ಅಕ್ಬರ್ ನಾಮಾ
ಎಂ.ಜೆ.ಅಕ್ಬರ್
ವಯಸ್ಸೆಂಬ ಗುಸುಗುಸು ಈಗ ದೊಡ್ಡ ಅರಚಾಟವಾಗಿ ಬದಲಾಗಿದೆ. ನಾನಿನ್ನು ಬದುಕುತ್ತೇನೋ ಇಲ್ಲವೋ
ಎಂದು ನೀವು ಅನುಮಾನಿಸಲು ಆರಂಭಿಸಿದ ಕ್ಷಣ ದಿಂದಲೇ ನಿಮಗೆ ವಯಸ್ಸಾಗಲು ಶುರುವಾಗುತ್ತದೆ. ಸಾಯುತ್ತೇವೆ ಎಂಬುದು ಎಲ್ಲರಿಗೂ ಗೊತ್ತು. ಯಾವಾಗ ಸಾಯುತ್ತೇವೆ ಎಂಬುದಷ್ಟೇ ಪ್ರಶ್ನೆ. ಮುಂದೆಂದೋ ಬರಬಹುದು ಎಂಬ
ಯೋಚನೆಯಲ್ಲಿದ್ದ ಆ ಸಾವು ಈಗಲೇ ಯಾವಾಗ ಬೇಕಾದರೂ ಬರಬಹುದು ಎಂಬ ಯೋಚನೆ ಶುರುವಾದರೆ ಇದ್ದಕ್ಕಿದ್ದಂತೆ ನಮಗೆ ವಯಸ್ಸಾಗಿಬಿಡುತ್ತದೆ.
ಈ ರೂಪಾಂತರ ಯಾರ ಬದುಕಿನಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ಆಗಬಹುದು. 2012ರ ಒಲಿಂಪಿಕ್ಸ್ ಚಾಂಪಿ ಯನ್ ಒಬ್ಬ, ‘ಕ್ಯಾನ್ಸರ್ ಬಂದಕೂಡಲೇ ನನಗೆ 80 ವರ್ಷ ಆಗಿಬಿಟ್ಟಿತ್ತು’ ಎಂದು ಹೇಳಿದ್ದ. ಅಂದರೆ ಯೌವನದಿಂದ ತುಂಬಿ ತುಳುಕುತ್ತಿದ್ದ ಅವನು ಇದ್ದಕ್ಕಿದ್ದಂತೆ ವಯೋವೃದ್ಧನಂತೆ ಯೋಚಿಸಲು ಆರಂಭಿಸಿದ್ದ. ಸಾವನ್ನು ಎದುರುನೋಡುವವರು ಶೂನ್ಯವನ್ನು ಎದುರುನೋಡುತ್ತಿರುತ್ತಾರೆ. ಗಾಜಾದಲ್ಲಿ ಒತ್ತೆಯಾಳಾಗಿ ಕೂಡಿ ಹಾಕಲ್ಪಟ್ಟ ನತದೃಷ್ಟರು ಎಷ್ಟು ಸಲ ಸತ್ತಿರಬಹುದು? ಅಥವಾ ಪ್ಯಾಲೆಸ್ತೀನ್‌ನಲ್ಲಿ ಬಾಂಬ್‌ನಿಂದ ಧ್ವಂಸಗೊಂಡ ಕಟ್ಟಡದ ಅವಶೇಷಗಳಡಿ ಸಮಾಧಿಯಾದ ಮಗು ಎಷ್ಟು ಬದುಕನ್ನು ಕಳೆದುಕೊಂಡಿರಬಹುದು? ಆ ಬಾಂಬ್‌ನಲ್ಲೇ ‘ಪ್ರತೀಕಾರ ಎಷ್ಟು ಪಟ್ಟು ಬೇಕಾದರೂ ತೀವ್ರವಾಗಿರಬಹುದು’ ಎಂಬ ಸಂದೇಶವೂ ಇದ್ದಿರುತ್ತದೆ.
ಅದು ಇನ್ನೂ ಭಯಾನಕ. ಯುದ್ಧವೆಂದರೆ ಕ್ರೌರ್ಯ. ಅದಕ್ಕೆ ಬೇರಾವುದೇ ತತ್ವ ಅಥವಾ ಸಿದ್ಧಾಂತವಿಲ್ಲ. ಯುದ್ಧಕ್ಕೆ ನೀವು ಎಷ್ಟು ಬೇಕಾದರೂ ಸಮರ್ಥನೆ ನೀಡಬಹುದು. ಶಾಂತಿ ಸ್ಥಾಪನೆಗೆ ಯುದ್ಧವೇ ಬೇಕೆಂದು ವಾದಿಸಬಹುದು. ನನಗೆ ಅನ್ಯಾಯವಾಗಿದೆ, ಹೀಗಾಗಿ ಯುದ್ಧ ಮಾಡುತ್ತೇನೆ ಎಂದು ಸಮರ್ಥಿಸಿಕೊಳ್ಳಬಹುದು. ಆದರೆ ದಿನದ ಅಂತ್ಯಕ್ಕೆ ಯುದ್ಧವೆಂದರೆ ಹಿಂಸಾಚಾರವಲ್ಲದೆ ಮತ್ತೇನೂ ಅಲ್ಲ.
