Saturday, 23rd November 2024

Border Disengagement: ಉದ್ವಿಗ್ನವಾಗಿದ್ದ ಗಡಿಯಲ್ಲೀಗ ಹಬ್ಬದ ಸಂಭ್ರಮ; ಪರಸ್ಪರ ಸಿಹಿ ಹಂಚಿಕೊಂಡ ಭಾರತ-ಚೀನಾ ಸೈನಿಕರು

Border Disengagement

ಲಡಾಕ್‌: ಪೂರ್ವ ಲಡಾಖ್‌ನ ವಾಸ್ತವಿಕ ನಿಯಂತ್ರಣ ರೇಖೆ (LAC) ಬಳಿಯಿಂದ ಭಾರತ ಮತ್ತು ಚೀನಾ ಸೈನಿಕರನ್ನು ಹಿಂಪಡೆಯಲಾಗುತ್ತಿದ್ದು, ಬಹುತೇಕ ಪ್ರಕ್ರಿಯೆ ಪೂರ್ಣಗೊಂಡಿದೆ (Border Disengagement). ಈ ಮಧ್ಯೆ ಮಹತ್ವದ ಬೆಳವಣಿಗೆಯೊಂದರಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಗುರುವಾರ (ಅ. 31) ಉಭಯ ದೇಶಗಳ ಯೋಧರು ಪರಸ್ಪರ ಸಿಹಿ ಹಂಚಿಕೊಂಡಿದ್ದಾರೆ. ಆ ಮೂಲಕ ಹಬ್ಬದ ಸಂದರ್ಭವನ್ನು ಇನ್ನಷ್ಟು ಸ್ಮರಣೀಯವಾಗಿಸಿಕೊಂಡಿದ್ದಾರೆ.

ಲಡಾಖ್‌ನ ಚುಶುಲ್ ಮಾಲ್ಡೋ ಮತ್ತು ದೌಲತ್ ಬೇಗ್ ಓಲ್ಡಿ, ಅರುಣಾಚಲ ಪ್ರದೇಶದ ಬಂಚಾ (ಕಿಬುಟು ಬಳಿ) ಮತ್ತು ಬುಮ್ಲಾ ಹಾಗೂ ಸಿಕ್ಕಿಂನ ನಾಥುಲಾದಲ್ಲಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಇತ್ತೀಚಿಗೆ ನಡೆಸಲಾದ ಗಸ್ತು ಒಪ್ಪಂದದ ಪ್ರಕಾರ ಲಡಾಖ್‌ನ ಡೆಪ್ಸಾಂಗ್ ಮತ್ತು ಡೆಮ್ಚೋಕ್‌ನಿಂದ ತಾತ್ಕಾಲಿಕ ಸೇನಾ ಶಿಬಿರ ಸೇರಿದಂತೆ ಮಿಲಿಟರಿ ಸಿಬ್ಬಂದಿ ಮತ್ತು ಮೂಲ ಸೌಕರ್ಯಗಳನ್ನು ಹಿಂಪಡೆಯಲಾಗುತ್ತಿದೆ. ಗಡಿ ಪ್ರದೇಶಗಳಲ್ಲಿ 2020ರ ಏಪ್ರಿಲ್‌ಗಿಂತ ಹಿಂದಿನ ಸ್ಥಿತಿ ಸ್ಥಾಪಿಸುವ ಗುರಿ ಹೊಂದಲಾಗಿದೆ.

ಈ ಒಪ್ಪಂದವು 2020ರ ಮೇ-ಜೂನ್‌ನಲ್ಲಿ ಪಾಂಗೊಂಗ್ ಸರೋವರ ಮತ್ತು ಗಾಲ್ವಾನ್ ಪ್ರದೇಶಗಳಲ್ಲಿ ನಡೆದ ಘರ್ಷಣೆಗಳಿಂದ ಉಂಟಾದ ಮಿಲಿಟರಿ ಮತ್ತು ರಾಜತಾಂತ್ರಿಕ ಉದ್ವಿಗ್ನತೆಯನ್ನು ಕೊನೆಗೊಳಿಸುವ ಸಾಧ್ಯತೆ ಇದೆ. ಈ ಘರ್ಷಣೆಯ ವೇಳೆ ಗಾಲ್ವಾನ್‌ನಲ್ಲಿ ಸುಮಾರು 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು.

