Sunday, 27th October 2024

WTC Points Table: ಟೀಮ್‌ ಇಂಡಿಯಾ ಫೈನಲ್‌ ಪ್ರವೇಶದ ಲೆಕ್ಕಾಚಾರ ಹೇಗಿದೆ?

ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧ ಭಾರತ ಸತತ 2 ಟೆಸ್ಟ್‌ ಪಂದ್ಯ ಸೋತ ಬಳಿಕ, ಮುಂದಿನ ವರ್ಷ ನಡೆಯುವ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌(WTC Points Table) ಪ್ರವೇಶದ ರೇಸ್‌ನಲ್ಲಿ ಮತ್ತಷ್ಟು ಪೈಪೋಟಿ ಏರ್ಪಟ್ಟಿದೆ. ಸೋಲಿನಿಂದ ಭಾರತದ ಫೈನಲ್ ಹಾದಿ ಕಠಿಣಗೊಂಡಿದೆ. ಆದರೂ ಸದ್ಯ ಅಂಕ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಕಾಯ್ದುಕೊಂಡಿದೆ. ಸರಣಿಗೂ ಮುನ್ನ ಶೇ.74.24 ಗೆಲುವಿನ ಪ್ರತಿಶತ ಹೊಂದಿದ್ದ ಭಾರತ 2 ಪಂದ್ಯಗಳ ಸೋಲಿನ ಬಳಿಕ ಸದ್ಯ ಶೇ.62.82ಕ್ಕೆ ಕುಸಿದಿದೆ. 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ (ಶೇ.62.50)ಕ್ಕಿಂತ ಕೇವಲ 0.32 ಅಂತರದಲ್ಲಿ ಮುಂದಿದೆ. ಭಾರತದ ಫೈನಲ್‌ ಪ್ರವೇಶದ ಲೆಕ್ಕಾಚಾರ ಹೀಗಿದೆ.

ಭಾರತ ಈ ಹಿಂದಿನ ಎರಡೂ ಆವೃತ್ತಿಗಳಲ್ಲಿ ಫೈನಲ್ ಪ್ರವೇಶಿಸಿತ್ತು. ಮೊದಲ ಆವೃತ್ತಿಯಲ್ಲಿ ನ್ಯೂಜಿಲೆಂಡ್, ಕಳೆದ ಬಾರಿ ಆಸ್ಟ್ರೇಲಿಯಾ ವಿರುದ್ದ ಸೋತು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಮೂರನೇ ಬಾರಿಗೆ ಫೈನಲ್‌ ಪ್ರವೇಶಿಸಬೇಕಿದ್ದರೆ, ಭಾರತ ಇನ್ನುಳಿದ 6 ಪಂದ್ಯಗಳಲ್ಲಿ ಕನಿಷ್ಠ 4 ಪಂದ್ಯಗಳನ್ನು ಗೆಲ್ಲಬೇಕು. ಒಂದೊಮ್ಮೆ ಭಾರತ ಉಳಿದ 6ರಲ್ಲಿ 2ರಲ್ಲಿ ಮಾತ್ರ ಗೆದ್ದು, ಉಳಿದ 4ರಲ್ಲಿ ಡ್ರಾ ಸಾಧಿಸಿದರೂ, ಶೇ. 60ಕ್ಕಿಂತ ಹೆಚ್ಚಿನ ಅಂಕ ಗಳಿಸಬಹುದಾಗಿದೆ. ಆದರೆ ಆಗ ಫೈನಲ್ ಭವಿಷ್ಯವನ್ನು ಇತರ ಸರಣಿಗಳ ಫಲಿತಾಂಶಗಳು ನಿರ್ಧರಿಸುತ್ತವೆ.

ಇದನ್ನೂ ಓದಿ IND vs NZ 3rd Test: ಮುಂಬೈ ಟೆಸ್ಟ್‌ನಲ್ಲಿ ರಾಹುಲ್‌ಗೆ ಅವಕಾಶ?

ಹಾಲಿ ಚಾಂಪಿಯನ್‌ ಆಸ್ಟ್ರೇಲಿಯಾ ತಂಡವು ಭಾರತ ವಿರುದ್ದ 5 ಹಾಗೂ ಶ್ರೀಲಂಕಾ ವಿರುದ್ದ ಎರಡು ಪಂದ್ಯಗಳು ಸೇರಿ ಒಟ್ಟು 7 ಪಂದ್ಯಗಳನ್ನು ಆಡಲಿದ್ದು, ಈ ಪೈಕಿ 4 ಪಂದ್ಯ ಜಯಿಸಿದರೇ, ಟೆಸ್ಟ್ ವಿಶ್ವಕಪ್ ಫೈನಲ್‌ಗೆ ನೇರವಾಗಿ ಅರ್ಹತೆ ಪಡೆಯಲಿದೆ. ಭಾರತ ವಿರುದ್ಧ ಸರಣಿ ಗೆದ್ದು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ ಭಾರತ ಎದುರು ಉಳಿದಿರುವ ಒಂದು ಪಂದ್ಯ ಹಾಗೂ ಇಂಗ್ಲೆಂಡ್ ಎದುರಿನ 3 ಪಂದ್ಯವನ್ನು ಜಯಿಸಿದರೆ, ಜತೆಗೆ ತನಗಿಂತ ಮೇಲಿರುವ ತಂಡಗಳು ಸೋತರೆ ಆಗ ಫೈನಲ್ ಪ್ರವೇಶಿಸಲಿದೆ.

ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾ ತಂಡಕ್ಕೂ ಫೈನಲ್‌ ಪ್ರವೇಶಿಸುವ ಅವಕಾಶವಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ತಲಾ ಎರಡು ಸೇರಿದಂತೆ ಒಟ್ಟು 4 ಪಂದ್ಯಗಳಲ್ಲಿ ಕನಿಷ್ಠ ಮೂರು ಗೆಲುವು ಸಾಧಿಸಿದರೆ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಒಟ್ಟಾರೆಯಾಗಿ ಭಾರತದ ಸೋಲಿನಿಂದ ಹಲವು ತಂಡಗಳಿಗೆ ಫೈನಲ್‌ ಪ್ರವೇಶದ ಆಸೆ ಮತ್ತೆ ಚಿಗುರೊಡೆಯುಂತೆ ಮಾಡಿದ್ದು ನಿಜ.

ಟಾಪ್‌-5 ತಂಡಗಳು

ತಂಡಪಂದ್ಯಗೆಲುವುಸೋಲುಅಂಕ
ಭಾರತ138462.82
ಆಸ್ಟ್ರೇಲಿಯಾ128362.50
ಶ್ರೀಲಂಕಾ95455.56
ನ್ಯೂಜಿಲ್ಯಾಂಡ್‌105550.00
ದಕ್ಷಿಣ ಆಫ್ರಿಕಾ73347.62