ವಾಷಿಂಗ್ಟನ್: ನವೆಂಬರ್ 5 ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ (US Elections) ಕಣದಲ್ಲಿರುವ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಸೇರಿದಂತೆ ಯಾರಿಗೂ ಬೆಂಬಲ ವ್ಯಕ್ತಪಡಿಸಲು ನಿರಾಕರಿಸಿದ ಅಮೆರಿಕದ ಪ್ರಮುಖ ಪತ್ರಿಕೆ ವಾಷಿಂಗ್ಟನ್ ಪೋಸ್ಟ್ ಒಂದೇ ದಿನದಲ್ಲಿ 2 ಲಕ್ಷ ಚಂದಾದಾರರನ್ನು ಕಳೆದುಕೊಂಡಿದೆ. ಬಿಲಿಯನೇರ್ ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್ ಈ ಪತ್ರಿಕೆಯ ಮಾಲೀಕರಾಗಿದ್ದು ಯಾರಿಗೂ ಬೆಂಬಲ ವ್ಯಕ್ತಪಡಿಸುವುದಿಲ್ಲ ಎಂಬ ತಮ್ಮ ನಿರ್ಧಾರವನ್ನು ಪ್ರಕಟಿಸಿದ ಬಳಿಕ ಅವರಿಗೆ ಹಿನ್ನಡೆಯಾಗಿದೆ ಎನ್ನಲಾಗಿದೆ.
ಸೋಮವಾರ ಬೆಜೋಸ್ ವಾಷಿಂಗ್ಟನ್ ಪೋಸ್ಟ್‌ನ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದು “ಸರಿಯಾದದ್ದು” ಮತ್ತು “ನಮ್ಮ ನೈತಿಕತೆಯ ವಿಚಾರ” ಎಂದು ಹೇಳಿದ್ದಾರೆ. ಈ ನಿರ್ಧಾರವನ್ನು ಆಂತರಿಕವಾಗಿ ತೆಗೆದುಕೊಳ್ಳಲಾಗಿದೆ. ಪತ್ರಿಕೆಯು ಡೊನಾಲ್ಡ್ ಟ್ರಂಪ್ ಅಥವಾ ಕಮಲಾ ಹ್ಯಾರಿಸ್ ಅವರಿಂದ ಪ್ರಭಾವಿತವಾಗಿಲ್ಲ ಎಂದು ಹೇಳಿದೆ. ಹಾಗೆಂದು ಈ ಅನ್‌ಫಾಲೋ ಪ್ರಸಂಗ ಸುಮ್ಮನೆ ನಡೆದಿಲ್ಲ.
ಪತ್ರಿಕೆಯ ಸಂಪಾದಕೀಯ ಸಿಬ್ಬಂದಿ ಡೆಮಾಕ್ರಟಿಕ್ ಅಭ್ಯರ್ಥಿ ಹ್ಯಾರಿಸ್ ಅವರನ್ನು ಬೆಂಬಲಿಸಲು ಸಿದ್ಧರಾಗಿದ್ದರು. ಆದರೆ ಪ್ರಕಾಶಕ ವಿಲ್ ಲೂಯಿಸ್ ಅಕ್ಟೋಬರ್ 25ರಂದು ಭಿನ್ನ ಹೇಳಿಕೆ ನೀಡಿದ್ದರು. ಅಭ್ಯರ್ಥಿಯನ್ನು ಆಯ್ಕೆ ಮಾಡುವ ನಿರ್ಧಾರ ನಮ್ಮ ಓದುಗರು ತಮ್ಮದೇ ಆದ ಆಯ್ಕೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದ್ದರು.
ಇದಾದ ಬಳಿಕ ಓದುಗರು ಅನ್‌ಫಾಲೋ ಶುರು ಮಾಡಿದ್ದಾರೆ. ಸೋಮವಾರ ಮಧ್ಯಾಹ್ನದ ವೇಳೆಗೆ 2 ಲಕ್ಷಕ್ಕೂ ಹೆಚ್ಚು ಜನರು ವಾಷಿಂಗ್ಟನ್ ಪೋಸ್ಟ್‌ನ ಚಂದಾದಾರಿಕೆ ರದ್ದುಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಚಂದಾದಾರರಲ್ಲಿ ಸುಮಾರು ಶೇಕಡಾ 8ರಷ್ಟು. ಇದರಲ್ಲಿ ಪತ್ರಿಕೆಯ ಪ್ರಿಂಟ್ ಆವೃತ್ತಿಯೂ ಸೇರಿದೆ.
ನಿರ್ಧಾರ ಸಮರ್ಥಿಸಿಕೊಂಡ ಜೆಫ್ ಬೆಜೋಸ್
ವಾಷಿಂಗ್ಟನ್ ಪೋಸ್ಟ್ ಸೋಮವಾರ ಸಂಜೆ ಮಾಲೀಕರಿಂದ ಟಿಪ್ಪಣಿ ಹೊರಡಿಸಿತು. ಅದರಲ್ಲಿ ಬೆಜೋಸ್, ಅಧ್ಯಕ್ಷೀಯ ಅನುಮೋದನೆಗಳು ಚುನಾವಣೆಯ ಮಾನದಂಡಗಳನ್ನು ಸೂಚಿಸಲು ಸಾಧ್ಯವಿಲ್ಲ. ಅಧ್ಯಕ್ಷೀಯ ಅನುಮೋದನೆಗಳು ಪಕ್ಷಪಾತದ ಗ್ರಹಿಕೆ ಸೃಷ್ಟಿಸುತ್ತದೆ. ಅದು ಸ್ವಾತಂತ್ರ್ಯರಹಿತತೆಯ ಗ್ರಹಿಕೆಯಾಗಿರುತ್ತದೆ ಎಂದು ಹೇಳಿದ್ದಾರೆ. ಇದು ತಾತ್ವಿಕ ನಿರ್ಧಾರ ಮತ್ತು ಅದು ಸರಿಯಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: US elections : ಅಮೆರಿಕದಲ್ಲಿ ಅರ್ಲಿ ವೋಟಿಂಗ್ ಪ್ರಾರಂಭ
ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮತ್ತು ಬಿಜೋಸ್ ಸ್ಥಾಪನೆಯ ಬ್ಲೂ ಒರಿಜಿನ್ ಕಂಪನಿಯ ಸಿಇಒ ಡೇವ್ ಲಿಂಪ್ ನಡುವಿನ ಅಕ್ಟೋಬರ್ 25 ರಂದು ನಡೆದ ಸಭೆಗೂ ಈ ನಿರ್ಧಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬೆಜೋಸ್ ಹೇಳಿದ್ದಾರೆ.