Sunday, 27th October 2024

Rashmika Mandanna: ಬಾಲಿವುಡ್‌ನ ಮತ್ತೊಂದು ಅವಕಾಶ ಗಿಟ್ಟಿಸಿದ ರಶ್ಮಿಕಾ; ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ನಟನಿಗೆ ಜೋಡಿ

ಮುಂಬೈ: ನ್ಯಾಷನಲ್‌ ಕ್ರಶ್‌, ಕನ್ನಡತಿ ರಶ್ಮಿಕಾ ಮಂದಣ್ಣ (Rashmika Mandanna) ಸದ್ಯ ಪರಭಾಷೆಯಲ್ಲಿ ಬ್ಯುಸಿಯಾಗಿದ್ದಾರೆ. ಟಾಲಿವುಡ್‌ ಜತೆಗೆ ಬಾಲಿವುಡ್‌ನಲ್ಲಿ ಭರ್ಜರಿ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದೂ ಬಾಲಿವುಡ್‌ನ ಸ್ಟಾರ್‌ಗಳು, ಜನಪ್ರಿಯ ಪ್ರೊಡಕ್ಷನ್‌ ಕಂಪೆನಿಗಳ ಚಿತ್ರಗಳಿಗೆ ಅವರು ಆಯ್ಕೆಯಾಗುತ್ತಿದ್ದು, ಹಿಂದಿ ಸಿನಿರಂಗದಲ್ಲಿ ಗಟ್ಟಿಯಾಗಿ ನೆಲೆ ನಿಲ್ಲುವ ಸೂಚನೆ ನೀಡಿದ್ದಾರೆ. ಇದೀಗ ರಶ್ಮಿಕಾ ಮತ್ತೊಂದು ಬಾಲಿವುಡ್‌ ಚಿತ್ರಕ್ಕೆ ಆಯ್ಕೆಯಾಗಿದ್ದು, ಸೆಟ್ಟೇರುವ ಮೊದಲೇ ನಿರೀಕ್ಷೆ ಮೂಡಿಸಿದೆ.

ರಶ್ಮಿಕಾ ಕಳೆದ ವರ್ಷ ತೆರೆಕಂಡ ಬಾಲಿವುಡ್‌ನ ʼಅನಿಮಲ್‌ʼ ಸಿನಿಮಾದ ಯಶಸ್ಸಿನಲ್ಲಿ ತೇಲುತ್ತಿರುವ ರಶ್ಮಿಕಾ ಅವರನ್ನು ಹುಡುಕಿಕೊಂಡು ಹಲವು ಅವಕಾಶ ಬರುತ್ತಿದೆ. ಅವರ ಕಾಲ್‌ಶೀಟ್‌ಗಾಗಿ ನಿರ್ಮಾಪಕರು ಮನೆಮುಂದೆ ಕಾಯುವಂತಾಗಿದೆ. ಸದ್ಯ ಸಲ್ಮಾನ್‌ ಖಾನ್‌ಗೆ ಜನಪ್ರಿಯ ನಿರ್ದೇಶಕ ಎ.ಆರ್‌.ಮುರುಗದಾಸ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ʼಸಿಖಂದರ್‌ʼ ಸಿನಿಮಾದಲ್ಲಿ ರಶ್ಮಿಕಾ ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್‌ ಆರಂಭವಾಗಿದೆ. ʻಸಿಖಂದರ್’ ಸಿನಿಮಾ ಆ್ಯಕ್ಷನ್‌ ಥ್ರಿಲ್ಲರ್ ಚಿತ್ರವಾಗಿದ್ದು, 400 ಕೋಟಿ ರೂ. ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ‘ಘಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ಎ.ಆರ್‌.ಮುರುಗದಾಸ್‌ ಮೊದಲ ಬಾರಿ ಸಲ್ಮಾನ್‌ ಖಾನ್‌ ಜತೆ ಕೈ ಜೋಡಿಸಿದ್ದಾರೆ. ಹೀಗಾಗಿಯೇ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ.

ಆಯುಷ್ಮಾನ್‌ ಖುರಾನಾಗೆ ಜೋಡಿ

2018ರಲ್ಲಿ ತೆರೆಕಂಡ ಬಾಲಿವುಡ್‌ನ ʼಅಂದಾಧುನ್‌ʼ ಸಿನಿಮಾ ಮೂಲಕ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದ ಪ್ರತಿಭಾವಂತ ನಟ ಆಯುಷ್ಮಾನ್‌ ಖುರಾನ ಅವರ ಮುಂದಿನ ಹಾರರ್‌ ಕಾಮಿಡಿ ಚಿತ್ರಕ್ಕೆ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಆಯ್ಕೆಯಾಗಿದ್ದು, ನವೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಇದಕ್ಕೆ ʼತಂಬಾʼ ಎಂದು ಹೆಸರಿಡಲಾಗಿದೆ. ಬಾಲಿವುಡ್‌ನ ಮತ್ತೊಬ್ಬ ಪ್ರತಿಭಾವಂತ ನಟ ನವಜುದ್ದೀನ್‌ ಸಿದ್ದಿಕಿ ಕೂಡ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ವಿಲನ್‌ ಆಗಿ ಅವರು ತೆರೆ ಮೇಲೆ ಅಬ್ಬರಿಸಲಿದ್ದಾರೆ. ಆದಿತ್ಯ ಸತ್ಪೋದರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ʼಮುಂಜಾʼ ಹಾರರ್‌ ಸಿನಿಮಾ ಮೂಲಕ ಆದಿತ್ಯ ಸತ್ಪೋದರ್ ಗಮನ ಸೆಳೆದಿದ್ದಾರೆ. ಬಾಕ್ಸ್‌ ಆಫೀಸ್‌ನಲ್ಲಿ ಈ ಸಿನಿಮಾ 132 ಕೋಟಿ ರೂ. ಗಳಿಸುವ ಮೂಲಕ ಸೂಪರ್‌ ಹಿಟ್‌ ಎನಿಸಿಕೊಂಡಿದೆ.

ಹಂಪಿಯಲ್ಲಿ ಚಿತ್ರೀಕರಣ

ʼತಂಬಾʼ ಸಿನಿಮಾಕ್ಕೂ ಕರ್ನಾಟಕಕ್ಕೂ ನಂಟಿದೆ. ಹೌದು, ಈ ಸಿನಿಮಾದ ಕಥೆ ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ನಡೆಯಲಿದೆ. ಮೂಲಗಳ ಪ್ರಕಾರ ಈ ಚಿತ್ರ 2 ಎರಡು ಭಾಗಗಳಲ್ಲಿ ತೆರೆ ಕಾಣಲಿದ್ದು, ಪ್ರಾಚೀನ ಕಾಲದ ಜತೆಗೆ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಒಳಗೊಂಡಿದೆ. ಹಾರರ್‌ ಕಾಮಿಡಿ ಇದಾಗಿದ್ದು, ಹಂಪಿಯಲ್ಲಿ ಚಿತ್ರೀಕರಣ ನಡೆಯಲಿದೆ. ಹೀಗಾಗಿ ಈಗಾಗಲೇ ಈ ಚಿತ್ರ ಕುತೂಹಲ ಕೆರಳಿಸಿದೆ.

ಡಿಸೆಂಬರ್‌ ರಶ್ಮಿಕಾಗೆ ಲಕ್ಕಿ ತಿಂಗಳು

ಕನ್ನಡದ ʼಕಿರಿಕ್‌ ಪಾರ್ಟಿʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ರಶ್ಮಿಕಾಗೆ ಡಿಸೆಂಬರ್‌ ಲಕ್ಕಿ ತಿಂಗಳು ಎನಿಸಿಕೊಂಡಿದೆ. ಈ ವರ್ಷವೂ ಡಿಸೆಂಬರ್‌ನಲ್ಲಿ ರಶ್ಮಿಕಾ ಅಭಿನಯದ 2 ಚಿತ್ರಗಳು ತೆರೆ ಕಾಣಲಿದೆ. ಡಿ. 5ರಂದು ತೆಲುಗಿನ ʼಪುಷ್ಪ -2ʼ, ಮರುದಿನ ʼಛಾವಾʼ ಬಿಡುಗಡೆಯಾಗಲಿದೆ. ಅಲ್ಲು ಅರ್ಜುನ್‌ ಅಭಿನಯದ ʼಪುಷ್ಪ -2ʼ ಈಗಾಗಲೇ ಸಾಕಷ್ಟು ಹೈಪ್‌ ಕ್ರಿಯೇಟ್‌ ಮಾಡಿದೆ. ಇನ್ನು ʼಛಾವಾʼ ಸಿನಿಮಾದ ಮೂಲಕ ರಶ್ಮಿಕಾ ಮೊದಲ ಬಾರಿ ಐತಿಹಾಸಿಕ ಪಾತ್ರದಲ್ಲಿ ಕಾನಿಸಿಕೊಂಡಿದ್ದಾರೆ. ಹೀಗಾಗಿ ಎರಡೂ ಚಿತ್ರಗಳು ಸಾಕಷ್ಟು ನಿರೀಕ್ಷೆ ಮೂಡಿಸಿವೆ.

ಈ ಸುದ್ದಿಯನ್ನೂ ಓದಿ: Pushpa 2: ಮತ್ತೊಮ್ಮೆ ಬದಲಾಯ್ತು ʼಪುಷ್ಪ 2ʼ ಬಿಡುಗಡೆ ದಿನಾಂಕ; ನಿಗದಿಗಿಂತ ಮೊದಲೇ ರಿಲೀಸ್‌ ಆಗಲಿದೆ ಅಲ್ಲು ಅರ್ಜುನ್‌ ಚಿತ್ರ