Monday, 25th November 2024

Tumkur News: ಕಾಡುಗೊಲ್ಲರ ಪರಿಷತ್ ಉದ್ಘಾಟನೆ

ಚಿಕ್ಕನಾಯಕನಹಳ್ಳಿ: ಪಟ್ಟಣದ ತೀ.ನಂ.ಶ್ರೀ ಭವನದಲ್ಲಿ ಭಾನುವಾರ ಕರ್ನಾಟಕ ಕಾಡುಗೊಲ್ಲರ ಪರಿಷತ್ (ನೋಂದಾಯಿತ) ಚಿಕ್ಕನಾಯಕನಹಳ್ಳಿ ಘಟಕದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. 

ನಿವೃತ್ತ ಶಿಕ್ಷಣಾಧಿಕಾರಿ ಸಾ ಚಿ ನಾಗೇಶ್’ರವರು ಕರ್ನಾಟಕ ಕಾಡುಗೊಲ್ಲರ ಪರಿಷತ್ ತಾಲ್ಲೂಕು ಘಟಕವನ್ನು ಉದ್ಘಾಟಿಸಿದರು. ಪರಿಷತ್ತಿನ ರಾಜ್ಯಾಧ್ಯಕ್ಷರಾದ ಅರುಣ್ ಕೃಷ್ಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ವೀರಗಾರರಿಗೆ ಪುಷ್ಪಾರ್ಚನೆ ಸಲ್ಲಿಸಿ, ಕಂಚಿನ ದಂಡೆ, ಕಂಚಿನ ಕಡಗ, ಕರೇಗಲ್ಲು, ನಾರುನಲ್ಲಿ, ಸ್ವೇದಛತ್ರಿ, ಹಗಲುದೀವಟಿಗೆ, ನರಹರಿ, ನೌಪತ್ತು, ಮುಂತಾದ ನೂರಾರು ಬಿರುದಾಂಕಿತರಾದ ಚಿತ್ರಲಿಂಗ, ಕಾಟಿಮ್ಲಿಂಗ, 

ಪಾತೇಲಿಂಗ, ಜುಂಜಪ್ಪ, ಎತ್ತಪ್ಪ, ಮಾನವತಪ್ಪ, ಗೌರಸಂದ್ರದ ಮಾರಮ್ಮ, ನಂದೀಹಳ್ಳಿ ರಂಗಪ್ಪ, ಕರೆಮೆನಳ್ಳಿ ಮಾರಮ್ಮ, ಸಿದ್ದರಗುಡ್ಡಲು ಸಿದ್ಧಪ್ಪ ಮುಂತಾದ ದೇವಾನುದೇವತೆಗಳನ್ನು ಸ್ಮರಿಸುತ್ತಾ, 

ಚಂದ್ರಮೂತಿ, ಕರೆರಾಯ, ಮೆರೇರಾಯ, ಅಂಬೆರಾಯ, ತುಂಬೆರಾಯ, ಬೆಣ್ಣೆರಾಯ ಮುಂತಾದ ಕಾಡುಗೊಲ್ಲ ಕಳ್ಳುಬಳ್ಳಿ ಕುಲ ಬಂಧುಗಳನ್ನು ಉದ್ದೇಶಿಸಿ, ಮಾತನಾಡಿದ ಕಾಡುಗೊಲ್ಲರ ಸಂಘದ ಜಿಲ್ಲಾಧ್ಯಕ್ಷ ಕರಿಯಪ್ಪ ಚಂಗಾವರ, ಆದಿಮೂಲದ ಅಲೆಮಾರಿ ಪಶುಪಾಲಕ ಜನಾಂಗವಾದ ಕಾಡುಗೊಲ್ಲರಿಗೆ ಸರ್ಕಾರ ಮತ್ತು ವ್ಯವಸ್ಥೆಯ ನಿರ್ಲಕ್ಷ್ಯದ ಕಾರಣದಿಂದ ಆದ ಅನ್ಯಾಯಗಳನ್ನು ವಿಶ್ಲೇಷಿಸಿದರು. ಕುಲಶಾಸ್ತ್ರೀಯ ಅಧ್ಯಯನ ನಡೆಸುವಂತೆ ರಾಜ್ಯಾದ್ಯಂತ ಮೊದಲಿಗೆ ಸರ್ಕಾರದ ಮೇಲೆ ಒತ್ತಡ ತಂದ ಕಾಡುಗೊಲ್ಲರಿಗೆ ಸಿಗಬೇಕಾದ ಅದರಿಂದ ಸಿಗಬೇಕಿದ್ದ ಪ್ರಾತಿನಿಧ್ಯ ಸಿಗದಿದ್ದುದರಿಂದ ಖೇದ ವ್ಯಕ್ತಪಡಿಸಿದರು. ತಮ್ಮ ಹಕ್ಕುಗಳಿಗಾಗಿ

ರಾಜಕಾರಣಿಗಳನ್ನು ಅಥವಾ ಸಮುದಾಯದ ರಾಜಕೀಯ ಮುಖಂಡರನ್ನು ನೆಚ್ಚಿ ಕೂರದೆ, ಸಮಾಜವೇ ಸಂಘಟಿತವಾಗಿ ಹೋರಾಡಬೇಕು ಎಂದು ಅವರು ಕರೆ ಕೊಟ್ಟರು.

