ತುಮಕೂರು: ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅನ್ನದಾತರು ಸಂಕಷ್ಟದಲ್ಲಿದ್ದಾರೆ ಎಂದು ಮಾಜಿ ಸಚಿವೆ ಲಲಿತಾ ನಾಯ್ಕ್ ತಿಳಿಸಿದರು.
ಕರ್ನಾಟಕ ಪ್ರಗತಿಪರ ರೈತರು ಮತ್ತು ದೇವರಾಯನದುರ್ಗ ಜೀವ ವೈವಿಧ್ಯ ರಕ್ಷಣಾ ಸಮಿತಿ ಉದ್ಘಾಟಿಸಿ ಮಾತನಾಡಿ ದರು.
ಸರ್ಕಾರಗಳು ರೈತರಿಗೆ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಬೇಕು. ಕಾರ್ಪೊರೇಟ್ ಕಂಪನಿ ಬೆಂಬಲ ನೀಡುವುದನ್ನು ನಿಲ್ಲಿಸಿ ಅನ್ನದಾತರಿಗೆ ಬೆಂಬಲ ನೀಡಿದರೆ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಮಳೆಯ ಜೂಜಾಟದಿಂದಾಗಿ ದೇಶದಲ್ಲಿ ರೈತರ ಜೀವನ ಅತಂತ್ರ ಸ್ಥಿತಿಯಲ್ಲಿದೆ. ಸರ್ಕಾರಗಳು ರೈತರ ಪರವಾಗಿ ಕಾನೂನುಗಳನ್ನು ರೂಪಿಸುವ ಮೂಲಕ ರೈತರಿಗೆ ಆಧಾರವಾಗಬೇಕು ಎಂದು ಸಲಹೆ ನೀಡಿದರು.
ಶಾಸಕ ಸುರೇಶ್ ಗೌಡ ಮಾತನಾಡಿ, ರೈತರು ದೇಶದ ಶಕ್ತಿ. ಮನುಷ್ಯನಿಗೆ ಅನ್ನವಿಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಅನ್ನವನ್ನು ಕೃತಕವಾಗಿ ಬೆಳೆಯಲು ಸಾಧ್ಯವಿಲ್ಲ. ರೈತ ಶ್ರಮ ಪಟ್ಟರೆ ಮಾತ್ರ ನಾವೆಲ್ಲ ಸುಖವಾಗಿರಬಹುದು ಎಂದರು.
ದೇವರಾಯನ ದುರ್ಗ ನಾಡಿನ ಹೆಮ್ಮೆಯ ಜೀವವವಿಧ್ಯಗಳ ತಾಣ. ಇದನ್ನು ಸಂರಕ್ಷಿಸಲು ಸಮಿತಿ ಆರಂಭ ವಾಗಿರುವುದು ಸಂತೋಷಕರ ವಿಚಾರ ಎಂದರು.
ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಾಧೀಶ ಆರ್.ಎನ್. ನಟರಾಜು, ವಕೀಲ ಹಾಗೂ ಸಂಘಟನೆಯ ಮಹಾ ಪೋಷಕ ರಮೇಶ್‌ನಾಯ್ಕ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್ ಮಾತನಾಡಿದರು. ಸಮಾರಂಭದಲ್ಲಿ ಹೈಕೋರ್ಟ್ ವಕೀಲ ಆರ್. ಸುಬ್ರಹ್ಮಣ್ಯ, ರವೀಂದ್ರ ಬಿ.ಆರ್ ಹಾಗೂ ರೈತರು ಉಪಸ್ಥಿತರಿದ್ದರು.
ಇದನ್ನೂ ಓದಿ: Tumkur News: ಚಂದ್ರಯಾನ-3 ಉಡ್ಡಯನದ ನಂತರ ಇಸ್ರೋ ಸಾಧನೆ ಮಾಡಿದೆ