Tuesday, 26th November 2024

Washington Sundar: ವಾಷಿಂಗ್ಟನ್‌ ಸುಂದರ್‌‌ ಖರೀದಿಗೆ 3 ಪ್ರಾಂಚೈಸಿಗಳ ಮಧ್ಯೆ ತೀವ್ರ ಪೈಪೋಟಿ

ಮುಂಬಯಿ: ನ್ಯೂಜಿಲೆಂಡ್‌ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದ ವಾಷಿಂಗ್ಟನ್‌ ಸುಂದರ್‌(Washington Sundar) ಅವರನ್ನು ಐಪಿಎಲ್‌ ಮೆಗಾ ಹರಾಜಿನಲ್ಲಿ(ipl 2025 mega auction) ಖರೀದಿಸಲು ಮೂರು ತಂಡಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ವರದಿಯ ಪ್ರಕಾರ ಮುಂಬೈ ಇಂಡಿಯನ್ಸ್‌, ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಗುಜರಾತ್‌ ಟೈಟಾನ್ಸ್‌ ತಂಡಗಳು ಸುಂದರ್‌ ಖರೀದಿಗೆ ಮುಂದಾಗಿರುವ ತಂಡಗಳೆಂದು ತಿಳಿದುಬಂದಿದೆ. ವಾಷಿಂಗ್ಟನ್‌ ಸುಂದರ್‌ ದ್ವಿತೀಯ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 7, ದ್ವಿತೀಯ ಇನಿಂಗ್ಸ್‌ನಲ್ಲಿ 4 ವಿಕೆಟ್‌ ಸೇರಿ ಒಟ್ಟು 11 ವಿಕೆಟ್‌ ಕೆಡವಿದ್ದರು. ಹೀಗಾಗಿ ಅವರ ಖರೀದಿಗೆ ತಂಡಗಳು ಆಸಕ್ತಿ ವಹಿಸಿದೆ. ಪ್ರಸ್ತುತ ಸುಂದರ್‌ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸದಸ್ಯನಾಗಿದ್ದಾರೆ.

25 ವರ್ಷದ ಸುಂದರ್‌ ಇದುವರೆಗೆ ಮೂರು ತಂಡಗಳ ಪರ ಐಪಿಎಲ್‌ ಆಡಿದ್ದಾರೆ. ಒಟ್ಟು 60 ಪಂದ್ಯಗಳನ್ನಾಡಿ 378 ರನ್‌ ಮತ್ತು 37 ವಿಕೆಟ್‌ ಉರುಳಿಸಿದ್ದಾರೆ. 16 ರನ್‌ಗೆ 3 ವಿಕೆಟ್‌ ವೈಯಕ್ತಿಕ ಶ್ರೇಷ್ಠ ಬೌಲಿಂಗ್‌ ಸಾಧನೆಯಾಗಿದೆ. 2017ರಲ್ಲಿ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ತಂಡದ ಪರ ಆಡುವ ಮೂಲಕ ಐಪಿಎಲ್‌ ಜರ್ನಿ ಆರಂಭಿಸಿದ್ದರು.

ಇದನ್ನೂ ಓದಿ IPL 2025: ಡೆಲ್ಲಿ ತೊರೆದು ಗುರುವಿನ ತಂಡ ಸೇರಲು ಮುಂದಾದ ಶಿಷ್ಯ ಪಂತ್‌

ಹಾಲಿ ರನ್ನರ್‌ ಅಪ್​ ‌ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ದಕ್ಷಿಣ ಆಫ್ರಿಕಾದ ಹೆನ್ರಿಕ್​ ಕ್ಲಾಸೆನ್​ರನ್ನು 23 ಕೋಟಿ ರೂ.ಗೆ ರಿಟೇನ್​ ಮಾಡಿಕೊಳ್ಳಲು ಮುಂದಾಗಿದೆ. ಜತೆಗೆ ಆಸೀಸ್‌ನ ಪ್ಯಾಟ್​ ಕಮ್ಮಿನ್ಸ್​ (18 ಕೋಟಿ ರೂ.), ಅಭಿಷೇಕ್​ ಶರ್ಮ (14 ಕೋಟಿ ರೂ.) ಅವರನ್ನೂ ರಿಟೇನ್​ ಮಾಡಿಕೊಳ್ಳಲಿದೆ ಎನ್ನಲಾಗಿದೆ. ಈ ಬಾರಿ ಹರಾಜಿನಲ್ಲಿ ಆರ್‌ಟಿಎಂ ಕಾರ್ಡ್‌ ಬಳಕೆಗೆ ಅವಕಾಶ ಇರುವ ಕಾರಣ ಸುಂದರ್‌ ಅವರನ್ನು ಹೈದರಾಬಾದ್‌ ತಂಡ ತನ್ನಲ್ಲೇ ಉಳಿಸಿಕೊಳ್ಳುವ ಅವಕಾಶ ಕೂಡ ಇದೆ.

ಐಪಿಎಲ್‌ ರೀಟೆನ್ಷನ್‌ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದ್ದು, ಮೊದಲ ಆಟಗಾರನಿಗೆ 18 ಕೋಟಿ, 2ನೇ ಆಟಗಾರನಿಗೆ 14 ಕೋಟಿ, 3ನೇ ಆಟಗಾರನಿಗೆ 11 ಕೋಟಿ ವೇತನ ನಿಗದಿಪಡಿಸಲಾಗಿದೆ. 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ 18 ಕೋಟಿ ಹಾಗೂ 14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್‌ ಆಡದ ಆಟಗಾರನನ್ನು 4 ಕೋಟಿಗೆ ಉಳಿಸಿಕೊಳ್ಳಬಹುದು. ಒಟ್ಟಾರೆ ಆಟಗಾರರ ಖರೀದಿಗೆ ತಂಡಗಳು ₹120 ಕೋಟಿ ವೆಚ್ಚ ಮಾಡಬಹುದಾಗಿದ್ದು, ಹರಾಜಿಗೂ ಮೊದಲೇ 79 ಕೋಟಿಯನ್ನು ಆಟಗಾರರನ್ನು ಉಳಿಸಿಕೊಳ್ಳಲು ಬಳಸಿಕೊಳ್ಳಬಹುದು.