ಯುದ್ಧದಲ್ಲಿ ಒಂದಷ್ಟು ಬಿಲಿಯನೇರ್‌ಗಳು ಇನ್ನೊಂದಷ್ಟು ಒತ್ತೆಯಾಳುಗಳ ಸ್ವಾತಂತ್ರ ವನ್ನು ಖರೀದಿಸಲು ತುದಿಗಾಲಿನಲ್ಲಿ ನಿಂತಿರುತ್ತಾರೆ. ನಗದು ಹಣವು ಯುದ್ಧದ ಕರೆನ್ಸಿ ಅಲ್ಲ ಎಂದು ಅವರಿಗೆ ಯಾರೂ ಹೇಳಿಲ್ಲ. ಬಾಂಬ್ ದಾಳಿಯಲ್ಲಿ ಧ್ವಂಸಗೊಂಡ ಕಟ್ಟಡದ ಅವಶೇಷಗಳಲ್ಲಿ ಮುಚ್ಚಿಹೋದ ಹೆಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾರೂ ಆ ನಷ್ಟವನ್ನು ತುಂಬಿಕೊಡಲಾರರು. ದೇವರು ಮನುಷ್ಯನನ್ನು ಸೃಷ್ಟಿಸಿದ್ದು ಶಾಂತಿಗಾಗಿ ಅಲ್ಲ. ಶಾಂತಿ ಯೆಂಬುದು ಎರಡು ಯುದ್ಧಗಳ ನಡುವಿನ ವಿರಾಮವಷ್ಟೆ. ಶಾಂತಿಯ ಬಗ್ಗೆ ಪುಸ್ತಕ ಬರೆದರೆ ಮಾರಾಟ ವಾಗುವುದಿಲ್ಲ.
ಆದರೆ, ಯುದ್ಧದ ಬಗ್ಗೆ ಬರೆದ ಪುಸ್ತಕಗಳು ಬಿಸಿ ರೊಟ್ಟಿಯಂತೆ ಖರ್ಚಾಗುತ್ತವೆ. ಯುದ್ಧದ ಬಗ್ಗೆ ಬಂದ ಸಿನಿಮಾ ಗಳನ್ನು ಜನರು ಮುಗಿಬಿದ್ದು ನೋಡುತ್ತಾರೆ. ಎರಡು ಯುದ್ಧಗಳ ನಡುವಿನ ವಿರಾಮದ ಸಮಯವನ್ನು ನೋಡಲು ಬದುಕುಳಿದ ಅದೃಷ್ಟವಂತರು ಹಾಗೂ ಗುಂಡೇಟು ತಿನ್ನದೆ ಸಹಜವಾಗಿ ಸಾವನ್ನಪ್ಪಿ ಮಣ್ಣಾಗುವ ಅದೃಷ್ಟವನ್ನು ಪಡೆದವರು ಮುಂದಿನ ತಲೆಮಾರಿನಿಂದ ಒಂದಷ್ಟು ಸಮಯವನ್ನು ಸಾಲ ತೆಗೆದುಕೊಂಡಿರ ಬಹುದು. ಸಮಯ ಅಥವಾ ಕಾಲದಲ್ಲೇ ಸಮಾನತೆ ಇರಲು ಸಾಧ್ಯವಿಲ್ಲ ಅಂತಾದರೆ ನಾವೇಕೆ ಈ ಬದುಕಿನ ಬೇರೆ ಬೇರೆ ರಂಗಗಳಲ್ಲಿ ಸಮಾನತೆಯನ್ನು ನಿರೀಕ್ಷಿಸಬೇಕು? ನಮ್ಮ ಮನಸ್ಸಿಗೊಂದು ಹುಚ್ಚು. ಇದು ತರ್ಕಬದ್ಧವಾಗಿ ಯೋಚಿಸಲು ಹೋಗುತ್ತದೆ. ಹೀಗಾಗಿ ಯಾವುದನ್ನು ಯೋಚನೆ ಕೂಡ ಮಾಡಲು ಸಾಧ್ಯವಿಲ್ಲವೋ ಅದಕ್ಕೂ ಆಧಾರ ಹುಡುಕು ತ್ತದೆ. ಆ ಕಾರಣಕ್ಕಾಗಿಯೇ ನಮ್ಮ ಮನಸ್ಸು ಮನುಷ್ಯರನ್ನೂ ಮಾನವತೆಯನ್ನೂ ಪರ್ಯಾಯ ಪದಗಳು ಎಂದು ಭಾವಿಸಿದೆ.
ಮನುಷ್ಯರಿಗೆಲ್ಲ ಮಾನವೀಯತೆಯಿರುತ್ತದೆ ಎಂದು ನಾವೆಲ್ಲರೂ ಯೋಚಿಸುತ್ತೇವೆ. ಇದೊಂದು ಭ್ರಮೆ. ಆದರೆ ಈ
ಭ್ರಮೆಯಿಂದಲೂ ಪ್ರಯೋಜನವಿದೆ. ಇಲ್ಲದಿದ್ದರೆ, ಅಂದರೆ ಈ ಭ್ರಮೆ ಇಲ್ಲದಿದ್ದರೆ ನಾವು ಬದುಕಿನ ಜಂಜಡದಲ್ಲಿ ಇನ್ನಷ್ಟು ಕಳೆದುಹೋಗಬೇಕಾಗುತ್ತದೆ.
ಈ ಕಾರಣಕ್ಕಾಗಿಯೇ ನಮಗೆ ದೇವರು ಬೇಕು. ದೇವರು ಅಥವಾ ಧರ್ಮದ ಹೆಸರಿನಲ್ಲೇ ಇತಿಹಾಸದಲ್ಲಿ ಸಾಮೂಹಿಕ
ಹತ್ಯಾಕಾಂಡಗಳನ್ನು ನಡೆಸಿರುವುದು ನಮಗೆ ಗೊತ್ತಿದ್ದರೂ ನಮಗೆ ದೇವರು ಬೇಕು. ದೇವರಿದ್ದಾನೆ ಎಂಬ ನಂಬಿಕೆ ಯಲ್ಲೇ ನಮ್ಮ ಪ್ರಜ್ಞೆ ಜಾಗೃತವಾಗುತ್ತದೆ. ದೇವರಿದ್ದಾನೆ ಎಂಬ ನಂಬಿಕೆಯಲ್ಲೇ ಕೆಲವೊಮ್ಮೆ ನಾವು ಒಳ್ಳೆಯವ ರಾಗುತ್ತೇವೆ.
ದೇವರಿದ್ದಾನೆ ಎಂಬ ನಂಬಿಕೆಯಲ್ಲೇ ಕೆಲವೊಮ್ಮೆ ನಮ್ಮ ಬದುಕು ಸಹನೀಯವಾಗುತ್ತದೆ. ಆದರೆ ದೇವರಿದ್ದಾನೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ನಮಗೆ ನಿಜವಾಗಿಯೂ ಗೊತ್ತಿರುವುದು ಏನೆಂದರೆ, ಕೆಲವೊಮ್ಮೆ ನಮ್ಮೊಳ ಗಿನ ಸುಪ್ತಪ್ರಜ್ಞೆ ರಾತ್ರಿಯ ವೇಳೆ ಎದ್ದು ಕುಳಿತುಕೊಳ್ಳುತ್ತದೆ ಮತ್ತು ಪುನಃ ನಿದ್ದೆ ಬಾರದಂತೆ ಮನಸ್ಸನ್ನು ಕಲಕಿಬಿಡುತ್ತದೆ. ಮನುಷ್ಯನಿಗೆ ಸಾಮಾನ್ಯವಾಗಿ ದೇವರು ತಾತ್ವಿಕ ಕಾರಣಗಳಿಗಾಗಿ ಹಾಗೂ ಬದುಕುವ ಕಾರಣ
ಗಳಿಗಾಗಿ ಬೇಕು. ಸಾವಿನಿಂದ ಹಿಡಿದು ಸರಕಾರಿ ನೀತಿಗಳವರೆಗೆ, ಹಬ್ಬಕ್ಕೆ ಹೊಸ ಬಟ್ಟೆ ಕೊಳ್ಳುವುದರಿಂದ ಹಿಡಿದು ಆಣೆ ಮಾಡುವುದರವರೆಗೆ ಪ್ರತಿಯೊಂದಕ್ಕೂ ದೇವರು ಬೇಕು. ಬದುಕಿನ ಅನಿಶ್ಚಿತ ಸಂದರ್ಭಗಳಲ್ಲಿ ನಮಗೆ ದೇವರು ಬೇಕು.
ದೇವರನ್ನು ನಾವು ನಂಬಿಕೆಯೆಂದೋ ಅಥವಾ ಶೋಧನೆಯೆಂದೋ ಸ್ವೀಕರಿಸುತ್ತೇವೆ. ದೇವರು ಜನಸಾಮಾನ್ಯರಿಗೆ ಪ್ರಾಕ್ಟಿಕಲ್ ಅಗತ್ಯವಾಗಿದ್ದರೆ, ಸಾಧು ಸಂತರು ಅಥವಾ ಶ್ರೀಮಂತರಿಗೆ ದೇವರೆಂಬುದು ಸೈದ್ಧಾಂತಿಕ ಅನುಕೂಲ. ದೇವರು ಮನುಷ್ಯನ ಆದೇಶಗಳನ್ನು ಪಾಲಿಸುತ್ತಾನೆ. ಇದೇ ಹನ್ನೊಂದನೇ ದೈವಿಕ ನಿಯಮ. ಇದನ್ನೇ ಏಕೈಕ ದೇವನಿಯಮವನ್ನಾಗಿ ಮಾಡಿದರೂ ಸರಿ. ಬೆಟ್ಟದ ತುದಿಯಿಂದ ಮೋಸೆಸ್ ಹೇಳಿದ ಹತ್ತು ಕಮಾಂಡ್
ಮೆಂಟ್ ಗಳು (ದೈವಿಕ ನಿಯಮ) ಕೊಂಚ ಬೋರು ಹೊಡೆಸುವಂತಿವೆ. ಮೊದಲ ನಾಲ್ಕು ಕಮಾಂಡ್‌ಮೆಂಟ್‌ಗಳು
ನನ್ನನ್ನು ಮಾತ್ರ ಪೂಜಿಸಿ ಎಂಬಿತ್ಯಾದಿ ಸಾಮಾನ್ಯ ನಿಯಮಗಳು.
