ಮತ್ತೊಮ್ಮೆ ಕನ್ನಡ ರಾಜ್ಯೋತ್ಸವ ಬಂದಿದೆ. ಇದು ಕನ್ನಡ ನಾಡು, ನುಡಿ, ಸಂಸ್ಕೃತಿ, ಪರಂಪರೆಗಳ ಅನನ್ಯತೆಯನ್ನು ಮತ್ತೊಮ್ಮೆ ಸ್ಮರಿಸುವ ಪರ್ವಕಾಲ. ಆದರೆ, ನವೆಂಬರ್ ಮಾಸದಲ್ಲಿ ಮಾತ್ರವೇ ‘ಕರ್ನಾಟಕ-ಕನ್ನಡ-ಕನ್ನಡಿಗ’ ಎಂಬ ಪರಿಕಲ್ಪನೆಗಳು ಮರುಜೀವ ಪಡೆಯುವಂಥ ಕಹಿವಾಸ್ತವಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.
ಹೀಗಾಗಿ, ‘ಕನ್ನಡವೇ ತಾಯ್ನುಡಿಯು, ಕರುನಾಡು ತಾಯ್ನಾಡು, ಕನ್ನಡಿಗನು ನೀನೆಂಬ ಅಭಿಮಾನವಿರಲಿ’ ಎಂಬ ಗೀತೆಯಲ್ಲಿ ಕಾಣಬರುವ ಕವಿಯ ಆಶಯವು ಕೇವಲ ಬಿಸಿಲ್ಗುದುರೆಯಾಗಿ ಬಿಟ್ಟಿದೆಯೇ? ಎಂಬ ಪ್ರಶ್ನೆ ಒಮ್ಮೊಮ್ಮೆ ಕಾಡುತ್ತದೆ. ಅದಕ್ಕೆ ಕಾರಣವೂ ಇಲ್ಲದಿಲ್ಲ. ಕಸ್ತೂರಿ ಕನ್ನಡದ ಕಂಪು ದಿನಗಳೆದಂತೆ ಮರೆಯಾಗುತ್ತಿದೆ. ಕನ್ನಡಿಗರ ಅಸ್ತಿತ್ವಕ್ಕೆ, ಅಸ್ಮಿತೆಗೆ, ಸಂಸ್ಕೃತಿ-ಪರಂಪರೆಗಳಿಗೆ ಧಕ್ಕೆ ಒದಗುತ್ತಿರುವ ಲಕ್ಷಣಗಳು ಢಾಳಾಗಿ ಗೋಚರಿಸುತ್ತಿವೆ.
ಸಾಮಾಜಿಕ ಜಾಲತಾಣಗಳು ಮತ್ತು ಮನರಂಜನಾ ಮಾಧ್ಯಮಗಳಲ್ಲಿ ಮೂಲೆಗುಂಪಾಗುತ್ತಿರುವ ಕನ್ನಡ, ಶಾಲಾ-ಕಾಲೇಜುಗಳಲ್ಲಿ, ವ್ಯಾಪಾರೋದ್ದಿಮೆಯಂಥ ವ್ಯವಹಾರದ ನೆಲೆಗಳಲ್ಲಿ ಬಳಕೆಯ ಹಿಂಜರಿಕೆಗೆ ಸಾಕ್ಷಿಯಾಗುತ್ತಿರುವ ಕನ್ನಡ ಹೀಗೆ ಈ ಗ್ರಹಿಕೆಗೆ ಸಾಕಷ್ಟು ಪುರಾವೆಗಳನ್ನು ಒದಗಿಸಬಹುದು. ಇನ್ನು ರೇಲ್ವೆ, ಬ್ಯಾಂಕಿಂಗ್ ಮುಂತಾದ ವಲಯಗಳಲ್ಲಿನ ಉದ್ಯೋಗಾವಕಾಶಗಳಲ್ಲಿ ಕನ್ನಡಿಗರಿಗೆ ಹೇಳಿಕೊಳ್ಳುವಂಥ ಪ್ರಾತಿನಿಧ್ಯ ಸಿಗುತ್ತಿಲ್ಲ.
ಕನ್ನಡದ ನೆಲ-ಜಲಗಳ ಮೇಲೆ ತಮ್ಮದಲ್ಲದ ಹಕ್ಕು ಸಾಧಿಸುವ, ವಿನಾಕಾರಣ ಗಡಿ ತಂಟೆಗೆ ಇಳಿಯುವ ನೆರೆ ರಾಜ್ಯ ದವರ ಧಾರ್ಷ್ಟ್ಯಕ್ಕೆ ತಕ್ಕ ಉತ್ತರ ಹೇಳಲಾಗದೆ ಕನ್ನಡಿಗರು ನಿಜಕ್ಕೂ ಸೋಲುತ್ತಿದ್ದಾರೇನೋ ಎಂದು ಒಮ್ಮೊಮ್ಮೆ ಅನಿಸುತ್ತದೆ. ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ ಎಂಬುದು ಕನ್ನಡಿಗರ ಹಿರಿಮೆ ಮತ್ತು ಚಾತುರ್ಯದ ಕುರಿತಾಗಿ ‘ಕವಿರಾಜಮಾರ್ಗ’ ಕೃತಿಯಲ್ಲಿ ಉಲ್ಲೇಖಿತವಾಗಿರುವ ಸಾಲು.
ಇಂಥ ಭಾಷಾಪ್ರಭುತ್ವ, ಪ್ರತಿಭೆಯಿದ್ದೂ ಕನ್ನಡಿಗರು ಸೋಲುತ್ತಿರುವುದೆಲ್ಲಿ? ಕನ್ನಡ ಭಾಷೆ ಮಹತ್ವ ಕಳೆದು ಕೊಳ್ಳುತ್ತಿರುವುದೇಕೆ? ಎಂಬ ಪ್ರಶ್ನೆಗಳನ್ನು ಕೇಳಿಕೊಳ್ಳುವ ಮೂಲಕ ಪ್ರತಿಯೊಬ್ಬ ಕನ್ನಡಿಗನೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿ ಬಂದಿದೆ. ‘ಕನ್ನಡ’ ಎಂಬುದು ಕೇವಲ ಭಾಷೆಗೆ ಸಂಬಂಧಿಸಿದ ಭಾವುಕ ಅಭಿವ್ಯಕ್ತಿಯಲ್ಲ, ಇದು ಒಟ್ಟಾರೆಯಾಗಿ ಕನ್ನಡಿಗರ ಅಸ್ತಿತ್ವ, ಅಸ್ಮಿತೆ, ಬದುಕು, ಏಳಿಗೆ ಮುಂತಾದವುಗಳಿಗೆ ಇಂಬುಕೊಡುವ ಮೂಲಬೀಜವೂ ಆಗಬೇಕು. ಅಂಥದೊಂದು ಭೂಮಿಕೆಯನ್ನು ನಿರ್ಮಿಸಿ ಕೊಳ್ಳುವುದು ನಮ್ಮ ಕೈಯಲ್ಲೇ ಇದೆ ಎಂಬುದನ್ನು ಮರೆಯದಿರೋಣ.
ಇದನ್ನೂ ಓದಿ: Vishwavani Editorial: ಈ ಅಕ್ರಮವೂ ‘ಸಕ್ರಮ’ ವಾಗುವುದೇ?