Tuesday, 26th November 2024

Rohit Sharma: ಸೋಲಿನೊಂದಿಗೆ ಅನಪೇಕ್ಷಿತ ದಾಖಲೆ ಬರೆದ ರೋಹಿತ್

ಪುಣೆ: ನ್ಯೂಜಿಲೆಂಡ್‌ ವಿರುದ್ಧದ ದ್ವಿತೀಯ ಟೆಸ್ಟ್‌(India vs New Zealand 2nd Test) ಪಂದ್ಯದಲ್ಲಿ ಭಾರತ 113 ರನ್‌ ಅಂತರದಿಂದ ಸೋಲು ಕಂಡು ಸರಣಿ ಕಳೆದುಕೊಂಡಿದೆ. ಸೋಲಿನೊಂದಿಗೆ ನಾಯಕ ರೋಹಿತ್‌ ಶರ್ಮ(Rohit Sharma) ಅನಪೇಕ್ಷಿತ ದಾಖಲೆಯೊಂದನ್ನು ಬರೆದಿದ್ದಾರೆ. ತವರಿನಲ್ಲಿ ಗರಿಷ್ಠ ಟೆಸ್ಟ್ ಪಂದ್ಯ ಸೋತ ನಾಯಕರ ಯಾದಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಇದು ರೋಹಿತ್‌ಗೆ ತವರಿನಲ್ಲಿ ಎದುರಾದ ನಾಲ್ಕನೇ ಸೋಲು. ಎಂಎಕೆ ಪಟೌಡಿ (9) ಮೊದಲ ಸ್ಥಾನದಲ್ಲಿದ್ದಾರೆ. ಮೊಹಮದ್ ಅಜರುದ್ದೀನ್, ಕಪಿಲ್ ದೇವ್ ತಲಾ 4 ಪಂದ್ಯದಲ್ಲಿ ಸೋಲು ಕಂಡಿದ್ದಾರೆ.

ಎಂಸಿಎ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಕಂಡ ಪಂದ್ಯದಲ್ಲಿ 5 ವಿಕೆಟ್‌ಗೆ 198 ರನ್‌ಗಳಿಂದ 3ನೇ ದಿನದಾಟ ಆರಂಭಿಸಿದ ಕಿವೀಸ್, ರವೀಂದ್ರ ಜಡೇಜಾ (72ಕ್ಕೆ 3) ಬಿಗಿ ದಾಳಿಗೆ ನಲುಗಿ 69.4 ಓವರ್‌ಗಳಲ್ಲಿ 255 ರನ್‌ಗಳಿಗೆ ದ್ವಿತೀಯ ಇನಿಂಗ್ಸ್ ಮುಗಿಸಿತು. ಇದರಿಂದ ಸರಣಿ ಜೀವಂತವಿರಿಸಲು 359 ರನ್‌ಗಳ ಸವಾಲಿನ ಗುರಿ ಪಡೆದ ಭಾರತ, 0.2 ಓವರ್‌ಗಳಲ್ಲಿ 245 ರನ್‌ಗಳಿಗೆ ಭಾರತ ಸರ್ವಪತನ ಕಂಡಿತು. 22 ವರ್ಷದ ಯಶಸ್ವಿ ಜೈಸ್ವಾಲ್ ಬಿರುಸಿನಾಟದ ಮೂಲಕ ಕಿವೀಸ್ ಪಡೆಯನ್ನು ದಂಡಿಸಿದರು. ಪ್ರತಿ ಓವರ್‌ಗೆ 6ರ ಸರಾಸರಿಯಂತೆ ರನ್ ಪೇರಿಸಿ 41 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.

