Friday, 20th September 2024

ಅಂತರ್ಜಲ ರಕ್ಷಣೆಗೆ ಯೋಜನೆಗಳ ಜಾರಿ ಅಗತ್ಯ

ಅನಿಸಿಕೆ

ಸಂದೀಪ್ ಶರ್ಮಾ

ಚಳಿಗಾಲ ಶುರುವಾಗಿದೆ, ಮಕರ ಸಂಕ್ರಾಂತಿ ಕಳೆಯುತ್ತಿದ್ದಂತೆ ಬಿಸಿಲಿನ ಝಳ ಮೆಲ್ಲನೆ ಹೆಚ್ಚುತ್ತದೆ. ಬಿಸಿಲಿನ ತಾಪಮಾನ ಅಂತರ್ಜಲದ ಮಟ್ಟವನ್ನು ಕ್ಷೀಣಿಸುತ್ತದೆ, ಮತ್ತೊಮ್ಮೆ ನಾವೆಲ್ಲರೂ ಜಲಕಂಟಕವನ್ನು ಎದುರಿಸಬೇಕಾಗುತ್ತದೆ.

ವರ್ಲ್ಡ್‌ವೈಡ್ ಫಂಡ್ ಫಾರ್ ನೇಚರ್‌ನ ವರದಿಯ ಪ್ರಕಾರ ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಹುಬ್ಬಳ್ಳಿ – ಧಾರವಾಡ ನಗರಗಳು ಸಹ ೨೦೫೦ರ ವೇಳೆಗೆ ಜಲಕಂಟಕವನ್ನು ಎದುರಿಸಲಿವೆ ಎಂದು ತನ್ನ ಅಧ್ಯಯನದಲ್ಲಿ ತಿಳಿಸಿದೆ. ಅಂತಹ ಅಪಾಯದ ಮುನ್ಸೂಚನೆ ಪ್ರತಿ ವರುಷವು ಇತರ ಅಧ್ಯಯನಗಳಿಂದ ತಿಳಿದುಬರುತ್ತದೆ. ಆದರೆ ಸರಕಾರದ ಮಟ್ಟದಗಲೀ, ಜನ ಸಮುದಾಯ ದಗಲೀ ಇನ್ನೂ ಜಲ ಜಾಗೃತಿ ಮೂಡದಿರುವುದು ಆತಂಕಕಾರಿ. ಹವಾಮಾನ ವೈಪರೀತ್ಯದ ಬಿಸಿ ಇತ್ತೀಚಿನ ದಿನಗಳಲ್ಲಿ ಒಂದೇ ಸಮನೆ ಹೆಚ್ಚುತ್ತಲಿದ್ದು, ಅತಿವೃಷ್ಟಿ-ಅನಾವೃಷ್ಟಿ ಸಾಮಾನ್ಯ ಎನಿಸಿಬಿಟ್ಟಿವೆ.

ನದಿಯಂಥ ದೊಡ್ಡ ಜಲಮೂಲದಿಂದ ಬಹುದೂರದಲ್ಲಿರುವ ಈ ನಗರಗಳಿಗೆ ತುಂಬಾ ದೂರದಿಂದ ನೀರು ಸರಬರಾಜಾಗಿ ಬರುತ್ತದೆ. ಹಾಗೆ ತಂದ ನೀರನ್ನು ಬಳಕೆ ಮಾಡುವಲ್ಲಿ ಜನ ಗರಿಷ್ಠ ಕಾಳಜಿಯನ್ನು ತೋರಬೇಕಿತ್ತು. ಆದರೆ ನಿರ್ಲಕ್ಷ್ಯದ
ಪರಮಾವಧಿ ಎದ್ದು ಕಾಣುತ್ತಿದೆ. ನಗರೀಕರಣದ ಅತಿಯಾದ ದಾಹ ಮತ್ತು ಮಳೆನೀರು ಇಂಗಿಸುವ ಬಗ್ಗೆ ಜನರಲ್ಲಿರುವ ನಿರ್ಲಕ್ಷ್ಯವು ಸಮಸ್ಯೆಯು ಬಿಗಡಾಯಿಸುವಂತೆ ಮಾಡಿವೆ. ಕೊಳವೆ ಬಾವಿಗಳನ್ನು ಬೇಕಾಬಿಟ್ಟಿಯಾಗಿ ಕೊರೆಯುತ್ತಿರುವ ಪ್ರವೃತ್ತಿಯೂ ಹೆಚ್ಚಿದ್ದರಿಂದ ಅಂತರ್ಜಲಮಟ್ಟ ಕೂಡ ಪಾತಾಳ ಕಂಡಿದೆ.

