Friday, 22nd November 2024

Puneeth Rajkumar Death Anniversary: ʼಅಪ್ಪುʼವಿನಿಂದ ʼರಾಜಕುಮಾರʼವರೆಗೆ ಪುನೀತ್ ಅಭಿನಯದ ಮರೆಯಲಾಗದ ಚಿತ್ರಗಳಿವು

Puneeth rajkumar

ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ತಯಾರಿಯಲ್ಲಿದ್ದ ಕನ್ನಡಿಗರೆಲ್ಲರ ಪಾಲಿಗೆ 2021ರ ಅಕ್ಟೋಬರ್ 29 ಅತ್ಯಂತ ದುಃಖದಾಯಕ ದಿನವಾಯಿತು. ಮನೆಮನೆಯಲ್ಲೂ ಚಿರಪರಿಚಿತರಾಗಿದ್ದ ಎಲ್ಲರ ಪ್ರೀತಿಯ ಅಪ್ಪು ಎಂದೇ ಕರೆಯಲ್ಪಡುತ್ತಿದ್ದ ಪುನೀತ್ ರಾಜ್‌ಕುಮಾರ್ (Puneeth Rajkumar Death Anniversary) ಹೃದಯ ಸ್ತಂಭನದಿಂದ 46ನೇ ವಯಸ್ಸಿನಲ್ಲಿ ಈ ದಿನ ಇಹಲೋಕ ತ್ಯಜಿಸಿದರು. ಈ ಘಟನೆ ನಡೆದು ಮೂರು ವರ್ಷ ಕಳೆದರೂ ಇಂದಿಗೂ ಅಪ್ಪುವಿನ ನೆನಪು, ಮುಗ್ಧ ನಗುವಿನ ಛಾಯೆ ಎಲ್ಲರ ಕಣ್ಣ ಮುಂದಿದೆ.

ಬಾಲ ಕಲಾವಿದನಾಗಿ ಹಲವಾರು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ಪುನೀತ್ 2002ರಲ್ಲಿ ‘ಅಪ್ಪು’ ಚಿತ್ರದ ಮೂಲಕ ಚಂದನವನಕ್ಕೆ ಕಾಲಿಟ್ಟರು. ಬಳಿಕ ಕನ್ನಡ ಚಿತ್ರರಂಗದ ಅತಿದೊಡ್ಡ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾದರು.
ಅವರ ಕೆಲವು ಚಿತ್ರಗಳು ಇಂದಿಗೂ ಮತ್ತೆಮತ್ತೆ ನೋಡಬೇಕು ಎಂದೆನಿಸುವಂತೆ ಮಾಡುತ್ತದೆ. ಅಂತಹ ಐದು ಪ್ರಮುಖ ಚಿತ್ರಗಳು ಈಗ ಒಟಿಟಿಯಲ್ಲಿ ಪ್ರಸಾರವಾಗುತ್ತಿದೆ. ಪುನೀತ್‌ ಮೂರನೇ ಪುಣ್ಯ ಸ್ಮರಣೆಯ ಈ ಸಂದರ್ಭದಲ್ಲಿ ಈ ಚಿತ್ರಗಳನ್ನು ವೀಕ್ಷಿಸಬಹುದು.

ಮಿಲನ (2007)

ರೇಡಿಯೋ ಜಾಕಿಯಾಗಿ ಪುನೀತ್ ರಾಜ್‌ಕುಮಾರ್ ಅಭಿನಯದ ಈ ಚಿತ್ರದಲ್ಲಿ ಪಾರ್ವತಿ, ಪೂಜಾ ಗಾಂಧಿ ಕಾಣಿಸಿಕೊಂಡಿದ್ದಾರೆ. ವಿವಾಹ ವಿಚ್ಛೇದನದ ಕಥಾ ಹಂದರವಿರುವ ಈ ಚಿತ್ರ ಈಗ ಝೀ5ನಲ್ಲಿ ಪ್ರಸಾರವಾಗುತ್ತಿದೆ.
ಗಣೇಶ್ ಅಭಿನಯದ ʼಮುಂಗಾರು ಮಳೆʼಯ ಅನಂತರ 365 ದಿನಗಳಿಗಿಂತ ಹೆಚ್ಚು ಪ್ರದರ್ಶನ ಕಂಡ ಎರಡನೇ ಭಾರತೀಯ ಚಿತ್ರವಾಗಿ ಇದು ಗುರುತಿಸಿಕೊಂಡಿದೆ.

