Saturday, 23rd November 2024

Kiccha Sudeepa: ತಾಯಿ ನಿಧನಕ್ಕೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಸುದೀಪ್‌

Kiccha Sudeepa

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ, ನಿರೂಪಕ, ಬಹುಭಾಷಾ ಕಲಾವಿದ ಕಿಚ್ಚ ಸುದೀಪ್ (Kiccha Sudeepa) ಅವರ ತಾಯಿ ಸರೋಜಾ ಅವರು ಅ. 20ರ ಮುಂಜಾನೆ ವಿಧಿವಶರಾಗಿದ್ದಾರೆ. ಅನೇಕ ಗಣ್ಯರು ಹಾಗೂ ರಾಜಕಾರಣಿಗಳು ಸುದೀಪ್‌ ತಾಯಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರೂ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂತಾಪ ಸೂಚಿಸಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದೀಗ ಸುದೀಪ್‌ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ದುಃಖದಲ್ಲಿ ಭಾಗಿಯಾಗಿದ್ದಕ್ಕೆ ಧನ್ಯವಾದ ಅರ್ಪಿಸಿದ್ದಾರೆ.

ʼʼಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ, ನಿಮ್ಮ ಸಹಾನುಭೂತಿಯ ಸಂತಾಪ ಪತ್ರಕ್ಕಾಗಿ ಪ್ರಾಮಾಣಿಕ ಧನ್ಯವಾದಗಳು. ನಿಮ್ಮ ಚಿಂತನಶೀಲ ಮಾತುಗಳು ಈ ಆಳವಾದ ಕಷ್ಟದ ಸಮಯದಲ್ಲಿ ಸಾಂತ್ವಾನದ ಮೂಲ ಸೆಲೆಯನ್ನು ನೀಡಿದೆ. ನಿಮ್ಮ ಸಾಂತ್ವಾನವು ನನ್ನ ಹೃದಯ ತಟ್ಟಿದೆ. ನಿಮ್ಮ ವಿಶ್ವಾಸಕ್ಕೆ ನಾನು ಅಭಾರಿʼʼ ಎಂದು ಸೂದೀಪ್‌ ಬರೆದುಕೊಂಡಿದ್ದಾರೆ.

ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾಕ್ಕೆ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಅ. 23ರಂದು ಅಲ್ಲಿಂದಲೇ ಪತ್ರ ಬರೆದು ಸುದೀಪ್‌ಗೆ ಸಾಂತ್ವಾನ ಹೇಳಿದ್ದರು. ʼʼತಮ್ಮ ತಾಯಿ ಅಗಲಿದ್ದಾರೆ ಎನ್ನುವ ಸುದ್ದಿ ಕೇಳಿ ದುಃಖವಾಯಿತು. ಅವರು ನಿಮ್ಮ ನೆನಪಲ್ಲಿ ಸದಾ ಜೀವಂತವಾಗಿರುತ್ತಾರೆ. ಅವರ ಜೀವನದ ಆದರ್ಶ ನಿಮಗೆ ದಾರಿದೀಪವಾಗಲಿದೆ. ಇದು ನಿಮ್ಮ ಜೀವನದ ಅತ್ಯಂತ ನೋವಿನ ಸಂಗತಿ ಎನ್ನುವುದು ನನಗೆ ತಿಳಿದಿದೆ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಆ ನೋವು ಸಹಿಸುವ ಶಕ್ತಿ ಸಿಗಲಿ. ಓಂ ಶಾಂʼʼ ಎಂದು ಮೋದಿ ಪತ್ರ ಬರೆದಿದ್ದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಸರೋಜಾ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.

ಭಾವುಕ ಪತ್ರ ಬರೆದ ಸುದೀಪ್‌

ತಾಯಿ ನಿಧನರಾದ ಬಳಿಕ ಸುದೀಪ್‌ ಭಾವುಕ ಪೋಸ್ಟ್‌ ಹಂಚಿಕೊಂಡಿದ್ದರು. ʼʼಯಾವಾಗಲೂ ಪ್ರೀತಿ ತೋರಿಸುತ್ತ, ಕಾಳಜಿ ತೋರುತ್ತ, ಕ್ಷಮಿಸುತ್ತ, ಪೂರ್ವಾಗ್ರಹ ಪೀಡಿತ ಯೋಚನೆಗಳನ್ನು ಹೊಂದಿರದ ನನ್ನ ತಾಯಿ ಜತೆಗಿದ್ದ ಜೀವನ ಚೆನ್ನಾಗಿತ್ತು. ಮಾನವ ರೂಪದಲ್ಲಿದ್ದ ದೇವರು ನನ್ನ ತಾಯಿ. ನನ್ನ ತಾಯಿಯೇ ನನಗೆ ಹಬ್ಬ, ಟೀಚರ್ ಆಗಿದ್ದರು, ಹಿತೈಷಿಯೂ ಹೌದು. ಅಷ್ಟೇ ಅಲ್ಲದೆ ನನ್ನ ಮೊದಲ ಅಭಿಮಾನಿಯೂ ಹೌದುʼʼ ಎಂದು ಬರೆದಿದ್ದರು.

ಮುಂದುವರಿದು, ʼʼನನ್ನ ಮನದಲ್ಲಿರುವ ದುಃಖವನ್ನು ಹೊರಹಾಕಲು ನನಗೆ ಪದಗಳಿಲ್ಲ. ಏನಾಗಿದೆಯೋ ಅದನ್ನು ನನಗೆ ಒಪ್ಪಿಕೊಳ್ಳಲು ಆಗುತ್ತಿಲ್ಲ. 24 ಗಂಟೆಯಲ್ಲಿ ಎಲ್ಲವೂ ಬದಲಾಗಿದೆ. ನಿತ್ಯವೂ ನನಗೆ ಬೆಳಗ್ಗೆ ಗುಡ್ ಮಾರ್ನಿಂಗ್ ಕಂದ ಎಂಬ ಸಂದೇಶ ಬರುತ್ತಿತ್ತು. ಅ. 18ಕ್ಕೆ ಕೊನೆಯದಾಗಿ ಮೆಸೇಜ್ ಬಂದಿತ್ತು. ಬಿಗ್ ಬಾಸ್ ಮನೆಯಲ್ಲಿದ್ದ ಸಮಯದಲ್ಲಿ ನಾನು ಎದ್ದಾಗ ನನಗೆ ಮತ್ತೆ ಮೆಸೇಜ್ ಬರಲೇ ಇಲ್ಲ. ಶನಿವಾರ ಪೂರ್ತಿ ಬಿಗ್ ಬಾಸ್ ಕುರಿತ ಚರ್ಚೆ, ಎಪಿಸೋಡ್ ಆಯಿತು. ನನಗೆ ಬೆಳಗ್ಗೆ ಮೆಸೇಜ್ ಮಾಡಿ, ಕಾಲ್ ಮಾಡಿ ಎಲ್ಲವೂ ಸರಿ ಇದೆಯಾ ಎಂದು ಕೇಳಲು ಆಗಲೇ ಇಲ್ಲ. ನಾನು ವೇದಿಕೆ ಮೇಲೆ ಹೋದಾಗ ತಾಯಿಯನ್ನು ಆಸ್ಪತ್ರೆಗೆ ಸೇರಿಸಲಾಯ್ತು ಅಂತ ಗೊತ್ತಾಯ್ತು. ಆಗ ನಾನು ಸಹೋದರಿಗೆ ಫೋನ್ ಮಾಡಿ ಡಾಕ್ಟರ್ ಜತೆಯೂ ಮಾತನಾಡಿದೆ. ಆಮೇಲೆ ಸ್ವಲ್ಪ ಹೊತ್ತಾದ ಬಳಿಕ ಮತ್ತೆ ನಾನು ವೇದಿಕೆಗೆ ಹೋದಾಗ ತಾಯಿ ಪರಿಸ್ಥಿತಿ ಕಷ್ಟ ಇದೆ ಅಂತ ಸಂದೇಶ ಬಂತು” ಸುದೀಪ್‌ ತಿಳಿಸಿದ್ದರು.

ʼʼಈ ರೀತಿ ಅಸಹಾಯಕ ಸ್ಥಿತಿಯನ್ನು ನಾನು ಮೊದಲ ಬಾರಿಗೆ ಎದುರಿಸುತ್ತಿದ್ದೇನೆ. ನೂರಾರು ವಿಷಯಗಳನ್ನು ಇಟ್ಟುಕೊಂಡು ನಾನು ಶನಿವಾರದ ಎಪಿಸೋಡ್‌ನಲ್ಲಿ ಬ್ಯುಸಿಯಾಗಿದ್ದೆ, ಆದರೂ ತಾಯಿಗೆ ಏನಾಯ್ತೋ ಏನೋ ಎನ್ನುವ ಆತಂಕವೂ ಇತ್ತು. ಇಷ್ಟೆಲ್ಲ ಇದ್ದಾಗಲೂ ನಾನು ಕೂಲ್ ಆಗಿ ಕೆಲಸ ಮಾಡೋದನ್ನು ನನ್ನ ತಾಯಿಯಿಂದಲೇ ಕಲಿತಿದ್ದೇನೆ. ಶನಿವಾರದ ಎಪಿಸೋಡ್ ಮುಗಿದ ಬಳಿಕ ನಾನು ಆಸ್ಪತ್ರೆಗೆ ಬಂದೆ. ನಾನು ಅಲ್ಲಿಗೆ ಹೋಗುವ ಕೆಲ ಕ್ಷಣಗಳ ಮುಂಚೆ ತಾಯಿಯನ್ನು ವೆಂಟಿಲೇಟರ್‌ಗೆ ದಾಖಲಿಸಿದ್ದರು. ಅಮ್ಮ ಪ್ರಜ್ಞೆಯಲ್ಲಿದ್ದಾಗ ನಾನು ಅವರನ್ನು ನೋಡಲು ಆಗಲಿಲ್ಲ. ಭಾನುವಾರ ಬೆಳಗ್ಗೆಯವರೆಗೂ ತಾಯಿ ಹೋರಾಡಿದ್ದರು. ಕೆಲವು ಗಂಟೆಗಳಲ್ಲಿ ಎಲ್ಲವೂ ಬದಲಾಯ್ತುʼʼ ಎಂದು ಸುದೀಪ್‌ ದುಃಖ ವ್ಯಕ್ತಪಡಿಸಿದ್ದರು.

ʼʼಆಗ ಈ ವಾಸ್ತವವನ್ನು ಹೇಗೆ ಒಪ್ಪಿಕೊಳ್ಳಬೇಕೆಂದು ನನಗೆ ತಿಳಿಯಲಿಲ್ಲ. ನಾನು ಶೂಟಿಂಗ್‌ಗೆ ಹೊರಡುವ ಮುನ್ನ ಬಿಗಿಯಾದ ಅಪ್ಪುಗೆ ನೀಡಿದ ನನ್ನ ತಾಯಿ, ಮುಂದಿನ ಕೆಲವೇ ಗಂಟೆಗಳಲ್ಲಿ ಇನ್ನಿಲ್ಲ. ಆಕೆಗೆ ಗೌರವ ಸಲ್ಲಿಸಲು ಆಗಮಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳುತ್ತೇನೆ. ಸಂದೇಶಗಳು ಮತ್ತು ಎಕ್ಸ್‌ ಮೂಲಕ ನನ್ನನ್ನು ತಲುಪಿದ ಎಲ್ಲರಿಗೂ ನನ್ನ ಧನ್ಯವಾದಗಳುʼʼ ಎಂದು ಬರೆದುಕೊಂಡಿದ್ದರು.

ಈ ಸುದ್ದಿಯನ್ನೂ ಓದಿ: Pawan Kalyan: ಸುದೀಪ್‌ ತಾಯಿ ನಿಧನಕ್ಕೆ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಸಂತಾಪ; ಕನ್ನಡದಲ್ಲೇ ಪತ್ರ