ಆದಿಯಿಂದಲೂ ಭೂಮಿತಾಯಿಯ ಪಶುಪಾಲಕ ಮಕ್ಕಳಾದ ಕಾಡುಗೊಲ್ಲರು, ಕಾಡು ಮತ್ತು ಕಾಡಿನ ಬಗೆ ಮತ್ತು ಹುಲ್ಲಿನ ತಳಿಗಳು ಹಾಗೂ ವನ್ಯಜೀವಿಗಳ ಒಡನಾಟದ ಜೊತೆಗೆ ಶತಶತಮಾನಗಳ ನಂಟುಳ್ಳವರು. ಕಾಡಿಗೂ ಗೊಲ್ಲ ಸಮಾಜಕ್ಕೂ ಅಂಟಿದ ನಂಟೇ ಅಡವಿಮಕ್ಕಳ ಚರಿತ್ರಗಾಥೆ. ಅವರ ಈ ನಂಟಿನಿಂದ ಕಟ್ಟಲ್ಪಟ್ಟ ಕಾವ್ಯ ದೇಸೀಚಿತ್ತದ ಬನಿಯನ್ನು ಕನ್ನಡಕ್ಕೆ, ಕನ್ನಡ ಭಾಷೆಗೆ ಬಸಿದುಕೊಳ್ಳಲು ಸಾಧ್ಯವಾಯಿತು ಎಂಬುದನ್ನು ವಿವರಿಸಿದ ಕರ್ನಾಟಕ ರಾಜ್ಯ ಅಲೆಮಾರಿ  ಬುಡಕಟ್ಟು ಮಹಾಸಭಾದ ಜಿಲ್ಲಾಧ್ಯಕ್ಷ ಉಜ್ಜಜ್ಜಿ ರಾಜಣ್ಣ, ಕಾಡುಗೊಲ್ಲರಿಗೆ ಸಲ್ಲಬೇಕಾದ ಪಾಲು ಸಿಕ್ಕಿದರೆ ಸಾಕು. ಕಾಡುಗೊಲ್ಲರು ಹೆಚ್ಚಿನ್ನೇನೂ ಬೇಡುತ್ತಿಲ್ಲ. ಎಲ್ಲ ಸಮುದಾಯಗಳಿಗೆ ದಕ್ಕಿದಂತೆ ಕಾಡುಗೊಲ್ಲರಿಗೂ ಸಮಪಾಲು ದಕ್ಕಬೇಕು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜವಾಬ್ದಾರಿ ವಹಿಸಿ  ಕೆಲಸ ಮಾಡಬೇಕು ಎಂದರು.

ಗಾಯಕ-ಕಲಾವಿದ ಮೋಹನ್, ತನಗೆ ಇವತ್ತು ದಕ್ಕಿರುವ ಪ್ರಾಮುಖ್ಯತೆಗೆ ಕಾರಣವೇ, ಕುಲದ ಗಾಯನ ಕಲೆಗಾರಿಕೆ. ಕುಲಮೂಲದಿಂದ ತನಗೆ ಸಿಕ್ಕ ಬಳುವಳಿಯಿಂದಲೇ ತಾನಿಂದು ಖ್ಯಾತಿ ಪಡೆದಿರುವುದು ಎಂದು ಧನ್ಯರಾಗಿ, ಜುಂಜಪ್ಪನ ನಾಲ್ಕು ಸಾಲು ಹಾಡಿ ನೆರೆದಿದ್ದವರನ್ನು ರಂಜಿಸಿದರು. 

ತಿಪಟೂರಿನ ಕುಮಾರ್ ಆಸ್ಪತ್ರೆಯ ಡಾ.ಶ್ರೀಧರ್ ಮಾತನಾಡಿ, ಕಾಡುಗೊಲ್ಲ ಜನಾಂಗ ತನ್ನ ಹಟ್ಟಿಗಳನ್ನು ತಾನೇ ಸುಧಾರಿಸುವಂತಾಗಲಿ. ಒಬ್ಬ ಅಧಿಕಾರಿ ಅಥವಾ ಒಬ್ಬ ನ್ಯಾಯಾಧೀಶ ನಿಮ್ಮ ಹಟ್ಟಿಗಳಿಗೆ ಬಂದು ‌ನಿಮಗೆ ತಿಳಿಹೇಳುವುದು ನಿಲ್ಲಲಿ. ನಾನು ಸದಾ ಈ ಸಮುದಾಯದ ಬೆಂಬಲಕ್ಕೆ ನಿಂತಿರುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ, ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಈ ಸಂದರ್ಭದಲ್ಲಿ, ಸಾ ಚಿ ನಾಗೇಶ್, ಅರುಣ್ ಕೃಷ್ಣಯ್ಯ, ರಾಜಣ್ಣ, ಬಿ ರಾಜಣ್ಣ, ಉಜ್ಜಜ್ಜಿ ರಾಜಣ್ಣ, ಶಿವಣ್ಣ ಸಿ, ನಿಂಗಮ್ಮ ರಾಮಯ್ಯ, ಹೊನ್ನಮ್ಮ ಶೇಷಯ್ಯ, ಕರಿಯಪ್ಪ ಚಂಗಾವರ ಸೇರಿದಂತೆ ಅನೇಕಮಂದಿ ಸಮುದಾಯದ ಮುಖಂಡರು ಸೇರಿದ್ದರು.