮೂಲಕ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಗೆಲುವಿಗೆ 359 ರನ್‌ಪಡೆದ ಭಾರತ ಉತ್ತಮ ಆರಂಭ ಪಡೆದರೂ ಆ ಬಳಿಕ ಕುಸಿತ ಕಂಡು ಸೋಲಿಗೆ ತುತ್ತಾಯಿತು. ಮೊದಲ ಇನಿಂಗ್ಸ್‌ನಲ್ಲಿ ಶೂನ್ಯ ಸುತ್ತಿದ್ದ ನಾಯಕ ರೋಹಿತ್ ದ್ವಿತೀಯ ಇನಿಂಗ್ಸ್‌ನಲ್ಲಿಯೂ ಕಳಪೆ ಬ್ಯಾಟಿಂಗ್ ನಡೆಸಿ 8 ರನ್ ಬಾರಿಸಿದರು. ಬಳಿಕ ಬಂದ ಶುಭಮನ್ ಗಿಲ್ ಬಡಬಡನೆ 4 ಬಾರಿಸಿದರೂ ತಮ್ಮ ಆಕ್ರಮಣಕಾರಿ ಇನಿಂಗ್ಸ್ ಮುಂದುವರಿಸುವಲ್ಲಿ ವಿಫಲರಾದರು. 23 ರನ್‌ಗೆ ವಿಕೆಟ್ ಕೈಚೆಲ್ಲಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ಮತ್ತೊಂದು ತುದಿಯಲ್ಲಿ ಸಿಡಿದು ನಿಂತು ಬ್ಯಾಟ್ ಬೀಸಿದ ಜೈಸ್ವಾಲ್ ಅರ್ಧಶತಕ ಬಾರಿಸಿದರು. 65 ಎಸೆತಗಳಿಂದ 3 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 77 ರನ್ ಗಳಿಸಿದ ಜೈಸ್ವಾಲ್ ಸ್ಯಾಂಟ್ನರ್ ಎಸೆತದಲ್ಲಿ ಮಿಚೆಲ್‌ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಇವರ ವಿಕೆಟ್ ಬೀಳುತ್ತಿದ್ದಂತೆ ಭಾರತ ಸೋಲು ಕೂಡ ಖಚಿತವಾಯಿತು.
ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಆಪತ್ಬಾಂಧವನಂತೆ ಹೋರಾಟ ನಡೆಸುವ ರಿಷಭ್ ಪಂತ್ ನಿಧಾನಗತಿಯಲ್ಲಿ ಓಡಿ ಖಾತೆ ತೆರೆಯುವ ಮುನ್ನವೇ ರನೌಟ್ ಬಲೆಗೆ ಬಿದ್ದರು. ಕೊಹ್ಲಿ(17) ಮತ್ತೆ ಸ್ಯಾಂಟ್ನರ್‌ಗೆ ವಿಕೆಟ್ ಒಪ್ಪಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಬೌಲ್ಡ್ ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅವರ ಗಳಿಕೆ 17. ಬಾರಿಸಿದ್ದು ಕೇವಲ 2 ಬೌಂಡರಿ. ಅಂತಿಮ ಹಂತದಲ್ಲಿ ಸ್ಪಿನ್ ಆಲ್‌ರೌಂಡರ್‌ಗಳಾದ ಆರ್.ಅಶ್ವಿನ್(18) ಮತ್ತು ಜಡೇಜಾ(42) ಕೆಲ ಕಾಲ ಸಂಘಟಿತ ಬ್ಯಾಟಿಂಗ್ ಹೋರಾಟ ನಡೆಸಿ ಸೋಲಿನ ಅಂತರವನ್ನು ತಗ್ಗಿಸಿದರು. ಜೈಸ್ವಾಲ್ ಹೊರತುಪಡಿಸಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಪೈಕಿ ಕನಿಷ್ಠ ಒಬ್ಬರಾದರೂ ನಿರೀಕ್ಷಿತ ಪ್ರದರ್ಶನ ತೋರುತ್ತಿದ್ದರೆ ಭಾರತಕ್ಕೆ ಗೆಲ್ಲುವ ಸಾಧ್ಯತೆ ಇತ್ತು. ಅಂತಿಮವಾಗಿ ಭಾರತ 245 ರನ್‌ಗೆ ಸರ್ವಪತನ ಕಂಡಿತು.
