ಮುಂಬಯಿ: ನ್ಯೂಜಿಲ್ಯಾಂಡ್(IND vs NZ) ವಿರುದ್ಧ ಸರಣಿ ಸೋತಿರುವ ಭಾರತ ತಂಡ ವೈಟ್ ವಾಶ್ ಮುಖಭಂಗದಿಂದ ಪಾರಾಗಲು ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಡೆಲ್ಲಿ ಮೂಲಕ ಯುವ ವೇಗಿ ಹರ್ಷಿತ್ ರಾಣಾ(Harshit Rana) ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಚೊಚ್ಚಲ ಕರೆ ಪಡೆದಿರುವ ಅವರು ಮುಂಬೈ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾ ಸರಣಿಗಾಗಿ ಜಸ್‌ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅವರ ಸ್ಥಾನದಲ್ಲಿ ಹರ್ಷಿತ್ ರಾಣಾ ಕಣಕ್ಕಿಳಿಯಬಹುದು. ರಾಣಾ ಕೂಡ ಆಸೀಸ್ ಸರಣಿಗೆ ಆಯ್ಕೆಯಾಗಿದ್ದಾರೆ.
ಇದೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ಪರ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು. ಕೆಕೆಆರ್ ಕೋಚ್ ಆಗಿದ್ದ ಗಂಭೀರ್ ಈಗ ಟೀಮ್ ಇಂಡಿಯಾ ಕೋಚ್ ಆಗಿದ್ದಾರೆ. ರಾಣಾ ಬೌಲಿಂಗ್ ಸಾಮರ್ಥ್ಯ ಏನೆಂಬುದು ಗಂಭೀರ್ ಬಲ್ಲವರಾದ ಕಾರಣ ಅವರನ್ನು ಆಡಿಸಿದರೂ ಅಚ್ಚರಿಯಿಲ್ಲ. ರಾಣಾ ಅತ್ಯುತ್ತಮ ವೇಗದ ಬೌಲಿಂಗ್ ಮತ್ತು ಬ್ಯಾಟಿಂಗ್ ಸಾಮರ್ಥ್ಯ ಹೊಂದಿದ್ದು, ಇತ್ತೀಚೆಗೆ ಅಸ್ಸಾಂ ವಿರುದ್ಧ ಅದ್ಭುತ ಪ್ರದರ್ಶನ ತೋರಿದ್ದರು. ಹರ್ಷಿತ್ ರಾಣಾ ದೇಶೀಯ ಕ್ರಿಕೆಟ್‌ನಲ್ಲಿ ಈ ವರೆಗೆ 9 ಪ್ರಥಮ ದರ್ಜೆ ಪಂದ್ಯಗಳನ್ನಾಡಿ 36 ವಿಕೆಟ್ ಪಡೆದಿದ್ದಾರೆ. 41ರ ಸರಾಸರಿಯಲ್ಲಿ 410 ರನ್ ಗಳಿಸಿದ್ದಾರೆ.
ಇದನ್ನೂ ಓದಿ IND vs NZ: ಮೂರನೇ ಪಂದ್ಯಕ್ಕೂ ವಿಲಿಯಮ್ಸನ್ ಅಲಭ್ಯ
ಐಪಿಎಲ್‌ನಲ್ಲಿ ದಂಡಕ್ಕೆ ಗುರಿಯಾಗಿದ್ದ ರಾಣಾ
17ನೇ ಸೀಸನ್ ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಕಾರಣದಿಂದ ಹರ್ಷಿತ್ ರಾಣಾ ಪಂದ್ಯದ ಶುಲ್ಕದ 100 ಪ್ರತಿಶತ ದಂಡ ಮತ್ತು ಒಂದು ಪಂದ್ಯದಿಂದ ಅಮಾನತು ಶಿಕ್ಷೆಗೆ ಗುರಿಯಾಗಿದ್ದರು. ಅವರು ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.5 ರ ಅಡಿಯಲ್ಲಿ ಲೆವೆಲ್ 1 ಅಪರಾಧವನ್ನು ಮಾಡಿದ್ದರು. ಇದಕ್ಕೂ ಮುನ್ನ ಅವರು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಔಟ್ ಮಾಡಿದ ವೇಳೆ ಹರ್ಷಿತ್ ರಾಣಾ ಅತಿರೇಕದ ಸಂಭ್ರಮಾಚರಣೆ ಮಾಡಿದ್ದರು. ಇದಕ್ಕಾಗಿ ದಂಡ ಹಾಕಲಾಗಿತ್ತು. ಸುನಿಲ್ ಗಾವಸ್ಕರ್ ಕೂಡ ರಾಣಾ ನಡೆಯನ್ನು ಟೀಕಿಸಿದ್ದರು.
ಮೂರನೇ ಟೆಸ್ಟ್‌ಗೆ ಜಸ್‌ಪ್ರೀತ್ ಬುಮ್ರಾ, ರಿಷಭ್ ಪಂತ್, ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಅಕ್ಷರ್ ಪಟೇಲ್, ಕೆ.ಎಲ್ ರಾಹುಲ್ ಮತ್ತು ಧೃವ್ ಜುರೇಲ್ ಈ ಪಂದ್ಯದಲ್ಲಿ ಕಣಕ್ಕಿಳಿಯಬಹುದು.
ಮೂರನೇ ಟೆಸ್ಟ್‌ಗೆ ಭಾರತ ತಂಡ
ಭಾರತ ತಂಡ: ರೋಹಿತ್ ಶರ್ಮ (ನಾಯಕ), ಜಸ್‌ಪ್ರೀತ್ ಬುಮ್ರಾ (ಉಪನಾಯಕ), ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಸರ್ಫರಾಜ್ ಖಾನ್, ರಿಷಭ್ ಪಂತ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಆಕಾಶ್ ದೀಪ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ.