ವಿಜಯಪುರ: ಕೇಂದ್ರ ಸರ್ಕಾರ ವಕ್ಫ್ ಕಾನೂನು ತಿದ್ದುಪಡಿ ತರುವುದರೊಳಗೇ ಆಸ್ತಿ ಹೆಚ್ಚಿಸಿಕೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ನೆರಳಿನಲ್ಲಿ ಹೊರಟಿದೆ ವಕ್ಫ್ ಬೋರ್ಡ್ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆರೋಪಿಸಿದರು. ವಿಜಯಪುರದಲ್ಲಿ ಇಂದು ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಮೀರ್ ಅಹ್ಮದ್ ಸಾರಥ್ಯದಲ್ಲಿ ರಾಜ್ಯ ವಕ್ಫ್ ಬೋರ್ಡ್ ತರಾತುರಿಯಲ್ಲಿ ಇದ್ದಬದ್ದ ಆಸ್ತಿಯನ್ನೆಲ್ಲ ಕಬಳಿಸಲು ಹುನ್ನಾರ ನಡೆಸಿದೆ ಎಂದು ದೂರಿದರು.
ಮತಾಂಧ ಶಕ್ತಿಗಳ ಈ ಷಡ್ಯಂತ್ರಕ್ಕೆ ಸಿಎಂ ಸಿದ್ದರಾಮಯ್ಯ ಅವರ ಕುಮ್ಮಕ್ಕು ಇದೆಯೇ? ಎಂದು ಪ್ರಶ್ನಿಸಿದ ಸಚಿವರು, ಇದಕ್ಕೆ ಒತ್ತಡ ಹೇರುತ್ತಿರುವ ತಮ್ಮ ಆಪ್ತ ಸಚಿವ ಜಮೀರ್ ಅವರನ್ನು ಮೊದಲು ಸಂಪುಟದಿಂದ ಕೈ ಬಿಡಿ ಎಂದು ಆಗ್ರಹಿಸಿದರು.
ಇಸ್ಲಾಂ ರಾಷ್ಟ್ರಗಳಲ್ಲೇ ಇಲ್ಲ ವಕ್ಫ್ ಕಾನೂನು
ಜಗತ್ತಿನಲ್ಲಿ ಎಲ್ಲೂ ಇರದಂತಹ ವಕ್ಫ್ ಕಾನೂನನ್ನು ಜಾತ್ಯತೀತ ಹಣೆಪಟ್ಟಿ ಕಟ್ಟಿ ಭಾರತದಲ್ಲಿ ಜಾರಿ ತಂದ ಪುಣ್ಯಾತ್ಮರು ಈ ಕಾಂಗ್ರೆಸ್ಸಿಗರು. ಇಸ್ಲಾಂಮಿಕ್ ರಾಷ್ಟ್ರಗಳಲ್ಲೇ ವಕ್ಫ್ ಕಾನೂನು ಇಲ್ಲ. ಎಲ್ಲೋ ಮೂರ್ನಾಲ್ಕು ದೇಶಗಳಲ್ಲಿ ಮಾತ್ರವಿದೆ ಎಂದು ಜೋಶಿ ಹೇಳಿದರು.
ಈ ಸುದ್ದಿಯನ್ನೂ ಓದಿ | Channapatna By Election: ಚನ್ನಪಟ್ಟಣದಲ್ಲಿಯೂ ಕಾಂಗ್ರೆಸ್‌ನಿಂದ ಗಿಫ್ಟ್ ಕೂಪನ್ ಮೋಸ: ಎಚ್.ಡಿ.ಕೆ ಆರೋಪ
ವಿರೋಧ ಲೆಕ್ಕಿಸದೆ ಕೊಟ್ರು ಸುಪ್ರೀಂ ಪವರ್
2013ರಲ್ಲಿ ಬಿಜೆಪಿ ವಿರೋಧದ ಹೊರತಾಗಿಯೂ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರು ವಕ್ಫ್‌ಗೆ ಸುಪ್ರೀಂ ಪವರ್ ಕೊಟ್ಟರು. ಅಂದಿನಿಂದ ಅಂದಾದುಂಡಿ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಈಗ ಇದಕ್ಕೆಲ್ಲ ಕಡಿವಾಣ ಹಾಕಲಿದೆ ಎಂದು ತಿಳಿಸಿದರು.
