Thursday, 31st October 2024

IPL 2025: ರಿಟೇನ್‌ನಲ್ಲಿ ಕೊಹ್ಲಿ ದಾಖಲೆ ಮುರಿಯುವರೇ ಹೆನ್ರಿಚ್ ಕ್ಲಾಸೆನ್?

ಮುಂಬಯಿ: ಐಪಿಎಲ್‌(IPL 2025) ರಿಟೇನ್‌ ಪ್ರಕ್ರಿಯೆಗೆ(IPL 2025 Retention) ಕ್ಷಣಗಣನೆ ಶುರುವಾಗಿದೆ. ಇಂದು ಸಂಜೆ 5.30ಕ್ಕೆ ಎಲ್ಲ ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ಪ್ರಕಟಿಸಲಿದೆ. ಇದಕ್ಕೂ ಮುನ್ನ ಸನ್‌ರೈಸರ್ಸ್‌ ಹೈದರಾಬಾದ್‌(Sunrisers Hyderabad) ಫ್ರಾಂಚೈಸಿ ದಕ್ಷಿಣ ಆಫ್ರಿಕಾದ ಹಾರ್ಡ್‌ ಹಿಟ್ಟರ್‌ ಹೆನ್ರಿಚ್ ಕ್ಲಾಸೆನ್(Heinrich Klaasen) ಅವರನ್ನು 23 ಕೋಟಿ ರೂ. ನೀಡಿ ಉಳಿಸಿಕೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. ಒಂದೊಮ್ಮೆ ಕ್ಲಾಸೆನ್‌ರನ್ನು ಈ ಮೊತ್ತಕ್ಕೆ ಉಳಿಸಿಕೊಂಡರೆ ಕೊಹ್ಲಿಯ ದಾಖಲೆ ಪತನಗೊಳ್ಳಲಿದೆ.

ಐಪಿಎಲ್ 2018 ರ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿಯನ್ನು 17 ಕೋಟಿ ರೂ.ಗೆ ರಿಟೇನ್‌ ಮಾಡಿಕೊಂಡಿತ್ತು. ಇದು ಆಟಗಾರನೊಬ್ಬ ರಿಟೇನ್‌ನಲ್ಲಿ ಪಡೆದ ಈ ವರೆಗಿನ ಗರಿಷ್ಠ ಮೊತ್ತ. ಇದೀಗ ಕ್ಲಾಸೆನ್‌ 23 ಕೋಟಿ ರೂ. ಪಡೆದರೆ ದಾಖಲೆ ಇವರ ಪಾಲಾಗಲಿದೆ. ಕ್ಲಾಸೆನ್‌ ಜತೆಗೆ ನಾಯಕ ಪ್ಯಾಟ್​ ಕಮ್ಮಿನ್ಸ್​ (18 ಕೋಟಿ ರೂ.), ಅಭಿಷೇಕ್​ ಶರ್ಮ (14 ಕೋಟಿ ರೂ.), ನಿತೀಶ್‌ ರೆಡ್ಡಿಗೆ(6 ಕೋಟಿ ರೂ.) ಅವರನ್ನೂ ರಿಟೇನ್​ ಮಾಡಿಕೊಳ್ಳಲಿದೆ ಎನ್ನಲಾಗಿದೆ.

ಇದನ್ನೂ ಓದಿ IND vs NZ 3rd Test: ಮುಂಬೈ ಟೆಸ್ಟ್‌ಗೆ ಸ್ಪರ್ಧಾತ್ಮಕ ಪಿಚ್‌

ಹಾಲಿ ಚಾಂಪಿಯನ್‌ ಕೋಲ್ಕತಾ ನೈಟ್‌ ರೈಡರ್ ತಂಡ ನಾಯಕ ಶ್ರೇಯಸ್‌ ಅಯ್ಯರ್‌ ಅವರನ್ನೇ ಕೈಬಿಡಲು ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಉಳಿಕೆ ವಿಚಾರದಲ್ಲಿ ಫ್ರಾಂಚೈಸಿ ಮತ್ತು ಶ್ರೇಯಸ್‌ ಮಧ್ಯೆ ನಡೆದ ಮಾತುಕತೆ ವಿಫ‌ಲವಾದ ಕಾರಣ ಅವರು ತಂಡ ತೊರೆಯುವ ಸಾಧ್ಯತೆಯಿದೆ. ಲಕ್ನೋ ತಂಡ ರಾಹುಲ್‌ ಅವರನ್ನು ರಿಟೇನ್‌ ಮಾಡಿಕೊಳ್ಳಲು ಮುಂದಾದರೂ ರಾಹುಲ್‌ ವೈಯಕ್ತಿಕ ಕಾರಣ ನೀಡಿ ತಂಡ ತೊರೆದಿದ್ದಾರೆ ಎನ್ನಲಾಗಿದೆ.

ಐಪಿಎಲ್‌ ರೀಟೆನ್ಷನ್‌ ನಿಯಮದ ಪ್ರಕಾರ ಗರಿಷ್ಠ 6 ಆಟಗಾರರನ್ನು ಉಳಿಸಿಕೊಳ್ಳಬಹುದಾಗಿದೆ. ಒಟ್ಟಾರೆ ಆಟಗಾರರ ಖರೀದಿಗೆ ತಂಡಗಳು ₹120 ಕೋಟಿ ವೆಚ್ಚ ಮಾಡಬಹುದು. ರಿಟೇನ್‌ಗಾಗಿ ಫ್ರಾಂಚೈಸಿಯೊಂದು ಒಟ್ಟು 75 ಕೋಟಿ ವರೆಗೂ ವೆಚ್ಚ ಮಾಡಬಹುದಾಗಿದೆ. ಫ್ರಾಂಚೈಸಿಯೂ ಯಾವುದೇ ಆಟಗಾರನಿಗೆ ಬಿಸಿಸಿಐ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಮೊತ್ತ ನೀಡಬಹುದು. ಆದರೆ 75 ಕೋಟಿ ಮೀರುವಂತಿಲ್ಲ. ಬಿಸಿಸಿಐ ನಿಗದಿಯ ಪಡಿಸಿದ ಮೊತ್ತ ಮೊದಲ ಆಟಗಾರನಿಗೆ 18 ಕೋಟಿ, 2ನೇ ಆಟಗಾರನಿಗೆ 14 ಕೋಟಿ, 3ನೇ ಆಟಗಾರನಿಗೆ 11 ಕೋಟಿ, 4 ಹಾಗೂ 5ನೇ ಆಟಗಾರನಿಗೆ ಕ್ರಮವಾಗಿ 18 ಕೋಟಿ ಹಾಗೂ 14 ಕೋಟಿ ನೀಡಬಹುದಾಗಿದೆ. ಅಂ.ರಾ. ಕ್ರಿಕೆಟ್‌ ಆಡದ ಆಟಗಾರನನ್ನು 4 ಕೋಟಿಗೆ ಉಳಿಸಿಕೊಳ್ಳಬಹುದು.