ಯೂಟ್ಯೂಬ್‌ನಲ್ಲಿ (Youtube) ರಷ್ಯಾದ ಮಾಧ್ಯಮ ಖಾತೆಗಳನ್ನು (Russian media accounts ) ಪುನಃ ಸ್ಥಾಪಿಸಲು ವಿಫಲವಾದ ಗೂಗಲ್‌ಗೆ (Google) ರಷ್ಯಾದ ನ್ಯಾಯಾಲಯ (Russian court) ಭಾರಿ ದಂಡ (Penalty to Google) ವಿಧಿಸಿದೆ. ಕ್ರೆಮ್ಲಿನ್ ಪರ ಮತ್ತು ಸರ್ಕಾರಿ ಮಾಧ್ಯಮಗಳ ಖಾತೆಗಳನ್ನು ಪುನಃಸ್ಥಾಪಿಸಲು ನಿರಾಕರಿಸಿರುವ ಗೂಗಲ್‌ಗೆ 2.50 ಡೆಸಿಲಿಯನ್ (ಒಂದು ಸಂಖ್ಯೆ ಮಂದೆ 30 ಸೊನ್ನೆಗಳು ಬರುವಷ್ಟು ಮೊತ್ತ) ಡಾಲರ್‌ಗೂ ಅಧಿಕ ದಂಡ ವಿಧಿಸಲಾಗಿದೆ.
ಗೂಗಲ್ ವಿರುದ್ಧ 2020ರಿಂದ ಈ ದಂಡ ವಿಧಿಸಲಾಗಿದೆ. ಸರ್ಕಾರದ ಪರ ಮಾಧ್ಯಮಗಳಾದ ತ್ಸಾರ್ಗ್ರಾಡ್ ಮತ್ತು ಆರ್‌ಐಎ ಫ್ಯಾನ್ ತಮ್ಮ ಯೂಟ್ಯೂಬ್ ಚಾನೆಲ್‌ಗಳನ್ನು ನಿರ್ಬಂಧಿಸಿದ್ದಕ್ಕಾಗಿ ಗೂಗಲ್ ವಿರುದ್ಧ ಮೊಕದ್ದಮೆಗಳನ್ನು ದಾಖಲಿಸಿ ಗೆದ್ದಿದೆ. ವಿಧಿಸಲಾದ ದಂಡ ಪ್ರತಿ ವಾರ ದ್ವಿಗುಣವಾಗಿದ್ದು, ಪ್ರಸ್ತುತ ಸುಮಾರು 2.5 ಡೆಸಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಸುದೀರ್ಘ ನಾಲ್ಕು ವರ್ಷಗಳ ಕಾನೂನು ಹೋರಾಟದ ಅನಂತರ ಈ ಅಂಕಿ ಅಂಶ ಲೆಕ್ಕಹಾಕಲಾಗಿದ್ದು, ಈ ಮೊತ್ತವು ಜಾಗತಿಕ ಜಿಡಿಪಿ ಮೀರಿದೆ ಎಂದು ವಿಶ್ವಬ್ಯಾಂಕ್ ಅಂದಾಜಿಸಿದೆ.
ಏನಿದು ಪ್ರಕರಣ?
2020ರಲ್ಲಿ ಗೂಗಲ್ ಮಾಲೀಕತ್ವದ ಯೂಟ್ಯೂಬ್ ಯುಎಸ್ ನಿರ್ಬಂಧಗಳಿಗೆ ಪ್ರತಿಕ್ರಿಯೆಯಾಗಿ ಅಲ್ಟ್ರಾ ನ್ಯಾಷನಲಿಸ್ಟ್ ರಷ್ಯಾದ ಚಾನೆಲ್ ತ್ಸಾರ್ಗ್ರಾಡ್ ಅನ್ನು ನಿಷೇಧಿಸಿತು. ಇದು ಕಾನೂನು ಹೋರಾಟಕ್ಕೆ ಕಾರಣವಾಗಿತ್ತು. ಪುಟಿನ್ ರಕ್ಷಣಾ ಸಚಿವಾಲಯದ ಒಡೆತನದ ಜ್ವೆಜ್ಡಾ ಸೇರಿದಂತೆ ರಷ್ಯಾದ 17 ಮಾಧ್ಯಮ ಕೇಂದ್ರಗಳು ತಮ್ಮನ್ನು ನಿರ್ಬಂಧಿಸಿದ್ದಕ್ಕಾಗಿ ಗೂಗಲ್ ವಿರುದ್ಧ ಮೊಕದ್ದಮೆ ಹೂಡಿವೆ. ಇದರಿಂದ ನ್ಯಾಯಾಲಯವು 1 ಲಕ್ಷ ರೂಬಲ್ಸ್ ಅಂದರೆ (86,182 ಲಕ್ಷ ರೂ. ) ದಂಡವನ್ನು ವಿಧಿಸುತ್ತಿದೆ. ಈ ಮೊತ್ತ ಪ್ರತಿ ವಾರ ದ್ವಿಗುಣಗೊಳ್ಳುತ್ತದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಷ್ಯಾ ಪರ ವಕೀಲ ಇವಾನ್ ಮೊರೊಜೊವ್, ಆಡಳಿತಾತ್ಮಕ ಅಪರಾಧಗಳ ಕೋಡ್‌ನ ಆರ್ಟಿಕಲ್ 13.41 ರ ಅಡಿಯಲ್ಲಿ ನ್ಯಾಯಾಲಯವು ಗೂಗಲ್ ಗೆ ದಂಡವನ್ನು ವಿಧಿಸಿದೆ. ಅಲ್ಲದೇ ರಷ್ಯಾದ ಚಾನೆಲ್‌ಗಳನ್ನು ಯೂಟ್ಯೂಬ್ ನಲ್ಲಿ ಮರುಸ್ಥಾಪಿಸಲು ಆದೇಶಿಸಿದೆ. ದಂಡದ ಮೊತ್ತವು ಬಡ್ಡಿಯ ಕಾರಣದಿಂದಾಗಿ ಪ್ರತಿ ವಾರ ದ್ವಿಗುಣಗೊಳ್ಳುತ್ತಿದೆ. ಒಂಬತ್ತು ತಿಂಗಳೊಳಗೆ ಈ ಸಮಸ್ಯೆ ಪರಿಹಾರವಾಗದೇ ಇದ್ದಾರೆ ದಂಡಗಳು ಅನಿರ್ದಿಷ್ಟವಾಗಿ ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಗೂಗಲ್ ಪ್ರಸ್ತುತ 88 ಶತಕೋಟಿ ಡಾಲರ್ ತ್ರೈಮಾಸಿಕ ಆದಾಯ ಹೊಂದಿದೆ. ಆದರೆ ನ್ಯಾಯಾಲಯ ವಿಧಿಸಿರುವ ದಂಡವು ಇದಕ್ಕಿಂತಲೂ ಹೆಚ್ಚಾಗಿದೆ. ಇದು ಕಂಪನಿಗೆ ಹಣಕಾಸಿನ ಹೊರೆ ಉಂಟು ಮಾಡಿದೆ ಎಂದು ತಿಳಿಸಿದ್ದಾರೆ.
ರಷ್ಯಾದ ವಿರುದ್ಧ ಗೂಗಲ್ ನಡೆ ?
ದಂಡದ ಮೊತ್ತ ಅಧಿಕವಾಗಿದ್ದರೂ ಇದನ್ನು ವಸೂಲಿ ಮಾಡಲು ಸಾಧ್ಯವಿಲ್ಲ ಎಂದು ಅನೇಕ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ. ಈ ತೀರ್ಪು ರಷ್ಯಾ ಮತ್ತು ಪ್ರಮುಖ ಪಾಶ್ಚಾತ್ಯ ಟೆಕ್ ಕಂಪನಿಗಳ ನಡುವೆ ನಡೆಯುತ್ತಿರುವ ಸಂಘರ್ಷವನ್ನು ಎತ್ತಿ ತೋರಿಸಿದೆ. 2022 ರಿಂದ ಗೂಗಲ್ ರಷ್ಯಾದಲ್ಲಿ ತನ್ನ ಹೆಚ್ಚಿನ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಕಂಪೆನಿಯು ರಷ್ಯಾದಲ್ಲಿ 200 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿತ್ತು. ಆದರೆ ಈಗ ಅವರೆಲ್ಲರನ್ನೂ ವಜಾಗೊಳಿಸಿದೆ.
Israel–Hamas war: ಸೈನಿಕರ ಕೊರತೆ ಎದುರಿಸುತ್ತಿರುವ ಇಸ್ರೇಲ್; ಸೈನ್ಯಕ್ಕೆ ಸೇರಲು ಸರ್ಕಾರ ಮನವಿ
ಗೂಗಲ್‌ನ ಜಾಗತಿಕ ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಪ್ರಯತ್ನಿಸುತ್ತಿದೆ. ಆದರೂ ಗೂಗಲ್‌ನ ಮೂಲ ಕಂಪನಿಯಾದ ಆಲ್ಫಾಬೆಟ್ ಆತ್ಮವಿಶ್ವಾಸವನ್ನು ಕಳೆದುಕೊಂಡಿಲ್ಲ. ಕಂಪನಿಯ ಗಳಿಕೆಯು ಅದರ ವಿಶ್ವಾಸವನ್ನು ಹೆಚ್ಚಿಸಿದೆ. ನ್ಯಾಯಾಲಯದ ತೀರ್ಪು ಅಥವಾ ಅದರ ಮುಂದಿನ ನಡೆಯ ಬಗ್ಗೆ ಗೂಗಲ್ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ ಅದನ್ನು ಸಾರ್ವಜನಿಕವಾಗಿ ನೀಡಬೇಕಾಗಿಯೂ ಇಲ್ಲ ಎನ್ನುತ್ತಾರೆ ಕಾನೂನು ತಜ್ಞರು.