ಇವುಗಳನ್ನು ನೋಡಿದರೆ ದೇವರು ಎಷ್ಟು ನರ್ವಸ್ ಆಗಿದ್ದಾನೆ ಎಂಬುದು ತಿಳಿಯುತ್ತದೆ. ಮನುಷ್ಯ ಪೂಜಿಸುತ್ತಾನೆ ಎಂಬ ಏಕೈಕ ಕಾರಣಕ್ಕೆ ದೇವರು ಅಸ್ತಿತ್ವದಲ್ಲಿದ್ದಾನೆಯೇ? ನಂತರದ ಐದು ಕಮಾಂಡ್‌ಮೆಂಟ್‌ಗಳು ತೀರಾ ಸಾಮಾನ್ಯವಾದ ಅಥವಾ ಮೂಲಭೂತವಾದ ದಂಡ ಸಂಹಿತೆಯಂತಿವೆ. ಅಂದರೆ ಇಂಥ ಪಾಪಕ್ಕೆ ಇಂಥ ಶಿಕ್ಷೆ ಎಂಬುದನ್ನು ಹೇಳುವ ನಿಯಮಗಳವು. ನಿಮ್ಮ ಅಪ್ಪ-ಅಮ್ಮನನ್ನು ಗೌರವಿಸುವುದಕ್ಕೂ ದೇವರು ರೂಪಿಸಿದ ನಿಯಮಗಳು ಬೇಕು ಅಂತಾದರೆ ನೀವು ಬದುಕಿನಲ್ಲಿ ತುಂಬಾ ಅಸೂಕ್ಷ್ಮರಾಗಿದ್ದೀರಿ ಎಂದರ್ಥ. ನಿಮಗೆ ಒಳ್ಳೆಯ ಅಪ್ಪ ಇಲ್ಲದಿದ್ದರೆ ಅವನನ್ನು ನೀವೇ ಸೃಷ್ಟಿಸಿ ಎಂದು ಫ್ರೆಡರಿಕ್ ನೀಶೆ ಹೇಳಿದ್ದ.
19ನೇ ಶತಮಾನದ ಜರ್ಮನ್ ತತ್ವಶಾಸಜ್ಞ ನೀಶೆಯನ್ನು ನಾವು ಕೆಲವೊಮ್ಮೆ ತಪ್ಪಾಗಿ ಅರ್ಥೈಸಿಕೊಳ್ಳುತ್ತೇವೆ. ಅವನನ್ನು ವಿವಾದಿತ ವ್ಯಕ್ತಿಯನ್ನಾಗಿ ಮಾಡಿಬಿಟ್ಟಿದ್ದೇವೆ. ಆದರೆ ಒಳ್ಳೆಯ ಅಪ್ಪ ಇಲ್ಲದಿದ್ದರೆ ನೀವೇ ಒಳ್ಳೆಯ ಅಪ್ಪನನ್ನು ಸೃಷ್ಟಿಸಿಕೊಳ್ಳಿ ಎಂಬ ಅವನ ಉಪದೇಶ ಯಾವ ರೀತಿಯಲ್ಲಿ ನೋಡಿದರೂ ಬಹಳ ಒಳ್ಳೆಯ ಉಪದೇಶ. ದೇವರು ಸತ್ತುಹೋಗಿದ್ದಾನೆ ಎಂದೂ ನೀಶೆ ಹೇಳಿದ್ದ. ಅವನು ನಿಜಕ್ಕೂ ತತ್ವಜ್ಞಾನಿಯೇ ಆಗಿದ್ದು, ಪತ್ರಕರ್ತ
ಅಲ್ಲದಿದ್ದರೆ, ಈ ವಿಷಯದಲ್ಲಿ ಅವನು ತಪ್ಪು ಉಪದೇಶ ಮಾಡಿದ್ದಾನೆ. ಪತ್ರಕರ್ತರು ಕೆಲವೊಮ್ಮೆ ತಮ್ಮ ಸುದ್ದಿ ಯಲ್ಲಿ ಏನೂ ಸತ್ವವಿಲ್ಲದಿದ್ದರೂ ಒಳ್ಳೆಯ ಹೆಡ್‌ಲೈನ್ ಸಿಕ್ಕಿತು ಎಂಬ ಕಾರಣಕ್ಕೆ ಅದನ್ನು ಬರೆದುಬಿಡುತ್ತಾರೆ. ನೀಶೆ ಆ ಕಾಲದಲ್ಲೇ ಅದಕ್ಕಿಂತಲೂ ಬಹಳ ಮುಂದೆ ಹೋಗಿಬಿಟ್ಟಿದ್ದ. ಹೀಗಾಗಿ, ದೇವರು ಸರ್ವವ್ಯಾಪಿ ಆಗಿರುವುದರಿಂದ, ನೀಶೆಯ ವಿಷಯದಲ್ಲಿ ದೇವರೇ ಗೆಲುವಿನ ನಗೆ ಬೀರಿದ. ನೀಶೆಗೆ 44 ವರ್ಷವಾದಾಗ ಪಾರ್ಶ್ವವಾಯು ಹೊಡೆಯಿತು.
