ಪುಣೆ: ನ್ಯೂಜಿಲೆಂಡ್ ವಿರುದ್ದ ನಡೆದ ದ್ವಿತೀಯ ಟೆಸ್ಟ್(IND vs NZ 2nd Test) ಮುಖಾಮುಖಿಯಲ್ಲಿ ಭಾರತ ತಂಡವು ಭಾರಿ ಸೋಲನ್ನು ಅನುಭವಿಸಿದೆ. ಪುಣೆಯಲ್ಲಿ ನಡೆದ ಈ ಪಂದ್ಯ ಮೂರೇ ದಿನಕ್ಕೆ ಅಂತ್ಯ ಕಾಣುವ ಮೂಲಕ ಭಾರತ 113 ರನ್‌ಗಳ ಸೋಲಿಗೆ ತುತ್ತಾಗಿ ಸರಣಿ ಕಳೆದುಕೊಂಡಿದೆ. ಈ ಸೋಲಿನಿಂದ ಭಾರತದ ವಿಶ್ವ ಟೆಶ್ಟ್ ಚಾಂಪಿಯನ್‌ಶಿಪ್ ಫೈನಲ್(WTC 2025 Points Table) ಹಾದಿ ಕಠಿಣಗೊಂಡಿದೆ.
ಸೋಲಿನ ಹೊರತಾಗಿಯೂ ರೋಹಿತ್ ಶರ್ಮಾ (Rohit Sharma) ನೇತೃತ್ವದ ತಂಡವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಆದರೆ ಗೆಲುವಿನ ಶೇಕಡಾವಾರು ಅಂಕದಲ್ಲಿ ಕುಸಿತ ಕಂಡಿದೆ. ನೂತನ ಅಂಕಪಟ್ಟಿಯಲ್ಲಿ ಭಾರತ ಈಗ 62.82 ಕ್ಕೆ ಕುಸಿದಿದೆ. ಕಿವೀಸ್ ಸರಣಿ ಆರಂಭಕ್ಕೂ ಮುನ್ನ ಗೆಲುವಿನ ಶೇಕಡಾವಾರು ಅಂಕ 74.24 ಇತ್ತು. ಬೆಂಗಳೂರು ಟೆಸ್ಟ್ ಪಂದ್ಯ ಸೋತಾಗ 68.060 ಕ್ಕೆ ಕುಸಿದಿತ್ತು. ದ್ವಿತೀಯ ಸ್ಥಾನಿ ಆಸ್ಟ್ರೇಲಿಯಾ ಕೂಡ 62.50 ಅಂಕ ಹೊಂದಿದೆ. ಭಾರತವು ತನ್ನ ಉಳಿದ 6 ಪಂದ್ಯಗಳಲ್ಲಿ ಆರನ್ನು ಗೆಲ್ಲಬೇಕು. ಹೀಗಾಗಿ ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಪಂದ್ಯ ಮತ್ತು ಆಸ್ಟ್ರೇಲಿಯಾ ವಿರುದ್ದದ ಸರಣಿ ಅತ್ಯಂತ ಪ್ರಮುಖವಾಗಲಿದೆ. ನ್ಯೂಜಿಲೆಂಡ್ 4ನೇ ಸ್ಥಾನದಲ್ಲೇ ಮುಂದುವರಿದಿದ್ದು ಗೆಲುವಿನ ಶೇಕಡಾವಾರು ಅಂಕವನ್ನು 50.00ಕ್ಕೆ ಹೆಚ್ಚಿಸಿಕೊಂಡಿದೆ. ಶ್ರೀಲಂಕಾ(55.56) ಮೂರನೇ ಸ್ಥಾನದಲ್ಲಿದೆ.
ಇದನ್ನೂ ಓದಿ IND vs NZ 2nd Test: ಐತಿಹಾಸಿಕ ಸರಣಿ ಗೆದ್ದ ನ್ಯೂಜಿಲೆಂಡ್; ಭಾರತಕ್ಕೆ ತವರಿನಲ್ಲೇ ಮುಖಭಂಗ
ಅಗ್ರ 5 ತಂಡಗಳು
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಭಾರತ | 13 | 8 | 4 | 62.82 |
ಆಸ್ಟ್ರೇಲಿಯಾ | 12 | 8 | 3 | 62.50 |
ಶ್ರೀಲಂಕಾ | 9 | 5 | 4 | 55.56 |
ನ್ಯೂಜಿಲ್ಯಾಂಡ್ | 10 | 5 | 5 | 50.00 |
ದಕ್ಷಿಣ ಆಫ್ರಿಕಾ | 7 | 3 | 3 | 47.62 |
ಐತಿಹಾಸಿಕ ಸರಣಿ ಗೆದ್ದ ಕಿವೀಸ್
ಭಾರತ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ನ್ಯೂಜಿಲೆಂಡ್ 113 ರನ್‌ಗಳ ಗೆಲುವು ಸಾಧಿಸಿ ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸರಣಿ ವಶಪಡಿಸಿಕೊಂಡಿದೆ. ಇದು ಕಿವೀಸ್ ತಂಡ ಭಾರತ ನೆಲದಲ್ಲಿ ಗೆದ್ದ ಚೊಚ್ಚಲ ಐತಿಹಾಸಿಕ ಟೆಸ್ಟ್ ಸರಣಿಯಾಗಿದೆ. 1955-56 ರಿಂದ ನ್ಯೂಜಿಲೆಂಡ್ ಭಾರತದಲ್ಲಿ ಸರಣಿ ಆಡುತ್ತಿದ್ದು ಒಂದೇ ಒಂದು ಸರಣಿ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಗೆದ್ದು 12 ವರ್ಷಗಳ ಬಳಿಕ ತವರಿನಲ್ಲಿ ಭಾರತಕ್ಕೆ ಸೋಲಿನ ರುಚಿ ತೋರಿಸಿದೆ. ಈ ಸೋಲಿನೊಂದಿಗೆ ಭಾರತದ ತವರಿನ ಸತತ 18 ಟೆಸ್ಟ್ ಸರಣಿ ಗೆಲುವಿನ ಓಟಕ್ಕೆ ಬ್ರೇಕ್ ಬಿದ್ದಿದೆ. ಭಾರತ 2012ರಲ್ಲಿ ಕೊನೆಯದಾಗಿ ಇಂಗ್ಲೆಂಡ್ ಎದರು ತವರಿನ ಟೆಸ್ಟ್ ಸರಣಿಯಲ್ಲಿ ಸೋಲು ಕಂಡಿತ್ತು.