ಸೇನೆಯನ್ನು ಹಿಂಪಡೆಯುವ ಕಾರ್ಯಾಚರಣೆಗಳನ್ನು ಸಂವಹನದ ಮೂಲಕ ಸಂಯೋಜಿಸಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ಎರಡೂ ದೇಶಗಳ ಸ್ಥಳೀಯ ಮಿಲಿಟರಿ ಕಮಾಂಡರ್‌ಗಳು ಹಾಡ್‌ಲೈನ್‌ ಕರೆ ಮಾಡುವ ಮೂಲಕ ಮೇಲ್ಚಿಚಾರಣೆ ನಡೆಸುತ್ತಾರೆ. ʼʼಚೀನಾ ತನ್ನ ಸೈನ್ಯವನ್ನು ಹಿಂತೆಗೆದುಕೊಂಡಿದೆಯೇ ಎನ್ನುವುದನ್ನು ಖಚಿತಪಡಿಸಲಾಗುತ್ತಿದೆ. ನಿಯಮಿತ ಗಸ್ತು ಆರಂಭಿಸುವ ಮೊದಲು ಎರಡೂ ಕಡೆಯ ಕಮಾಂಡರ್‌ಗಳು ಪರಸ್ಪರ ಮಾಹಿತಿ ನೀಡುತ್ತಾರೆʼʼ ಎಂದು ಭಾರತೀಯ ಸೇನಾ ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಒಪ್ಪಂದದ ಪ್ರಕಾರ ಭಾರತ ಮತ್ತು ಚೀನಾ ಎರಡೂ ಡೆಪ್ಸಾಂಗ್ ಮತ್ತು ಡೆಮ್ಚೋಕ್‌ನಲ್ಲಿ ಕಣ್ಗಾವಲು ನಡೆಸುವ ಆಯ್ಕೆಗಳನ್ನು ಹೊಂದಿವೆ.

ಉತ್ತಮ ಬಾಂಧವ್ಯ ಉಳಿಸಲು ಯತ್ನ

ವಾಪಸಾತಿ ಪ್ರಕ್ರಿಯೆಯ ಬಗ್ಗೆ ಮಾತನಾಡಿದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು, ʼʼಭಾರತ ಮತ್ತು ಚೀನಾ ನಡುವಿನ ನಂಬಿಕೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸಲಾಗುತ್ತಿದೆʼʼ ಎಂದು ಘೋಷಿಸಿದ್ದಾರೆ. ಸೇನಾ ವಾಪಸಾತಿ ಪೂರ್ಣಗೊಂಡ ಬಳಿಕ ಈ ಪ್ರದೇಶದಲ್ಲಿ ಮಿಲಿಟರಿ ಉದ್ವಿಗ್ನತೆ ಕಡಿಮೆಯಾಗಲಿದೆ.

2020ರಲ್ಲಿ ಏನಾಗಿತ್ತು?

2020ರಿಂದ ಭಾರತ ಮತ್ತು ಚೀನಾದ ಸೇನೆಗಳು ಪೂರ್ವ ಲಡಾಖ್​​ನ ಡೆಪ್ಸಾಂಗ್ ಮತ್ತು ಡೆಮ್ಚೋಕ್ ಪ್ರದೇಶಗಳಲ್ಲಿ ಗಸ್ತಿಗಾಗಿ ಸಂಘರ್ಷ ನಡೆಸಿದ್ದವು. 2020ರ ಜೂನ್‌ನಲ್ಲಿ ಗಲ್ವಾನ್ ಕಣಿವೆಯಲ್ಲಿ ಭೀಕರ ಘರ್ಷಣೆಯೂ ನಡೆದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧಗಳು ಹದಗೆಟ್ಟಿದ್ದವು. ಇದು ಗಂಭೀರ ಮಿಲಿಟರಿ ಸಂಘರ್ಷಕ್ಕೂ ದಾರಿ ಮಾಡಿಕೊಟ್ಟಿತ್ತು. ಇದೀಗ ಸುಮಾರು 4 ವರ್ಷಗಳ ಬಳಿಕೆ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲಾಗಿದೆ. ಗಡಿಯಲ್ಲಿ ಶಾಂತಿ ನೆಲೆಸದಿದ್ದರೆ ಚೀನಾ ಜತೆಗಿನ ಬಾಂಧವ್ಯ ಸಾಮಾನ್ಯವಾಗಿರಲು ಸಾಧ್ಯವಿಲ್ಲ ಎಂದು ಭಾರತ ಹೇಳಿತ್ತು.

ಈ ಸುದ್ದಿಯನ್ನೂ ಓದಿ: India China Border: ಜೈಶಂಕರ್, ಅಜಿತ್‌ ದೋವಲ್‌ ಸಂಧಾನ ಯಶಸ್ವಿ, ಗಲ್ವಾನ್ ಸೇರಿದಂತೆ 4 ಸ್ಥಳಗಳಿಂದ ಚೀನಾ ಪಡೆ ಹಿಂದಕ್ಕೆ