Thursday, 31st October 2024

Actor Darshan: ರಿಲೀಸ್‌ ಆದ ದರ್ಶನ್‌ ಸೀದಾ ಬೆಂಗಳೂರಿಗೆ; ಪತ್ನಿ ಮನೆಯಲ್ಲಿ ಮಗನ ಬರ್ತ್‌ಡೇ ಪಾರ್ಟಿ

actor darshan

ಬೆಂಗಳೂರು: ಮಧ್ಯಂತರ ಜಾಮೀನು (Interim bail) ಪಡೆದಿರುವ ನಟ ದರ್ಶನ್‌ (Actor Darshan) ಆರು ವಾರಗಳ ಮಟ್ಟಿಗೆ ಬಂಧಮುಕ್ತಗೊಂಡಿದ್ದು, ಜೈಲಿನಿಂದ ಬಿಡುಗಡೆಯಾದ ಕೂಡಲೇ ನೇರವಾಗಿ ಬೆಂಗಳೂರಿಗೆ (Bengaluru news) ಆಗಮಿಸಿದ್ದಾರೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ನಿವಾಸಕ್ಕೆ ತೆರಳಿರುವ ದರ್ಶನ್‌, ನಿನ್ನೆ ರಾತ್ರಿ ಮಗನ ಬರ್ತ್‌ಡೇ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ ಎಂದು ಗೊತ್ತಾಗಿದೆ.

ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ (Renuka Swamy murder Case) ಜೈಲು ಸೇರಿದ್ದ ದರ್ಶನ್​ಗೆ ಮಧ್ಯಂತರ ಜಾಮೀನು ಸಿಕ್ಕಿದ್ದು, ಬೆನ್ನು ನೋವಿಗೆ ಚಿಕಿತ್ಸೆ ಪಡೆಯಲು ಅವರಿಗೆ ಅವಕಾಶ ಮಾಡಿಕೊಡಲಾಗಿದೆ. ಇಂದು (ಅಕ್ಟೋಬರ್ 31) ದರ್ಶನ್‌ ಮಗ ವಿನೀಶ್ ಜನ್ಮದಿನವಾಗಿದ್ದು, ಜಾಮೀನು ಸಿಕ್ಕಿದ್ದು ಮಗನ ಬರ್ತ್‌ಡೇ ಗಿಫ್ಟ್‌ನಂತಾಗಿದೆ.

ಬಳ್ಳಾರಿಯಿಂದ ಕಾರಿನಲ್ಲಿ ಪತ್ನಿ ಜೊತೆ ಹೊಸಕೆರೆಹಳ್ಳಿ ನಿವಾಸಕ್ಕೆ ದರ್ಶನ್ ಆಗಮಿಸಿದ್ದಾರೆ. ದರ್ಶನ್ ಅವರನ್ನು ನೋಡಲು ಫ್ಯಾನ್ಸ್ ನೆರೆದಿದ್ದರು. ಅವರಿಂದ ತಪ್ಪಿಸಿಕೊಂಡು ದರ್ಶನ್ ಮನೆ ಸೇರಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯಬಾರದು ಎನ್ನುವ ಕಾರಣಕ್ಕೆ ದರ್ಶನ್​ ಮನೆಗೆ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ.

ಮಗ ವಿನೀಶ್​ಗೆ ಇಂದು ಜನ್ಮದಿನವಾಗಿರುವ ಹಿನ್ನೆಲೆಯಲ್ಲಿ ಮಧ್ಯರಾತ್ರಿ ದರ್ಶನ್‌ ಮತ್ತು ಫ್ಯಾಮಿಲಿ ಕೇಕ್ ಕತ್ತರಿಸಿ ಸಂಭ್ರಮಿಸಿದೆ. ಮಗನ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಊಟ ಮಾಡಿ ವಿಶ್ರಾಂತಿ ಪಡೆದಿದ್ದಾರೆ ಎಂದು ಗೊತ್ತಾಗಿದೆ. ಹಲವು ತಿಂಗಳಿನಿಂದ ಜೈಲಿನ ಕೋಣೆಯ ಕಲ್ಲಿನಂಥ ಬೆಡ್‌ ಮೇಲೆ ಮಲಗಿ ಬೆನ್ನು ನೋವು ಅನುಭವಿಸಿದ್ದ ದರ್ಶನ್‌, ನಿನ್ನೆ ಆರಾಮವಾಗಿ ವಿಶ್ರಾಂತಿ ಪಡೆದಿದ್ದಾರೆ.

ವೈದ್ಯಕೀಯ ಚಿಕಿತ್ಸೆಗಾಗಿ ಜೈಲಿನಿಂದ ಹೊರಬಂದಿರುವ ದರ್ಶನ್‌ ಆದಷ್ಟು ಬೇಗ ಆಸ್ಪತ್ರೆಗೆ ತೆರಳಬೇಕಿದ್ದು, ಇಂದು (ಅಕ್ಟೋಬರ್ 31) ಮಧ್ಯಾಹ್ನ ಆಸ್ಪತ್ರೆಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಆ ಬಳಿಕ ಅವರು ವೈದ್ಯರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ. ಅವರು ಎಲ್ಲಿ ಬೇಕಿದ್ದರೂ ಚಿಕಿತ್ಸೆ ಪಡೆಯಲು ಅವಕಾಶ ಇದೆ.

ದರ್ಶನ್ ಹೊರ ಬರುತ್ತಿದ್ದಂತೆ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಕೆಲವು ಕಡೆಗಳಲ್ಲಿ ಪಟಾಕಿ ಕೂಡ ಸಿಡಿಸಲಾಗಿದೆ. ಸದ್ಯದ ಮಟ್ಟಿಗೆ ಇದು ಮಧ್ಯಂತರ ಜಾಮೀನು. ಅವರು ಆರು ವಾರಗಳ ಬಳಿಕ ಮತ್ತೆ ಜೈಲು ಸೇರಬೇಕಿದೆ. ಅಲ್ಲಿಯವರೆಗೆ ಅವರ ಆರೋಗ್ಯ ಯಾವ ರೀತಿಯಲ್ಲಿ ಚೇತರಿಕೆ ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.