ಪೃಥ್ವಿ (2010)

ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರುವ ಇದರಲ್ಲಿ ಪುನೀತ್ ಐಎಎಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆಯ ಬಗ್ಗೆ ಕಥಾ ಹಂದರವಿರುವ ಈ ಚಿತ್ರದಲ್ಲಿ ನಟಿ ಪಾರ್ವತಿ ಮತ್ತೆ ಪುನೀತ್ ಜೊತೆಯಾಗಿದ್ದಾರೆ. ಈ ಚಿತ್ರ ಈಗ ಜಿಯೋ ಸಿನೆಮಾದಲ್ಲಿ ವೀಕ್ಷಣೆಗೆ ಲಭ್ಯವಿದೆ. ಈ ಚಿತ್ರವನ್ನು ಮಲಯಾಳಂ ಮತ್ತು ತೆಲುಗಿನಲ್ಲಿ ಪೃಥ್ವಿ ಐಎಎಸ್ ಎಂದು ಡಬ್ ಮಾಡಲಾಗಿದೆ .

ಜಾಕಿ (2010)

ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ಕಷ್ಟಪಡದೆ ದುಡ್ಡು ಸಂಪಾದಿಸಬೇಕು ಎಂದು ಹೊರಡುವ ಜಾಕಿ ಪಾತ್ರದಲ್ಲಿ ಪುನೀತ್ ಕಾಣಿಸಿಕೊಂಡಿದ್ದಾರೆ. ಭಾವನಾ, ಹರ್ಷಿಕಾ ಪೂಣಚ್ಚ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ತೆಲುಗಿನಲ್ಲಿ ಡಬ್ ಮಾಡಲಾಗಿದೆ. ಅಂತಾರಾಷ್ಟ್ರಿಯ ಚಿತ್ರ ಮಂದಿರಗಳಲ್ಲೂ ಇದು ತೆರೆ ಕಂಡಿದೆ. ಈ ಚಿತ್ರ ಈಗ ಸನ್ ನೆಕ್ಸ್ಟ್ ನಲ್ಲಿ ಪ್ರದರ್ಶನ ಕಾಣುತ್ತಿದೆ.

ಪರಮಾತ್ಮ (2011)

ಪುನೀತ್ ಜೊತೆ ದೀಪಾ ಸನ್ನಿಧಿ ಕಾಣಿಸಿಕೊಂಡಿದ್ದು, ಯೋಗರಾಜ ಭಟ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಪರಮ್ ಜೀವನದಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಳ್ಳುವ ಕುತೂಹಲ ಹೊಂದಿರುತ್ತಾರೆ. ಇದರಿಂದ ಯಾವುದರಲ್ಲೂ ಆತನ ಮನಸ್ಸು ಸ್ಥಿರವಾಗಿ ನಿಲ್ಲುವುದಿಲ್ಲ. ಇದೇ ಕಥಾ ಹಂದರವನ್ನು ಹೊಂದಿರುವ ಈ ಚಿತ್ರ ಡಿಸ್ನಿ+ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿದೆ.

BBK 11: ತ್ರಿವಿಕ್ರಮ್ ಎಲ್ಲ ಸ್ಪರ್ಧಿಗಳ ಇನ್​ಸ್ಟಾ ಅಕೌಂಟ್ ನೋಡಿ ಬಂದಿದ್ದರು: ಬಿಗ್ ಬಾಸ್ ಮನೆಯೊಳಗೆ ಶಾಕಿಂಗ್ ಸ್ಟೇಟ್ಮೆಂಟ್

ರಾಜಕುಮಾರ (2017)

ಬಹುತೇಕ ಕನ್ನಡಿಗರನ್ನು ಚಿತ್ರ ಮಂದಿರಗಳಿಗೆ ಸೆಳೆದ ಈ ಚಿತ್ರ ಅತಿದೊಡ್ಡ ಹಿಟ್ಸ್. ನಟನ ಮರಣದ ಅನಂತರ “ಬೊಂಬೆ ಹೇಳುತೈತೆ’ ಹಾಡು ಹೆಚ್ಚು ಜನಪ್ರಿಯವಾಯಿತು. ವೃದ್ಧಾಶ್ರಮವನ್ನು ನೋಡಿಕೊಳ್ಳುವ ನಿಸ್ವಾರ್ಥ ವ್ಯಕ್ತಿಯಾಗಿ ಪುನೀತ್ ಇದರಲ್ಲಿ ಕಾಣಿಸಿಕೊಂಡಿದ್ದು, ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ವೀಕ್ಷಣೆಗೆ ಲಭ್ಯವಿದೆ. ಪ್ರಿಯಾ ಆನಂದ್ ಚಿತ್ರದ ನಾಯಕಿಯಾಗಿ ಪುನೀತ್ ಜೊತೆ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ.