Monday, 25th November 2024

Selfie Drama: ಸೆಲ್ಫಿ ಹುಚ್ಚಾಟ: 12 ಗಂಟೆ ನಂತರ ಯುವತಿ ರಕ್ಷಣೆ

ತುಮಕೂರು: ತಾಲೂಕಿನ ಮೈದಾಳ ಕೆರೆಯಲ್ಲಿ ಸೆಲ್ಪಿ ಸೆಲ್ಫಿ ತೆಗೆದುಕೊಳ್ಳಲು ಹೋಗಿ ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡಿದ್ದು, ಕೊನೆಗೂ ಬದುಕಿ ಬಂದಿರುವ ಘಟನೆ ನಡೆದಿದೆ.

ಮಂದಾರಗಿರಿ ಬೆಟ್ಟದಲ್ಲಿನ ಮೈದಾಳ ಕೆರೆ ಕೋಡಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿ ಆಪತ್ತಿಗೆ ಸಿಲುಕಿದ್ದ ಯುವತಿಯನ್ನು ರಕ್ಷಿಸಲಾಗಿದೆ. ಕೋಡಿಯಲ್ಲಿ ಜಾರಿ ಬಿದ್ದ ವಿದ್ಯಾರ್ಥಿನಿಯನ್ನು ರಕ್ಷಿಸುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಯುವತಿ ಬದುಕಿ ಬಂದಿದ್ದಾಳೆ. ಸತತ 12 ಗಂಟೆಗಳ ಕಾರ್ಯಾಚರಣೆ ಬಳಿಕ ಯುವತಿ ಬದುಕಿ ಬಂದಿದ್ದಾರೆ.

ಹಂಸ (19) ಆಪತ್ತಿಗೆ ಸಿಲುಕಿದ್ದ ವಿದ್ಯಾರ್ಥಿನಿ. ಗುಬ್ಬಿ ತಾಲೂಕು ಶಿವರಾಂಪುರದ ನಿವಾಸಿ. ಎಸ್‌ಐಟಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದು, ಮೈದಾಳ ಕೆರೆ ಕೋಡಿಯಲ್ಲಿ ಭಾನುವಾರ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಬಿದ್ದಿದ್ದರು. ನೀರಿನಲ್ಲಿ ಜಾರಿ ಹೋಗಿ, ಕಲ್ಲಿನ ಪೊಟರೆಯಲ್ಲಿ ಸಿಲುಕಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ತಡ ರಾತ್ರಿವರೆಗೂ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು. ಆದರೆ ಆಕೆ ಸಿಲುಕಿರುವ ಜಾಗಕ್ಕೆ ಹೋಗುವುದು ಸವಾಲಿನ ಕೆಲಸವಾಗಿತ್ತು. ಹತ್ತಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

(ಕೆರೆಗಳ ಬಳಿ ಮಕ್ಕಳನ್ನು ಬಿಡದಂತೆ ಪೋಷಕರು ಎಚ್ಚರಿಕೆ ವಹಿಸಬೇಕು : ಎಸ್ಪಿ ಅಶೋಕ್)

ಭಾನುವಾರ ರಕ್ಷಣಾ ಕಾರ್ಯ ಸ್ಥಗಿತಗೊಳಿಸಿದ್ದ ಅಗ್ನಿಶಾಮಕ ಸಿಬ್ಬಂದಿ, ಸೋಮವಾರ ಬೆಳಗ್ಗೆಯಿಂದ ರಕ್ಷಣಾ ಕಾರ್ಯಾಚರಣೆ ಪುನಾರಂಭಿಸಿದ್ದರು.

ಕೋಡಿ ನೀರು ರಭಸದಿಂದ ಹರಿಯುತ್ತಿರುವ ಕಾರಣ, ಆಕೆಯ ಪತ್ತೆ ಹಾಗೂ ರಕ್ಷಣೆಗೆ ತೊಡಕಾಗಿತ್ತು. ಕೆರೆ ಕೋಡಿಯ ನೀರನ್ನು ಬೇರೆಡೆಗೆ ತಿರುಗಿಸುವ ಮೂಲಕ, ಆಕೆ ಸಿಲುಕಿದ್ದ ಕಲ್ಲಿನ ಪೊಟರೆಯ ಜಾಗಕ್ಕೆ ನೀರು ಹೋಗದಂತೆ ನೋಡಿಕೊಂಡು, ಬಳಿಕ ರಕ್ಷಣಾ ಕಾರ್ಯವನ್ನು ಯಶಸ್ವಿಯಾಗಿ ನಡೆಸಲಾಯಿತು. ಯುವತಿ ದುರ್ಗಮ ಜಾಗದಲ್ಲಿ ಒಂಟಿಯಾಗಿ ಇಡೀ ರಾತ್ರಿ ಕಳೆದು ಬದುಕಿ ಬಂದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯವೈಖರಿಯನ್ನು ಸಾರ್ವ ಜನಿಕರು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: ಕ್ಯಾಂಡಿಡ್‌ ಚಿತ್ರದ ಜೀವಂತಿಕೆ, ಪೋಸ್ ಕೊಟ್ಟ ಪಟಕ್ಕಿಲ್ಲ !