ತಿದ್ದುಪಡಿ ಬೆಂಬಲಿಸಿ
ಅಪರಿಮಿತ ಅಧಿಕಾರ ವ್ಯಾಪ್ತಿಯ ವಕ್ಫ್ ಕಾನೂನಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತರಲು ಮುಂದಾಗಿದೆ. ನ್ಯಾಯಸಮ್ಮತ ರೀತಿಯಲ್ಲಿ ವಕ್ಫ್ ಕಾನೂನು ತಿದ್ದುಪಡಿ ಮಾಡಲಿದ್ದು, ಕಾಂಗ್ರೆಸ್ ಮತ ರಾಜಕಾರಣ ಬಿಟ್ಟು ಇದನ್ನು ಬೆಂಬಲಿ ಎಂದು ಸಚಿವರು ಹೇಳಿದರು.
ಹಿಂದೂಗಳಿಗೆ ದ್ರೋಹ
ಹಿಂದೂಗಳ ವಿರುದ್ಧ ಓಲೈಕೆ ರಾಜಕಾರಣ, ಮುಸ್ಲಿಂ ತುಷ್ಟೀಕರಣ ಮಾಡುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ದೇಶದಲ್ಲಿ ದಶಕಗಳಿಂದ ಅಧಿಕಾರ ಕಳೆದುಕೊಂಡರೂ ಬುದ್ಧಿ ಬಂದಿಲ್ಲ. ಮತ್ತೂ ಜಾತ್ಯತೀತ ಹಣೆಪಟ್ಟಿ ನೆಪದಲ್ಲಿ ಹಿಂದೂಗಳಿಗೆ ದ್ರೋಹವೆಸಗುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ್ ಜೋಶಿ ಕಿಡಿಕಾರಿದರು.
ವಕ್ಫ್ ಭೂ ಕಬಳಿಕೆ ವಿರುದ್ಧ ಹಿಂದೂಗಳು ಮತ್ತು ರೈತರು ಒಂದಾಗಿ ಹೋರಾಟ ನಡೆಸುತ್ತಿದ್ದು, ಕಾಂಗ್ರೆಸ್ ನಾಯಕರಲ್ಲಿ ತಳಮಳ ಶುರುವಾಗಿದೆ. ಏನೇ ಆಗಲಿ ವಕ್ಫ್ ಸಂಚು ವಿರುದ್ಧದ ಹೋರಾಟ ನಿಲ್ಲದು ಎಂದು ಅವರು ಎಚ್ಚರಿಸಿದರು.
ಈ ಸುದ್ದಿಯನ್ನೂ ಓದಿ | Reliance Jio: ಡೇಟಾ ಬಳಕೆಯಲ್ಲಿ ರಿಲಯನ್ಸ್ ಜಿಯೊ ವಿಶ್ವದ ನಂಬರ್ ಒನ್! ಚೀನಾಗೆ ಹಿನ್ನಡೆ
ರೈತರೇ ಪಹಣಿ ಪರಿಶೀಲಿಸಿಕೊಳ್ಳಿ
ರಾಜ್ಯದ ರೈತರು, ಹಿಂದೂಗಳು ಸೇರಿದಂತೆ ಎಲ್ಲರೂ ಮೊದಲು ತಮ್ಮ ಮನೆ, ಹೊಲ, ತೋಟದ ಪಹಣಿ, ಮೂಟೇಶನ್ ಮುಂತಾದ ದಾಖಲೆಗಳನ್ನು ಪರಿಶೀಲಿಸಿಕೊಳ್ಳಿ ಎಂದು ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕರೆ ನೀಡಿದರು.