Wednesday, 30th October 2024

ಐಸಿಸಿ ಭ್ರಷ್ಟಾಚಾರ ವಿರೋಧಿ ದಳಕ್ಕೆ ಸುಮತಿ ಧರ್ಮವರ್ಧೆನಾ ನೂತನ ಅಧ್ಯಕ್ಷ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ(ICC) ಭ್ರಷ್ಟಾಚಾರ ವಿರೋಧಿ ದಳದ(ICC Anti-Corruption Unit) ಸ್ವತಂತ್ರ ಅಧ್ಯಕ್ಷೆಯಾಗಿ ಶ್ರೀಲಂಕಾದ ಸುಮತಿ ಧರ್ಮವರ್ಧೆನಾ(Sumathi Dharmawardena) ಅವರನ್ನು ಬುಧವಾರ ನೇಮಕ ಮಾಡಿದೆ. 14 ವರ್ಷಗಳ ಕಾಲ ಅಧ್ಯಕ್ಷೆಯಾಗಿದ್ದ ಸರ್ ರೋನಿ ಫ್ಲನಾಗನ್(Sir Ronnie Flanagan) ನಿವೃತ್ತಿ ಹೊಂದಿದ್ದು ಅವರ ಸ್ಥಾನಕ್ಕೆ ಸುಮತಿ ಅವರನ್ನು ನೇಮಕ ಮಾಡಲಾಗಿದ್ದು ನವೆಂಬರ್ 1ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಐಸಿಸಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ಶ್ರೀಲಂಕಾದ ಅಟಾರ್ನಿ ಜನರಲ್ ಇಲಾಖೆಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿರುವ ಸುಮತಿ, ಶ್ರೀಲಂಕಾ ಕ್ರೀಡಾ ಸಚಿವಾಲಯದ ಪರ ಹಲವು ಕಾನೂನು ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. ಇಂಟರ್‌ಪೋಲ್ ಮತ್ತು ವಿಶ್ವಸಂಸ್ಥೆ ಜತೆಗೆ ಡ್ರಗ್ಸ್ ಮತ್ತು ಕ್ರೈಮ್‌, ಕ್ರೀಡಾ ಭ್ರಷ್ಟಾಚಾರದ ವಿಷಯಗಳ ತನಿಖೆ ಮತ್ತು ಕ್ರೀಡಾ ಕಾಯ್ದೆಗೆ ಸಂಬಂಧಿಸಿದ ಅಪರಾಧಗಳ ತಡೆಗಟ್ಟುವಿಕೆ ಅಡಿಯಲ್ಲಿ ಕಾನೂನು ಕ್ರಮಗಳ ಕುರಿತಾದ ಜವಾಬ್ದಾರಿ ನಿರ್ವಹಿಸಿದ ಅನುಭವವಿದೆ. ಹೀಗಾಗಿ ಅವರನ್ನು ಐಸಿಸಿ ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದೆ.

ಇದನ್ನೂ ಓದಿ ICC Test Rankings: ಅಗ್ರಸ್ಥಾನ ಕಳೆದುಕೊಂಡ ಜಸ್‌ಪ್ರೀತ್‌ ಬುಮ್ರಾ

‘ಐಸಿಸಿಯ ಭ್ರಷ್ಟಾಚಾರ-ವಿರೋಧಿ ಘಟಕದ ಸ್ವತಂತ್ರ ಅಧ್ಯಕ್ಷರು ಎಸಿಯು ಮೇಲ್ವಿಚಾರಣೆ ಮತ್ತು ಅದನ್ನು ಮುನ್ನಡೆಸುವ ಸಂಪೂರ್ಣ ಜವಾಬ್ದಾರಿ ಹೊತ್ತಿರುತ್ತಾರೆʼ ಎಂದು ಐಸಿಸಿ ತಿಳಿಸಿದೆ. ಉನ್ನತ ಹುದ್ದೆಗೆ ಆಯ್ಕೆಯಾದ ಸುಮತಿ ಧರ್ಮವರ್ಧೆನಾ ಅವರಿಗೆ ಶ್ರೀಲಂಕಾ ತಂಡದ ಮಾಜಿ ಆಟಗಾರರಾದ ಲಸಿತ ಮಾಲಿಂಗ, ಮಹೇಲಾ ಜಯವರ್ಧನೆ, ಕುಮಾರ ಸಂಗಕ್ಕರ ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.

