Wednesday, 30th October 2024

India Canada row: ಖಲಿಸ್ತಾನಿ ಉಗ್ರರ ಕೊಲೆಯ ಹಿಂದೆ ಗೃಹ ಸಚಿವ ಅಮಿತ್‌ ಶಾ ಕೈವಾಡ: ಕೆನಡಾ ವಿದೇಶಾಂಗ ಸಚಿವ

amit shah

ಒಟ್ಟಾವ: ಕೆನಡಾದ ನೆಲದಲ್ಲಿ ಸಿಖ್ ಪ್ರತ್ಯೇಕತಾವಾದಿಗಳ ವಿರುದ್ಧ ಹಿಂಸಾಚಾರದ ಅಲೆ (India Canada row) ಎಬ್ಬಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಪ್ರಚೋದನೆ ನೀಡಿದ್ದಾರೆ ಎಂದು ಕೆನಡಾದ ಉಪ ವಿದೇಶಾಂಗ ಸಚಿವ ಡೇವಿಡ್ ಮಾರಿಸನ್ ವಾಷಿಂಗ್ಟನ್ ಪೋಸ್ಟ್‌ಗೆ (Washington post) ಹೇಳಿದ್ದಾರೆ.

ಭಾರತ ಸರ್ಕಾರವು ಕೆನಡಾದ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿದೆ. ಈ ಕೊಲೆಗಳ ಹಿಂದೆ ತನ್ನ ಕೈವಾಡವನ್ನು ನಿರಾಕರಿಸಿದೆ.

ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಭದ್ರತಾ ಸಮಿತಿಯಲ್ಲಿ ಸಂಸತ್ತಿನ ಸದಸ್ಯರ ಮುಂದೆ ಇತರ ಹಿರಿಯ ಅಧಿಕಾರಿಗಳ ಜೊತೆ ಡೇವಿಡ್ ಮಾರಿಸನ್ ಸಾಕ್ಷಿ ನುಡಿದರು. ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಮೇಲೆ ನಡೆದ ವ್ಯಾಪಕ ಅಪರಾಧಗಳಲ್ಲಿ ಭಾರತ ಸರ್ಕಾರದ ಏಜೆಂಟರು ಭಾಗಿಯಾಗಿದ್ದಾರೆ ಎಂದು ಎರಡು ವಾರಗಳ ಹಿಂದೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಆರೋಪಿಸಿತ್ತು. ಈ ಬಗ್ಗೆ ಸಮಿತಿಯಲ್ಲಿರುವ ಸಂಸದರು ಪ್ರಶ್ನೆಗಳನ್ನು ಕೇಳಿದರು.

“ಭಾರತದ ಹಿರಿಯ ಆಡಳಿತಗಾರ” ಕೆನಡಾದಲ್ಲಿ “ಗುಪ್ತಚರ-ಸಂಗ್ರಹಣೆ ಕಾರ್ಯಾಚರಣೆಗಳು ಮತ್ತು ಸಿಖ್ ಪ್ರತ್ಯೇಕತಾವಾದಿಗಳ ಮೇಲಿನ ದಾಳಿಗಳನ್ನು ಅಧಿಕೃತಗೊಳಿಸಿದ್ದಾರೆ” ಎಂಬುದಕ್ಕೆ ಕೆನಡಾದ ಭದ್ರತಾ ಏಜೆನ್ಸಿಗಳು ಪುರಾವೆಗಳನ್ನು ಸಂಗ್ರಹಿಸಿವೆ ಎಂದು ವಾಷಿಂಗ್ಟನ್ ಪೋಸ್ಟ್ ಈ ಹಿಂದೆ ಹೇಳಿಕೊಂಡಿತ್ತು. ಅಮಿತ್ ಶಾ ಅವರೇ ಈ ಭಾರತೀಯ ಆಡಳಿತಗಾರ ಎಂದು ಗುರುತಿಸಿದೆ ಎಂದು ವರದಿ ಹೇಳಿದೆ.

“ಪತ್ರಕರ್ತರು ನನ್ನನ್ನು ಕರೆದು ಆ ವ್ಯಕ್ತಿಯೇ ಎಂದು ಕೇಳಿದರು. ಅದು ಆ ವ್ಯಕ್ತಿಯೇ ಎಂದು ನಾನು ದೃಢಪಡಿಸಿದೆ” ಎಂದು ಡೇವಿಡ್ ಮಾರಿಸನ್ ಹೆಚ್ಚಿನ ವಿವರಗಳು ಅಥವಾ ಪುರಾವೆಗಳನ್ನು ಒದಗಿಸದೆ ಹೇಳಿದ್ದಾರೆ. ಡೇವಿಡ್ ಮಾರಿಸನ್ ಅವರ ಆರೋಪಕ್ಕೆ ಒಟ್ಟಾವಾದಲ್ಲಿರುವ ಭಾರತದ ಹೈಕಮಿಷನ್ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇನ್ನೂ ಪ್ರತಿಕ್ರಿಯಿಸಿಲ್ಲ.

ಎರಡು ವಾರಗಳ ಹಿಂದೆ ರಾಜತಾಂತ್ರಿಕ ಬಿಕ್ಕಟ್ಟಿನ ವೇಳೆ ಡೇವಿಡ್ ಮಾರಿಸನ್ ಅವರು ಸಮಿತಿಯಲ್ಲಿ ಕಾಣಿಸಿಕೊಂಡಿದ್ದರು. 2023 ರಲ್ಲಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಹೈಕಮಿಷನರ್ ಸಂಜಯ್ ವರ್ಮಾ “ಆಸಕ್ತಿಯ ವ್ಯಕ್ತಿ” ಎಂದು ಕೆನಡಾ ಹೆಸರಿಸಿತ್ತು. ನಂತರ ಇವರು ಮತ್ತು ಇತರ ಐದು ಭಾರತೀಯ ರಾಜತಾಂತ್ರಿಕರನ್ನು ಭಾರತ ಹಿಂದಕ್ಕೆ ಕರೆಸಿಕೊಂಡಿತ್ತು.

ಕೆನಡಾದಲ್ಲಿ ಸುಮಾರು 8 ಲಕ್ಷದಷ್ಟು ಇರುವ ಸಿಖ್ ಜನಸಂಖ್ಯೆಯ ನಡುವೆ ಖಾಲಿಸ್ತಾನಿ ಉಗ್ರಗಾಮಿಗಳಿಗೆ ಕೆನಡಾದ ಮೌನ ಬೆಂಬಲವಿದೆ. ಈ ವಿಷಯದ ಬಗ್ಗೆ ಉಭಯ ದೇಶಗಳ ನಡುವಿನ ಸಂಬಂಧಗಳು ಅತ್ಯಂತ ಕೆಳಮಟ್ಟಕ್ಕೆ ಕುಸಿದಿವೆ. ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಹಾಳುಮಾಡಲು ಬಯಸುವ ಖಾಲಿಸ್ತಾನಿ ಬೆಂಬಲಿಗರ ಚಟುವಟಿಕೆಗಳನ್ನು ತಡೆಯಲು ಕೆನಡಾ ಏನೂ ಮಾಡುತ್ತಿಲ್ಲ ಎಂದು ನವದೆಹಲಿ ಆರೋಪಿಸಿದೆ.

ಇದನ್ನೂ ಓದಿ: Sanjay Verma: ಕೆನಡಾದಲ್ಲಿ ಖಲಿಸ್ತಾನಿಗಳಿಂದ ದಾಳಿ; ಭಯಾನಕ ಮಾಹಿತಿ ಹಂಚಿಕೊಂಡ ಹೈಕಮಿಷನರ್‌