Thursday, 31st October 2024

Pushpa 2: ʼಪುಷ್ಪ 2ʼ ಚಿತ್ರತಂಡದಿಂದ ಫ್ಯಾನ್ಸ್‌ಗೆ ದೀಪಾವಳಿ ಗಿಫ್ಟ್‌; ಹೊಸ ಪೋಸ್ಟರ್‌ನಲ್ಲಿ ಮಿಂಚಿದ ಅಲ್ಲು ಅರ್ಜುನ್‌-ರಶ್ಮಿಕಾ ಮಂದಣ್ಣ

Pushpa 2

ಹೈದರಾಬಾದ್‌: ಬಹು ನಿರೀಕ್ಷಿತ ಅಲ್ಲು ಅರ್ಜುನ್‌ (Allu Arjun) – ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ ʼಪುಷ್ಪ 2ʼ (Pushpa 2) ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಸೆಟ್ಟೇರಿದಾಗಿನಿಂದಲೇ ವೀಕ್ಷಕರ ಕುತೂಹಲ ಕೆರಳಿಸಿದ ಟಾಲಿವುಡ್‌ನ ಈ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ಡಿ. 5ರಂದು ತೆರೆ ಕಾಣಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್‌, ಹಾಡುಗಳ ಮೂಲಕ ಗಮನ ಸೆಳೆದ ʼಪುಷ್ಪ 2ʼ ಸಿನಿಮಾ ಇದೀಗ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್‌ ನೀಡಿದೆ. ಹೊಸ ಪೋಸ್ಟರ್‌ ರಿಲೀಸ್‌ ಮಾಡುವ ಮೂಲಕ ಫ್ಯಾನ್ಸ್‌ನ ನಿರೀಕ್ಷೆಯನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದೆ.

ಹೊಸ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ರೊಮ್ಯಾಂಟಿಕ್‌ ಆಗಿ ಪೋಸ್‌ ನೀಡಿದ್ದಾರೆ. ಪುಷ್ಟರಾಜ್‌ ಆಗಿ ಅಲ್ಲು ಅರ್ಜುನ್‌ ಮತ್ತು ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಹೊಸ ಪೋಸ್ಟರ್‌ನಲ್ಲಿ ಆರೆಂಜ್‌ ಷರ್ಟ್‌ನಲ್ಲಿ ಅಲ್ಲು ಅರ್ಜುನ್‌ ಕಂಗೊಳಿಸಿದರೆ, ಹಸಿರು ಸೀರೆ ಉಟ್ಟ ರಶ್ಮಿಕಾ ಮಿಂಚಿದ್ದಾರೆ. ಇಬ್ಬರೂ ಅಡುಗೆ ಕೋಣೆಯಲ್ಲಿ ಆತ್ಮೀಯ ಕ್ಷಣಗಳನ್ನು ಕಳೆಯುವ ಸಂದರ್ಭ ಇದಾಗಿದ್ದು, ಇಬ್ಬರ ಕೆಮಿಸ್ಟ್ರಿ ಕಿಚ್ಚು ಹಚ್ಚುವಂತಿದೆ.

ʼʼಪುಷ್ಪರಾಜ್‌ ಮತ್ತು ಶ್ರೀವಲ್ಲಿ ಕಡೆಯಿಂದ ದೀಪಾವಳಿ ಹಬ್ಬದ ಶುಭಾಶಯʼʼ ಎಂದು ಚಿತ್ರತಂಡ ಪೋಸ್ಟರ್‌ನಲ್ಲಿ ಬರೆದುಕೊಂಡಿದೆ. ಸುಕುಮಾರ್ ಆ್ಯಕ್ಷನ್‌ ಕಟ್‌ ಹೇಳಿರುವ ʼಪುಷ್ಪ: ದಿ ರೂಲ್‌ʼ (ʼಪುಷ್ಪ 2ʼ) 2021ರಲ್ಲಿ ತೆರೆಕಂಡು ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್‌ ಮಾಡಿದ ʼಪುಷ್ಪʼ ಚಿತ್ರದ ಸೀಕ್ವೆಲ್‌. ಇದೇ ಕಾರಣಕ್ಕಾಗಿ ಈ ಮಟ್ಟಿಗೆ ಕ್ರೇಜ್‌ ಹುಟ್ಟು ಹಾಕಿದೆ. ರಕ್ತ ಚಂದನ ಮರದ ಕಳ್ಳ ಸಾಗಾಣಿಕೆಯ ಸುತ್ತ ನಡೆಯುವ ಕಥೆ ರೋಚಕ ಘಟ್ಟದಲ್ಲಿ ಅಂತ್ಯವಾಗಿರುವುದರಿಂದ ಮುಂದೇನಾಗಲಿದೆ ಎನ್ನುವ ಪ್ರಶ್ನೆ ಪ್ರೇಕ್ಷಕರನ್ನು ಕಾಡುತ್ತಲೇ ಇದೆ. ಹೀಗಾಗಿ ಅಭಿಮಾನಿಗಳು ಚಿತ್ರವನ್ನು ಕಣ್ತುಂಬುಕೊಳ್ಳಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ರಿಲೀಸ್‌ಗೂ ಮುನ್ನ 1,000 ಕೋಟಿ ರೂ. ಗಳಿಸಿದ ʼಪುಷ್ಪ 2ʼ?

ʼಪುಷ್ಪ 2ʼ ಕ್ರೇಜ್‌ ಎಷ್ಟರಮಟ್ಟಿಗೆ ಇದೆ ಎಂದರೆ ಇದು ರಿಲೀಸ್‌ಗೆ ಮುನ್ನವೇ ದೊಡ್ಡ ಮೊತ್ತದ ಲಾಭ ಮಾಡಿದೆ ಎನ್ನಲಾಗುತ್ತಿದೆ. ಬಿಡುಗಡೆಗೆ ಸುಮಾರು 50 ದಿನ ಬಾಕಿ ಇರುವಾಗಲೇ 1,085 ಕೋಟಿ ರೂ. ಗಳಿಸಿದೆ ಎಂದು ವರದಿಯೊಂದು ತಿಳಿಸಿದೆ. ಥಿಯೇಟ್ರಿಕಲ್‌ ರೈಟ್ಸ್‌ನಿಂದ 640 ಕೋಟಿ ರೂ. ಹರಿದು ಬಂದರೆ, ಒಟಿಟಿ ಹಕ್ಕು ನೆಟ್‌ಫ್ಲಿಕ್ಸ್‌ಗೆ 275 ಕೋಟಿ ರೂ.ಗೆ ಮಾರಾಟವಾಗಿದೆ. ಮ್ಯೂಸಿಕ್‌ ರೈಟ್ಸ್‌ನಿಂದ 65 ಕೋಟಿ ರೂ., ಸ್ಯಾಟ್‌ಲೈಟ್‌ ಹಕ್ಕಿನಿಂದ 85 ಕೋಟಿ ರೂ. ಆದಾಯ ಬಂದಿದೆ ಎನ್ನಲಾಗುತ್ತಿದೆ. ಫಹದ್ ಫಾಸಿಲ್, ಡಾಲಿ ಧನಂಜಯ್, ಜಗಪತಿ ಬಾಬು, ಪ್ರಕಾಶ್ ರಾಜ್, ಸುನೀಲ್ ಮತ್ತು ಅನಸೂಯಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಪುಷ್ಪ 2’ ಚಿತ್ರ ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ, ಹಿಂದಿ ಮತ್ತು ಬೆಂಗಾಳಿಯಲ್ಲಿ ಸುಮಾರು 3,000 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನೂ ಓದಿ: Pushpa 2: ʼಪುಷ್ಪ 2ʼ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್‌ ನಟಿ; ಹೆಚ್ಚಾಯ್ತು ಅಲ್ಲು ಅರ್ಜುನ್‌ ಚಿತ್ರದ ಮೇಲಿನ ನಿರೀಕ್ಷೆ