ದಾಖಲೆ ಬರೆದ ಜೈಸ್ವಾಲ್
ಬಿರುಸಿನ ಬ್ಯಾಟಿಂಗ್ ನಡೆಸಿ 3 ಸಿಕ್ಸರ್ ಬಾರಿಸಿದ ಜೈಸ್ವಾಲ್ ಕ್ಯಾಲೆಂಡರ್ ವರ್ಷದಲ್ಲಿ 30 ಸಿಕ್ಸರ್ ಬಾರಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿಕೊಂಡರು. ವಿಶ್ವ ಮಟ್ಟದಲ್ಲಿ ಈ ಸಾಧನೆ ಮಾಡಿದ ದ್ವಿತೀಯ ಬ್ಯಾಟರ್ ಎಂಬ ಹೆಗ್ಗಳಿಕೆ ಪಾತ್ರರಾದರು. ವಿಶ್ವ ದಾಖಲೆ ಬ್ರೆಂಡನ್ ಮೆಕಲಮ್ ಹೆಸರಿನಲ್ಲಿದೆ. ಮೆಕಲಮ್ 2014 ರಲ್ಲಿ 9 ಟೆಸ್ಟ್ ಪಂದ್ಯಗಳಿಂದ 33 ಸಿಕ್ಸರ್ ಬಾರಿಸಿದ್ದರು. ಸದ್ಯ ಜೈಸ್ವಾಲ್ 32 ಸಿಕ್ಸರ್ ಬಾರಿಸಿದ್ದಾರೆ. ಅಂತಿಮ ಪಂದ್ಯದಲ್ಲಿ 2 ಸಿಕ್ಸರ್ ಬಾರಿಸಿದರೆ ವಿಶ್ವ ದಾಖಲೆ ಜೈಸ್ವಾಲ್ ಪಾಲಾಗಲಿದೆ.
ಸಂಕ್ಷಿಪ್ತ ಸ್ಕೋರ್
ನ್ಯೂಜಿಲೆಂಡ್ ಮೊದಲ ಇನಿಂಗ್ಸ್-259 (ಡೆವೋನ್ ಕಾನ್ವೆ 76, ರಚಿನ್ ರವೀಂದ್ರ 65, ಮಿಚೆಲ್ ಸ್ಯಾಂಟ್ನರ್ 33, ವಾಷಿಂಗ್ಟನ್ ಸುಂದರ್ 59ಕ್ಕೆ 7, ಆರ್.ಅಶ್ವಿನ್ 64ಕ್ಕೆ 3). ದ್ವಿತೀಯ ಇನಿಂಗ್ಸ್- 255 (ಟಾಮ್ ಲ್ಯಾಥಮ್ 86, ಟಾಮ್ ಬ್ಲಂಡೆಲ್ 41,ಗ್ಲೆನ್ ಫಿಲಿಪ್ಸ್ 48*, ವಾಷಿಂಗ್ಟನ್ ಸುಂದರ್ 56ಕ್ಕೆ 4, ರಚಿನ್ ರವೀಂದ್ರ 72ಕ್ಕೆ 3, ಅಶ್ವಿನ್ 97ಕ್ಕೆ 2.
ಭಾರತ ಮೊದಲ ಇನಿಂಗ್ಸ್-156 (ಯಶಸ್ವಿ ಜೈಸ್ವಾಲ್ 30, ಶುಭಮನ್ ಗಿಲ್ 30, ಜಡೇಜಾ 38, ಸ್ಯಾಂಟ್ನರ್ 53 ಕ್ಕೆ 7, ಫಿಲಿಪ್ಸ್ 26 ಕ್ಕೆ 2). ದ್ವಿತೀಯ ಇನಿಂಗ್ಸ್-245(ಯಶಸ್ವಿ ಜೈಸ್ವಾಲ್ 77, ಗಿಲ್ 23, ಸ್ಯಾಂಟ್ನರ್ 104 ಕ್ಕೆ 6, ಅಜಾಜ್ ಪಟೇಲ್ 43 ಕ್ಕೆ2).