Tuesday, 26th November 2024

IND vs NZ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ನ್ಯೂಜಿಲ್ಯಾಂಡ್‌; ಬುಮ್ರಾಗೆ ವಿಶ್ರಾಂತಿ

ಮುಂಬಯಿ: ಸತತ 2 ಪಂದ್ಯಗಳನ್ನು ಗೆದ್ದು ಐತಿಹಾಸಿಕ ಸರಣಿ ವಶಪಡಿಸಿಕೊಂಡಿರುವ ಪ್ರವಾಸಿ ನ್ಯೂಜಿಲ್ಯಾಂಡ್‌(IND vs NZ) ತಂಡ ಭಾರತ ವಿರುದ್ಧದ ಅಂತಿಮ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದೆ. ವೈಟ್‌ವಾಶ್‌ ಮುಖಭಂಗದಿಂದ ಪಾರಾಗಬೇಕಿದ್ದರೆ ಭಾರತಕ್ಕೆ ಈ ಪಂದ್ಯವನ್ನು ಕನಿಷ್ಠ ಡ್ರಾ ಮಾಡಿಕೊಳ್ಳುವ ಒತ್ತಡವಿದೆ. ನಿರೀಕ್ಷೆಯಂತೆ ವೇಗಿ ಜಸ್‌ಪ್ರೀತ್‌ ಬುಮ್ರಾ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಅವರ ಸ್ಥಾನಕ್ಕೆ ಮೊಹಮ್ಮದ್‌ ಸಿರಾಜ್‌ ಆಯ್ಕೆಯಾಗಿದ್ದಾರೆ. ಸಿರಾಜ್‌ ಅವರನ್ನು ದ್ವಿತೀಯ ಪಂದ್ಯದಿಂದ ಕೈಬಿಡಲಾಗಿತ್ತು. ಇದೆ ತಿಂಗಳು ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್‌ ಸರಣಿ ಆಡಲು ಭಾರತ ತಂಡ ಆಸೀಸ್‌ಗೆ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಜಸ್‌ಪ್ರೀತ್‌ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಮುಂಬಯಿಯ “ವಾಂಖೇಡೆ ಸ್ಟೇಡಿ ಯಂ’ನಲ್ಲಿ ಭಾರತ-ನ್ಯೂಜಿಲ್ಯಾಂಡ್‌ ಈವರೆಗೆ 3 ಟೆಸ್ಟ್‌ಗಳಲ್ಲಿ ಎದುರಾಗಿವೆ. ಭಾರತ ಎರಡನ್ನು ಗೆದ್ದರೆ, ನ್ಯೂಜಿಲ್ಯಾಂಡ್‌ ಒಂದರಲ್ಲಿ ಜಯ ಸಾಧಿಸಿದೆ.

ನಾಯಕ ರೋಹಿತ್‌ ಶರ್ಮ(Rohit Sharma) ಅವರಿಗೆ ವಿಶೇಷ ಪಂದ್ಯವಾಗಿದೆ. ಹೌದು, 11 ವರ್ಷಗಳ ಬಳಿಕ ರೋಹಿತ್‌ ತವರಿನಲ್ಲಿ ಆಡುತ್ತಿರುವ ಮೊದಲ ಟೆಸ್ಟ್‌ ಪಂದ್ಯ ಇದಾಗಿದೆ.  ರೋಹಿತ್‌ ಕೊನೆಯ ಬಾರಿಗೆ ಟೆಸ್ಟ್‌ ಪಂದ್ಯವನ್ನಾಡಿದ್ದು 2013 ರಲ್ಲಿ. ಅದು ಕ್ರಿಕೆಟ್‌ ದೇವರು ಎಂದು ಕರೆಯುವ ಸಚಿನ್‌ ತೆಂಡೂಲ್ಕರ್‌ ಅವರ ವಿದಾಯ ಪಂದ್ಯವಾಗಿತ್ತು. ವಿಂಡೀಸ್‌ ವಿರುದ್ಧದ ಈ ಪಂದ್ಯದಲ್ಲಿ ರೋಹಿತ್‌ ಶತಕ ಬಾರಿಸಿ ಮಿಂಚಿದ್ದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ರೋಹಿತ್‌ 127 ಎಸೆತಗಳಿಂದ 11 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ ಅಜೇಯ 111 ರನ್‌ ಬಾರಿಸಿದ್ದರು.

ಇದನ್ನೂ ಓದಿ IND vs NZ: ಬ್ಯಾಟರ್‌ಗಳ ಕೌಶಲ್ಯ ಕುಸಿದಿಲ್ಲ; ಕೋಚ್‌ ಗಂಭೀರ್ ವಿಶ್ವಾಸ

ಕೆಂಪುಮಣ್ಣಿನ ಪಿಚ್‌ನಲ್ಲಿ ಈ ಪಂದ್ಯ ನಡೆಯಲಿದೆ. ಬಿಸಿಸಿಐಯ ಬೇಡಿಕೆಯಂತೆ ಇದೂ ಕೂಡ ಸಂಪೂರ್ಣವಾಗಿ ಸ್ಪಿನ್‌ ಸ್ನೇಹಿ ಪಿಚ್‌ ಆಗಿರುವ ಸಾಧ್ಯತೆ ಹೆಚ್ಚಿದೆ. 2021ರಲ್ಲಿ ಇದೇ ಮೈದಾನದಲ್ಲಿ ನಡೆದಿದ್ದ ಟೆಸ್ಟ್‌ನಲ್ಲಿ ಕಿವೀಸ್‌ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಮೊದಲ ಇನ್ನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್‌ ಉಡಾಯಿಸಿ ಇತಿಹಾಸ ನಿರ್ಮಿಸಿದ್ದರು. ಈ ಮೈದಾನದಲ್ಲಿ ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ತಂಡವೇ ಹೆಚ್ಚು ಪಂದ್ಯಗಳನ್ನು ಗೆದ್ದಿದೆ.