Wednesday, 30th October 2024

Surendra Pai Column: ಹಂಡೆ ಸಿಂಗಾರಕ್ಕೆ ಸಿಂಡ್ಲೆಬಳ್ಳಿ

ಸುರೇಂದ್ರ ಪೈ

ನಾಳೆ ಬೆಳಗಾದರೆ ದೀಪಾವಳಿ, ಎಣ್ಣೆ ಸ್ನಾನ. ದೀಪಾವಳಿ ಎಣ್ಣೆ ಸ್ನಾನ ಮಾಡುವ ಹಂಡೆಗೆ ಕಟ್ಟುವ ಸಿಂಡ್ಲೆ ಕಾಯಿಯೂ ಮುಖ್ಯ. ಇಂದು ಸಂಜೆ ನೀರು ತುಂಬುತ್ತಾರೆ. ದೀಪಾವಳಿ ಹಬ್ಬ ಪ್ರಾರಂಭವಾಗುವುದೇ ಸ್ನಾನದ ಹಂಡೆಗೆ ನೀರು ತುಂಬಿಸುವುದರಿಂದ. ಹಂಡೆಗೆ ನೀರನ್ನು ತುಂಬಿಸುವ ಮೊದಲು ಹಂಡೆಯನ್ನು ಶುಚಿಗೊಳಿಸಿ ಅದನ್ನು‘ಸಿಂಡ್ಲೆಕಾಯಿ ಬಳ್ಳಿ’ ಹಾಗೂ ಹೂವಿನ ಹಾರದಿಂದ ಸಿಂಗರಿಸುತ್ತಾರೆ.

ಅದರೊಂದಿಗೆ ನೀರು ತುಂಬುವ ಕೊಡ ಹಾಗೂ ಕಲಶಕ್ಕೂ ಸಿಂಡ್ಲೆಕಾಯಿ ಬಳ್ಳಿಯನ್ನು ಕಟ್ಟಿ ಸಿಂಗರಿಸಿ ಪೂಜಿಸುವು ದನ್ನು ಮಲೆನಾಡಿನ ಜಿಲ್ಲೆಗಳಲ್ಲಿ ಕಾಣುತ್ತೇವೆ. ಇಂದಿನ ಬಹುತೇಕರು ಸಿಂಡ್ಲೆಕಾಯಿ ಎಂಬ ಹೆಸರನ್ನೇ ಕೇಳಿರಲಿಕ್ಕಿಲ್ಲ ಅನಿಸುತ್ತದೆ. ಇದನ್ನು ಹಿಂಡ್ಲಕಾಯಿ, ಹಿಂಡ್ಲಚ್ಚಿಕಾಯಿ ಎಂತಲೂ ಕೆಲವೆಡೆ ಕರೆಯುವುದುಂಟು. ಇದು ನೋಡಲು ಸೌತೆಕಾಯಿ ಬಳ್ಳಿಯ ಹಾಗೆ ಕಾಣುತ್ತದೆ. ಇದರ ಬಳ್ಳಿಯಲ್ಲಿ ಬಿಡುವ ಕಾಯಿ, ನೋಡಲು ಎಳೆ ಸೌತೆಕಾಯಿಯನ್ನು ಹೋಲುತ್ತದೆ; ಆದರೆ ಗಾತ್ರದಲ್ಲಿ ಲಿಂಬೆ ಹಣ್ಣಿನ ಗಾತ್ರವಿದ್ದು ರುಚಿಯಲ್ಲಿ ಕಹಿ.

ಹುಲ್ಲು ಬೆಳೆಯುವ ಅಂಚಿನಲ್ಲಿ, ಬೆಟ್ಟದ ತಪ್ಪಲಿನಲ್ಲಿ ಸಾಮಾನ್ಯವಾಗಿ ಬೆಳೆಯುತ್ತವೆ. ದೀಪಾವಳಿಯ ಸಮಯ ದಲ್ಲಿ ವಿಶೇಷವಾಗಿ ದೊರಕುವ ಈ ಸಿಂಡ್ಲೆ ಕಾಯಿಯ ಬಳ್ಳಿಯು ಪ್ರಕೃತಿಯ ಕೊಡುಗೆ. ದೀಪಾವಳಿಗೂ ನರಕಾಸುರನ ವಧೆಗೂ ನಂಟಿರುವುದು ತಿಳಿದ ಸಂಗತಿ. ನರಕಾಸುರನಿಗೆ ಬ್ರಹ್ಮನಿಂದ ‘ಆತನ ತಾಯಿಯ ಹೊರತಾಗಿ ಬೇರೆ ಯಾರೂ ಕೊಲ್ಲಲು ಅಸಾಧ್ಯ’ ಎಂಬ ವರದಾನವಿರುತ್ತದೆ.

ಅದಕ್ಕಾಗಿ ಇತನ ಉಪಟಳ ಹೆಚ್ಚಾದಾಗ ಭೂ ದೇವಿಯು ಸತ್ಯಭಾಮೆಯ ಅವತಾರದಲ್ಲಿ ಜನಿಸಿ ನರಕನ್ನು ಚಕ್ರಾ ಯುಧದಿಂದ ಸರಿಯಾಗಿ ಎರಡು ಭಾಗವನ್ನಾಗಿ ತುಂಡರಿಸಿ ಹರಣ ಮಾಡುತ್ತಾಳೆ. ನರಕಾಸುರನನ್ನು ಭಾಗ ಮಾಡಿ ದಂತೆಯೇ, ಶಿಂಡ್ಲೆ ಕಾಯಿಯನ್ನು ವಿಭಾಗಿಸಿ, ಅದರೊಳಗೆ (ಆತ್ಮ) ಜ್ಯೋತಿಯನ್ನು ಹಚ್ಚುವುದು ದೀಪಾವಳಿಯ ವಾಡಿಕೆ.

ಶಿಂಡ್ಲೆ ಕಾಯಿಯಲ್ಲಿ ಔಷಽಯ ಅಂಶವೂ ಇದೆ. ಮಲೆನಾಡಿನ ಜನರು ಇಂದಿಗೂ ಇದನ್ನು ಔಷಧವಾಗಿ ಬಳಸುವು ದನ್ನು ನೋಡಬಹುದು. ಇಂದು ಪಟ್ಟಣಗಳಲ್ಲಿ ವಾಸಿಸುವವರು ಸಿಂಡ್ಲೆ ಕಾಯಿ ಬಳ್ಳಿಯನ್ನು ಮರೆತಿದ್ದಾರೆ. ಗೀಸರ್ ಬಂದ ನಂತರ, ಹಂಡೆಯೂ ಮಾಯವಾಗಿದೆ. ಹಬ್ಬಕ್ಕೆಂದು ಹಳ್ಳಿಯ ಮನೆಗೆ ಹೋದಾಗ ಹಂಡೆಗೆ ಸಿಂಗರಿಸಿದ ಸಿಂಡ್ಲೆಕಾಯಿ ನೋಡಿದಾಗ ಅದೇನೋ ಸಂತಸ!

ಇದನ್ನೂ ಓದಿ: Surendra Pai Column: ಚೆಂದದ ಪಾಠ ಹೇಳಿದ ಕಲಾಂ