ಬೌಲಿಂಗ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನ ಕಳೆದುಕೊಂಡ ಬುಮ್ರಾ

ದುಬೈ: ನೂತನ ಐಸಿಸಿ ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌(ICC Test Rankings) ಪ್ರಕಟವಾಗಿದೆ. ವೇಗಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ತಮ್ಮ ಅಗ್ರಸ್ಥಾನ ಕಳೆದುಕೊಂಡಿದ್ದಾರೆ. ನ್ಯೂಜಿಲ್ಯಾಂಡ್‌ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ನಿರೀಕ್ಷಿತ ಬೌಲಿಂಗ್‌ ಪ್ರದರ್ಶನ ತೋರುವಲ್ಲಿ ವಿಫಲವಾದದ್ದು ಇದಕ್ಕೆ ಕಾರಣ. ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಘಾತಕ ಬೌಲಿಂಗ್‌ ದಾಳಿ ನಡೆಸಿ ಮಿಂಚಿದ್ದ ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ(Kagiso Rabada) ಅಗ್ರಸ್ಥಾನಕ್ಕೇರಿದ್ದಾರೆ. ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ರಬಾಡ 9 ವಿಕೆಟ್‌ ಕಿತ್ತು ಮಿಂಚಿದ್ದರು.

ಭಾರತದ ವೇಗಿ ಬುಮ್ರಾ ಬಾಂಗ್ಲಾದೇಶ ವಿರುದ್ಧದ ಸರಣಿ ಮುಕ್ತಾಯದ ಬಳಿಕ 870 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದರು. ಆದರೆ ಕಿವೀಸ್‌ ಸರಣಿಯಲ್ಲಿ ಅಷ್ಟಾಗಿ ವಿಕೆಟ್‌ ಕೀಳಲು ಸಾಧ್ಯವಾಗಿರಲಿಲ್ಲ. 2 ಸ್ಥಾನಗಳ ಕುಸಿತದೊಂದಿಗೆ ನೂತನ ಪಟ್ಟಿಯಲ್ಲಿ 846 ರೇಟಿಂಗ್‌ ಅಂಕದೊಂದಿಗೆ ಮೂರನೇ ಸ್ಥಾನ ಪಡೆದಿದ್ದಾರೆ. ಬುಮ್ರಾ ಜತೆಗೆ ಆರ್‌.ಅಶ್ವಿನ್‌ ಕೂಡ 2 ಸ್ಥಾನ ಕಳೆದುಕೊಂಡು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಜೋಶ್‌ ಹ್ಯಾಜಲ್‌ವುಡ್‌(847) ಒಂದು ಸ್ಥಾನದ ಏರಿಕೆ ಕಂಡು ದ್ವಿತೀಯ ಸ್ಥಾನಕ್ಕೇರಿದ್ದಾರೆ. ಪುಣೆ ಟೆಸ್ಟ್‌ನಲ್ಲಿ ಒಟ್ಟು 13 ವಿಕೆಟ್‌ ಕಿತ್ತು ಭಾರತಕ್ಕೆ ಸೋಲುಣಿಸಿದ್ದ ಸ್ಪಿನ್ನರ್‌ ಮಿಚೆಲ್‌ ಸ್ಯಾಂಟ್ನರ್‌ ಬರೋಬ್ಬರಿ 30 ಸ್ಥಾನಗಳ ಜಿಗಿತದೊಂದಿಗೆ 44ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.