Thursday, 31st October 2024

Waqf Board: ಮತ್ತೆ ವಕ್ಫ್‌ ಪೆಡಂಭೂತ: ನಾಲ್ಕು ಜಿಲ್ಲೆಗಳ 1,765 ರೈತರ ಆಸ್ತಿಗಳಿಗೆ ನೋಟೀಸ್‌

ಹುಬ್ಬಳ್ಳಿ: ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ (Waqf Board) ಅವಾಂತರ ಮುಂದುವರಿದಿದ್ದು, ಮತ್ತೆ 4 ಜಿಲ್ಲೆಗಳ 1765 ಆಸ್ತಿಗಳ ಮೇಲೆ ವಕ್ಫ್ ಮೊಹರು ಬಿದ್ದಿದೆ. ಹಾವೇರಿ ಜಿಲ್ಲೆ (Haveri news) ಸವಣೂರು ತಾಲೂಕಿನಲ್ಲಿ 365, ಶಿಗ್ಗಾಂವಿ ತಾಲೂಕಿನಲ್ಲಿ 226, ಹಾನಗಲ್ಲ 350, ಹಾವೇರಿ 276, ರಾಣಿಬೆನ್ನೂರು 148, ಹಿರೇಕೆರೂರು 172, ಬ್ಯಾಡಗಿ 112 ಸೇರಿದಂತೆ ಒಟ್ಟು 1649 ಆಸ್ತಿಗಳ ಖಾತೆ ಬದಲಾವಣೆ ಮಾಡುವಂತೆ ವಕ್ಫ್ ಅಧಿಕಾರಿಗಳು ಕೋರಿದ್ದಾರೆ.

ಕಂದಾಯ ದಾಖಲೆಗಳಲ್ಲಿ ನಿಯಮಾನುಸಾರ ಅಗತ್ಯ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಅ. 24ರಂದು ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ.

ಇನ್ನು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ರೈತರಾದ ಅಪ್ಪಾಸಿಂಗ್‌, ಭೀಮಸಿಂಗ್‌, ಸಂತೋಷ ಮತ್ತು ಉಮೇಶ ರಜಪೂತ ಅವರ 5 ಎಕರೆ 30 ಗುಂಟೆ ಜಮೀನಿನಲ್ಲಿ ವಕ್ಫ್ ಹೆಸರು ಸೇರ್ಪಡೆಯಾಗಿದೆ. ಎರಡು ದಿನದ ಹಿಂದೆ ಪಹಣಿ ತೆಗೆಸಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ವಕ್ಫ್ ಹೆಸರು ಯಾವಾಗ ಸೇರಿದೆ ಎನ್ನುವುದು ರೈತರಿಗೆ ಗೊತ್ತೇ ಇಲ್ಲ.

111 ರೈತರಿಗೂ ವಕ್ಫ್ ನೋಟಿಸ್‌: ಬಾಗಲಕೋಟೆ ಜಿಲ್ಲೆ (bagalakote news) ತೇರದಾಳ ಭಾಗದ ರೈತರಿಗೂ ವಕ್ಫ್ ಬೋರ್ಡ್‌ನಿಂದ ನೋಟಿಸ್‌ ಬಂದಿವೆ. ರಬಕವಿ-ಬನಹಟ್ಟಿ ತಾಲೂಕಿನ ತೇರದಾಳ ಹೋಬಳಿ ವ್ಯಾಪ್ತಿಯ ವಿವಿಧ ಹಳ್ಳಿಯ 420 ಎಕರೆ ಭೂಮಿಗೆ ಸಂಬಂಧಿಸಿದಂತೆ 111 ರೈತರಿಗೆ ಕಳೆದ 2017, 2018, 2024ರಲ್ಲಿ ಬೆಂಗಳೂರಿನ ವಕ್ಫ್ ಬೋರ್ಡ್‌ನಿಂದ ನೋಟಿಸ್‌ ಬಂದಿದೆ. ಕೊಪ್ಪಳದಲ್ಲೂ ನಾಲ್ವರ ಆಸ್ತಿ ಮೇಲೂ ವಕ್ಫ್ ಆಸ್ತಿ ನಮೂದಾಗಿದೆ.

ಇದನ್ನೂ ಓದಿ: Karnataka Waqf Controversy : ರಾಜ್ಯದಲ್ಲೂ ವಕ್ಫ್‌ ಆಸ್ತಿ ವಿವಾದ; ಏನು, ಎತ್ತ? Complete Details