Wednesday, 30th October 2024

Glenn Maxwell: ಇನ್‌ಸ್ಟಾಗ್ರಾಮ್‌ನಲ್ಲಿ ಕೊಹ್ಲಿ ಮ್ಯಾಕ್ಸ್‌ವೆಲ್‌ನ ಬ್ಲಾಕ್‌ ಮಾಡಿದ್ದೇಕೆ?

ಮೆಲ್ಬೋರ್ನ್: ಐಪಿಎಲ್‌ನಲ್ಲಿ ಜತೆಯಾಗಿ ಆರ್‌ಸಿಬಿ(RCB) ತಂಡದ ಪರ ಆಡುವ ಆಸ್ಟ್ರೇಲಿಯಾದ ಸ್ಟಾರ್‌ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌(Glenn Maxwell) ಅವರು ಟೀಮ್‌ ಇಂಡಿಯಾದ ವಿರಾಟ್‌ ಕೊಹ್ಲಿ(Virat Kohli) ತಮ್ಮನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬ್ಲಾಕ್ ಮಾಡಿದ್ದರು ಎಂದು ಅಚ್ಚರಿಯ ಸಂಗತಿಯನ್ನು ತಿಳಿಸಿದ್ದಾರೆ.

ʼದಿ ಶೋಮ್ಯಾನ್‌ʼ ಹೆಸರಿನ ಪುಸ್ತಕ ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಮ್ಯಾಕ್ಸ್‌ವೆಲ್‌, 2017ರಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. ಈ ಸರಣಿಯ ಪಂದ್ಯವೊಂದರಲ್ಲಿ ಫೀಲ್ಡಿಂಗ್‌ ವೇಳೆ ವಿರಾಟ್‌ ಕೊಹ್ಲಿ ಭುಜದ ಗಾಯಕ್ಕೆ ಒಳಗಾದರು ಆಗ ನಾನು ಕೊಹ್ಲಿಯನ್ನು ಅಣಕಿಸಿದೆ. ಇದರಿಂದ ಸಿಟ್ಟುಗೊಂಡ ಕೊಹ್ಲಿ ನನ್ನನ್ನು ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬ್ಲಾಕ್‌ ಮಾಡಿದರು ಎಂದು ಮ್ಯಾಕ್ಸ್‌ವೆಲ್‌ ಅಂದಿನ ಘಟನೆಯನ್ನು ವಿವರಿಸಿದ್ದಾರೆ.

ಇದನ್ನೂ ಓದಿ IPL 2025 : ಆರ್‌ಸಿಬಿಯಿಂದ ಗ್ಲೆನ್‌ ಮ್ಯಾಕ್ಸ್‌ವೆಲ್‌, ಡುಪ್ಲೆಸಿಸ್‌ ಹೊರಕ್ಕೆ

ʼ2021ರಲ್ಲಿ ಐಪಿಎಲ್ ಫ್ರಾಂಚೈಸಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರುವ ತನಕ ಕೊಹ್ಲಿ ಮತ್ತು ನಾನು ಉತ್ತಮ ಸ್ನೇಹಿತರಾಗಿರಲಿಲ್ಲ. ಆರ್‌ಸಿಬಿ ಸೇರಿದ ಬಳಿಕ ನಾವಿಬ್ಬರು ಉತ್ತಮ ಸ್ನೇಹಿತರು. ಹರಾಜಿನಲ್ಲಿ ನಾನು ಆರ್‌ಸಿಬಿ ಸೇರಿದ ತಕ್ಷಣ ಕೊಹ್ಲಿ ನನಗೆ ಸಂದೇಶ ಕಳುಹಿಸಿ ನನ್ನನ್ನು ತಂಡಕ್ಕೆ ಸ್ವಾಗತಿಸಿದ ಮೊದಲ ವ್ಯಕ್ತಿ. ಕೊಹ್ಲಿ ಉತ್ತಮ ವ್ಯಕ್ತಿ. ಅಂದು ನಾನು ಮಾಡಿದ್ದು ತಪ್ಪುʼ ಎಂದು ಮ್ಯಾಕ್ಸಿ ಬರೆದುಕೊಂಡಿದ್ದಾರೆ.

ಮುಂದಿನ ಆವೃತ್ತಿಯ ಐಪಿಎಲ್(IPL 2025)​ ನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್(Glenn Maxwell)​ಅವರನ್ನು ಆರ್‌ಸಿಬಿ ತಂಡದಿಂದ ಕೈಬಿಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಇತ್ತೀಚೆಗೆ ಮ್ಯಾಕ್ಸ್‌ವೆಲ್‌ ಆರ್​ಸಿಬಿ(RCB) ಇನ್​ಸ್ಟಾಗ್ರಾಮ್​(RCB On Instagram) ಖಾತೆಯನ್ನು ಕೂಡ ಅನ್​ಫಾಲೋ ಮಾಡಿದ್ದರು. ಇದನ್ನು ನೋಡುವಾಗ ಮ್ಯಾಕ್ಸ್​ವೆಲ್​ಗೆ ಆರ್​ಸಿಬಿಯಿಂದ ಗೇಟ್​ ಪಾಸ್​ ಸಿಕ್ಕಿರುವುದು ಬಹುತೇಕ ಖಚಿತ ಎನ್ನುವಂತಿದೆ. 17ನೇ ಆವೃತ್ತಿಯಲ್ಲಿ ಮ್ಯಾಕ್ಸ್​ವೆಲ್​ ಆರ್​ಸಿಬಿ ಪರ ಅತ್ಯಂತ ಕಳಪೆ ಮಟ್ಟದ ಬ್ಯಾಟಿಂಗ್​ ಪ್ರದರ್ಶನ ತೋರಿದ್ದರು. ಆಡಿದ 10 ಪಂದ್ಯಗಳಲ್ಲಿ ಗಳಿಸಿದ್ದು ಕೇಲವ 52 ರನ್​ ಮಾತ್ರ. ಹೀಗಾಗಿ ಈ ಬಾರಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದು ಅಸಾಧ್ಯ.

ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ಬೇಸರಗೊಂಡಿರುವ ಕೆ.ಎಲ್​ ರಾಹುಲ್ ಈ ಬಾರಿ ಲಕ್ನೋ ತಂಡ ತೊರೆಯುವುದು ಖಚಿತವಾಗಿದೆ. ಮೂಲಗಳ ಪ್ರಕಾರ ಅವರು ಆರ್​ಸಿಬಿ ತಂಡ ಸೇರಲಿದ್ದಾರೆ ಎನ್ನಲಾಗಿದೆ. ಆರ್​ಸಿಬಿ ಪರ ಆಡುವುದು ಕೂಡ ಅವರ ಬಯಕೆಯಾಗಿದೆ. ರಾಹುಲ್‌ ಅವರನ್ನು ಆರ್‌ಸಿಬಿಗೆ ಕರೆತರಲು ವಿರಾಟ್‌ ಕೊಹ್ಲಿ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.