Tuesday, 26th November 2024

IND vs NZ: ಬ್ಯಾಟರ್‌ಗಳ ಕೌಶಲ್ಯ ಕುಸಿದಿಲ್ಲ; ಕೋಚ್‌ ಗಂಭೀರ್ ವಿಶ್ವಾಸ

ಮುಂಬೈ: ನ್ಯೂಜಿಲೆಂಡ್‌(IND vs NZ) ವಿರುದ್ಧ ಟೆಸ್ಟ್‌ ಸರಣಿ ಸೋತಿರುವ ಭಾರತ ತಂಡ ಸರಣಿಯ ಅಂತಿಮ ಪಂದ್ಯವನ್ನು ಆಡಲು ಸಜ್ಜಾಗಿದೆ. ನಾಳೆ ವಾಂಖೆಡೆ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯಕ್ಕೂ ಮುನ್ನ ಪ್ರಧಾನ ಕೋಚ್‌ ಗೌತಮ್ ಗಂಭೀರ್(coach Gautam Gambhir) ಗುಣಮಟ್ಟದ ಸ್ಪಿನ್ ಬೌಲಿಂಗ್ ವಿರುದ್ಧ ಭಾರತೀಯ ಬ್ಯಾಟರ್‌ಗಳ ಕೌಶಲ್ಯ ಕುಸಿದಿಲ್ಲ ಎಂದು ಹೇಳುವ ಮೂಲಕ ಟೀಕಾಕಾರರಿಗೆ ತಕ್ಕ ತಿರುಗೇಟು ನೀಡಿದ್ದಾರೆ. ಜತೆಗೆ ಪಂದ್ಯಕ್ಕು ಮುನ್ನ ಆಟಗಾರರಿಗೆ ಆತ್ಮವಿಶ್ವಾಸ ತುಂಬಿದ್ದಾರೆ.

ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಂಭೀರ್‌, ಗುಣಮಟ್ಟದ ಸ್ಪಿನ್ ಬೌಲಿಂಗ್ ವಿರುದ್ಧ ಭಾರತೀಯ ಆಟಗಾರರ ಕೌಶಲ್ಯ ಕುಸಿದಿದೆ ಎಂಬ ವಾದವನ್ನು ನಾನು ಒಪ್ಪಲು ಸಿದ್ಧನಿಲ್ಲ. ಅತಿಯಾದ ಟಿ20 ಕ್ರಿಕೆಟ್ ಆಟಗಾರರ ರಕ್ಷಣಾತ್ಮಕ ಆಟದ ಮೇಲೆ ಪರಿಣಾಮ ಬೀರಿದೆ. ಉತ್ತಮ ಪ್ರದರ್ಶನ ನೀಡಲು ನಮ್ಮ ಆಟಗಾರರು ಪರಿಶ್ರಮವಹಿಸುತ್ತಿದ್ದಾರೆʼ ಎಂದು ಗಂಭೀರ್‌ ಹೇಳಿದರು.

‘ಕೆಲವೊಂದು ಬಾರಿ ಎದುರಾಳಿ ತಂಡಕ್ಕೂ ಶ್ರೇಯ ಸಲ್ಲಬೇಕಾಗುತ್ತದೆ. ಯಾವುದೇ ತಂಡ ಕೂಡ ಪಂದ್ಯ ಗೆಲ್ಲಲೇ ಬೇಕೆಂಬ ಮನಸ್ಥಿತಿಯಲ್ಲಿ ಆಡುತ್ತದೆ. ಪುಣೆ ಟೆಸ್ಟ್‌ನಲ್ಲಿ ಮಿಚೆಲ್ ಸ್ಯಾಂಟ್ನರ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಈ ಬಾರಿ ಅವರ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಲು ನಮ್ಮ ದಾಂಡಿಗರು ಕಠಿಣ ಅಭ್ಯಾಸದೊಂದಿಗೆ ಪೂರ್ವ ಸಿದ್ಧರೆ ನಡೆಸಿದ್ದಾರೆʼ ಎಂದು ಗಂಭೀರ್ ಹೇಳಿದರು.

ಇದನ್ನೂ ಓದಿ IND vs SA T20I: ಭಾರತ ವಿರುದ್ಧದ ಟಿ20 ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ

‘ಕಳೆದ ಹತ್ತು ವರ್ಷಗಳ ಹಿಂದಿನ ಆಟದ ಸ್ವರೂಪಕ್ಕೆ ಹೋಲಿಸಿದಾಗ ಟಿ20 ಕ್ರಿಕೆಟ್ ಬಹುಶಃ ಪ್ರಭಾವ ಬೀರಿರಬಹುದು. ಆದರೆ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಹೊಂದಿಕೊಳ್ಳಲು ಸಾಧ್ಯವಾಗುವ ಆಟಗಾರನೇ ನೈಜ ಆಟಗಾರನಾಗಿರುತ್ತಾನೆ’ ಎಂದು ಗಂಭೀರ್‌ ಅಭಿಪ್ರಾಯಪಟ್ಟಿದ್ದಾರೆ.

‘ಗ್ಯಾಲರಿಯತ್ತ ಚೆಂಡನ್ನು ಹೊಡೆಯುವುದು ಮಾತ್ರ ಬ್ಯಾಟರ್‌ನ ಕೆಲಸವಲ್ಲ. ತಿರುವಿನ ಪಿಚ್‌ನಲ್ಲೂ ದೀರ್ಘವಾಧಿಯವರೆಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗಬೇಕು. ಅದಕ್ಕಾಗಿ ಬ್ಯಾಟರ್‌ ಸಿದ್ಧನಿರಬೇಕು. ಆಟಗಾರರು ಹೆಚ್ಚು ಟಿ20 ಕ್ರಿಕೆಟ್ ಆಡುವುದರಿಂದ ಮುನ್ನಗಿ ಬಾರಿಸಲು ಮುಂದಾಗಿ ವಿಕೆಟ್‌ ಕಳೆದುಕೊಳ್ಳುತ್ತಿದ್ದಾರೆ. ಟೆಸ್ಟ್‌ ಎಂಬುದು ತಾಳ್ಮೆಯ ಆಟ ಇಲ್ಲಿ ನಿಂತು ಆಡಿದರಷ್ಟೇ ಉತ್ತಮ ಫಲಿತಾಂಶ ನಿರೀಕ್ಷಿಸಬಹುದುʼ ಎಂದು ಗಂಭೀರ್‌ ಹೇಳಿದರು.