ಮಳೆನೀರು ಸಂಗ್ರಹ ಕಡ್ಡಾಯದ ನಿಯಮ ಕಾಗದದಲ್ಲಿ ಮಾತ್ರ ಇದೆ. ಹೀಗಾಗಿ ಪ್ರತೀ ಮಳೆಗಾಲದಲ್ಲಿ ನೂರಾರು ಟಿಎಂಸಿ ಅಡಿಗಳಷ್ಟು ಶುದ್ಧನೀರು ರಸ್ತೆ ಹಾಗೂ ಚರಂಡಿಗಳ ಪಾಲಾಗುತ್ತಿದೆ. ಮಳೆನೀರು ಸಾಗಿಸುವ ರಾಜಕಾಲುವೆಗಳು ಬಹುಪಾಲು ಒತ್ತುವರಿಯಾಗಿದ್ದರಿಂದ ಸಣ್ಣ ಮಳೆಗೂ ನಗರ ಪ್ರವಾಹದಂತೆ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಕಟ್ಟಡ ನಿರ್ಮಾಣ ಮಾಡು ವವರು ಜಲಮಂಡಳಿಯು ಸಂಸ್ಕರಿಸಿದ ತ್ಯಾಜ್ಯ ನೀರನ್ನೇ ಖರೀದಿಸಿ ಬಳಕೆ ಮಾಡಬೇಕು ಎಂಬ ನಿಯಮವಿದ್ದರೂ ಅದರ ಅನುಷ್ಠಾನ ಅಧಿಕಾರಿಗಳಿಗೂ ಬೇಕಿಲ್ಲ, ಜನರಿಗೂ ಬೇಕಿಲ್ಲ. ಬೆಂಗಳೂರಿನ ಯಾವ ದಿಕ್ಕಿನಲ್ಲಿ ನೋಡಿದರೂ ಗಗನಚುಂಬಿ ಕಟ್ಟಡಗಳ ನಿರ್ಮಾಣದ್ದೇ ಭರಾಟೆ.

ಬಹುತೇಕ ನಿರ್ಮಾಣ ಚಟುವಟಿಕೆಗಳಿಗೆ ಅಂತರ್ಜಲವೇ ಮುಖ್ಯ ಆಧಾರ. ಇನ್ನು, ಅತಿಕ್ರಮಣಕ್ಕೆ ಅವಕಾಶ ಕೊಟ್ಟಿದ್ದಲ್ಲದೆ, ಕೊಳಚೆ ನೀರನ್ನೂ ಒಡಲಿಗೆ ಹರಿಸಿದ ಸ್ಥಳೀಯ ಸಂಸ್ಥೆಗಳೇ ಕೆರೆಗಳ ಇಂದಿನ ದುಃಸ್ಥಿತಿಗೆ ನೇರ ಹೊಣೆ. ಕೆರೆಗಳ ಬಫರ್ (ಮೀಸಲು) ವಲಯವನ್ನು ಪ್ರವಾಹ ತಡೆಯುವ ನೈಸರ್ಗಿಕ ಬೋಗುಣಿ ಎಂದೇ ಗುರುತಿಸಲಾಗುತ್ತದೆ. ಜಲಮೂಲಗಳ ರಕ್ಷಣೆಗೆ ಸುಪ್ರೀಂ ಕೋರ್ಟ್ ಹಾಗೂ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಹಲವು ಆದೇಶಗಳನ್ನು ನೀಡಿವೆ. ಅವುಗಳನ್ನು ಸ್ಥಳೀಯ ಸಂಸ್ಥೆಗಳು ಚಾಚೂತಪ್ಪದೆ ಪಾಲಿಸಬೇಕು. ಸಂಸ್ಕರಿಸಿದ ನೀರಿನ ಬಳಕೆಗೆ ಸಂಬಂಧಿಸಿದಂತೆ ಜನರಲ್ಲಿ ಏಕೋ ತುಚ್ಛ ಭಾವ. ಸಂಸ್ಕರಿಸಿದ ನೀರು ಶುದ್ಧವಲ್ಲ ಎಂದು ಮೂಗು ಮುಚ್ಚಿಕೊಳ್ಳುವವರೇ ಹೆಚ್ಚು.

ಇನ್ನಿತರ ದೇಶದಲ್ಲಿ ಮೂರು ಹಂತಗಳಲ್ಲಿ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕುಡಿಯುವ ಉದ್ದೇಶಕ್ಕೂ ಬಳಸಲಾಗುತ್ತಿದೆ. ಸಂಸ್ಕರಣೆ ಮಾಡಿದ ನೀರಿನ ವಿಷಯವಾಗಿ ನಾಗರಿಕರಲ್ಲಿ ಮೂಡಿರುವ ಎಲ್ಲ ಸಂಶಯ ಗಳನ್ನು ನಿವಾರಿಸುವತ್ತ ಜಲಮಂಡಳಿ ಕಾರ್ಯೋ ನ್ಮುಖವಾಗಲೇಬೇಕಾದ ಅನಿವಾರ್ಯತೆ ಇದೆ. ಕೆರೆಗಳ ಒತ್ತುವರಿ ಮತ್ತು ಅದರ ಪಾತ್ರಕ್ಕೆ ಒಂದು ಕಡೆಯಿಂದ ಕಟ್ಟಡ ತ್ಯಾಜ್ಯ ಸುರಿಯುತ್ತಾ ಹೋಗಿ ಅದನ್ನು ಅತಿಕ್ರಮಿಸುವುದು ಭೂಗಳ್ಳರಿಗೆ ನೀರು ಕುಡಿದಷ್ಟು ಸುಲಭವಾಗಿಬಿಟ್ಟಿದೆ.

ಬಹುತೇಕ ಕೆರೆಗಳಿಗೆ ಬೇಲಿ ಇಲ್ಲ, ತಡೆಗೋಡೆಯೂ ಇಲ್ಲ. ಕಾವಲು ವ್ಯವಸ್ಥೆ ಕೇಳುವುದೇ ಬೇಡ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಈಗಿನ ಪರಿಸ್ಥಿತಿ. ಕೆರೆಗಳ ಗಡಿ ರಕ್ಷಣೆ ಆದ್ಯತೆಯಾಗಬೇಕು.