ಅದರ ಜತೆಗೆ ವ್ಯಾಸ್ಕುಲರ್ ಡೆಮೆನ್ಷಿಯಾ ಕೂಡ ಸೇರಿಕೊಂಡಿತು. ನಂತರ ಇನ್ನಷ್ಟು ಪಾರ್ಶ್ವವಾಯು ಪೀಡಿತನಾಗಿ ಅವನು ಬೇಗ ಸತ್ತುಹೋದ. ದೇವರ ಬಗ್ಗೆ ನಗೆಯಾಡಿದರೆ ಇನ್ನೇನಾಗುತ್ತದೆ! ಜಗತ್ತಿನಲ್ಲಿ ವಸ್ತುನಿಷ್ಠ ಸತ್ಯ ಎಂಬುದಿಲ್ಲ, ಎಲ್ಲವೂ ಅವರವರ ದೃಷ್ಟಿಕೋನಕ್ಕೆ ಸಂಬಂಧಿಸಿದ ಸತ್ಯವೇ ಆಗಿದೆ ಎಂದು ನೀಶೆ ಹೇಳಿದ್ದ. ಕೊನೆಗೆ, ಸಾವಿಗೆ ಒಂದೇ ದೃಷ್ಟಿಕೋನವಿದೆ ಎಂಬುದು ಅವನಿಗೆ ತಿಳಿಯಿತು. ಆದರೆ ಅಷ್ಟೊತ್ತಿಗೆ ಅವನು ಸಾಕಷ್ಟು ಪುಸ್ತಕ ಗಳನ್ನು ಬರೆದಾಗಿತ್ತು. ಅವುಗಳನ್ನೆಲ್ಲ ತಿದ್ದಿ ಬರೆಯಲು ಸಾಧ್ಯವಿರಲಿಲ್ಲ.
ಬದುಕಿನ ಅರ್ಥ ಶೋಧಿಸಲು ಇನ್ನೂ ಸಾಕಷ್ಟು ಸಮಕಾಲೀನ ಸಿದ್ಧಾಂತಗಳಿವೆ. ಅವುಗಳನ್ನೆಲ್ಲ ಅರ್ಥ ಮಾಡಿ ಕೊಳ್ಳುವುದರ ಬದಲು ಬದುಕಿನ ನೆರಳು ಕೂಡ ಕಾಣಿಸದ ಎತ್ತರದ ಶಿಖರಕ್ಕೆ ಹೋಗಿ ಕೆಳಗೆ ಹಾರಿಬಿಡಿ. ಆಗ ಇನ್ನೊಂದು ಶಿಖರದ ಬುಡಕ್ಕೆ ಬಂದು ಬೀಳುತ್ತೀರಿ. ಅಲ್ಲೇ ಮತ್ತೊಂದು ಶಿಖರದ ತುದಿಯೂ ಇರುತ್ತದೆ. ಅಲ್ಲಿ ನಿಮಗೆ ಸಾವಿನ ನೆರಳಿನ ಬೆಚ್ಚನೆಯ ಅಪ್ಪುಗೆ ಸಿಗುತ್ತದೆ. ಅಮೆನ್.
ನಾನು ಈ ಅಮೆನ್ ಪದದ ಅರ್ಥ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನಿಸಿದ್ದೇನೆ. ಏಕೆಂದರೆ ಡಿಕ್ಷನರಿ ಜತೆಗೆ ಯಾವತ್ತೂ ನಮಗೆ ದ್ವೇಷ ಇರಬಾರದು. ಗೊತ್ತಿಲ್ಲದ್ದನ್ನು ಶಬ್ದಕೋಶ ನೋಡಿ ತಿಳಿದುಕೊಳ್ಳಲು ಬಿಗುಮಾನ ಅಡ್ಡ ಬರಬಾರದು. ಅದು ಹಾಗಿರಲಿ. ಕೊನೆಗೂ ಅರ್ಥವಾಗಿದ್ದೇನೆಂದರೆ, ಪ್ರಾರ್ಥನೆಯ ಕೊನೆಗೆ ಹೇಳುವ ಪದ ಅಮೆನ್.
ಪ್ರವಾದಿ ಅಬ್ರಹಾಂ ಅವರು ದೇವರ ಸ್ವಯಂಘೋಷಿತ ಸ್ನೇಹಿತ. ಒಮ್ಮೆ ದೇವರು ತನ್ನೆಲ್ಲಾ ಶಕ್ತಿಯನ್ನೂ ಬಳಸಿ ಸೋಡೋಮ್ ನಗರವನ್ನು ನಿರ್ನಾಮ ಮಾಡಲು ಹೊರಟಾಗ ದೇವರ ಬಳಿ ಅಬ್ರಹಾಂ ಒಂದು ಪ್ರಶ್ನೆ ಕೇಳಿದರಂತೆ. ಸೋಡೋಮ್ ನಗರ ಎಲ್ಲಾ ರೀತಿಯ ಪಾಪಗಳಿಗೆ ಕುಖ್ಯಾತಿ ಪಡೆದಿತ್ತು.
