Wednesday, 30th October 2024

Smriti Mandhana: ಮಿಥಾಲಿ ದಾಖಲೆ ಮುರಿದ ಮಂಧಾನ

ಅಹಮದಾಬಾದ್‌: ನ್ಯೂಜಿಲ್ಯಾಂಡ್‌ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ(IND-W vs NZ-W) ಶತಕ ಬಾರಿಸಿ ಮಿಂಚಿದ ಭಾರತದ ಸ್ಟಾರ್‌ ಎಡಗೈ ಬ್ಯಾಟರ್‌ ಸ್ಮೃತಿ ಮಂಧಾನ(Smriti Mandhana) ದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಶತಕ ಬಾರಿಸಿದ ವಿಶ್ವದ 7ನೇ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ಮಂಗಳವಾರ ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲ್ಯಾಂಡ್‌ 49.5 ಓವರ್‌ಗಳಲ್ಲಿ 232ಕ್ಕೆ ಆಲೌಟ್‌ ಆದರೆ, ಭಾರತ 44.2 ಓವರ್‌ಗಳಲ್ಲಿ 4 ವಿಕೆಟಿಗೆ 236 ರನ್‌ ಬಾರಿಸಿ ಸರಣಿ ಗೆಲುವು ಸಾಧಿಸಿತು.

41ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಮಂಧನಾ 122 ಎಸೆತ ಎದುರಿಸಿ, 10 ಬೌಂಡರಿ ನೆರವಿನಿಂದ ಭರ್ತಿ 100 ರನ್‌ ಬಾರಿಸಿ ಹನ್ನಾ ರೋವ್ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಮಂಧಾನ ಶತಕ ಪೂರ್ತಿಗೊಳಿಸುತ್ತಿದ್ದಂತೆ ಏಕದಿನದಲ್ಲಿ ಅತ್ಯಧಿಕ ಶತಕ ಬಾರಿಸಿದ ಮಾಜಿ ಆಟಗಾರ್ತಿ ಮಿಥಾಲಿ ರಾಜ್‌(7) ದಾಖಲೆ ಮುರಿದರು. ಮಂಧಾನ 88 ಇನಿಂಗ್ಸ್‌ ಆಡಿ 8 ಶತಕ ಬಾರಿಸಿದ್ದಾರೆ. ವಿಶ್ವ ದಾಖಲೆ ಆಸ್ಟ್ರೇಲಿಯಾದ ಮಾಜಿ ನಾಯಕಿ ಹಾಗೂ ಆಟಗಾರ್ತಿ ಮೆಗ್‌ ಲ್ಯಾನಿಂಗ್‌ ಹೆಸರಿನಲ್ಲಿದೆ. ಅವರು 102 ಇನಿಂಗ್ಸ್‌ ಆಡಿ 15 ಶತಕ ಬಾರಿಸಿದ್ದಾರೆ.

ಇದನ್ನೂ ಓದಿ IND vs NZ: ಮೂರನೇ ಟೆಸ್ಟ್‌ಗೆ ಹರ್ಷಿತ್ ರಾಣಾ ಸೇರ್ಪಡೆ

ಅತ್ಯಧಿಕ ಏಕದಿನ ಶತಕ ಬಾರಿಸಿದ ಟಾಪ್‌-5 ಆಟಗಾರ್ತಿಯರು

ಮೆಗ್‌ ಲ್ಯಾನಿಂಗ್‌-15 ಶತಕ

ಸೂಜಿ ಬೇಟ್ಸ್‌-13* ಶತಕ

ತಮ್ಸಿನ್ ಬ್ಯೂಮಾಂಟ್-10* ಶತಕ

ನ್ಯಾಟ್‌ ಸ್ಕಿವರ್‌ ಬ್ರಂಟ್‌-9* ಶತಕ

ಚಾಮರಿ ಅತ್ತಪಟ್ಟು-9* ಶತಕ

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-49.5 ಓವರ್‌ಗಳಲ್ಲಿ 232 (ಹಾಲಿಡೇ 86, ಪ್ಲಿಮ್ಮರ್‌ 39, ಗೇಝ್ 25, ಟಹುಹು ಔಟಾಗದೆ 24, ದೀಪ್ತಿ 39ಕ್ಕೆ 3, ಪ್ರಿಯಾ 41ಕ್ಕೆ 2). ಭಾರತ-44.2 ಓವರ್‌ಗಳಲ್ಲಿ 4 ವಿಕೆಟಿಗೆ 236 (ಮಂಧನಾ 100, ಕೌರ್‌ ಔಟಾಗದೆ 59, ಯಾಸ್ತಿಕಾ 35, ಜೆಮಿಮಾ 22, ರೋವ್‌ 47ಕ್ಕೆ 2). ಪಂದ್ಯಶ್ರೇಷ್ಠ: ಸ್ಮತಿ ಮಂಧನಾ. ಸರಣಿಶ್ರೇಷ್ಠ: ದೀಪ್ತಿ ಶರ್ಮ.