Wednesday, 30th October 2024

ICC Test Rankings: ಅಗ್ರಸ್ಥಾನ ಕಳೆದುಕೊಂಡ ಜಸ್‌ಪ್ರೀತ್‌ ಬುಮ್ರಾ

ದುಬೈ: ನೂತನ ಐಸಿಸಿ ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌(ICC Test Rankings) ಪ್ರಕಟವಾಗಿದೆ. ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ತಮ್ಮ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್‌ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ನಿರೀಕ್ಷಿತ ಬೌಲಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲವಾದದ್ದು ಇದಕ್ಕೆ ಕಾರಣ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಘಾತಕ ಬೌಲಿಂಗ್‌ ದಾಳಿ ನಡೆಸಿ ಮಿಂಚಿದ್ದ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ(Kagiso Rabada) ಅಗ್ರಸ್ಥಾನಕ್ಕೇರಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ರಬಾಡ 9 ವಿಕೆಟ್‌ ಕಿತ್ತು ಮಿಂಚಿದ್ದರು.

ಭಾರತದ ವೇಗಿ ಬುಮ್ರಾ ಬಾಂಗ್ಲಾದೇಶ ವಿರುದ್ಧದ ಸರಣಿ ಮುಕ್ತಾಯದ ಬಳಿಕ 870 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದರು. ಆದರೆ ಕಿವೀಸ್‌ ಸರಣಿಯಲ್ಲಿ ಅಷ್ಟಾಗಿ ವಿಕೆಟ್‌ ಕೀಳಲು ಸಾಧ್ಯವಾಗಿರಲಿಲ್ಲ. 2 ಸ್ಥಾನಗಳ ಕುಸಿತದೊಂದಿಗೆ ನೂತನ ಪಟ್ಟಿಯಲ್ಲಿ 846 ರೇಟಿಂಗ್‌ ಅಂಕದೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಬುಮ್ರಾ ಜತೆಗೆ ಆರ್‌.ಅಶ್ವಿನ್‌ ಕೂಡ 2 ಸ್ಥಾನ ಕಳೆದುಕೊಂಡು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಜೋಶ್‌ ಹ್ಯಾಜಲ್‌ವುಡ್‌(847) ಒಂದು ಸ್ಥಾನದ ಏರಿಕೆ ಕಂಡು ದ್ವಿತೀಯ ಸ್ಥಾನಕ್ಕೇರಿದ್ದಾರೆ. ಪುಣೆ ಟೆಸ್ಟ್‌ನಲ್ಲಿ ಒಟ್ಟು 13 ವಿಕೆಟ್‌ ಕಿತ್ತು ಭಾರತಕ್ಕೆ ಸೋಲುಣಿಸಿದ್ದ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ಬರೋಬ್ಬರಿ 30 ಸ್ಥಾನಗಳ ಜಿಗಿತದೊಂದಿಗೆ 44ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ IND vs NZ 3rd Test: ಮುಂಬೈ ಟೆಸ್ಟ್‌ಗೆ ಸ್ಪರ್ಧಾತ್ಮಕ ಪಿಚ್‌

ಬ್ಯಾಟರ್‌ಗಳ ಯಾದಿಯಲ್ಲಿ ಟೀಮ್‌ ಇಂಡಿಯಾದ ಯುವ ಎಡಗೈ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್‌(790) ಮೂರನೇ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಿಷಭ್‌ ಪಂತ್‌ ಮತ್ತು ವಿರಾಟ್‌ ಕೊಹ್ಲಿ ಕ್ರಮವಾಗಿ 5 ಮತ್ತು 6 ಸ್ಥಾನಗಳ ಕುಸಿತ ಕಾಣುವ ಮೂಲಕ ಟಾಪ್‌-10 ನಿಂದ ಹೊರಬಿದ್ದಿದ್ದಾರೆ. ಪಂತ್‌ 11ನೇ ಸ್ಥಾನದಲ್ಲಿದ್ದರೆ, ಕೊಹ್ಲಿ 14 ನೇ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್‌ ವಿರುದ್ಧ ತವರಿನ ಟೆಸ್ಟ್‌ ಸರಣಿಯಲ್ಲಿ ಅಮೊಘ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಪಾಕಿಸ್ತಾನ ಬ್ಯಾಟರ್‌ ಸೌದ್ ಶಕೀಲ್ 20 ಸ್ಥಾನಗಳ ಏರಿಕೆ ಕಂಡು ಅಗ್ರ 7ನೇ ಸ್ಥಾನ ಗಳಿಸಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ದೊಡ್ಡ ಬದಲಾವಣೆ ಸಂಭವಿಸಿಲ್ಲ ಭಾರತೀಯ ಆಟಗಾರರಾದ ರವೀಂದ್ರ ಜಡೇಜಾ(434) ಮತ್ತು ಆರ್‌.ಅಶ್ವಿನ್‌(315) ಕ್ರಮವಾಗಿ ಮೊದಲೆರಡು ಸ್ಥಾನ ಪಡೆದಿದ್ದಾರೆ.

ಟಾಪ್‌-5 ಬ್ಯಾಟರ್‌

ಜೋ ರೂಟ್‌-903

ಕೇನ್‌ ವಿಲಿಯಮ್ಸನ್‌-813

ಯಶಸ್ವಿ ಜೈಸ್ವಾಲ್-790‌

ಹ್ಯಾರಿ ಬ್ರೂಕ್‌-778

ಸ್ಟೀವನ್‌ ಸ್ಮಿತ್‌-757

ಟಾಪ್‌-5 ಬೌಲರ್‌

ಕಗಿಸೊ ರಬಾಡ-860

ಜೋಸ್‌ ಹ್ಯಾಜಲ್‌ವುಡ್‌-847

ಜಸ್‌ಪ್ರೀತ್‌ ಬುಮ್ರಾ-846

ಆರ್‌.ಅಶ್ವಿನ್‌-831

ಪ್ಯಾಟ್‌ ಕಮಿನ್ಸ್‌-820