ಬೈಬಲ್‌ನ ಮೊದಲ ಅಧ್ಯಾಯ ‘ಜೆನೆಸಿಸ್’ನಲ್ಲಿ ಇದರ ಬಗ್ಗೆ ಹೆಚ್ಚಿನ ವಿವರಗಳು ಸಿಗುತ್ತವೆ. ಆಸ್ತಿಕರು ಅಬ್ರಹಾಂ ಅವರ ಸಂದೇಶವನ್ನು ಪ್ರಾರ್ಥನೆಯೆಂದು ಕರೆಯುತ್ತಾರೆ. ಆದರೆ ನಿಜವಾಗಿ ನೋಡಿದರೆ ಅದು ಪ್ರಾರ್ಥನೆಗಿಂತ ಹೆಚ್ಚಾಗಿ ದೂಷಣೆಯಂತೆ ಇದೆ. ದೇವರಿಗೆ ಅಬ್ರಹಾಂ ಹೇಳಿದ್ದು ಇದು- ‘ಇಂಥ ಕೆಲಸ ಮಾಡಲು ಹೋಗಬೇಡಿ. ದುಷ್ಟರ ಜತೆಗೆ ಒಳ್ಳೆಯವರನ್ನೂ ನಾಶ ಮಾಡಬೇಡಿ. ದುಷ್ಟರೇನೋ ಅವರ ಪಾಪಕ್ಕೆ ಬೆಲೆ ತೆರುತ್ತಾರೆ, ಆದರೆ
ಒಳ್ಳೆಯವರು ಏಕೆ ಬೆಲೆ ತೆರಬೇಕು! ಇಂಥ ಕೆಲಸ ಮಾಡಲು ಹೋಗಬೇಡಿ. ಸಮಸ್ತ ಭೂಮಂಡಲದ ನ್ಯಾಯ ನಿರ್ಣಾಯಕ ವ್ಯಕ್ತಿ ಯಾವತ್ತೂ ನ್ಯಾಯವನ್ನೇ ಮಾಡಬೇಕಲ್ಲವೇ?’.
ಹಾಗಿದ್ದರೆ ಮಾರಣಾಂತಿಕ ಬಾಂಬ್‌ಗಳನ್ನು ಹಾಕಿ ಏಕೆ ದುಷ್ಟರ ಜತೆಗೆ ಮುಗ್ಧರನ್ನೂ ಸಾಯಿಸುತ್ತೀರಿ? ಬಾಂಬ್‌ಗೆ ಒಳ್ಳೆಯವರು ಮತ್ತು ಕೆಟ್ಟವರ ನಡುವಿನ ವ್ಯತ್ಯಾಸ ಗುರುತಿಸುವ ಶಕ್ತಿಯಿಲ್ಲ. ಅದಕ್ಕೆ ನೈತಿಕ ಯಾವುದು ಅನೈತಿಕ ಯಾವುದು ತಿಳಿಯುವುದಿಲ್ಲ. ಆದ್ದರಿಂದಲೇ ಅಬ್ರಹಾಂ ಅವರು, ‘ಸೋಡೋಮ್ ನಗರದಲ್ಲಿ ಕೇವಲ ಹತ್ತೇ ಹತ್ತು ಒಳ್ಳೆಯ ವ್ಯಕ್ತಿಗಳಿದ್ದರೂ ಅವರಿಗೆ ಮರಣ ದಂಡನೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಹೇಳಿದ್ದರು. ಒಳ್ಳೆಯ ವಾದ. ಆದರೆ, ಸ್ವರ್ಗದ ನ್ಯಾಯಾಲಯದಲ್ಲಿ ಅವರಿಗೆ ಅದೃಷ್ಟ ಕೈಹಿಡಿಯಲಿಲ್ಲ. ದೇವರು ಸಲರ್ ಮತ್ತು ಬೆಂಕಿ ಯನ್ನು ಬಳಸಿದ. ಏಸುಕ್ತಿಸ್ತ ಜನಿಸುವುದಕ್ಕೂ ಮೊದಲೇ ಶತಮಾನದ ಭೀಕರ ಬಾಂಬ್ ಪ್ರಯೋಗಿಸಿದ! ಹೀಗಾಗಿ ಸೋಡೋಮ್ ನಗರದ ಜತೆಗೆ ಗೊಮೊರಾಹ್ ಕೂಡ ಶಾಶ್ವತವಾಗಿ ಇತಿಹಾಸಕ್ಕೆ ಸೇರಿತು. ದೇವರಿಗೆ ತರ್ಕ ಮುಖ್ಯ ವಲ್ಲ, ಉದಾಹರಣೆ ಮುಖ್ಯ.
