ಮುಂಬಯಿ: ಕಳೆದೊಂದು ತಿಂಗಳಿನಿಂದ ಐಪಿಎಲ್ ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದ ಆಟಗಾರರ ರಿಟೇನ್ ಪ್ರಕ್ರಿಯೆ(IPL 2025) ಈಗಾಗಲೇ ಮುಕ್ತಾಯ ಕಂಡಿದೆ. ನಿನ್ನೆ(ಗುರುವಾರ) ಸಂಜೆ ಎಲ್ಲ ಫ್ರಾಂಚೈಸಿಗಳು ತಮ್ಮ ಉಳಿಕೆಯ ಮತ್ತು ಬಿಡುಗಡೆಯ ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಇನ್ನೇನಿದ್ದರೂ ಮೆಗಾ ಹರಾಜಿನ ಸಿದ್ಧತೆಯೊಂದೇ ಬಾಕಿ.
ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರನ್ನು ಈ ಬಾರಿ ಅನ್‌ಕ್ಯಾಪ್ಡ್ ಆಟಗಾರನನ್ನಾಗಿ ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಮಾಡಿಕೊಂಡಿದೆ. ಅಲ್ಲಿಗೆ ಧೋನಿ ಅಭಿಮಾನಿಗಳ ಆತಂಕ ದೂರವಾಗಿದೆ. ಮತ್ತೊಮ್ಮೆ ಅವರ ಆಟವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಲಭಿಸಿದೆ. ಆದರೆ, ಧೋನಿ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಅನುಮಾನ. ಮೂಲಗಳ ಪ್ರಕಾರ ಧೋನಿ ಈ ಇಂಪ್ಯಾಕ್ಟ್ ಆಟಗಾರನಾಗಿ ಬ್ಯಾಟ್ ಬೀಸಲಿದ್ದಾರೆ ಎಂದು ತಿಳಿದುಬಂದಿದೆ.
ಡೆಲ್ಲಿ ತಂಡದಿಂದ ಹೊರ ನಡೆದಿರುವ, ಧೋನಿಯ ಅಪ್ಪಟ ಶಿಷ್ಯ ರಿಷಭ್ ಪಂತ್ ಅವರನ್ನು ಹರಾಜಿನಲ್ಲಿ ಚೆನ್ನೈ ತಂಡ ದೊಡ್ಡ ಮೊತ್ತವನ್ನಾದೂ ನೀಡಿ ಖರೀದಿಸಲು ಮುಂದಾಗಿದೆ ಎನ್ನಲಾಗಿದೆ. ಪಂತ್ ಚೆನ್ನೈ ಸೇರಿದರೆ ತಂಡಕ್ಕೆ ಪೂರ್ಣ ಪ್ರಮಾಣದ ಕೀಪರ್ ಕಮ್ ಬ್ಯಾಟರ್ ಸಿಕ್ಕ ಹಾಗಾಗುತ್ತದೆ. ಧೋನಿ ಕೂಡ ಕೆಲವು ವರ್ಷ ಐಪಿಎಲ್ ಆಡುವುದನ್ನು ಮುಂದುವರಿಸಬಹುದು.
ಕಳೆದ 2 ಆವೃತ್ತಿಯಲ್ಲಿ ಧೋನಿ ತಂಡಕ್ಕೆ ಪರ್ಯಾಯ ವಿಕೆಟ್ ಕೀಪರ್ ಇಲ್ಲದ ಕಾರಣ ಮೊಣಕಾಲಿಗೆ ನೋವು ನಿವಾರಕ ಪ್ಲಾಸ್ಟರ್ ಕಟ್ಟಿಕೊಂಡು ಕೀಪಿಂಗ್ ನಡೆಸಿದ್ದರು. ಗಾಯದ ಕಾರಣ ಐಪಿಎಲ್‌ಗೂ ನಿವೃತ್ತಿ ಘೋಷಿಸಲು ಮುಂದಾಗಿದ್ದರು. ಈ ಬಾರಿ ಧೋನಿ ಇಂಪ್ಯಾಕ್ಟ್ ಆಟಗಾರನಾಗಿ ಆಡಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಪಂತ್‌ಗೆ ಬಲೆ ಬೀಸಲು ಫ್ರಾಂಚೈಸಿ ಯೋಜನೆ ರೂಪಿಸಿದೆ ಎಂದು ತಿಳಿದುಬಂದಿದೆ.
ಚೆನ್ನೈ ಸೂಪರ್ ಕಿಂಗ್ಸ್ 5 ಮಂದಿ ಆಟಗಾರರನ್ನು ರಿಟೈನ್ ಮಾಡಿಕೊಂಡಿದೆ. ನಾಯಕ ಋತುರಾಜ್ ಗಾಯಕ್ವಾಡ್(18 ಕೋಟಿ ರೂ.), ಮತೀಶಾ ಪತಿರಾಣ(13 ಕೋಟಿ ರೂ.), ರವೀಂದ್ರ ಜಡೇಜಾ(18 ಕೋಟಿ ರೂ.), ಎಂಎಸ್ ಧೋನಿ(4 ಕೋಟಿ ರೂ.)
ನ್ಯೂಜಿಲ್ಯಾಂಡ್ ಆಟಗಾರರಾದ ಡೇವೋನ್ ಕಾನ್ವೆ, ಡೇರಿಲ್ ಮಿಚೆಲ್, ರಚಿನ್ ರವೀಂದ್ರ, ಮುಸ್ತಫಿಜುರ್ ರೆಹಮಾನ್, ಅಜಿಂಕ್ಯ ರಹಾನೆ, ಮಿಚೆಲ್ ಸ್ಯಾಂಟ್ನರ್, ಮೊಯಿನ್ ಅಲಿ, ದೀಪಕ್ ಚಾಹರ್, ತುಷಾರ್ ದೇಶಪಾಂಡೆ ಅವರನ್ನು ರಿಲೀಸ್ ಮಾಡಲಾಗಿದೆ. ಕಾನ್ವೆ ಮತ್ತು ರಚಿನ್ ರವೀಂದ್ರ ಅವರನ್ನು ಆರ್‌ಟಿಎಂ ಕಾರ್ಡ್ ಬಳಸಿ ಮತ್ತೆ ತಂಡ ಸೇರಿಸಿಕೊಳ್ಳಬಹುದು.