ಸೋಲಿನ ಬಳಿಕ ಮಾತನಾಡಿದ್ದ ರೋಹಿತ್‌, ಆತಂಕ ಪಡುವ ಅಗತ್ಯವಿಲ್ಲ. ನಾವು ನಮ್ಮ ಆಟ ಸುಧಾರಿಸಿಕೊಳ್ಳುವ ಕಡೆಗೆ ಗಮನ ಹರಿಸುತ್ತೇವೆ ಎಂದು ಹೇಳಿದ್ದಾರೆ. ʼನಾವು ನಿರ್ದಿಷ್ಟ ಆಟಗಾರರೊಂದಿಗೆ ಚರ್ಚಿಸಬೇಕಿದೆ. ತಂಡವಾಗಿ ನಾವು ಅವರಿಂದ ಏನನ್ನು ನಿರೀಕ್ಷಿಸುತ್ತಿದ್ದೇವೆ ಎಂಬುದನ್ನು ಅವರಿಗೆ ಮನವರಿಕೆ ಮಾಡುತ್ತೇವೆ. ಈ ಸೋಲಿನ ಕುರಿತು ಅತಿಯಾಗಿ ಪ್ರತಿಕ್ರಿಯಿಸುವುದಿಲ್ಲʼ ಎಂದು ಪಂದ್ಯ ನಂತರ ಸುದ್ದಿಗೋಷ್ಠಿಯಲ್ಲಿ ರೋಹಿತ್‌ ಹೇಳಿದರು.

ಇದನ್ನೂ ಓದಿ IND vs NZ 2nd Test: ಐತಿಹಾಸಿಕ ಸರಣಿ ಗೆದ್ದ ನ್ಯೂಜಿಲೆಂಡ್‌; ಭಾರತಕ್ಕೆ ತವರಿನಲ್ಲೇ ಮುಖಭಂಗ

‘ಸೋಲಿಗೆ ಯಾರೊಬ್ಬರನ್ನು ಹೊಣೆ ಮಾಡುವುದಿಲ್ಲ. ಇದು ತಂಡದ ಸೋಲು. ಇಲ್ಲಿ ಬ್ಯಾಟಿಂಗ್ ವೈಫಲ್ಯ ಅಥವಾ ಬೌಲಿಂಗ್ ವೈಫಲ್ಯ ಎಂದು ಹೇಳಲು ಸಾಧ್ಯವಿಲ್ಲ. ವಾಂಖೆಡೆಯಲ್ಲಿ ನಡೆಯುವ ಮುಂದಿನ ಟೆಸ್ಟ್‌ ಪಂದ್ಯ ಗೆಲ್ಲುವುದು ನಮ್ಮ ಯೋಜನೆ’ ಎಂದರು.

ಸತತ 2 ಸೋಲಿನ ನಡುವೆಯೂ ರೋಹಿತ್ ಶರ್ಮ ಪಡೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲುೃಟಿಸಿ) ಮೂರನೇ ಆವೃತ್ತಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಆದರೆ ಫೈನಲ್ ಹಾದಿ ಕಠಿಣಗೊಂಡಿದೆ. ಡಬ್ಲ್ಯುಟಿಸಿಯಲ್ಲಿ ಭಾರತ ಇನ್ನೂ 6 ಟೆಸ್ಟ್ ಆಡಲಿದ್ದು, ಇದರಲ್ಲಿ 4 ಪಂದ್ಯಗಳನ್ನು ಜಯಿಸಿದರೆ ಫೈನಲ್ ಸ್ಥಾನ ಖಾತ್ರಿಪಡಿಸಿಕೊಳ್ಳಲಿದೆ. ಮುಂಬೈ ಟೆಸ್ಟ್ ಗೆಲುವಿನೊಂದಿಗೆ ಭಾರತ ತಂಡ ಆಸೀಸ್‌ನಲ್ಲೂ 3 ಟೆಸ್ಟ್ ಗೆಲ್ಲಬೇಕಾಗುತ್ತದೆ. ಭಾರತ ಉಳಿದ 6ರಲ್ಲಿ 2ರಲ್ಲಿ ಮಾತ್ರ ಗೆದ್ದು, ಉಳಿದ 4ರಲ್ಲಿ ಡ್ರಾ ಸಾಧಿಸಿದರೂ, ಶೇ. 60ಕ್ಕಿಂತ ಹೆಚ್ಚಿನ ಅಂಕ ಗಳಿಸಬಹುದಾಗಿದೆ. ಆದರೆ ಆಗ ಫೈನಲ್ ಭವಿಷ್ಯವನ್ನು ಇತರ ಸರಣಿಗಳ ಫಲಿತಾಂಶಗಳು ನಿರ್ಧರಿಸುತ್ತವೆ.