Thursday, 31st October 2024

Vishweshwar Bhat Column: ವಿಮಾನ ಮತ್ತು ಎತ್ತರದ ಹಾರಾಟ

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಕೆಲವು ವಿಮಾನ ಪ್ರಯಾಣಿಕರಲ್ಲಿ ಆಗಾಗ ಮೂಡುವ ಪ್ರಶ್ನೆ ಏನೆಂದರೆ, ವಿಮಾನವೇಕೆ ಇಷ್ಟು ಎತ್ತರದಲ್ಲಿ ಹಾರಬೇಕು? ಅದರಲ್ಲೂ ಎತ್ತರದ ಭಯ (height phobia) ಇದ್ದವರಿಗೆ, ವಿಮಾನ ಮೇಲಮೇಲಕ್ಕೆ ಹೋಗುತ್ತಿದ್ದಂತೆ ಆತಂಕ ಹೆಚ್ಚುತ್ತಾ ಹೋಗುತ್ತದೆ. ಅಂತಾರಾಷ್ಟ್ರೀಯ ವಿಮಾನಗಳು, ದೂರ ಪ್ರಯಾಣದ ವಿಮಾನಗಳು ಸಾಮಾನ್ಯ‌ ವಾಗಿ 35000 ಅಡಿಯಿಂದ 38000 ಅಡಿ ಎತ್ತರದಲ್ಲಿ ಹಾರುವಾಗಂತೂ ಸಹಜವಾಗಿ ಈ ಪ್ರಶ್ನೆ ಏಳುವುದುಂಟು.

ಅಷ್ಟು ಎತ್ತರದಲ್ಲಿ ಹಾರುವಾಗ, ತಾಂತ್ರಿಕ ದೋಷಗಳು ಕಂಡುಬಂದರೆ, ವಿಮಾನದ ಯಂತ್ರಗಳು ಕೆಟ್ಟುಹೋದರೆ ಏನು ಗತಿ ಎಂಬ ಪ್ರಶ್ನೆ ಸಾಮಾನ್ಯ ಪ್ರಯಾಣಿಕರ ಮನಸ್ಸಿನಲ್ಲಿ ಹಾದುಹೋದರೆ ಆಶ್ಚರ್ಯವೇನಿಲ್ಲ. ಅಷ್ಟು ಎತ್ತರದಲ್ಲಿ ವಿಮಾನವನ್ನು ಹಾರಿಸುವ ಬದಲು, ಏಳೆಂಟು ಸಾವಿರ ಅಡಿ ಎತ್ತರದಲ್ಲಿ ಹಾರಿಸಬಹುದಲ್ಲ ಎಂದು ಅನಿಸಬಹುದು.

38000 ಅಡಿ ಎತ್ತರದಿಂದ ವಿಮಾನ ಬಿದ್ದರೆ ಯಾರೂ ಉಳಿಯುವುದಿಲ್ಲ, ಅದರ ಬದಲು ಏಳೆಂಟು ಸಾವಿರ ಅಡಿ ಎತ್ತರದಲ್ಲಿ ಹಾರಿಸಬಹುದಲ್ಲ ಎಂದು ಕೆಲವರು ಕೇಳುತ್ತಾರೆ. ಇದಕ್ಕೆ ಉತ್ತರ- ಏಳೆಂಟು ಸಾವಿರ ಅಡಿ ಎತ್ತರದಿಂದ
ಬಿದ್ದರೂ ಯಾರೂ ಬದುಕಿ ಉಳಿಯುವುದಿಲ್ಲ. ಆದರೆ ವಿಮಾನವನ್ನು 38000 ಅಡಿ ಎತ್ತರದಲ್ಲಿ ಹಾರಿಸುವುದಕ್ಕೆ ಹಲವು ಕಾರಣಗಳಿವೆ. ಈ ಎತ್ತರವನ್ನು ‘ಕ್ರೂಸ್ ಎತ್ತರ’ ಅಂತಾರೆ. ಈ ಎತ್ತರದಲ್ಲಿ ಗಾಳಿಯ ಒತ್ತಡ, ಘರ್ಷಣೆ ಕಡಿಮೆ ಇರುತ್ತದೆ. ಇದರಿಂದ ವಿಮಾನವು ಕಡಿಮೆ ಇಂಧನ ಬಳಸಿ ಹೆಚ್ಚು ದೂರ ಪ್ರಯಾಣಿಸಲು ಅನುಕೂಲವಾಗುತ್ತದೆ. ಇದು ವಿಮಾನಯಾನ ಕಂಪನಿಗಳಿಗೆ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಸಹಾಯಕ. ಈ ಎತ್ತರದಲ್ಲಿ ಗಾಳಿಯ ಹರಿವು ಸಮತಟ್ಟಾಗಿರುತ್ತದೆ. ಇದರಿಂದ ವಿಮಾನವು ಸ್ಥಿರವಾಗಿ ಹಾರಾಟ ನಡೆಸಬಹುದು.

ಇದು ಪ್ರಯಾಣಿಕರಿಗೆ ಸುಗಮ ಯಾನದ ಅನುಭವವನ್ನು ಒದಗಿಸುತ್ತದೆ. ಒಳಗಿರುವ ಪ್ರಯಾಣಿಕರಿಗೆ ವಿಮಾನ ನಿಂತಲ್ಲಿಯೇ ನಿಂತ ಅಥವಾ ನಿಶ್ಚಲವಾದ ಅನುಭವವನ್ನು ನೀಡುತ್ತದೆ. ಈ ಎತ್ತರದಲ್ಲಿ ಹವಾಮಾನದ ಅಡಚಣೆ ಗಳು ಕಡಿಮೆ. ಪ್ರಕ್ಷುಬ್ಧತೆ ಅಥವಾ ಟರ್ಬ್ಯುಲನ್ಸ್ (ದಢಕಿ) ಅನುಭವವೂ ತೀರಾ ಕಡಿಮೆ. ಇದರಿಂದ ವಿಮಾನವು ಯಾವ ತೊಂದರೆಯಿಲ್ಲದೇ ತನ್ನ ಗಮ್ಯಸ್ಥಾನವನ್ನು ತಲುಪಬಹುದು. ಅಷ್ಟೇ ಅಲ್ಲ, ಯಾವುದೇ ತುರ್ತು ಪರಿಸ್ಥಿತಿ ಉಂಟಾದರೆ, ವಿಮಾನವು ಹತ್ತಿ‌ರದ ನಿಲ್ದಾಣವನ್ನು ಹುಡುಕಿಕೊಂಡು ಇಳಿಯಲು ಸಾಕಷ್ಟು ಸಮಯವನ್ನು ಹೊಂದಿರುತ್ತದೆ.

ವಾತಾವರಣದಲ್ಲಿನ ವಿವಿಧ ಸ್ತರಗಳಲ್ಲಿ ವಿಭಿನ್ನ ತಾಪಮಾನ ಮತ್ತು ಒತ್ತಡವಿರುತ್ತದೆ. ಕ್ರೂಸ್ ಎತ್ತರವು ವಿಮಾನಕ್ಕೆ ಅನುಕೂಲಕರವಾದ ವಾತಾವರಣವನ್ನು ಒದಗಿಸುತ್ತದೆ. ವಿಮಾನದ ವಿನ್ಯಾಸವು ಕ್ರೂಸ್ ಎತ್ತರವನ್ನು ನಿರ್ಧರಿಸು ವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಗಮನಾರ್ಹ. ಪ್ರತಿಯೊಂದು ವಿಮಾನವು ವಿಭಿನ್ನ ಕ್ರೂಸ್ ಎತ್ತರ ವನ್ನು ಹೊಂದಿರುತ್ತದೆ. ವಿಮಾನವು ಯಾವಾಗಲೂ ೩೮,೦೦೦ ಅಡಿ ಎತ್ತರದಲ್ಲಿ ಹಾರಾಟ ನಡೆಸುವುದಿಲ್ಲ, ತನ್ನ ಪ್ರಯಾಣದ ವಿವಿಧ ಹಂತಗಳಲ್ಲಿ ವಿಭಿನ್ನ ಎತ್ತರಗಳಲ್ಲಿ ಹಾರಾಟ ನಡೆಸುತ್ತದೆ.

ಉದಾಹರಣೆಗೆ, ವಿಮಾನವು ಟೇಕಾಫ್ ಆಗುವಾಗ‌ ಮತ್ತು ಲ್ಯಾಂಡಿಂಗ್ ಮಾಡುವಾಗ ಕಡಿಮೆ ಎತ್ತರದಲ್ಲಿ ಹಾರುತ್ತದೆ. 38000 ಅಡಿ ಎತ್ತರದಲ್ಲಿ ಹಾರುವಾಗ, ಕೆಲವು ಸಲ ಕ್ಯಾಬಿನ್ ಒತ್ತಡ ಇದ್ದಕ್ಕಿದ್ದಂತೆ ಕಡಿಮೆಯಾಗುವ ಸಾಧ್ಯತೆ ಇರುತ್ತದೆ. ಇದರಿಂದ ವಿಮಾನದೊಳಗಿರುವವರಿಗೆ ಉಸಿರಾಡಲು ತೊಂದರೆಯಾಗಬಹುದು. ಕಮರ್ಷಿಯಲ್
ವಿಮಾನಗಳು 30 ಸಾವಿರದಿಂದ 42 ಸಾವಿರ ಅಡಿ ಎತ್ತರದಲ್ಲಿ ಹಾರುತ್ತವೆ. ಒಂದು ವೇಳೆ ಇದಕ್ಕಿಂತ ಹೆಚ್ಚಿನ ಎತ್ತರದಲ್ಲಿ ವಿಮಾನ ಹಾರಿದರೆ, ಅದಕ್ಕೆ ವಿಮಾನಯಾನ ಪರಿಭಾಷೆಯಲ್ಲಿ Coffin Corner ಅಂತಾರೆ.

ವಿಮಾನವು ಅತಿ ಎತ್ತರದಲ್ಲಿ ಹಾರುವಾಗ, ಗರಿಷ್ಠ ವೇಗ ಮತ್ತು ಕನಿಷ್ಠ ವೇಗ (Stall speed) ಎರಡೂ ಸಮೀಪ ವಾಗುತ್ತವೆ. ಈ ಹಂತದಲ್ಲಿ ವಿಮಾನ ಅಸ್ಥಿರಗೊಳ್ಳುವ ಸಾಧ್ಯತೆ ಇರುತ್ತದೆ. ವಿಮಾನ Coffin Corner ಹಂತ ತಲುಪಿದಾಗ, ಹಠಾತ್ ನಿಯಂತ್ರಣ ತಪ್ಪುವ ಅಪಾಯವಿರುತ್ತದೆ. ಆದರೆ ಪೈಲಟ್ ಯಾವ ಕಾರಣಕ್ಕೂ ಅಂಥ ಪರಿಸ್ಥಿತಿಯನ್ನು ತಂದುಕೊಳ್ಳುವುದಿಲ್ಲ.

ಇದನ್ನೂ ಓದಿ: Vishweshwar Bhat Column: ಕೊರಿಯನ್‌ ಮನೆಯಲ್ಲಿ ಕಂಡಿದ್ದು