ಉದಾಹರಣೆಗಳು ವಿಶಿಷ್ಟವಾಗಿರಬೇಕು ಅಂದರೆ ಭಯಾನಕವಾಗಿರಬೇಕು. ಹೀಗಾಗಿ ದೇವರ ನ್ಯಾಯದಿಂದ
ಮನುಷ್ಯಕುಲ ಏನನ್ನೆಲ್ಲ ಕಲಿಯಬೇಕಿತ್ತೋ ಅದೆಲ್ಲವನ್ನೂ ಕಲಿಯಿತು. ಹಾಗಿದ್ದರೆ ಸಾವೇ ನ್ಯಾಯವೇ? ಗಲ್ಲಿನ ಕುಣಿಕೆ, ಎಲೆಕ್ಟ್ರಿಕ್ ಚೇರ್ ಅಥವಾ ಕೊಡಲಿ ಬಳಸಿ ವಿಽಸುವ ಮರಣ ದಂಡನೆಯ ಬದಲು ಹೆಚ್ಚಾಗಿ ಜೀವಾವಽ ಶಿಕ್ಷೆಯನ್ನು ನೀಡುವ ಕಾಲದಲ್ಲಿ ನಾವಿಂದು ಇದ್ದೇವೆ. ಸಾವೇ ನ್ಯಾಯವಾಗಿದ್ದರೆ, ನಾವೆಲ್ಲರೂ ಒಂದು ದಿನ ಸಾಯುವುದರಿಂದ, ಎಲ್ಲರೂ ಮರಣ ದಂಡನೆ ಅನುಭವಿಸುವಂಥ ಒಂದಿಲ್ಲೊಂದು ತಪ್ಪು ಮಾಡಿದ್ದೇವೆಂದೇ ಅಂದುಕೊಳ್ಳಬೇಕಾಗುತ್ತದೆ. ಪಾಪಿಗೂ ಸಾವು ಬರುತ್ತದೆ, ಸಂತನಿಗೂ ಸಾವು ಬರುತ್ತದೆ. ಹುತಾತ್ಮನೂ ಸಾಯುತ್ತಾನೆ, ಕೊಲೆಗಡುಕನೂ ಸಾಯುತ್ತಾನೆ. ಅವರೆಲ್ಲ ಏನು ತಪ್ಪು ಮಾಡಿದ್ದಾರೆ? ಆದರೆ ನಾವೆಲ್ಲರೂ ಒಂದು ತಪ್ಪು ಖಂಡಿತ ಮಾಡಿದ್ದೇವೆ.
ಬದುಕಿರುವುದೇ ನಮ್ಮ ತಪ್ಪು. ನಾವು ಹುಟ್ಟಿದಾಗಲೇ ನಮ್ಮ ಜೀನ್ ನಲ್ಲಿ ಸಾವು ಕೂಡ ಬರೆದಿರುತ್ತದೆ. ಏಕೆ ಎಂಬುದಕ್ಕೆ ನಮ್ಮಲ್ಲಿರುವ ಏಕೈಕ ಉತ್ತರ ಧರ್ಮ. ನಾವೇಕೆ ಹುಟ್ಟಿದ್ದೇವೆ ಮತ್ತು ನಾವೇಕೆ ಸಾಯುತ್ತೇವೆ ಎಂಬುದು ನಮಗೆ ಗೊತ್ತಿಲ್ಲ. ನಾವು ಕೇವಲ ಸಂಭ್ರಮಾಚರಣೆ ಮಾಡುತ್ತೇವೆ ಅಥವಾ ಶೋಕಾಚರಣೆ ಮಾಡುತ್ತೇವೆ. ಏಕೆ ಎಂಬುದು ನಮಗೆ ಗೊತ್ತಿಲ್ಲ. ಅದನ್ನು ಯೋಚಿಸುವುದಕ್ಕೂ ಹೋಗುವುದಿಲ್ಲ. ಅಸ್ತಿತ್ವದ ಅರ್ಥವೇನು ಮತ್ತು ಮೂಲಭೂತ ಉದ್ದೇಶವೇನು ಎಂಬುದು ಗೊತ್ತಿಲ್ಲದೆಯೇ ಅಂಡಲೆಯುತ್ತೇವೆ. ಒಟ್ಟಿಗೇ ಈಜದಿದ್ದರೆ ಒಟ್ಟಿಗೇ
ಮುಳುಗುತ್ತೇವೆ ಎಂಬಂಥ ಸಾಮಾನ್ಯ ಜ್ಞಾನವೇ ನಮಗೆ ಸಾಕು.
ದೇವರೇ, ನನ್ನನ್ನು ಕ್ಷಮಿಸು. ಬಹಳ ಒರಟಾಗಿ ಮಾತನಾಡುತ್ತಿದ್ದೇನೆಂದು ಸಿಟ್ಟಾಗಬೇಡ. ಆದರೆ, ಸೋಡೋಮ್
ನಗರದ ಮೇಲೆ ಬಳಸಿದ ನ್ಯಾಯವನ್ನೇ ನೀನು ನಿರಂತರವಾಗಿ ಬಳಸುತ್ತಾ ಹೋದರೆ ನಿನ್ನನ್ನು ಪ್ರಾರ್ಥಿಸುವುದಕ್ಕೂ ಈ ಭೂಮಿಯಲ್ಲಿ ಯಾರೂ ಉಳಿಯುವುದಿಲ್ಲ. ಸೃಷ್ಟಿಯಿಲ್ಲದೆ ಸೃಷ್ಟಿಕರ್ತ ಇಲ್ಲ. ಇದನ್ನು ಅರ್ಥಮಾಡಿ ಕೊಳ್ಳುವುದು ಕಷ್ಟವಲ್ಲ. ಹಳೆಯ ಒಡಂಬಡಿಕೆಯಲ್ಲಿ ಹೇಳಿರುವುದು ಕೇವಲ ರೂಪಕ ಎಂಬುದು ನನ್ನ ಶಂಕೆ. ತಪ್ಪು ಮಾಡಿದರೆ ಶಿಕ್ಷೆ ಕಾದಿದೆ ಎಂದು ಮನುಷ್ಯರನ್ನು ಎಚ್ಚರಿಸುವುದಕ್ಕೆ ಬಳಸಿದ ರೂಪಕವದು.
ಆದರೆ ಈಗ ಎಲ್ಲಿ ನೋಡಿದರೂ ಅನ್ಯಾಯ, ಅಸಮಾನತೆ, ಅನಿಶ್ಚಯತೆಗಳೇ ಕಾಣಿಸುತ್ತವೆ. ಅದಕ್ಕೆಲ್ಲ ನಾವು ಕಣ್ಣು
ಮುಚ್ಚಿಕೊಂಡಿದ್ದೇವೆ. ಇವುಗಳ ಬಗ್ಗೆ ತುಂಬಾ ಯೋಚಿಸಿದರೆ, ಅಥವಾ ಕೊಂಚ ಯೋಚಿಸಿದರೂ, ನಮ್ಮ ಪ್ರe ಮರುಗುತ್ತದೆ. ಆ ಸಂಕಟವನ್ನು ತಡೆದುಕೊಳ್ಳಲು ಆಗುವುದಿಲ್ಲ. ದೇವರೇ, ಸ್ವರ್ಗದಲ್ಲಿರುವ ನಮ್ಮ ತಂದೆಗೆ ನಿನ್ನ ಹೆಸರಿನ ಗೌರವ ಸಿಗಲಿ. ನಿನ್ನ ಸಾಮ್ರಾಜ್ಯದಲ್ಲಿ ಸ್ಥಾನ ಸಿಗಲಿ. ನಿನ್ನ ಆಡಳಿತವೇ ಎಲ್ಲೆಡೆ ಜಾರಿಗೆ ಬರಲಿ. ನೀನೇ ಎಲ್ಲವೂ ಆಗಲಿ. ಭೂಮಿಯಲ್ಲೂ ಸ್ವರ್ಗದಲ್ಲೂ ನೀನೇ ವ್ಯಾಪಿಸಿಕೊಳ್ಳಲಿ. ಆದರೆ ನಿನ್ನ ಅಸ್ತಿತ್ವ ಎಲ್ಲರಿಗೂ ತಿಳಿಯುವ ಸಮಯ ಬರುವವರೆಗೆ ದಯವಿಟ್ಟು ನೀನೇ ಸೃಷ್ಟಿಸಿದ ಈ ಜಗತ್ತಿನ ವಿದ್ಯಮಾನಗಳಿಗೆ ನನ್ನನ್ನು ಕುರುಡನನ್ನಾಗಿ ಮಾಡುವೆಯಾ? ಭಾವನೆಗಳು ಸಹಾಯಕ್ಕೆ ಬರುವುದಿಲ್ಲ.
ನಮಗೆ ಕೆಟ್ಟದ್ದು ಬೇಕಿಲ್ಲ. ಆದರೆ, ಮನುಷ್ಯನ ಜೀವಿತದಿಂದ ದುಷ್ಟತನವನ್ನು ಹೊರಹಾಕದೆ ನಮಗೆ ಕೆಟ್ಟದ್ದು ಬೇಡ ಅಂದರೆ ಹೇಗೆ ಸಾಧ್ಯ? ಬದುಕು ಒಳ್ಳೆಯದು ಮತ್ತು ಕೆಟ್ಟದ್ದರ ಮಿಶ್ರಣ. ಇಲ್ಲಿ ಒಂದೇ ಒಂದು ಸಮಾಧಾನಕರ ಬಹುಮಾನವಿದೆ. ಅದೇನು ಗೊತ್ತಾ? ಯಾವಾಗ ಬೇಕಿದ್ದರೂ ನಾವು ದೇವರನ್ನು ದೂಷಿಸಬಹುದು.
(ಲೇಖಕರು ಹಿರಿಯ ಪತ್ರಕರ್ತರು)
ಇದನ್ನೂ ಓದಿ: M J akbar column: ಚೀನಾದ ಬೆದರಿಕೆಗೆ ತೈವಾನ್ ಏಕೆ ಕೊಂಚವೂ ಹೆದರಿಲ್ಲ ?